Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು
ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಶ್ಯಾಮ್ ರಂಗೀಲ ಯಾರು? ಜಾಲತಾಣಗಳಲ್ಲಿ ಇವರ ಕ್ರೇಜ್ ಹೇಗಿದೆ ಎಂಬುದರ ಅಗ್ರ 10 ಅಂಶಗಳು ಇಲ್ಲಿವೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಬಗ್ಗೆ ಮಿಮಿಕ್ರಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದ ಹಾಸ್ಯ ಕಲಾವಿದ ಶ್ಯಾಮ್ ರಂಗೀಲ (Shyam Rangeela) ಇದೀಗ ಪ್ರಧಾನಿ ಮೋದಿ ಅವರ ವಿರುದ್ಧ ಚುನಾವಣಾ ಕಣಕ್ಕಿಳಿದ್ದಾರೆ. ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ (Vranasi Lok Sabha Election 2024) ಶ್ಯಾಮ್ ರಂಗೀಲ ಸ್ಪರ್ಧಿಸಿದ್ದಾರೆ.
2017 ರಲ್ಲಿ ಮಿಮಿಕ್ರಿ ವಿಡಿಯೊಗಳು ವೈರಲ್ ಆದ ಬಳಿಕ ಈತ ಮುಖ್ಯ ವೇದಿಕೆಗೆ ಬಂದ. ಇದೀಗ 7 ವರ್ಷಗಳ ನಂತರ ವಾರಣಾಸಿಯಿಂದ ನರೇಂದ್ರ ಮೋದಿ ವಿರುದ್ಧ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಪ್ರಧಾನಿ ಮೋದಿ ಅವರ ವಿರುದ್ಧ ಯಾಕೆ ಸ್ಪರ್ಧಿಸಿರುವುದು ಎಂಬುದರ ಬಗ್ಗೆ ಶ್ಯಾಮ್ ವಿಡಿಯೊ ಮೂಲಕ ಮಾಹಿತಿಯನ್ನು ವಿವರವಾಗಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಹಾಸ್ಯ ಕಲಾವಿದ ಶ್ಯಾಮ್ ರಂಗೀಲ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲಲ್ಲ. ಈತ 2022 ರಾಜಸ್ಥಾನದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ.
ಶ್ಯಾಮ್ ರಂಗೀಲ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳು
1. ಶ್ಯಾಮ್ ರಂಗೀಲ ರಾಜಸ್ಥಾನ ಮೂಲದ. ಈತ 1994 ರಲ್ಲಿ ರಾಜಸ್ಥಾನದ ಹನುಮಾನ್‌ಗಢದಲ್ಲಿ ಜನಿಸಿದ್ದಾರೆ.
2. ಕೃಷಿ ಹಿನ್ನೆಲೆಯಿಂದ ಬಂದ ಶ್ಯಾಮ್ ರಂಗೀಲ ಹಾಸ್ಯ ನಟನಾಗಲು ಬಯಸಿದ್ದರು. ಇವರ ಮಿಮಿಕ್ರಿ ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆದ ನಂತರ ಇವರ ಕಲೆಯನ್ನು ಗುರುತಿಸಲಾಯಿತು.
3. ಈತನ ನಿಜವಾದ ಹೆಸರು ಶ್ಯಾಮ್ ಸುಂದರ್. 2017 ರಲ್ಲಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಶೋನಲ್ಲಿ ಭಾಗವಹಿಸಿದ್ದರು. ಆದರೆ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ಮಿಮಿಕ್ರಿ ಮಾಡಿದ್ದಕ್ಕಾಗಿ ಶೋನಿಂದ ಹೊರಹಾಕಲಾಯಿತು.
4. ಎಲ್ಲೂ ಪ್ರಸಾರವಾಗದ ಈತನ ವಿಡಿಯೊ ಸೋರಿಕೆಯಾಗಿ ಸಖತ್ ವೈರಲ್ ಆಗಿತ್ತು. ಆ ಸಮಯದಲ್ಲಿ ಪ್ರಧಾನಿ ಮೋದಿ ಅವರನ್ನ 'ನಿಂದಿಸಿದ್ದಕ್ಕಾಗಿ' ಟೀಕೆಗೆ ಗುರಿಯಾಗಿದ್ದರು. ಆದರೆ ತಾನು ಮೋದಿ ಅಭಿಮಾನಿ ಎಂದು ಹೇಳಿಕೊಂಡಿದ್ದರು.
5. ಶ್ಯಾಮ್ ರಂಗೀಲ ಜನಪ್ರಿಯತೆ ಹೆಚ್ಚುತ್ತಿದ್ದಂತೆ, ಅವರಿಗೆ ಅನೇಕ ಕಾರ್ಯಕ್ರಮಗಳಿಂದ ಕರೆಗಳು ಬಂದವು. ಆದರೆ ಈತನ ಸ್ಕ್ರಿಪ್ಟ್ ಅಥವಾ ನಟನೆಗೆ ಕೊನೆಯ ಕ್ಷಣದಲ್ಲಿ ಅವಕಾಶ ನೀಡಲಿಲ್ಲ ಎಂದು ಅವರು ತಮ್ಮ ಹಾಸ್ಯ ವೃತ್ತಿಜೀವನವನ್ನು ವಿವರಿಸಿದ್ದಾರೆ.
6. 2022 ರಲ್ಲಿ ಶ್ಯಾಮ್ ರಂಗೀಲಾ ರಾಜಸ್ಥಾನದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು. ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ನೀಡಲಿಲ್ಲ. ಪಕ್ಷಕ್ಕೆ ಸ್ವತಂತ್ರವಾಗಿ ಕೆಲಸ ಮಾಡಲು ಅವರಿಗೆ ಅವಕಾಶ ನೀಡಲಾಯಿತು.
7. ಶ್ಯಾಮ್ ರಂಗೀಲ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಇದು 924 ಸಾವಿರ ಚಂದಾದಾರರನ್ನು ಹೊಂದಿದೆ. ವಿಡಿಯೊಗಳು ಹೆಚ್ಚಾಗಿ ಇವರ ಸ್ಟ್ಯಾಂಡ್-ಅಪ್ ಪ್ರದರ್ಶನಗಳದ್ದೇ ಆಗಿವೆ.
8. ತಮ್ಮ ಯೂಟ್ಯೂಬ್ ಚಾನೆಲ್ ಅವರು ನರೇಂದ್ರ ಮೋದಿಯವರನ್ನು ಅನುಕರಿಸುವ 'ಧಂಗ್ ಕಿ ಬಾತ್' ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
9. ಇತ್ತೀಚೆಗಷ್ಟೇ ಈ ಹಾಸ್ಯನಟ ವಾರಣಾಸಿಯಿಂದ ಸ್ವತಂತ್ರವಾಗಿ ಸ್ಪರ್ಧಿಸಬೇಕೇ ಎಂದು ತಮ್ಮ ಬೆಂಬಲಿಗರನ್ನು ಕೇಳಿದ್ದರು.
10. ವಾರಣಾಸಿಯಿಂದ ಸ್ಪರ್ಧಿಸುವುದಾಗಿ ಮೇ 1 ರ ಬುಧವಾರ ಘೋಷಣೆ ಮಾಡಿದ್ದಾರೆ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.