ಅವರ ಮನಸ್ಸಿನಲ್ಲಿ ಸದಾ ಕುದಿಯುತ್ತಲೇ ಇರುತ್ತೆ ಸೇಡು, ಇವರಿಗೆ ಮಾತ್ರ ಎಲ್ಲರನ್ನೂ ಕ್ಷಮಿಸುವ ಔದಾರ್ಯ; ಏನಿದು ಮನಸ್ಸಿನ ಆಟ -ಕಾಳಜಿ ಅಂಕಣ-mental health psychology behind revenge and forgiveness mental health issues benefits of forgiveness rpr ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅವರ ಮನಸ್ಸಿನಲ್ಲಿ ಸದಾ ಕುದಿಯುತ್ತಲೇ ಇರುತ್ತೆ ಸೇಡು, ಇವರಿಗೆ ಮಾತ್ರ ಎಲ್ಲರನ್ನೂ ಕ್ಷಮಿಸುವ ಔದಾರ್ಯ; ಏನಿದು ಮನಸ್ಸಿನ ಆಟ -ಕಾಳಜಿ ಅಂಕಣ

ಅವರ ಮನಸ್ಸಿನಲ್ಲಿ ಸದಾ ಕುದಿಯುತ್ತಲೇ ಇರುತ್ತೆ ಸೇಡು, ಇವರಿಗೆ ಮಾತ್ರ ಎಲ್ಲರನ್ನೂ ಕ್ಷಮಿಸುವ ಔದಾರ್ಯ; ಏನಿದು ಮನಸ್ಸಿನ ಆಟ -ಕಾಳಜಿ ಅಂಕಣ

ಸೇಡು ಪ್ರಬಲವಾದ ಮಾನವ ಭಾವನೆ ಮತ್ತು ನಡವಳಿಕೆಯಾಗಿದ್ದು, ಮನೋವಿಜ್ಞಾನ, ಸಾಹಿತ್ಯ ಮತ್ತು ಸಿನಿಮಾಗಳಲ್ಲಿ ಮೊದಲಿನಿಂದಲೂ‌ ಇದರ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಮನುಷ್ಯನನ್ನು ಕಾಡುವ ಸೇಡು ಮತ್ತು ನೆಮ್ಮದಿ ಕಾಪಾಡುವ ಕ್ಷಮೆಯ ಕುರಿತು ಈ ಬರಹದಲ್ಲಿ ವಿವರಿಸಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್.

ಇವರಿಗೆ ಮಾತ್ರ ಎಲ್ಲರನ್ನೂ ಕ್ಷಮಿಸುವ ಔದಾರ್ಯ. ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್
ಇವರಿಗೆ ಮಾತ್ರ ಎಲ್ಲರನ್ನೂ ಕ್ಷಮಿಸುವ ಔದಾರ್ಯ. ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್

ಪ್ರಶ್ನೆ: ಕೆಲವರು ‌ಅದೇಕೆ ಅಷ್ಟೊಂದು ಸೇಡು‌ ಹೊಂದಿರುತ್ತಾರೆ. ಸಣ್ಣಪುಟ್ಟದಕ್ಕೂ ಅಷ್ಟೊಂದು ಜಗಳವಾಡಿ ಎದುರಾಳಿಗೆ ಅಪಾಯ ಮಾಡುವ ಮನಃಸ್ಥಿತಿ ಹೊಂದಿರುತ್ತಾರೆ. ‌ಮತ್ತೆ ಕೆಲವರು ‌ಅದೇಕೆ‌ ಅಷ್ಟು ಕ್ಷಮಾಗುಣ ಹೊಂದಿರುತ್ತಾರೆ?

ಉತ್ತರ: ಮೊದಲಿಗೆ ಸೇಡಿನ ಬಗ್ಗೆ ಮನಃಶಾಸ್ತ್ರ (ಸೈಕಾಲಜಿ) ಏನು ಹೇಳುತ್ತದೆ ನೋಡೋಣ. ಸೇಡು ಎಂದರೆ ಇನ್ನೊಬ್ಬ ವ್ಯಕ್ತಿ ತನಗೆ ಮಾಡಿದ ಅನ್ಯಾಯ, ಅಪಾಯ, ನೋವು ಅಥವಾ ತಪ್ಪಿನ ಅಥವಾ ಭ್ರಮಿಸಿದ ಹಾನಿಯ ಬದಲಿಗೆ ಅವರ ಮೇಲೆ ನೋವು ಅಥವಾ ಹಾನಿಯನ್ನು ಉಂಟು ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುವ ಮನೋಭಾವ. ಇದು ಪ್ರಬಲವಾದ ಮಾನವ ಭಾವನೆ ಮತ್ತು ನಡವಳಿಕೆಯಾಗಿದ್ದು, ಮನೋವಿಜ್ಞಾನ, ಸಾಹಿತ್ಯ ಮತ್ತು ಸಿನಿಮಾಗಳಲ್ಲಿ ಮೊದಲಿನಿಂದಲೂ‌ ಇದರ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ.

ಪ್ರತೀಕಾರದ ಹಿಂದಿನ ಪ್ರೇರಣೆ (ಮೋಟಿವೇಶನ್)

ಅನ್ಯಾಯದ ಭಾವನೆ: ಸೇಡು ತೀರಿಸಿಕೊಳ್ಳಲು ಇದು ಮೊದಲ ಮೋಟಿವೇಶನ್. ತನಗೆ ಅನ್ಯಾಯ ಆಗಿದೆ ಎಂದು ಗ್ರಹಿಸಿದಾಗ, ಮನಸು ಆ ಅನ್ಯಾಯಕ್ಕೆ ತಕ್ಕ ಉತ್ತರ ಕೊಡುವ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುವ ಅದಮ್ಯ ಅಗತ್ಯವನ್ನು ಹೇರುತ್ತದೆ.

ಭಾವನೆಗಳಿಗೆ ಆಘಾತ: ಕೆಲವೊಮ್ಮೆ ಭಾವನಾತ್ಮಕವಾಗಿ ಹರ್ಟ್ ಆದಾಗ ಅಥವಾ ದ್ರೋಹದ ಭಾವನೆ‌ ಉಂಟಾದಾಗಲೂ. ಕೋಪ, ದ್ರೋಹ ಮತ್ತು ಅವಮಾನದಂತಹ ಭಾವನೆಗಳು ಪ್ರತೀಕಾರವನ್ನು ತೀರಿಸಿಕೊಳ್ಳಲು ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಭಾವನೆಗಳು ಅಗಾಧವಾಗಿದ್ದು, ಸೇಡು ತೀರಿಸಿಕೊಳ್ಳಬೇಕೆಂಬ ಭಾವನೆಯನ್ನು ಉಂಟು ಮಾಡುತ್ತದೆ.

ಪ್ರತೀಕಾರದ ಹಂತಗಳು

ಪ್ಲಾನಿಂಗ್, ಯೋಜನೆ: ಪ್ರತೀಕಾರವು ಒಂದು ನಿಖರವಾದ ಯೋಜನಾ ಹಂತದಿಂದ ಪ್ರಾರಂಭವಾಗುತ್ತದೆ, ಈ ಸಮಯದಲ್ಲಿ ವ್ಯಕ್ತಿಯು ತಾನು ಅನುಭವಿಸಿದ ಕಷ್ಟದ ಬಗ್ಗೆ ಪದೇಪದೆ ಯೋಚಿಸಿ‌ ಗೀಳು ಹೊಂದುತ್ತಾನೆ. ಇದನ್ನು ರುಮಿನೇಶನ್ ಎಂದು ಕರೆಯುತ್ತೇವೆ.

ನಿರೀಕ್ಷೆ: ಈ ಮೇಲಿನ ರುಮಿನೇಶನ್ ಬರುತ್ತಿದ್ದಂತೆ, ವ್ಯಕ್ತಿಗಳು ತಾತ್ಕಾಲಿಕವಾಗಿ ಪ್ರಬಲನಾದ ಇದ್ದಕ್ಕಿದ್ದ ಹಾಗೆ ಶಕ್ತಿವಂತನಾದ ಅನುಭವ ತರಿಸಬಹುದು.

ಪ್ರತೀಕಾರ: ಈ ಸೇಡು ತೀರಿಸಿಕೊಳ್ಳುವ ಕ್ರಿಯೆಯು ಹೆಚ್ಚು ಭಾವನಾತ್ಮಕ ರೋಲರ್ ಕೋಸ್ಟರ್ ಅನುಭವವಾಗಿದೆ. ಇದು ಅಲ್ಪಾವಧಿಯ ಪರಿಹಾರ ಮತ್ತು ಸಮರ್ಥನೆಯನ್ನು ಒದಗಿಸುತ್ತದೆ.

ಮಿದುಳಿನ ಕಾರ್ಯವಿಧಾನ: ಒಂದು ಅಧ್ಯಯನದ ಪ್ರಕಾರ ಸೇಡು ಅಥವಾ ಪ್ರತೀಕಾರದ ಯೋಚನೆ‌ ಮಾಡುವಾಗ ಅಥವಾ ಅದನ್ನು ತೀರಿಸಿದಾಗ‌ ಮಿದುಳಿನ ರಿವಾರ್ಡ್‌ ಸಿಸ್ಟಮ್ ಆಕ್ಟಿವೇಟ್ ಆಗುತ್ತದೆ.‌ ಅಂದರೆ ಯಾವುದಾದರೂ ಇಷ್ಟವಾದ ವಿಷಯ ಸಿಕ್ಕಾಗ‌ ಯಾವ ಬಗೆಯ ಖುಷಿ ಸಿಗುತ್ತದೋ ಅದೇ‌ ಖುಷಿ. ಅವರಿಗಾದ ನೋವಿಗೆ ತಕ್ಕದಾಗಿ ಪ್ರತೀಕಾರ ಕೆಲವರು ತೆಗೆದುಕೊಳ್ಳುತ್ತಾರೆ, ಕೆಲವರು ಸುಮ್ಮನಾಗುತ್ತಾರೆ.

ಕೆಲವರು ಯಾಕೆ ಅತಿಯಾಗಿ ಸೇಡಿಗೆ ಹಾತೊರೆಯುತ್ತಾರೆ?

ಈಗ ಈ ಪ್ರಶ್ನೆಯ ಮೂಲಕ ಅದೇಕೆ ಕೆಲವರು ಸಣ್ಣ ಪುಟ್ಟದ್ದಕ್ಕೆಲ್ಲಾ ತೀವ್ರ ಪ್ರತೀಕಾರ ತೋರುತ್ತಾರೆ ಅಂತ ನೋಡೋಣ. ಸಾಮಾನ್ಯವಾಗಿ ಎರಡು ಬಗೆಯ ಜನರು‌ ಸಣ್ಣಪುಟ್ಟದ್ದಕ್ಕೆಲ್ಲಾ ದೊಡ್ಡ ಬಗೆಯ ಪ್ರತೀಕಾರ ತೆಗೆದುಕೊಳ್ಳುತ್ತಾರೆ ಇವರುಗಳನ್ನು ವಿಂಡಿಕ್ಟೀವ್ ನಾರ್ಸಿಸಿಸ್ಟಿಕ್ ವ್ಯಕ್ತಿತ್ವ ಹಾಗೂ ಬೈಪೋಲಾರ್ ಡಿಸಾರ್ಡರ್ ಮತ್ತು ಎಚ್‌ಸಿಪಿ ಇರುವವರು‌ ಎಂದು‌ ಗುರುತಿಸಲಾಗಿದೆ.

ಮೊದಲನೆಯದ್ದು, ವಿಂಡಿಕ್ಟೀವ್ ನಾರ್ಸಿಸ್ಟಿಕ್ ಪರ್ಸನಾಲಿಟಿ ಡಿಸ್‌ಆರ್ಡರ್.

ಏನಿದು ನಾರ್ಸಿಸ್ಟಿಕ್ ಪರ್ಸನಾಲಿಟಿ ಡಿಸ್ಆರ್ಡರ್?

ನಾರ್ಸಿಸ್ಟಿಕ್ ಪರ್ಸನಾಲಿಟಿ ಡಿಸ್ಆರ್ಡರ್ ಒಂದು ವ್ಯಕ್ತಿತ್ವ ದೋಷ. ಈ ವ್ಯಕ್ತಿತ್ವ ಇರುವವರಲ್ಲಿ ಸ್ವಕೇಂದ್ರಿತ ನೋಟ, ಅಭಿಪ್ರಾಯ, ಹೊಗಳಿಕೆ, ತೀವ್ರ ಬಗೆಯ‌ ಸ್ವಾರ್ಥ ಎಲ್ಲವೂ ಇರುತ್ತದೆ. ಇವರುಗಳಲ್ಲಿ ಮತ್ತಷ್ಟು ವಿಧಗಳಿವೆ ಅದರಲ್ಲಿ ಒಂದು ಎಕ್ಸ್ಟ್ರೀಮ್ ನಾರ್ಸಿಸಿಸ್ಟಿಕ್ ಪರ್ಸನಾಲಿಟಿ ಇದರಲ್ಲಿ ‌ವಿಂಡಿಕ್ಟೀವ್ ಪರ್ಸನಾಲಿಟಿಯೂ ಒಂದು. ವಿಂಡಿಕ್ಟೀವ್ ಹೆಸರೇ‌ ಹೇಳುವಂತೆ ಪ್ರತೀಕಾರದ ಮನೋಭಾವದವರು.

ಇವರನ್ನು ಹೇಗೆ‌ ಗುರುತಿಸಬಹುದು

1) ಬೇರೆಯವರ ಬಗ್ಗೆ ಕಿಂಚಿತ್ತೂ ಸಹಾನುಭೂತಿ ಇರುವುದಿಲ್ಲ

2) ಇನ್ನೊಬ್ಬರ ಬಗ್ಗೆ ಮತ್ಸರ ಹಾಗೂ ಧಿಕ್ಕಾರದ ಭಾವನೆ ಸ್ಕಾಡೆನ್‌ಫ್ರೂಡ್ ಅನ್ನು ಹೊಂದಿರುತ್ತಾರೆ. ಮತ್ತೊಬ್ಬರ ತೊಂದರೆಗಳು, ವೈಫಲ್ಯಗಳು ಅಥವಾ ಅವಮಾನಗಳನ್ನು ನೋಡುವದರಿಂದ ಬರುವ ಆನಂದ, ಸಂತೋಷ ಅಥವಾ ಆತ್ಮ ತೃಪ್ತಿಯ ಅನುಭವವಾಗಿದೆ.

3) ತಮ್ಮ ಸೌಂದರ್ಯ, ತೇಜಸ್ಸು, ಯಶಸ್ಸು, ಒಂದು, ಪದವಿ ಮತ್ತು ಶಕ್ತಿಗಳ‌ ಬಗ್ಗೆ ವಿಚಿತ್ರ ಕಲ್ಪನೆಗಳಲ್ಲಿ ನಿರತರಾಗಿರುವುದು.

4) ಇನ್ನೊಬ್ಬರ ಮೇಲೆ ಮೇಲುಗೈ (ಡಾಮಿನೆನ್ಸ್) ಸಾಧಿಸುವುದು.

5) ಸೇಡಿನ ಮನೋಭಾವದ ಗೀಳು ಹೊತ್ತಿರುವುದು.

6) ತಾವು ವಿರೋಧಿ ಎಂದು ಭಾವಿಸಿರುವವರನ್ನು ಸದಾ ವೇಷ ಮರೆಸಿಕೊಂಡಾದರೂ ಹಿಂಬಾಲಿಸುವುದು.

7) ತಮ್ಮ ವಿರೋಧಿಗಳನ್ನು ಹಣಿಯಲು ಕೋರ್ಟ್, ಪೋಲೀಸ್, ಕಾನೂನು ಇವುಗಳನ್ನು‌ಹೆಚ್ಚಾಗಿ ಬಳಸುತ್ತಾರೆ.

8) ಇವರಿಗೆ ಸುಳ್ಳು ಹೇಳುವುದು ಅತಿ ಸುಲಭ. ಇಷ್ಟೆಲ್ಲಾ ಮಾಡಿದರೂ ಅನ್ಯಾಯ ಆಗಿರುವುದು‌ ತಮಗೇ‌, ತಾವೇ ‌ಇದರ ಬಲಿಪಶುಗಳು ಎಂದು ಭಾವಿಸುತ್ತಾರೆ.

9) ಇಂತಹವರಿಂದ ದೂರ ಇರುವುದಕ್ಕಿಂತ ದೊಡ್ಡ ಪರಿಹಾರ ಇನ್ನೊಂದಿಲ್ಲ.

ಬೈಪೋಲಾರ್ ಪರ್ಸನಾಲಿಟಿ ಡಿಸ್‌ಆರ್ಡರ್ ಜೊತೆಗೆ‌ ಹೈ ಕಾನ್‌ಫ್ಲಿಕ್ಟ್‌ ಪರ್ಸನಾಲಿಟಿ

ಅತ್ಯಂತ ಆಕರ್ಷಕ, ಸ್ನೇಹಪರವಾಗಿ ಇರುವಂತೆ ವರ್ತಿಸುತ್ತಾರೆ. ಅವರ ಈ ವರ್ತನೆ ಇರುವುದು ಒಂದು ನಿಮಿಷ ಅಷ್ಟೇ. ಮುಂದಿನ ಕ್ಷಣವೇ ಅವರು ನಿಮ್ಮ ಮೇಲೆ ಆಕ್ರಮಣ ಮಾಡುವುದು, ಬೈಯ್ಯುವುದು, ಆರ್ಥಿಕವಾಗಿ ತೊಂದರೆ‌ ಕೊಡುವುದು , ಸಾರ್ವಜನಿಕವಾಗಿ ನಿಮ್ಮ ಹೆಸರಿಗೆ‌ ಧಕ್ಕೆ ತರುವುದು, ಕೆಲವೊಮ್ಮೆ ದೈಹಿಕವಾಗಿ ಆಕ್ರಮಣ ಮಾಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಇಂತಹ‌ ಪರ್ಸನಾಲಿಟಿ ಕಂಡರೆ ಅದು, ಬೈಪೋಲಾರ್ ವಿತ್ ಹೈ ಕಾನ್‌ಫ್ಲಿಕ್ಟ್ ಪರ್ಸನಾಲಿಟಿ. ಅಂದರೆ ಅತಿರೇಕದ ಜಗಳ‌ದ ಮನಸ್ಥಿತಿಯವರು ಎಂದು ಅರ್ಥ.

ಇಂತಹ‌ ವ್ಯಕ್ತಿತ್ವ ಇರುವವರ ಮೂರು‌ ಮುಖ್ಯ ಲಕ್ಷಣಗಳೆಂದರೆ

1) ನಿರಂತರ ತ್ಯಜಿಸುವ ಭಯ: ಯಾರಾದರೊಬ್ಬರಿಗೆ ಸದಾ ಅಂಟಿಕೊಳ್ಳುವುದು ಮತ್ತು ಮತ್ತೆಮತ್ತೆ ಅವರು ತಮ್ಮೊಡನೆ ಇದ್ದಾರೆಂಬ ಭರವಸೆಯನ್ನು ಹುಡುಕುವುದು.

2) ಒಮ್ಮೆ ಸ್ನೇಹ ಮತ್ತೊಮ್ಮೆ ಸಿಟ್ಟು: ಸ್ನೇಹಪರತೆ ಮತ್ತು ಕ್ರೋಧದ ನಡುವೆ ಆಗಾಗ ಸ್ಥಿತ್ಯಂತರವಾಗುತ್ತದೆ ಒಮ್ಮೆ ಅತಿ ಸ್ನೇಹ, ನಂತರ ಜಗಳ ಹೀಗೆ.

3) ಕಪ್ಪು-ಬಿಳುಪು: ಎಲ್ಲರನ್ನೂ ಕೇವಲ ಒಳ್ಳೆಯವರು, ಇಲ್ಲವೇ ಕೆಟ್ಟವರು ಎಂದಷ್ಟೇ ಇವರು ನೋಡುತ್ತಾರೆ. ಇದು ಇವರನ್ನು ಪೂರ್ವಗ್ರಹ ಪೀಡಿತರನ್ನಾಗಿ ಮಾಡುತ್ತದೆ.

ಇಂಥವರನ್ನು ಗುರುತಿಸುವುದು‌ ಹೇಗೆ?

1) ಕೆಲವರು ಪ್ರಾರಂಭದಿಂದಲೂ ಕೋಪ, ತೀವ್ರ ಭಯ ಇವುಗಳಲ್ಲಿ ತೀವ್ರವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

2) ಹೆಚ್ಚಿನವರು ಬಹಳವಾಗಿ ಸ್ನೇಹಪರ, ಆಕರ್ಷಕ, ಶಕ್ತಿಯುತ, ಪ್ರೀತಿಪಾತ್ರ ಮತ್ತು ಪ್ರಾಯಶಃ ಸೆಡಕ್ಟಿವ್‌ ಆಗಿ (ನಿಮ್ಮನ್ನು ಸೆಳೆಯಲು) ಯತ್ನಿಸುತ್ತಾರೆ.

3) ಕೆಲವೊಮ್ಮೆ, ಅವರು ಬೇರೊಬ್ಬರ ಮೇಲೆ ವಿಶೇಷವಾಗಿ ದ್ವೇಷವಿದ್ದು ಅವರ ಸೇಡು ತೀರಿಸಿಕೊಳ್ಳಲು ನಿಮ್ಮ ಸಹಾಯವನ್ನು ಬಯಸಬಹುದು.‌ಹಾಗಾಗಿ ನಿಮಗೆ ಇನ್ನೂ ಹತ್ತಿರವಾಗಬಹುದು.

4) ಇನ್ನೂ ಕೆಲವು ಸಲ ತಾವು ದುರ್ಬಲರು ಹಾಗೂ ತನಗೆ ನಿಮ್ಮ ಸಹಾಯ ಬೇಕಾಗಿದೆ ಎಂದು ಒಬ್ಬ ವ್ಯಕ್ತಿಯನ್ನು ಸೆಳೆಯಲು‌ ಪ್ರಯತ್ನಿಸಬಹುದು.

5) ತಮ್ಮನ್ನು ‌ತಾವು ಒಳ್ಳೆಯವರು ಹಾಗೂ ಇತರರಿಂದ ತೊಂದರೆಗೊಳಗಾಗಿದ್ದೇವೆ ‌ಎಂದು‌ ಹೇಳಿದ ಎಲ್ಲಾ ಕಥೆಗಳು‌ ಕೊಂಚ ಡಿಗ್ ಮಾಡಿದರೆ ಸುಳ್ಳು ಎಂದು ಗೊತ್ತಾಗಬಹುದು.

6) ನಿಮಗೆ ಎಷ್ಟು ಬೇಗನೆ ನಿಮ್ಮ ಹತ್ತಿರ ಬರಲು ಪ್ರಯತ್ನಪಡುತ್ತಾರೆ ಅಂದರೆ ನಿಮಗೇ ‌ಆಶ್ಚರ್ಯ ಆಗಬಹುದು.

7) ನಿಮಗೋಸ್ಕರ ರಿಸ್ಕ್‌ ತೆಗೆದುಕೊಂಡು‌ ಸಹಾಯ ಮಾಡಿದಂತೆ ತೋರಬಹುದು. ನಿಮಗಾಗಿ ಸಹಾಯ ಮಾಡುವಂತೆಯೂ ಅನಿಸಬಹುದು ಆದರೆ ಇವೆಲ್ಲವೂ‌ ಕುರಿಯನ್ನು ಕೊಬ್ಬಿಸುವ ಕುರಿಕಾಯುವವನ ಕೆಲಸ ಅಷ್ಟೇ.

8) ಇವರಿಗೆ ಬೇಕಾದ ಸಹಾಯ ನಿಮ್ಮಿಂದ ಸಿಗದಿದ್ದಾಗ‌ ನಿಮ್ಮನ್ನು ಸದೆ ಬಡೆಯಲೂ ಸಹಾ ಸಿದ್ಧರಿರುತ್ತಾರೆ.

9) ಆದ್ದರಿಂದ ಇಂತಹವರು ನಿಮ್ಮ ಸ್ನೇಹವನ್ನು ಬಯಸಿದಾಗ ಕನಿಷ್ಠ ಒಂದು ವರ್ಷವಾದರೂ ದೂರದಿಂದಲೇ ಗಮನಿಸಿ ನಂತರ ಹತ್ತಿರವಾಗುವುದು ಮೇಲು.

ಹೀಗೆ ಮೇಲೆ‌‌ ಹೇಳಿದ ಎರಡೂ‌ ವ್ಯಕ್ತಿತ್ವದವರು ಅತೀ ಬೇಗ ‌ಸಣ್ಣ‌ಪುಟ್ಟದ್ಧಕ್ಕೂ ರಿವೇಂಜ್‌ ಹಿಂದೆ ಬೀಳುತ್ತಾರೆ.

ಎರಡನೇ ಮೂಲ ಪ್ರಶ್ನೆ‌ ಕೆಲವರು‌‌ ಬಹಳ‌ ಬೇಗ‌ ಕ್ಷಮಿಸಿ ಮೂವ್ ಆನ್ ಆಗುತ್ತಾರೆ‌ ಏಕೆ?

1) ಕೆಲ ಸಂಶೋಧನೆಗಳ ಪ್ರಕಾರ, ಹೆಚ್ಚು ಕ್ಷಮಿಸುವ ಜನರು ಒಪ್ಪಿಕೊಳ್ಳುವ, ಮನಃಪೂರ್ತಿ ಮಾತನಾಡುವ ಮತ್ತು ಸಹಾನುಭೂತಿಯ (ಅಗ್ರೀಯೇಬಲ್ನೆಸ್‌ ಎಕ್ಸಟ್ರೋವರ್ಟ್ ಮತ್ತು ಎಂಪತಿ) ಮನೋಭಾವ ಹೊಂದಿರುತ್ತಾರೆ.

2) ಇವರು ಕಡಿಮೆ ಮಟ್ಟದ ನ್ಯೂರೋಟಿಸಮ್, ಕೋಪ, ಹಗೆತನ, ಭಯ ಮತ್ತು ಪ್ರತೀಕಾರವನ್ನು ಹೊಂದಿರುತ್ತಾರೆ.

3) ಹೊಂದಿಕೊಂಡು‌ ಹೋಗುವ ಗುಣ ಇವರಲ್ಲಿ ಹೆಚ್ಚು. ಆದದ್ದಾಯಿತು ಎಂದು‌‌ ಮುಂದೆ ಹೋಗುತ್ತಾರೆ.

ಕ್ಷಮೆಗೂ ಗಡಿ ಇರಲಿ

ಕೆಲವೊಮ್ಮೆ ಕ್ಷಮಿಸುವುದು ಕೂಡ ದೌರ್ಬಲ್ಯವಾಗಿ ಕಾಡಬಹುದು. ‌ಆದ್ದರಿಂದ ಕ್ಷಮೆಗೂ‌ ಒಂದು‌ ಗಡಿ ಇರಲಿ. ‌ಎಲ್ಲಿಯವರೆಗಿನ ಕ್ಷಮೆ‌ ಒಳ್ಳೆಯದು ಎಂದು ಅರಿಯುವುದು ಬಹಳ‌ ಮುಖ್ಯ. ಆದರೆ ಒಂದಂತೂ ನಿಜ. ಸಹನೆ ಮತ್ತು ಕ್ಷಮೆ‌ ದೀರ್ಘಾವಧಿಯಲ್ಲಿ ಪ್ರಯೋಜನಗಳನ್ನು‌‌ ತಂದುಕೊಡುತ್ತದೆ. ಮತ್ತೊಂದು ವಿಷಯ, ಕ್ಷಮೆ‌ ಅಂದರೆ ತಪ್ಪನ್ನು ಮಾಡಿದವರಿಗೆ ಶಿಕ್ಷೆ ಕೊಡಿಸದೇ ಇರುವುದಲ್ಲ. ಇದು ಆ ಕ್ರೋಧ ಮತ್ತು ಪ್ರತೀಕಾರದ ಬೆಂಕಿ ನಮ್ಮನ್ನು ಸುಡದೇ‌ ಇರಲು ಅಷ್ಟೇ. ಕ್ಷಮೆಯನ್ನು ಅಭ್ಯಾಸ ಮಾಡುವುದರಿಂದ ನಾವು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸಿಟ್ಟು ಅಥವಾ ಪರಿಸ್ಥಿತಿಯ ಆಘಾತದಿಂದ ನಮ್ಮ ಮನಸು ತಪ್ಪು ನಿರ್ಧಾರ ಕೈಗೊಳ್ಳದೆ, ಸರಿಯಾದ ರೀತಿಯಲ್ಲಿ‌ ನ್ಯಾಯ ಸಿಗುವ ದಾರಿಯಲ್ಲಿ ನಡೆದುಕೊಳ್ಳಲು ಪ್ರೇರಣೆ ನೀಡುತ್ತದೆ. ವಿಚಾರಗಳಲ್ಲಿ ಸ್ಪಷ್ಟತೆ ಇರುತ್ತದೆ.

ಒಂದು ವಿಷಯ ಸ್ಪಷ್ಟವಾಗಿ ತಿಳಿದುಕೊಳ್ಳಿ. ಸೇಡು ಯಾವತ್ತಿದ್ದರೂ‌ ಬೆಂಕಿಯಂತೆಯೇ. ದೀರ್ಘಾವಧಿಯಲ್ಲಿ ಅದು ನಮ್ಮನ್ನೇ‌ ಸುಡುತ್ತದೆ. ಆದರೆ ಕ್ಷಮೆ ಹಾಗಲ್ಲ, ನಮಗೆ‌ ದಾರಿ ದೀಪವಾಗಿ ಕೆಲಸ‌ ಮಾಡುತ್ತದೆ.

---

ಗಮನಿಸಿ: ಇವು ಹಲವು ಸಂಶೋಧನೆಗಳು, ತಜ್ಞರ ವರದಿಗಳು ಮತ್ತು ಆಪ್ತಸಮಾಚಕಿಯಾಗಿ ನನ್ನ ವೃತ್ತಿಯಲ್ಲಿ ನಾನು ಗಮನಿಸಿದ ಅಂಶಗಳನ್ನು ಒಳಗೊಂಡಿರುವ ಬರಹ. ಇದನ್ನು ಸಾಮಾನ್ಯೀಕರಿಸಿ ಅರ್ಥೈಸುವುದು, ನಿರ್ದಿಷ್ಟ ಪ್ರಕರಣಗಳಿಗೆ ತಳಕು ಹಾಕುವುದು ತಪ್ಪು. ಒಟ್ಟಾರೆಯಾಗಿ ಸೇಡು-ಕ್ಷಮೆಯ ಮನಃಸ್ಥಿತಿಯ ವರ್ತನೆಯನ್ನು ಅರ್ಥೈಸಲು ಈ ಬರಹದ ಅಂಶಗಳನ್ನು ಬಳಸಿಕೊಳ್ಳಬಹುದು.

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ನಿವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ 20ಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.

mysore-dasara_Entry_Point