ಕನ್ನಡ ಸುದ್ದಿ  /  ಜೀವನಶೈಲಿ  /  ಅತ್ತೆ-ಸೊಸೆ ಜಗಳಕ್ಕೆ ನಿಮ್ಮ ಕುಡಿತ ಮದ್ದಲ್ಲ: ನೆಮ್ಮದಿ ಬಯಸೋ ವಿವಾಹಿತ ಗಂಡಸರು ಅರ್ಥ ಮಾಡಿಕೊಳ್ಳಬೇಕಾದ 20 ಅಂಶಗಳಿವು -ಕಾಳಜಿ

ಅತ್ತೆ-ಸೊಸೆ ಜಗಳಕ್ಕೆ ನಿಮ್ಮ ಕುಡಿತ ಮದ್ದಲ್ಲ: ನೆಮ್ಮದಿ ಬಯಸೋ ವಿವಾಹಿತ ಗಂಡಸರು ಅರ್ಥ ಮಾಡಿಕೊಳ್ಳಬೇಕಾದ 20 ಅಂಶಗಳಿವು -ಕಾಳಜಿ

ಡಾ ರೂಪಾ ರಾವ್: ಅಮ್ಮ ಮತ್ತು ಹೆಂಡತಿಯ ನಡುವಣ ಜಗಳ ಕಂಡು ಕುಡಿತದತ್ತ ವಾಲುತ್ತಿದ್ದ ಗಂಡಸಿನ ಮನಸ್ಸು ಅದೆಷ್ಟು ನೊಂದಿರಬೇಡ? ಆದರೆ ಕುಡಿತ ಯಾವುದಕ್ಕಾದರೂ ಪರಿಹಾರವಾಗಲು ಸಾಧ್ಯವೇ? ಗಂಡಸರ ಮನಸ್ಸಿಗೆ ಸಾಂತ್ವನದ ಜೊತೆಗೆ ಸಂಸಾರವನ್ನು ಸರಿದಾರಿಗೆ ತಂದುಕೊಳ್ಳಲು 20 ಪವರ್‌ಫುಲ್ ಟಿಪ್ಸ್ ಇಲ್ಲಿದೆ. Relationship Tips

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಪ್ರಶ್ನೆ; ಮನೆಯಲ್ಲಿ ಗೋಳು ಮೇಡಂ. ನನ್ನ ಅಮ್ಮನಿಗೆ ನನ್ನ ಹೆಂಡತಿಗೆ ಆಗಿ ಬರಲ್ಲ. ಹಾಗಂತ ನಮ್ಮದೇನು ಲವ್ ಮ್ಯಾರೇಜ್ ಅಲ್ಲ. ಅರೇಂಜ್ಡ್‌ ಮ್ಯಾರೇಜೇ. ಆದರೆ ನನ್ನ ಅಜ್ಜಿಗೆ ಅಂದರೆ ನನ್ನ ಅಮ್ಮನ ಅತ್ತೆಗೂ ನನ್ನ ಅಮ್ಮನಿಗೂ ಇವತ್ತಿಗೂ ಸಂಬಂಧ ಅಷ್ಟಕ್ಕಷ್ಟೇ. ಈಗ ನನ್ನ ಹೆಂಡತಿಗೂ ಅಮ್ಮನಿಗೂ ಸರಿಯಾಗುತ್ತಿಲ್ಲ. ಮನೆಮಂದಿಯೆಲ್ಲರೂ ಒಟ್ಟಿಗೆ ಇರಬೇಕು ಅಂತ ನನಗೆ ಆಸೆ. ಆದರೆ ಇಲ್ಲಿ ನೋಡಿದರೆ ಅಮ್ಮ ಬೇಕಾದ್ರೆ ಹೆಂಡತಿಯನ್ನು ಬಿಡು, ಹೆಂಡತಿ ಬೇಕು ಅಂದ್ರೆ ಅಮ್ಮನನ್ನು ಬಿಡು ಅನ್ನುವ ಪರಿಸ್ಥಿತಿ ಇದೆ. ಇವರ ಕಿತ್ತಾಟದಲ್ಲಿ ನನಗೆ ಹುಚ್ಚು ಹಿಡಿಯುವುದೊಂದು ಬಾಕಿಯಾಗಿದೆ ಅಷ್ಟೇ. ನನ್ನ ಅಪ್ಪ ಆಜನ್ಮ ಮೌನವ್ರತ ಹಿಡಿದವನಂತೆ ಇರುತ್ತಾರೆ. ಯಾವುದಕ್ಕೂ ಮಾತೇ ಆಡಲ್ಲ. ನನಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ಅವರ ಕಥೆ ಮುಂದೆ ಏನಾಗುತ್ತೋ ಗೊತ್ತಿಲ್ಲ. ನನಗೆ ಇನ್ನೂ ಕುಡಿತದ ಅಭ್ಯಾಸ ಇಲ್ಲ. ಆದರೆ ಕುಡಿದರೆ ನೆಮ್ಮದಿ ಸಿಗುತ್ತೆ ಅಂತಾರೆ. ಮನಸ್ಸು ತೀರಾ ಆ ಕಡೆಗೆ ಎಳೀತಾ ಇದೆ. ನನಗೆ ಹೀಗೆ ಅನ್ನಿಸ್ತಿದೆ ಅಂತ ನನ್ನ ಫ್ರೆಂಡ್ ಹತ್ರ ಹೇಳಿದೆ. ಅವನು ನಿಮಗೆ ಪ್ರಶ್ನೆ ಕಳಿಸು, ಅವರು ಕುಡಿ ಅಂದ್ರೆ ಆಮೇಲೆ ಕುಡಿಯೋದು ಶುರು ಮಾಡ್ಕೋ ಅಂದ. ನೀವು ಈ ಪ್ರಶ್ನೆ ಮುಟ್ಟಲ್ಲ ಅಂತ ಗೊತ್ತು. ಆದ್ರೂ ಕಳಿಸ್ತಾ ಇದ್ದೀನಿ. ಇನ್ನೆರೆಡು ವಾರದಲ್ಲಿ ನೀವು ಉತ್ತರ ಬರೀಲಿಲ್ಲ ಅಂದ್ರೆ ಕುಡಿತ ಶುರು ಮಾಡಿಕೊಳ್ಕೊತ್ತೀನಿ. ನಾನಂತೂ ಫಿಕ್ಸ್ ಆಗಿದ್ದೀನಿ, ಯಾವುದಕ್ಕೂ ಇರಲಿ ಅಂತ ನಿಮಗೊಂದು ಪ್ರಶ್ನೆ ಕಳಿಸಿದೆ ಅಷ್ಟೇ. - ನನ್ನ ಊರು, ಹೆಸರು ಹಾಕಬೇಡಿ

ಉತ್ತರ: ನಿಮ್ಮ ಪ್ರಶ್ನೆ ಓದಿದಾಗಲೇ ಖಂಡಿತ ಉತ್ತರಿಸಬೇಕು ಅನ್ನಿಸ್ತು. ನನ್ನನ್ನು ಒಂದು ಮಾತು ಕೇಳಬೇಕು ಎಂದ ನಿಮ್ಮ ಮನಸ್ಸಿನ ಭಾವನೆಗೆ, ನಿಮ್ಮ ಗೆಳೆಯನ ಸಲಹೆಗೆ ವೃತ್ತಿಪರ ಆಪ್ತಸಮಾಲೋಚಕಿಯಾಗಿ ನಾನು ಖಂಡಿತ ಗೌರವ ಕೊಡ್ತೀನಿ. ಮೊದಲಿಗೆ ನಿಮ್ಮ ಪ್ರಶ್ನೆ ಮದ್ಯ ಕುಡಿಯಬೇಕಾ ಬೇಡವಾ ಅನ್ನುವುದಾದರೆ ನಾನು ಯಾವ ಸಲಹೆಯನ್ನೂ ಕೊಡುವುದಿಲ್ಲ.‌ ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಅನ್ನುವುದು ನಿಮಗೇ ಗೊತ್ತಿರುತ್ತದೆ. ನಿಮಗೆ ಹಾಗೆ ಕುಡಿಯುವುದೇ ಪರಿಹಾರ ಎನಿಸಿದ್ದರೆ ನೀವು ಈ ಪ್ರಶ್ನೆಯನ್ನೂ ಕೇಳುತ್ತಿರಲಿಲ್ಲ ಎಂದುಕೊಳ್ಳುತ್ತೇನೆ. ಕುಡಿತವೆಂದರೆ ಒಂದು ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಇನ್ನೊಂದು ದೊಡ್ಡ ಸಮಸ್ಯೆಗೆ ಸಿಲುಕಿದಂತೆ ಅಷ್ಟೇ.

ಈಗ ನಿಮ್ಮ ನೈಜ ಸಮಸ್ಯೆಗೆ ಬರೋಣ. ಮನೆಯಲ್ಲಿ ಎಲ್ಲರೂ ಚೆನ್ನಾಗಿ ಹೊಂದಿಕೊಂಡು ಇರಬೇಕೆನ್ನುವುದು ನಿಮ್ಮ ಆಸೆ. ಆದರೆ ಮನೆಯಲ್ಲಿರುವ ಎಲ್ಲರಿಗೂ ಅದೇ ಭಾವನೆ ಹಾಗೂ ಆಸೆ ಇರಬೇಕಲ್ಲವೇ? ಅತ್ತೆ ಸೊಸೆಯಂದಿರು ಸಾಮಾನ್ಯವಾಗಿ ಏಕೆ ಜಗಳವಾಡುತ್ತಾರೆ? ಮುಂದೆ ಪರಿಶೀಲಿಸೋಣ.

ಅತ್ತೆ-ಸೊಸೆ ಜಗಳಕ್ಕೆ ಮುಖ್ಯ ಕಾರಣಗಳು

1) ಗಂಡಿನ ಮೇಲೆ ಅಧಿಕಾರಕ್ಕಾಗಿ ಪೈಪೋಟಿ: ಗಂಡು ಮಕ್ಕಳ ತಾಯಂದಿರು ತಮ್ಮ ಮಗನ ಸಮಯ ಮತ್ತು ಗಮನಕ್ಕಾಗಿ ತಮ್ಮ ಸೊಸೆಯಂದಿರು ತಮ್ಮೊಂದಿಗೆ ಸ್ಪರ್ಧಿಸುತ್ತಿದ್ದಾರೆ ಎಂದು ಆತಂಕ ಪಡಬಹುದು. ಇತ್ತ ಹೆಂಡತಿ ತನ್ನ ಅಧಿಕಾರವನ್ನು ಸ್ಥಾಪಿಸಲು ಅತ್ತೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆತಂಕ ಪಡಬಹುದು.

2) ಸೊಸೆಯನ್ನು ಒಪ್ಪಿಕೊಳ್ಳದ ಅತ್ತೆ: ತನಗೆ ಇಷ್ಟವಾಗದ ಹುಡುಗಿಯನ್ನು ಮಗ ಹೆಂಡತಿಯಾಗಿ ಆಯ್ಕೆ ಮಾಡಿಕೊಂಡಾಗ ತಾಯಿಗೆ ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗಬಹುದು.

3) ಅಸ್ತಿತ್ವ ಕಳೆದುಕೊಳ್ಳುವ ಭೀತಿ: ಇಷ್ಟು ದಿನ ತನ್ನೊಂದಿಗೆ ಅಂಟಿಕೊಂಡಿದ್ದ ಮಗ ಈಗ ಹೆಂಡತಿಯೊಡನೆ ಸುತ್ತಾಡುವಾಗ ತನ್ನ ಅಸ್ತಿತ್ವ ಇಲ್ಲದಂತಾಗಬಹುದು ಎಂಬ ಭಯ ತಾಯಿಗೆ ಇರಬಹುದು. ಮದುವೆಯಾದ ಮೇಲೆಯೂ ಅತ್ತೆಯೊಡನೆ ಇರುವ ಗಂಡನನ್ನು ನೋಡಿ ಹೆಂಡತಿಗೆ ಅಭದ್ರತಾ ಭಾವ ಕಾಡಬಹುದು.

4) ಸೊಸೆಯ ಬಗ್ಗೆ ಅಸೂಯೆ: ಸೊಸೆ ಸುಂದರವಾಗಿದ್ದರೆ ಅಥವಾ ಪ್ರತಿಭಾವಂತಳಾಗಿದ್ದರೆ ಅತ್ತೆಗೆ ಅಸೂಯೆ ಕಾಡಬಹುದು ಅಥವಾ ಅತ್ತೆ ಅಡುಗೆ‌ ಚೆನ್ನಾಗಿ ಮಾಡಿದರೆ ಸೊಸೆಗೆ ಅಸೂಯೆ ಬರಬಹುದು.

5) ಪವರ್ ಸ್ಟ್ರಗಲ್ (ಅಧಿಕಾರಕ್ಕಾಗಿ ಕಾದಾಟ): ಇಬ್ಬರಲ್ಲಿ ಯಾರ ಅಧಿಕಾರ ಹೆಚ್ಚು ಎಂಬ ಜಗಳ ಸಹಜವಾಗಿಯೇ ನಡೆಯುತ್ತದೆ.

6) ಸುಪ್ತ ಮನಸ್ಸಿನ ಆಟ: ಇಬ್ಬರ ಸುಪ್ತ‌ಮನಸಿನಲ್ಲಿಯೂ ಒಂದೇ‌ ಗಂಡಿನ (ಮಗ ಹಾಗೂ ಗಂಡ) ಗಮನ ಸೆಳೆಯಲು ಪೈಪೋಟಿ ಕಂಡು ಬರುತ್ತದೆ.

7) ಪೀಳಿಗೆಯಿಂದ ಪೀಳಿಗೆಗೆ: ನಿಮ್ಮ‌ ತಾಯಿಯು ಅವರ ಅತ್ತೆಯಿಂದ ಅತ್ತೆ ಎಂದರೆ ಹೇಗಿರುತ್ತಾರೆ ಎಂಬುದನ್ನು ಅನುಭವಿಸಿದ್ದಾರೆ. ಇದೊಂದು ತರಹ‌ 'ಜನರೇಶನಲ್ ಟ್ರಾಮಾ‌' ಅಂದರೆ ಪೀಳಿಗೆ ಇಂದ ಪೀಳಿಗೆಗೆ ವರ್ಗಾಯಿಸಲ್ಪಡುತ್ತಿರುವ ಗೋಳು, ಅನುಭವ.

8) ಫಲಿಸದ ನಿರೀಕ್ಷೆಗಳು: ಅತ್ತೆ ಅಥವಾ ಸೊಸೆಯಿಂದ ಫಲಿಸದ ನಿರೀಕ್ಷೆಗಳು.

9) ತಾವೇ ಸರಿ ಎಂದುಕೊಳ್ಳುವುದು: ಇಬ್ಬರಲ್ಲಿ ಒಬ್ಬರು ಅಥವಾ ಇಬ್ಬರೂ ತಾವೇ‌ ಸರಿ, ತಮ್ಮಿಂದ ಏನೂ ತಪ್ಪು ಆಗಿಯೇ ಇಲ್ಲ ಎಂದುಕೊಳ್ಳುವುದು.

10) ಅಸಹನೆ: ಇಬ್ಬರಿಗೂ ಪರಸ್ಪರ ಅಸಹನೆ, ಅಸಮಾಧಾನ

ಮೇಲಿನ ಹತ್ತೂ ಅಂಶಗಳನ್ನು ಇನ್ನೊಮ್ಮೆ ಓದಿಕೊಳ್ಳಿ. ನಿಮಗೆ ಇದು ನಿಮ್ಮ ಮನೆಯ ಸಮಸ್ಯೆ ಅಷ್ಟೇ ಅನ್ನಿಸಬಹುದು. ವಾಸ್ತವವೆಂದರೆ ಇವು ಬಹುತೇಕ ಎಲ್ಲ ಮನೆಗಳಲ್ಲಿ ನಡೆಯುವ ವಿದ್ಯಮಾನ. ತಾಯಿ ಮತ್ತು ಹೆಂಡತಿಯ ನಡುವಣ ಸಂಬಂಧವನ್ನು ಬ್ಯಾಲೆನ್ಸ್ ಮಾಡುವುದು ಸಹ ಒಂದು ಕಲೆ.

ಅತ್ತೆ ಸೊಸೆ ಜಗಳದ ವಿಚಾರದಲ್ಲಿ ನೆಮ್ಮದಿ ಕಂಡುಕೊಳ್ಳಲು ಈ ತಂತ್ರಗಳನ್ನು ಅನುಸರಿಸಿ ನೋಡಿ

ಮುಖ್ಯವಾಗಿ ಒಂದು ಅಂಶ ಗಮನದಲ್ಲಿರಿಸಿಕೊಳ್ಳಿ. ಮೊದಲು ನೀವು‌ ತಾಳ್ಮೆ‌ಕಳೆದುಕೊಳ್ಳಬಾರದು. ಯಾರಾದರೂ ಒಬ್ಬರ ಪರ ವರ್ತಿಸಬಾರದು.

1) ಇಬ್ಬರ ಜೊತೆಗೂ ಮಾತನಾಡಿ: ಇಬ್ಬರನ್ನೂ ಒಟ್ಟಿಗೆ ಕೂರಿಸಿಕೊಂಡು ಮಾತನಾಡಿ. ಈ ಜಗಳಗಳು ನಿಮಗೆ ಎಷ್ಟು ಬೇಸರ, ತಲೆನೋವು ತಂದಿದೆ, ನೀವು ಯಾವ ಹಂತಕ್ಕೆ ಹೋಗುವ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ ಎಂದು ವಿವರಿಸಿ. ಈ ಮಾತುಕತೆಯು ಜಗಳಗಳಿಗೆ ಅಂತ್ಯ ಹಾಕುವುದಕ್ಕಾಗಿಯೇ ಹೊರತು ಪರಸ್ಫರ ನಿಂದನೆ ಮಾಡಲು ಅಲ್ಲ ಅಥವಾ ಯಾರು ಸರಿ ಎಂಬುದನ್ನು ನಿರ್ಣಯಿಸುವುದಕ್ಕೂ ಅಲ್ಲ ಎನ್ನುವ ವಿಚಾರವನ್ನು ಅರ್ಥ ಮಾಡಿಸಿ.

2) ಜಗಳ ಏಕೆ ಆಗುತ್ತಿದೆ: ಎಲ್ಲಿ ಯಾವ ಸಮಯ ಹಾಗೂ ‌ಸನ್ನಿವೇಶದಲ್ಲಿ ಯಾವ ಕಾರಣಕ್ಕೆ ಜಗಳ‌ ಆಗುತ್ತಿದೆ‌ ಎಂಬುದನ್ನು ಅವರಿಂದ ಕೇಳಿ ಬರೆದುಕೊಳ್ಳಿ.

3) ಜಗಳದ ಸನ್ನಿವೇಶ ತಡೆಯಲು ಯತ್ನಿಸಿ: ಈಗ ಅಂಥ ಸನ್ನಿವೇಶಗಳನ್ನು ಆದಷ್ಟೂ ತಡೆಯಲು ಪ್ರಯತ್ನಿಸಿ. ಅಂದರೆ‌ ಅಡುಗೆ, ಮನೆ‌ಕೆಲಸ, ದೇವರಮನೆ ಈ ರೀತಿ ಒಟ್ಟಿಗೇ ಕೆಲಸ ಮಾಡುವ ಸನ್ನಿವೇಶಗಳನ್ನು ತಡೆಯಲು ಯತ್ನಿಸಿ. ಯಾರು‌ ಯಾವ ಕೆಲಸ‌ ಮಾಡಬೇಕು ಎಂಬುದನ್ನು ನಿರ್ಣಯಿಸಿ. ವೇಳಾಪಟ್ಟಿ ತಯಾರಿಸಿ.

4) ವೇಳಾಪಟ್ಟಿ ಮನಗಾಣಿಸಿ: ಇಬ್ಭರಿಗೂ ನೀವು ಅವರೊಡನೆ ಬಾಳಬೇಕಿದ್ದಲ್ಲಿ ಈ ವೇಳಾಪಟ್ಟಿಯಂತೇ ನಡೆಯುವುದು ಬಹಳ ಮುಖ್ಯ ಎಂಬುದನ್ನು ಹೇಳಿ.

5) ಮನಸ್ಸು ಅರ್ಥ ಮಾಡಿಕೊಳ್ಳಿ: ಜಗಳ‌ ನಡೆಯುವ ಇನ್ನಿತರ ಕಾರಣಗಳೇನು ಎಂದು ಅರ್ಥೈಸಲು ಪ್ರಯತ್ನಿಸಿ. ಪರಸ್ಪರರಿಂದ ನಿರೀಕ್ಷೆ, ಪರಸ್ಪರರ ಮೇಲಿನ ಅಸೂಯೆ, ಸೀರೆ ಒಡವೆ ಇತ್ಯಾದಿಗಳ ಬಗ್ಗೆ ಮಾತನಾಡಿ. ಒಬ್ಬರ ನಿರೀಕ್ಷೆಯಂತೆಯೇ ಎಲ್ಲಾ ಸಮಯದಲ್ಲಿಯೂ ಎಲ್ಲರೂ ಇರಲು ಆಗುವುದಿಲ್ಲ. ಹಾಗೆಯೇ ಕೆಲವೊಮ್ಮೆ ಪರಸ್ಪರ ಹೊಂದಾಣಿಕೆಯು ಮನೆ ಹಾಗೂ ಮನಸಿನ ನೆಮ್ಮದಿಗೆ ಬೇಕಾಗುತ್ತದೆ ಎಂದು ಹೇಳಿ. ಇಬ್ಬರೂ ನನಗೆ ಬೇಕು, ಹಾಗಾಗಿ ಯಾರೂ ಹೆಚ್ಙಲ್ಲ, ಯಾರೊಬ್ಬರು ಕಡಿಮೆಯೂ ಅಲ್ಲ ಎಂದು ಹೇಳಿ

6) ಬಹುಮಾನದ ಭರವಸೆ ಕೊಡಿ: ಜಗಳ‌ದ ಸಮಯದಲ್ಲಿ ಯಾರು ಸುಮ್ಮನಿರುತ್ತಾರೋ ಅವರಿಗೆ ಅವರ ಇಷ್ಟದ ಯಾವುದಾದರೂ ಬಹುಮಾನ ಕೊಡುವೆ ಎಂದು‌ ಭರವಸೆ ಕೊಡಿ. (ಇವುಗಳಿಂದಲೇ ಆಗಿದ್ದು ಅಂತ ಅದಕ್ಕೂ ಜಗಳ‌ ಬರಬಹುದು, ಅದನ್ನು‌ ಮೊದಲೇ‌ ಹೇಳಿ )

7) ಡೈರಿ ಬರೆಸಿ: ನಂತರ ಪ್ರತಿದಿನ ರಾತ್ರಿ ಅವರಿಬ್ಬರೂ ಪರಸ್ಪರರ ಬಗೆಗಿನ ಒಳ್ಳೆಯ ವಿಷಯಗಳನ್ನು ಬರೆಯಬೇಕು ಅಥವಾ ಹೇಳಬೇಕು ಎಂಬ ಪದ್ದತಿ ಬೆಳೆಸಿ. ನೀವೂ ಇದಕ್ಕೆ ಜಾಯಿನ್ ಆಗಬಹುದು.

8) ಪರಸ್ಪರ ಸಹಾಯ ಮಾಡಿ: ಪ್ರತಿದಿನ ಅವರಿಬ್ಬರೂ ಒಬ್ಬರಿಗೊಬ್ಬರು ಒಂದಾದರೂ ಸಹಾಯ‌ ಮಾಡಬೇಕು ಎಂದು ಹೇಳಿ.

9) ಒಟ್ಟಿಗೆ ಊಟ ಮಾಡಿ: ಮನೆಯಲ್ಲಿ ಎಲ್ಲರೂ ನೀವು ಎದುರಿಗೆ ಇರಲೇಬೇಕು ಒಟ್ಟಿಗೇ ಊಟ ಮಾಡಿ. ಅವರಿಬ್ಬರೊಡನೆ ಪ್ರತಿದಿನ ಸ್ವಲ್ಪ ಹೊತ್ತು ಮಾತನಾಡಿ. ಅವರೂ ಅಂದಿನ ದಿನದ ಬಗ್ಗೆ ತಮ್ಮ‌ಅಭಿಪ್ರಾಯ ಹೇಳಲಿ.

10) ತಾಳ್ಮೆ ಕಳೆದುಕೊಳ್ಳಬೇಡಿ: ನೀವು ಮಾತ್ರ ಯಾರೂ ಪರವೂ ನಿಲ್ಲಬೇಡಿ. ಯಾವುದೇ ಜಗಳದ ಪರಿಹಾರಕ್ಕೆ ಮಾತ್ರ ಗಮನ ಕೊಡಿ. ತಾಳ್ಮೆ ಕಳೆದುಕೊಳ್ಳಬೇಡಿ.

ಅವರಿಬ್ಬರೂ ಈ ಮೇಲಿನ 10 ಅಂಶಗಳನ್ನು ಸತತ 3 ತಿಂಗಳು ಅನುಸರಿಸುವಂತೆ ಮಾಡಿ. ಇಬ್ಬರೂ ಸ್ವಲ್ಪ ಸರಿ ಹೋಗುತ್ತಾರೆ. ಒಂದು ವೇಳೆ ನಿಮ್ಮಿಂದ ಇದನ್ನು ಪರಿಹರಿಸಲು ಆಗುತ್ತಿಲ್ಲ ಎಂದಾದರೆ ಕೌಟುಂಬಿಕ ಕೌನ್ಸೆಲಿಂಗ್‌ಗೆ ಕರೆದುಕೊಂಡು ಹೋಗಿ. ಅವರು ಇದೆಲ್ಲಾ ಮಾಡಲಾಗುವುದಿಲ್ಲ ಎಂಬ ಮೊಂಡಿಗೆ ಬಿದ್ದರೆ ಅಥವಾ ಮಾಡದಿದ್ದರೆ‌ , ನಿಮಗೆ ನೆಮ್ಮದಿ ಬೇಕಿದ್ದಲ್ಲಿ, ನಿಮ್ಮ ಮನೆಯ ಮೇಲೋ ಇಲ್ಲ ಪಕ್ಕದಲ್ಲೋ ಬೇರೊಂದು ಮನೆ ಮಾಡಿಕೊಳ್ಳಿ. ಇಬ್ಬರಿಗೂ ಕಾಮನ್ ವಿಷಯಗಳಿಲ್ಲದಾಗ ಜಗಳ‌ ತಪ್ಪುತ್ತದೆ.

ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬಾರದು ಎನ್ನುವುದು ನಿಜ. ಹಾಗೆಯೆ, ನಿಮಗಾಗಿ ಎಲ್ಲವನ್ನೂ‌ ಬಿಟ್ಟು ಬಂದವಳನ್ನೂ ಬಿಟ್ಟು ಕೊಡಬಾರದು ಎನ್ನುವುದೂ ನಿಜವಲ್ಲವೇ? ಹೆತ್ತ ತಾಯಿಗೆ ಮಗನ ನೆಮ್ಮದಿ, ಕಟ್ಟಿಕೊಂಡ ಹೆಂಡತಿಗೆ ಗಂಡನ ಮನಶಾಂತಿ ಮುಖ್ಯ ಎನ್ನುವುದೂ ಗೊತ್ತಿರಬೇಕು.

ಸಮಸ್ಯೆಯನ್ನು ಅದು ಹುಟ್ಟಿರುವ ಕಡೆಯೇ ಬಗೆಹರಿಸಬೇಕೇ ಹೊರತು ಬೇರೆಡೆಯಲ್ಲ. ಕುಡಿತದಿಂದಾಗುವ ತೊಂದರೆಗಳ ಬಗ್ಗೆ ನಿಮಗೆ ಗೊತ್ತೇ ಇದೇ. ನೀವು ಪ್ರಶ್ನೆ ಕೇಳಿರುವ ರೀತಿಯಲ್ಲಿಯೇ ಇದು ಅರ್ಥವಾಗುತ್ತದೆ. ಒಂದು ವಿಷಯ ತಿಳಿದುಕೊಳ್ಳಿ; ಮತ್ತಿನಲ್ಲಿ ಸಮಸ್ಯೆಯಿಂದ ದೂರ ಓಡಬಹುದೇ‌ ಹೊರತು ಸಮ‌ಸ್ಯೆಗೆ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಕುಡಿತದ ಆಲೋಚನೆ ಬದಿಗಿರಿಸಿ, ಇರುವ ಸಮಸ್ಯೆಯನ್ನು ಮೇಲೆ ಹೇಳಿದಂತೆ ಬಗಹರಿಸಲು ಪ್ರಯತ್ನಿಸಿ.

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990