ಸಾಲ ತೀರಿಸಿಕೊಳ್ಳಲು ಕಿಡ್ನಿ ಮಾರಾಟಕ್ಕೆ ಮುಂದಾದ ಆಟೋಚಾಲಕನಿಗೆ ಭಾರೀ ವಂಚನೆ, ಹಣವೂ ಹೋಯ್ತು, ಕಿಡ್ನಿಯೂ ಇಲ್ಲ !
Andhra pradesh News ಆಂಧ್ರ ಪ್ರದೇಶದ ಆಟೋಚಾಲಕನೊಬ್ಬ ಹೆಚ್ಚಿದ್ದ ಸಾಲ ತೀರಿಸಿಕೊಳ್ಳಲು ಕಿಡ್ನಿ ದಾನ ಮಾಡಲು ಮೋಸ ಹೋಗಿರುವ ಘಟನೆಯಿದು.
ಹೈದ್ರಾಬಾದ್: ಆತ ಆಟೋ ಚಾಲಕ. ಕುಟುಂಬ ನಿರ್ವಹಣೆ ಸೇರಿ ಹಲವು ಕಾರಣಗಳಿಂದ ಸಾಲ ಮಾಡಿಕೊಂಡಿದ್ದ. ಅದರಲ್ಲೂ ಆಪ್ ಆಧರಿತ ಸಾಲಗಳನ್ನು ಪಡೆದು ಹೆಚ್ಚು ಬಡ್ಡಿ ತೀರಿಸುತ್ತಾ ಇನ್ನಷ್ಟು ಸಾಲಗಾರನಾಗಿದ್ದ. ಸಾಲ ತೀರಿಸಿಕೊಳ್ಳಲು ಏನಾದರೂ ಮಾಡಬೇಕು ಎಂದು ಯೋಚಿಸುತ್ತಲೇ ಇದ್ದ. ಆಟೋ ಓಡಿಸಿದರೆ ಬರುವ ಆದಾಯವೂ ಅಷ್ಟಷ್ಟಕ್ಕೆ ಆಗಿತ್ತು. ಕೊನೆಗೆ ಸಾಮಾಜಿಕ ಮಾಧ್ಯಮ ಒಂದರಲ್ಲಿ ಅಗತ್ಯ ಇರುವವರಿಗೆ ಕಿಡ್ನಿ ನೀಡಿದರೆ 30 ಲಕ್ಷ ರೂ. ನೀಡಲಾಗುತ್ತದೆ ಎನ್ನುವ ಜಾಹೀರಾತನ್ನು ಗಮನಿಸಿದ್ದ. ಅಲ್ಲಿಗೆ ಕರೆ ಮಾಡಿಕೊಂಡು ಮಾಹಿತಿ ವಿನಿಮಯ ಮಾಡಿಕೊಂಡರೆ ಭಾರೀ ಮೊತ್ತದ ಹಣ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಆತ ಕಿಡ್ನಿ ನೀಡಬೇಕು. ಇದು ಕಾನೂನು ಚೌಕಟ್ಟಿನಲ್ಲಿರುವುದರಿಂದ ಕಿಡ್ನಿ ಮಾರಾಟ ಎನ್ನುವದಕ್ಕಿಂತ ದಾನ ಎನ್ನುವ ರೀತಿಯ ವಹಿವಾಟು ನಡೆಸಲಾಯಿತು. ಆದರೆ ಆತ ಹೋಗಿದ್ದು ಮೋಸ ಎನ್ನುವುದು ಗೊತ್ತಾಗಿದ್ದು ಕೊನೆಗೆ.
ಇದು ನಡೆದಿರುವುದು ಆಂಧ್ರಪ್ರದೇಶದಲ್ಲಿ. ಆತನ ಹೆಸರು ಮಧುಬಾಬು ಗರ್ಲಪಟಿ. ವಯಸ್ಸು 31. ಊರು ಗುಂಟೂರು. ಹೆಚ್ಚು ಓದಲೂ ಆಗಿರಲಿಲ್ಲ. ಆಟೋ ರಿಕ್ಷಾ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಸಹಿತ ನಾನಾ ಕಾರಣದಿಂದ ಸಾಲ ಮಾಡಿಕೊಂಡಿದ್ದ. ಆತನಿಗೆ ಬ್ಯಾಂಕ್‌ಗಳಲ್ಲಿ ಸಾಲ ಸಿಗದೇ ಇದ್ದುದರಿಂದ ಆಪ್‌ಗಳ ಮೂಲಕ ಸಿಗುವ ಸಾಲಗಳನ್ನೇ ಪಡೆದಿದ್ದ. ಬಡ್ಡಿ ಹಾಗೂ ಅಸಲು ತೀರಿಸುವುದು ಕಷ್ಟ ಎನ್ನುವ ಸ್ಥಿತಿ. ಏನು ಮಾಡುವುದು ಎನ್ನುವುದು ತೋಚದೇ ಮಾರ್ಗಗಳಿಗಾಗಿ ಹುಡುಕಾಟವನ್ನು ಮಧುಬಾಬು ನಡೆಸಿದ್ದ, ಒಂದು ದಿನ ಸಾಮಾಜಿಕ ಮಾಧ್ಯಮ ಒಂದರಲ್ಲಿ ಕಿಡ್ನಿ ದಾನ ಮಾಹಿತಿ ಇತ್ತು. ಒಳ್ಳೆಯ ಮೊತ್ತವನ್ನೇ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಕರೆ ಮಾಡಿದಾಗ 30 ಲಕ್ಷ ರೂ. ನೀಡುವ ಭರವಸೆಯನ್ನೂ ಆತನಿಗೆ ನೀಡಲಾಗಿತ್ತು. ಮಾತುಕತೆ ನಡೆಸಿದಾಗ ಆತನಿಗೆ ವಿಶ್ವಾಸ ಬಂದಿತ್ತು. ಅಲ್ಲದೇ ಈ ರೀತಿ ದಾನ ಮಾಡಿದ್ದ ಮಹಿಳೆ ಕೂಡ ಈತನೊಂದಿಗೆ ಮಾತನಾಡಿ ಹಣ ನೀಡಿರುವ ಹೇಳಿದ್ದಳು. ವಿಜಯವಾಡದ ಭಾಷಾ ಎಂಬಾತ ಈತನೊಂದಿಗೆ ಎಲ್ಲಾ ಮಾತುಕತೆ ಮುಗಿಸಿದ್ದ. ಇಷ್ಟು ಮೊತ್ತ ಸಿಕ್ಕಿದರೆ ಸಾಲಗಳು ತೀರಲಿವೆ. ಜೀವನವನ್ನೂ ಇರುವ ಮೊತ್ತದಲ್ಲಿ ನಡೆಸಿಕೊಂಡು ಹೋಗಬಹುದು. ಇದಕ್ಕಾಗಿ ಒಂದು ಕಿಡ್ನಿ ದಾನ ಮಾಡಿದರಾಯಿತು ಎಂದು ಮಧುಬಾಬು ನಿರ್ಧರಿಸಿಕೊಂಡು ಅನುಮತಿಯನ್ನು ನೀಡಿದ್ದ.
ಮಧುಬಾಬು ಬೇಕಾದ ಪತ್ರಗಳಿಗೆ ಸಹಿ ಹಾಕಿದ ನಂತರ ವಿಜಯವಾಡದ ವಿಜಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿಡ್ನಿ ಪಡೆಯಬೇಕಾಗಿರುವ ದಾನಿ ಇದ್ದಾರೆ. ಅಲ್ಲಿಯೇ ಚಿಕಿತ್ಸೆ ನಡೆಯಲಿದೆ ಎಂದು ಆತನನ್ನು ಕರೆದುಕೊಂಡು ಹೋಗಿದ್ದರು. ಚಿಕಿತ್ಸೆಗಾಗಿ 50 ಸಾವಿರ ರೂ.ಗಳನ್ನು ಆತನಿಗೆ ನೀಡಿದ್ದರು. ಕಿಡ್ನಿ ತೆಗೆದು ಶಸ್ತ್ರ ಚಿಕಿತ್ಸೆ ಎಲ್ಲ ಮುಗಿದಿತ್ತು. ಕಿಡ್ನಿ ಪಡೆದವರು, ಏಜೆಂಟ್ ಸಹಿತ ಎಲ್ಲರೂ ಅಲ್ಲಿಂದ ಕಾಲ್ಕಿತ್ತಿದ್ದರು. ಮಧುಬಾಬು ಚಿಕಿತ್ಸೆ ಮುಗಿಸಿಕೊಂಡು ಹೊರಡುವಾಗ ಅದು ಗೊತ್ತಾಗಿತ್ತು. ಎಲ್ಲಾ ಮುಗಿದ ಮೇಲೆ ಮೊತ್ತ ನಿಮ್ಮ ಖಾತೆಗೆ ಬರಲಿದೆ ಎಂದು ಭರವಸೆ ನೀಡಿ ಕಿಡ್ನಿ ಪಡೆದವರು ಕಾಣೆಯಾಗಿದ್ದರು. ಅಲ್ಲದೇ ಎಲ್ಲಾ ನಕಲಿ ದಾಖಲಿ ಸೃಷ್ಟಿಸಿ, ನಕಲಿ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಈ ರೀತಿ ಮಾಡಿರುವುದು ಈಗ ಬಯಲಾಗಿದೆ.
ಅವರು ನನ್ನ ಆರ್ಥಿಕ ಸ್ಥಿತಿಯ ದುರುಪಯೋಗಪಡೆಸಿಕೊಂಡರು. ನನ್ನನ್ನು ಹಲವಾರು ರೀತಿಯಲ್ಲಿ ನಂಬಿಸಿದರು. ನಾನು ಯಾರಿಗೋ ಸಹಾಯ ಮಾಡುತ್ತಿದ್ದೇನೆ ಎಂದು ಯೋಚಿಸಿದೆ. ಆದರೆ ಈ ರೀತಿ ಮೋಸ ಮಾಡುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಮಧುಬಾಬು ಹೇಳಿಕೊಂಡಿದ್ದಾನೆ.
ಈ ಕುರಿತು ಆತನ ದೂರು ನೀಡಿದ್ದು, ವಿಜಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಶರತ್ ಬಾಬು ಎಂಬುವವರು ಶಸ್ತ್ರ ಚಿಕಿತ್ಸೆ ನಡೆಸಿ ಕಿಡ್ನಿ ತೆಗೆದಿದ್ದು. ಈ ಜಾಲದಲ್ಲಿ ಭಾಗಿಯಾಗಿರುವುದಾಗಿ ದೂರಿನಲ್ಲಿ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಈ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಪ್ರಮುಖರು, ಕಾನೂನು ರೀತಿಯಲ್ಲಿಯೇ ನಾವು ಕಿಡ್ನಿ ವರ್ಗಾವಣೆ ಮಾಡಿದ್ದೇವೆ. ಇದರಲ್ಲಿ ಯಾವುದೇ ಅಕ್ರಮ ಚಟುವಟಿಕೆಯಾಗಲಿ ಏನೂ ಇಲ್ಲ. ನಮ್ಮ ವೈದ್ಯರ ವಿರುದ್ದ ಈ ರೀತಿ ಆರೋಪ ಮಾಡುತ್ತಿರುವುದು ನಿರಾಧಾರ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಭಾಗ