BBC Documentary: ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಅಮೆರಿಕ ಹೇಳಿದ್ದೇನು?: ಅದ್ಯಾವ್‌ 'ಡಾಕ್ಯುಮೆಂಟ್' ರೀ ಎಂದ ಶ್ವೇತಭವನ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bbc Documentary: ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಅಮೆರಿಕ ಹೇಳಿದ್ದೇನು?: ಅದ್ಯಾವ್‌ 'ಡಾಕ್ಯುಮೆಂಟ್' ರೀ ಎಂದ ಶ್ವೇತಭವನ!

BBC Documentary: ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಅಮೆರಿಕ ಹೇಳಿದ್ದೇನು?: ಅದ್ಯಾವ್‌ 'ಡಾಕ್ಯುಮೆಂಟ್' ರೀ ಎಂದ ಶ್ವೇತಭವನ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರ ನೆಡ್‌ ಪ್ರೈಸ್‌, ಗುಜರಾತ್‌ ಗಲಭೆಯ ಕುರಿತು ಬಿಬಿಸಿಯಲ್ಲಿ ಪ್ರಸಾರವಾಗಿರುವ ಸಾಕ್ಷ್ಯಚಿತ್ರದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನೆಡ್‌ ಪ್ರೈಸ್‌ (ಸಂಗ್ರಹ ಚಿತ್ರ)
ನೆಡ್‌ ಪ್ರೈಸ್‌ (ಸಂಗ್ರಹ ಚಿತ್ರ) (AP)

ವಾಷಿಂಗ್ಟನ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರ ನೆಡ್‌ ಪ್ರೈಸ್‌, ಗುಜರಾತ್‌ ಗಲಭೆಯ ಕುರಿತು ಬಿಬಿಸಿಯಲ್ಲಿ ಪ್ರಸಾರವಾಗಿರುವ ಸಾಕ್ಷ್ಯಚಿತ್ರದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನೆಡ್‌ ಪ್ರೈಸ್‌, ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಜಾಣ ಉತ್ತರ ನೀಡಿದರು. ಈ ಸಾಕ್ಷ್ಯಚಿತ್ರದ ಬಗ್ಗೆ ನನಗೆ ಮಾಹಿತಿ ಇಲ್ಲವಾದರೂ, ಅಮೆರಿಕ ಹಾಗೂ ಭಾರತವನ್ನು ಎರಡು ಅಭಿವೃದ್ಧಿಶೀಲ ಮತ್ತು ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರಗಳನ್ನಾಗಿ ರೂಪಿಸುವ ಪಾಲುದಾರಿಕೆಯ ಮೌಲ್ಯಗಳ ಬಗ್ಗೆ ನನಗೆ ಬಹಳಷ್ಟು ಮಾಹಿತಿ ಇದೆ ಎಂದು ನೆಡ್‌ ಪ್ರೈಸ್‌ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ರಾಜಕೀಯ, ಆರ್ಥಿಕ ಮತ್ತು ಜನರ ನಡುವಿನ ಆಳವಾದ ಸಂಬಂಧ ಭಾರತ ಹಾಗೂ ಅಮೆರಿಕವನ್ನು ಒಂದು ಮಾಡುತ್ತದೆ. ಇದೇ ಕಾರಣಕ್ಕೆ ನಾವು ಭಾರತದೊಂದಿಗೆ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸಲು ಬಯಸುತ್ತೇವೆ ಎಂದು ನೆಡ್‌ ಪ್ರೈಸ್‌ ಇದೇ ವೇಳೆ ಸ್ಪಷ್ಟಪಡಿಸಿದರು.

ಭಾರತದ ಪ್ರಜಾಪ್ರಭುತ್ವವನ್ನು ರೋಮಾಂಚಕ ಎಂದು ಕರೆದಿರುವ ನೆಡ್‌ ಪ್ರೈಸ್‌, ಪ್ರಜಾಪ್ರಭುತ್ವ ಅಮೆರಿಕ ಮತ್ತು ಭಾರತದ ನಡುವಿನ ಸುಮಧರ ಸಂಬಂಧದ ಸೇತುವೆ ಎಂದು ಬಣ್ಣಿಸಿದರು.ಭಾರತದೊಂದಿಗೆ ಅಮೆರಿಕವು ಹಂಚಿಕೊಳ್ಳುವ ಪಾಲುದಾರಿಕೆ ಅಸಾಧಾರಣವಾಗಿ ಆಳವಾಗಿದೆ. ಅಮೆರಿಕದ ಪ್ರಜಾಪ್ರಭುತ್ವ ಮತ್ತು ಭಾರತದ ಪ್ರಜಾಪ್ರಭುತ್ವ ಸಾಮಾನ್ಯವಾದ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ ಎಂದು ನೆಡ್‌ ಪ್ರೈಸ್‌ ಹೇಳಿದರು.

ಇನ್ನು ಕಳೆದ ವಾರ ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಪ್ರತಿಕ್ರಿಯೆ ನೀಡಿದ್ದ ಬ್ರಿಟನ್‌ ಪ್ರಧಾನಮಂತ್ರಿ ರಿಷಿ ಸುನಕ್‌, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಪರ ಬ್ಯಾಟ್‌ ಬೀಸಿದ್ದರು.

ಪಾಕಿಸ್ತಾನ ಮೂಲದ ಸಂಸದ ಇಮ್ರಾನ್ ಹುಸೇನ್ ಅವರು, ಬ್ರಿಟಿಷ್ ಸಂಸತ್ತಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಉಲ್ಲೇಖ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಿಷಿ ಸುನಕ್‌, ಬ್ರಿಟನ್‌ ಶೋಷಣೆಯ ಪರ ಎಂದಿಗೂ ನಿಲ್ಲದು. ಆದರೆ ಇಮ್ರಾನ್‌ ಹುಸೇನ್‌ ಅವರು ಪ್ರಸ್ತಾಪಿಸಿರುವ ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಸರ್ಕಾರದ ನಿಲುವು ಸ್ಪಷ್ಟವಾಗಿದೆ ಎಂದು ತಿಳಿಸಿದ್ದರು.

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರವನ್ನು ಪ್ರಶ್ನಿಸಿ, ಬಿಬಿಸಿ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಸಾಕ್ಷ್ಯಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಇದೊಂದು ಸಂಪೂರ್ಣ ಪಕ್ಷಪಾತಿ ಸಾಕ್ಷ್ಯಚಿತ್ರ ಎಂದು ಭಾರತದ ವಿದೇಶಾಂಗ ಇಲಾಖೆ ಕಿಡಿಕಾರಿದೆ.

ಇಷ್ಟೇ ಅಲ್ಲದೇ ಹಲವು ಬಿಜೆಪಿ ನಾಯಕರುಯ ಹಾಗೂ ಕೇಂದ್ರ ಸಚಿವರೂ ಕೂಡ ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಟೀಕಿಸಿದ್ದು, ಇದು ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ಕುಗ್ಗಿಸುವ ಹುನ್ನಾರ ಎಂದು ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಕಿರಣ್‌ ರಿಜಿಜು, ಕೆಲವರು ಬಿಬಿಸಿಯನ್ನು ಸುಪ್ರೀಂಕೋರ್ಟ್‌ಗಿಂತ ಶ್ರೇಷ್ಠ ಎಂದು ಭಾವಿಸಿರುವುದು ಮೂರ್ಖತನ ಎಂದು ಹರಿಹಾಯ್ದಿದ್ದರು.

ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯನ್ನು ಪ್ರಕಟಿಸಿದ, ಯೂಟ್ಯೂಬ್ ವಿಡಿಯೋಗಳನ್ನು ಹಾಗೂ ಸಾಕ್ಷ್ಯಚಿತ್ರದ ಕುರಿತ 50ಕ್ಕೂ ಹೆಚ್ಚು ಟ್ವೀಟ್​ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ಪ್ರಧಾನಿ ಮೋದಿ ಕುರಿತಾದ ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರದ ಬಗ್ಗೆ, ಬ್ರಿಟನ್‌, ಅಮೆರಿಕ ಸೇರಿದಂತೆ ಹಲವು ದೇಶಗಳು ತಣ್ಣಗಿನ ಪ್ರತಿಕ್ರಿಯೆ ನೀಡಿವೆ. ನಮಗೆ ಬಿಬಿಸಿಯ ಸಾಕ್ಷ್ಯಚಿತ್ರಕ್ಕಿಂತ ಭಾರತದೊಂದಿಗಿನ ರಾಜತಾಂತ್ರಿಕ ಹಾಗೂ ಸಾಮರಿಕ ಸಂಬಂಧ ಹೆಚ್ಚು ಮಹತ್ವದ್ದು ಎಂದು ಈ ದೇಶಗಳು ಸ್ಪಷ್ಟಪಡಿಸಿವೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.