ತಮಿಳುನಾಡು ತಿರುಪೋರೂರ್ ಕಂದಸ್ವಾಮಿ ದೇವಾಲಯದ ಕಾಣಿಕೆ ಹುಂಡಿಗೆ ಬಿದ್ದ ಐಫೋನ್, ಆಡಳಿತ ಮಂಡಳಿ ಹೇಳಿದ್ದು ಕೇಳಿ ಭಕ್ತ ಕಂಗಾಲು
iPhone: ದೇವರ ಕಾಣಿಕೆ ಹುಂಡಿಗೆ ಬಿದ್ದದ್ದು ದೇವರಿಗೆ. ವಾಪಸ್ ಕೊಡಿ ಅಂದ್ರೆ ಸಿಗುತ್ತಾ? ಅಂದ್ರೆ ಸಿಗಲ್ಲ ಎಂಬ ಉತ್ತರ ಶತಸಿದ್ಧ. ತಮಿಳುನಾಡು ತಿರುಪೋರೂರ್ ಕಂದಸ್ವಾಮಿ ದೇವಾಲಯದ ಹುಂಡಿಗೆ ಕಾಣಿಕೆ ಹಾಕುವಾಗ ಐಫೋನ್ ಬಿದ್ದು ಹೋಗಿದೆ. ಆಡಳಿತ ಮಂಡಳಿ ಹೇಳಿದ್ದು ಕೇಳಿ ಭಕ್ತ ಕಂಗಾಲಾಗಿರುವ ಘಟನೆ ನಡೆದಿದೆ.
iPhone: ಹಿಂದೂ ಸಮುದಾಯದವರು ದೇವಸ್ಥಾನಕ್ಕೆ ಹೋದಾಗ ದೇವರ ಹುಂಡಿಗೆ ಕಾಣಿಕೆ ಹಾಕುವುದು ಸಾಮಾನ್ಯ. ಕೆಲವರು ಹರಕೆ ತೀರಿಸಲು ಕಾಣಿಕೆ ಹಾಕಿದರೆ ಬಹಳಷ್ಟು ಜನ ತಮ್ಮ ಸಮಸ್ಯೆ ನೀಗಲಿ ಎಂದೋ, ಸಮಾಜಕ್ಕೆ ಸೇರಬೇಕಾದ್ದು ಎಂದೋ ಹೀಗೆ ಹಲವಾರು ಸಂಕಲ್ಪಗಳೊಂದಿಗೆ ದೇವರ ಹುಂಡಿಗೆ ಕಾಣಿಕೆ ಹಾಕುತ್ತಾರೆ. ಆದರೆ ಹಾಗೆ ಕಾಣಿಕೆ ಹಾಕುವಾಗ ಕೈಯಲ್ಲಿರುವ ವಸ್ತುವೂ ದೇವರ ಹುಂಡಿಗೆ ಬಿದ್ದರೆ! ಹೀಗೊಂದು ಸಂದೇಹ ಕಾಡುವುದು ಸಹಜ. ಇಂತಹ ಘಟನೆಗಳಾಗಿವೆ. ಮಕ್ಕಳ ಕೈಯಲ್ಲಿದ್ದ ಆಟಿಕೆ, ದೊಡ್ಡವರ ಕೈಯಲ್ಲಿದ್ದ ಪರ್ಸ್ ಹೀಗೆ ಹಲವು ವಸ್ತುಗಳು ಹುಂಡಿ ಸೇರಿದ ಉದಾಹರಣೆಗಳಿವೆ. ಆದರೆ ತಾಜಾ ಉದಾಹರಣೆ ಐಫೋನ್‌ನದ್ದು! ಈ ಘಟನೆ ನಡೆದಿರುವುದು ತಮಿಳುನಾಡಿನ ತಿರುಪೋರೂರ್ ಎಂಬಲ್ಲಿ!
ತಿರುಪೋರೂರ್ ಕಂದಸ್ವಾಮಿ ದೇವಾಲಯದ ಕಾಣಿಕೆ ಹುಂಡಿಗೆ ಬಿದ್ದ ಐಫೋನ್
ತಮಿಳುನಾಡಿನ ಚೆಂಗಲಪಟ್ಟು ಜಿಲ್ಲೆಯ ಕೋವಲಂ ಎಂಬ ಊರಿನಿಂದ ಸ್ವಲ್ಪ ಮುಂದೆ ಮಾಮಲ್ಲಪುರಕ್ಕೆ ಹೋಗುವ ದಾರಿ ಇದೆ. ಅಲ್ಲಿ ಪ್ರಸಿದ್ಧವಾದ ತಿರುಪೋರೂರ್ ಕಂದಸ್ವಾಮಿ ದೇವಾಲಯವಿದೆ. ಕಂದಸ್ವಾಮಿ ಅಂದರೆ ಮುರುಗ (ಸುಬ್ರಹ್ಮಣ್ಯ) ದೇವರು. ಈ ಭಾಗದಲ್ಲಿ ಮುರುಗನಿಗೆ ಬಗೆಬಗೆಯ ಪ್ರಾರ್ಥನೆ, ನೈವೇದ್ಯ ಸಲ್ಲಿಸುವುದು ವಾಡಿಕೆ. ಇದರಲ್ಲಿ ಭಕ್ತರು ತಾಳಿ, ಕಾಡಿಗೆ, ವೇಲ್, ನಾಣ್ಯ, ಕರೆನ್ಸಿ ನೋಟುಗಳನ್ನು ತಮ್ಮ ಇಚ್ಛೆಯಂತೆ ಕೈಚೀಲದಲ್ಲಿ ತುಂಬಿ ಕಾಣಿಕೆ ಸಲ್ಲಿಸುತ್ತಾರೆ. ಅದೇ ದೇವಾಲಯದಲ್ಲಿ ಭಕ್ತರೊಬ್ಬರು ಕಾಣಿಕೆ ಹಾಕಬೇಕಾದರೆ ಅವರ ಕೈಯಲ್ಲಿದ್ದ ಐಫೋನ್ ಹುಂಡಿಗೆ ಬಿದ್ದಿದೆ. ಕೂಡಲೇ ಅವರು ಆಡಳಿತ ಮಂಡಳಿಯವರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಆಗ ಕಾಣಿಕೆ ಡಬ್ಬಿ ತೆರೆದು ಲೆಕ್ಕ ಮಾಡುವಾಗ ತಿಳಿಸುತ್ತೇವೆ ಬನ್ನಿ ಎಂದು ಹೇಳಿದ್ದಾಗಿ ಸ್ಥಳೀಯ ಪುದಿಯತಲಮುರೈ ಸುದ್ದಿ ಚಾನೆಲ್ ವರದಿ ಮಾಡಿದೆ.
ಇಲ್ಲಿ ಆರು ತಿಂಗಳಿಗೊಮ್ಮೆ ದೇವರ ಹುಂಡಿ ತೆರೆದು ಕಾಣಿಕೆ ಲೆಕ್ಕ ಹಾಕುತ್ತಾರೆ. ಅದರಂತೆ, ಹಿಂದೂ ಧಾರ್ಮಿಕ ದತ್ತಿಗಳ ಜಂಟಿ ಆಯುಕ್ತೆ ರಾಜಲಕ್ಷ್ಮಿ, ಕಾರ್ಯನಿರ್ವಹಣಾಧಿಕಾರಿ ಕುಮಾರವೇಲ್ ಇನ್ಸ್ ಪೆಕ್ಟರ್ ಭಾಸ್ಕರನ್ ಅವರ ಸಮ್ಮುಖದಲ್ಲಿ ನಿನ್ನೆ (ಡಿಸೆಂಬರ್ 20) ಕಾಣಿಕೆ ಹುಂಡಿ ತೆರೆದು ಲೆಕ್ಕ ಮಾಡಿದ್ದಾರೆ. 52 ಲಕ್ಷ ರೂಪಾಯಿ, 289 ಗ್ರಾಂ ಚಿನ್ನ ಮತ್ತು 6920 ಗ್ರಾಂ ಬೆಳ್ಳಿ ಸಿಕ್ಕಿದೆ. ಜತೆಗೊಂದು ಐಫೋನ್ ಕೂಡ ಇತ್ತು ಎಂದು ವರದಿ ಹೇಳಿದೆ.
ಕಾಣಿಕೆ ಹುಂಡಿಗೆ ಬಿದ್ದ ಐಫೋನ್ ಯಾರದ್ದು
ಕಾಣಿಕೆ ಹುಂಡಿ ಲೆಕ್ಕಾಚಾರ ಮಾಡುವಾಗ ಪತ್ತೆಯಾದ ಐಫೊನ್ ಚೆನ್ನೈನ ಅಂಬತ್ತೂರಿನ ವಿನಾಯಕಪುರಂನ ದಿನೇಶ್ ಎಂಬುವವರದ್ದು ಎಂಬುದು ಪತ್ತೆಯಾಗಿದೆ. ದಿನೇಶ್ ಅವರು ಚೆನ್ನೈನ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿಯ ಆಡಳಿತದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಅಕ್ಟೋಬರ್ 18ರಂದು ಕುಟುಂಬ ಸಮೇತ ದೇವಸ್ಥಾನಕ್ಕೆ ಬಂದಾಗ ದೇವರ ಹುಂಡಿಗೆ ಕಾಣಿಕೆ ಹಾಕುವಾಗ ಐಫೋನ್ ಬಿದ್ದಿತ್ತು. ಈ ಬಗ್ಗೆ ಅವರು ಅದೇ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ದತ್ತಿ ಇಲಾಖೆಗೆ ದೂರು ನೀಡಿದ್ದರು ಎಂದು ವರದಿ ವಿವರಿಸಿದೆ.
ಕಾಣಿಕೆ ಹುಂಡಿಯಲ್ಲಿ ಐಫೋನ್ ಸಿಕ್ಕ ವಿಚಾರವನ್ನು ಕೂಡಲೇ ದಿನೇಶ್ ಅವರಿಗೆ ತಿಳಿಸಲಾಗಿದೆ. ಹಾಗೆ ಅವರು ದೇವಸ್ಥಾನಕ್ಕೆ ಬಂದಿದ್ದರು. ಆಗ ದೇವಸ್ಥಾನದ ಆಡಳಿತ ಮಂಡಳಿ ಪ್ರತಿನಿಧಿಗಳು ನೀಡಿದ ಉತ್ತರಕ್ಕೆ ಅವರು ಕಂಗಾಲಾಗಿದ್ದರು. ನಿಮ್ಮ ಐಫೋನ್ ವಾಪಸ್ ಕೊಡಲಾಗದು. ದೇವರ ಹುಂಡಿಗೆ ಬಿದ್ದ ಬಳಿಕ ಅದು ದೇವರಿಗೆ ಸೇರಿದ್ದು. ನೀವು ಐಫೋನ್‌ನಲ್ಲಿರುವ ಡೇಟಾವನ್ನೆಲ್ಲ ನಿಮ್ಮ ಇನ್ನೊಂದು ಫೋನ್‌ಗೆ ವರ್ಗಾವಣೆ ಮಾಡಿಕೊಳ್ಳಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. ಆದರೂ ದಿನೇಶ್ ಅವರು ಐಫೋನ್ ವಾಪಸ್ ಪಡೆಯಲು ತಮ್ಮ ಪ್ರಯತ್ನ ಮುಂದವರಿಸಿದ್ದಾಗಿ ವರದಿ ಹೇಳಿದೆ.