Kejriwal to AAP MLAs: 'ಜೈಲಿಗೆ ಹೋಗಲು ಸಿದ್ಧರಾಗಿರಿ', ತಮ್ಮ ಪಕ್ಷದ ಶಾಸಕರಿಗೆ ಕೇಜ್ರಿವಾಲ್ ಹೀಗೆ ಹೇಳಿದ್ದೇಕೆ?
“ಎಲ್ಲರನ್ನೂ ಜೈಲಿಗೆ ಹಾಕುತ್ತಾರೆ. ಇನ್ನು ಮುಂದಕ್ಕೆ ಕೈಲಾಶ್ ಗಹ್ಲೋಟ್ ವಿರುದ್ಧ ದಾಳಿ ನಡೆಸಲಾಗುತ್ತದೆ. ಮುಂದಿನ 3-4 ತಿಂಗಳಲ್ಲಿ ಜೈಲಿಗೆ ಹೋಗಲು ಎಲ್ಲರೂ ಸಿದ್ಧರಾಗಿರಿ. ಎಲ್ಲರಿಗೂ 4 ತಿಂಗಳು ಜೈಲು ಶಿಕ್ಷೆ ಸಹಿಸಿಕೊಳ್ಳುವ ಶಕ್ತಿ ಇದ್ದರೆ, ಅವರಿಂದ ನಮಗೆ ಏನೂ ಮಾಡಲು ಸಾಧ್ಯವಿಲ್ಲ.” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನವದೆಹಲಿ: ಆಮ್ ಆದ್ಮಿ ಪಕ್ಷದ ಸದಸ್ಯರು ಜೈಲಿಗೆ ಹೋಗಲು ಸಿದ್ಧರಾಗಿರಬೇಕು ಎಂದು ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ನಿನ್ನೆಯಷ್ಟೇ ಆಮ್ ಆದ್ಮಿ ಪಕ್ಷದ (AAP) ಶಾಸಕ ಮತ್ತು ವಕ್ಫ್ ಬೋರ್ಡ್ ಅಧ್ಯಕ್ಷ ಅಮಾನತುಲ್ಲಾ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಇಂದು ದೆಹಲಿಯ ಐಜಿಐ ಕ್ರೀಡಾಂಗಣದಲ್ಲಿ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆಯುತ್ತಿದ್ದು, ಕೇಜ್ರಿ ಯಾವುದೇ ಸನ್ನಿವೇಶ ಎದುರಿಸಲು ಸಿದ್ಧರಾಗಿ ಎಂದು ಪಕ್ಷದ ಸದಸ್ಯರಿಗೆ ಕರೆ ನೀಡಿದ್ದಾರೆ.
ವಕ್ಫ್ ಬೋರ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಶನಿವಾರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಶುಕ್ರವಾರ ತಡರಾತ್ರಿ ದೆಹಲಿ ಭ್ರಷ್ಟಾಚಾರ ನಿಗ್ರಹ ದಳವು ಖಾನ್ ನಿವಾಸದ ಮೇಲೆ ದಾಳಿ ಮಾಡಿತ್ತು.
ಇಂದು ನಡೆದ ಎಎಪಿ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ದೆಹಲಿ, ಪಂಜಾಬ್ ಮತ್ತು ಗೋವಾದ ಎಲ್ಲಾ ಶಾಸಕರು ಮತ್ತು ಸಂಸದರು ಭಾಗವಹಿಸಿದ್ದರು. ಜತೆಗೆ ಎಎಪಿಯ ಕೌನ್ಸಿಲರ್‌ಗಳು, ಜಿಲ್ಲಾ ಪಂಚಾಯತ್ ಸದಸ್ಯರು, ಮೇಯರ್‌ಗಳು, ಬ್ಲಾಕ್ ಪ್ರಮುಖರು ಕೂಡಾ ಭಾಗವಹಿಸಿದ್ದರು. ಈ ಸಮಾವೇಶವನ್ನುದ್ದೇಶಿಸಿ ಕೇಜ್ರಿವಾಲ್ ಮಾತನಾಡಿದರು.
ಅಬಕಾರಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೂಡಾ ಇದೇ ರೀತಿಯಲ್ಲಿ ಬಂಧಿಸಬಹುದು ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ. ಮುಂದೆ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರನ್ನು ಕೂಡಾ ಕೇಂದ್ರ ತನಿಖಾ ಸಂಸ್ಥೆಗಳು ಗುರಿಯಾಗಿಸಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ. ಯಾಕೆಂದರೆ ಕೇಂದ್ರೀಯ ತನಿಖಾ ದಳ (ಸಿಬಿಐ) ಈಗಾಗಲೇ ಸಾರಿಗೆ ಇಲಾಖೆಯಿಂದ 1,000 ಲೋ ಫ್ಲೋರ್ ಎಸಿ ಬಸ್‌ಗಳನ್ನು ಖರೀದಿಸಲು ಉದ್ದೇಶಿಸಿರುವ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿದೆ.
ಎಲ್ಲಾ ಆಪ್ ಶಾಸಕರು 3-4 ತಿಂಗಳು ಜೈಲಿಗೆ ಹೋಗಲು ಸಿದ್ಧರಾಗಿರಬೇಕು ಎಂದು ಕೇಜ್ರಿವಾಲ್ ಕೇಳಿಕೊಂಡಿದ್ದಾರೆ. “ಈಗ ಅವರು ಯಾರ ಮೇಲಾದರೂ ದಾಳಿ ನಡೆಸಲು ಯೋಜಿಸಿದ್ದಾರೆ. ಒಂದು ವೇಳೆ ಅವರಿಂದ ಹಣ ವಶಪಡಿಸಿಕೊಂಡರೆ ಅವರನ್ನು ಮನೀಶ್ ಸಿಸೋಡಿಯಾ ಅವರ ಸಹಾಯಕರು ಎಂದು ಬೊಟ್ಟು ಮಾಡಿ ತೋರಿಸುತ್ತಾರೆ. ಅದೇ ಆರೋಪ ಹೊರಿಸಿ ಆ ಬಳಿಕ ಅವರನ್ನು ಬಂಧಿಸಲಾಗುತ್ತದೆ” ಎಂದು ಕೇಜ್ರಿವಾಲ್ ಹೇಳಿದರು. ಈ ವೇಳೆ ಸಿಸೋಡಿಯಾ ಅವರನ್ನು "ಅತ್ಯಂತ ಪ್ರಾಮಾಣಿಕ" ಎಂದು ಕೊಂಡಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ಮೂರು ತಿಂಗಳಿನಿಂದ ಸಚಿವ ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿದ್ದಾರೆ. ವಿದ್ಯುತ್ ಸಬ್ಸಿಡಿ ಯೋಜನೆಯನ್ನು ಪ್ರಾರಂಭಿಸಲು, ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯಲು ಮತ್ತು ಆಸ್ಪತ್ರೆಗಳನ್ನು ಉತ್ತಮಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎಎಪಿ ಮುಖ್ಯಸ್ಥ ಹೇಳಿದ್ದಾರೆ. ನ್ಯಾಯಾಲಯದಲ್ಲಿ ಜೈನ್ ವಿರುದ್ಧ ಸಾಕ್ಷ್ಯವನ್ನು ಸಲ್ಲಿಸಲು ವಕೀಲರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
“ಎಲ್ಲರನ್ನೂ ಜೈಲಿಗೆ ಹಾಕುತ್ತಾರೆ. ಇನ್ನು ಮುಂದಕ್ಕೆ ಕೈಲಾಶ್ ಗಹ್ಲೋಟ್ ವಿರುದ್ಧ ದಾಳಿ ನಡೆಸಲಾಗುತ್ತದೆ. ಮುಂದಿನ 3-4 ತಿಂಗಳಲ್ಲಿ ಜೈಲಿಗೆ ಹೋಗಲು ಎಲ್ಲರೂ ಸಿದ್ಧರಾಗಿರಿ. ಎಲ್ಲರಿಗೂ 4 ತಿಂಗಳು ಜೈಲು ಶಿಕ್ಷೆ ಸಹಿಸಿಕೊಳ್ಳುವ ಶಕ್ತಿ ಇದ್ದರೆ, ಅವರಿಂದ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಇದುವರೆಗೆ 285 ಶಾಸಕರನ್ನು ಖರೀದಿಸಿದೆ. ಶಾಸಕರ ಬೇಟೆಗೆ 7,000ದಿಂದ 8,000 ಕೋಟಿ ರೂಪಾಯಿ ಖರ್ಚು ಮಾಡಿದೆ” ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ವರ್ಷಾಂತ್ಯದಲ್ಲಿ ಗುಜರಾತ್‌ನಲ್ಲಿ ಚುನಾವಣೆ ನಡೆಯಲಿದೆ. ಗುಜರಾತ್‌ನಲ್ಲಿ ಎಎಪಿ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಅರಗಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಹೀಗಾಗಿ ನಮ್ಮ ಪಕ್ಷವನ್ನು ಹತ್ತಿಕ್ಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಕೇಜ್ರಿವಾಲ್ ಹೇಳಿದ್ದಾರೆ.
ವಿಭಾಗ