Crime News: ಸಾಲ ಕೇಳುವ ನೆಪದಲ್ಲಿ ಮನೆಗೆ ಬಂದು ಇಬ್ಬರು ಮಕ್ಕಳನ್ನು ಕೊಂದ ಯುವಕ ಎನ್‌ಕೌಂಟರ್‌ಗೆ ಬಲಿ
ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಸಾಲ ಕೇಳುವ ನೆಪದಲ್ಲಿ ಮನೆಗೆ ಬಂದು ಇಬ್ಬರು ಮಕ್ಕಳನ್ನು ಕತ್ತು ಸೀಳಿ ಕೊಂದು ಹಾಕಿದ್ದಾನೆ. ಆನಂತರ ತಪ್ಪಿಸಿಕೊಳ್ಳುವಾಗ ಎನ್‌ಕೌಂಟರ್‌ಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.
ಲಕ್ನೋ: ಉತ್ತರ ಪ್ರದೇಶದಲ್ಲಿ ವಿಚಿತ್ರ ಅಪರಾಧ ಪ್ರಕರಣ ನಡೆದಿದೆ. ಅದೂ ಯುವಕನೊಬ್ಬನ ಹುಚ್ಚಾಟಕ್ಕೆ ಎರಡು ಮಕ್ಕಳು ಜೀವ ಕಳೆದುಕೊಂಡಿವೆ. ಕೊನೆಗೆ ತಾನೂ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಉತ್ತರ ಪ್ರದೇಶ ಜನರನ್ನು ಇಡೀ ಪ್ರಕರಣ ಬೆಚ್ಚಿ ಬೀಳಿಸಿದ್ದು, ಅಪರಾಧ ಮಾಡಿರುವ ರೀತಿ ಚರ್ಚೆ ಹುಟ್ಟು ಹಾಕಿದೆ. ಘಟನೆ ಕುರಿತು ಸಮಗ್ರ ತನಿಖೆಗೆ ಉತ್ತರ ಪ್ರದೇಶ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಘಟನೆ ನಡೆದಿರುವುದು ಉತ್ತರ ಪ್ರದೇಶದ ಬುಡಾನ್‌ನಲ್ಲಿ. ಆತನ ಹೆಸರು ಸಾಜಿದ್. ಬುಡಾನ್‌ನಲ್ಲಿಯೇ ಕ್ಷೌರದ ಅಂಗಡಿ ನಡೆಸುತ್ತಿದ್ದ. ಆತ ಅಂಗಡಿ ನಡೆಸುತ್ತಿದ್ದ ಮೇಲಿನ ಮಹಡಿಯಲ್ಲಿ ಮನೆಯಿತ್ತು. ಆ ಮನೆಯ ಮಾಲೀಕ ವಿನೋದ್ ವ್ಯಾಪಾರ ನಡೆಸುತ್ತಿದ್ದರೆ ಪತ್ನಿ ಸಂಗೀತಾ ಬ್ಯೂಟಿ ಪಾರ್ಲರ್ ಮಾಲಕಿ.
ಮಂಗಳವಾರ ಸಂಜೆ ಮನೆಗೆ ಬಂದ ಸಾಜಿದ್, ನನ್ನ ಪತ್ನಿಯನ್ನು ಹೆರಿಗೆಗೆ ಸೇರಿಸಿದ್ದೇವೆ. ನನಗೆ ತುರ್ತು ಐದು ಸಾವಿರ ರೂ. ಕೊಡಿ ಎಂದು ಮನೆಯಲ್ಲಿ ಕೇಳಿದ್ದಾನೆ. ಪತಿ ಮನೆಯಲ್ಲಿ ಇಲ್ಲದ್ದರಿಂದ ಕರೆ ಮಾಡಿ ಆಕೆ ಸಾಜಿದ್ ಹಣ ಕೇಳುತ್ತಿರುವ ವಿಷಯ ತಿಳಿಸಿದ್ದಾಳೆ. ಐದು ಸಾವಿರ ರೂ. ಸಾಲದ ರೂಪದಲ್ಲಿ ನೀಡುವಂತೆ ಪತಿ ತಿಳಿಸಿದ ನಂತರ ಸಂಗೀತಾ ಹಣ ನೀಡಿದ್ದಾಳೆ. ಅಲ್ಲದೇ ಚಹಾ ಕೂಡ ನೀಡಿದ್ದು, ಕುಡಿದು ಸಾಜಿದ್ ಹಣದೊಂದಿಗೆ ಹೊರಟಿಸಿದ್ದಾನೆ. ಈ ವೇಳೆ ವಿನೋದ್ ಸಂಗೀತ ದಂಪತಿಯ 11 ವರ್ಷದ ಮಗ ಆಯುಷ್ ಅಲ್ಲಿಗೆ ಬಂದಿದ್ದು. ಆತನನ್ನು ನಿಮ್ಮ ಅಮ್ಮ ನಡೆಸುವ ಬ್ಯೂಟಿ ಪಾರ್ಲರ್ ತೋರಿಸುವಂತೆ ಹೇಳಿದ್ದಾನೆ. ಒಳಗೆ ಆತನನ್ನು ಕರೆದುಕೊಂಡು ಹೋಗಿ ದೀಪ ಆರಿಸಿ ಅಲ್ಲಿಯೇ ಕತ್ತು ಕೊಯ್ದು ಕೊಂದು ಹಾಕಿದ್ದಾನೆ. ಇದೇ ವೇಳೆ ಮತ್ತೊಬ್ಬ ಮಗ 6 ವರ್ಷದ ಆಹಾನ್ ಕೂಡ ಅಲ್ಲಿಗೆ ಬಂದಿದ್ದು. ಆತನನ್ನು ಎಳೆದುಕೊಂಡು ಆತನನ್ನು ಕೊಂದಿದ್ದಾನೆ. ಇನ್ನೊಬ್ಬ ಪುತ್ರ ಏಳು ವರ್ಷದ ಪಿಯುಷ್ ಮೇಲೆ ದಾಳಿಗೆ ಸಾಜಿದ್ ಮುಂದಾಗಿದ್ದು. ಆತ ತಪ್ಪಿಸಿಕೊಂಡು ಅಡಗಿಕೊಂಡಿದ್ದಾನೆ. ಈ ವೇಳೆ ಆತನಿಗೂ ಗಾಯಗಳಾಗಿವೆ. ಆದರೆ ಸಂಗೀತಾ ಮೇಲೆ ದಾಳಿ ಮಾಡಿಲ್ಲ.
ಇದನ್ನು ಕಂಡು ಬೆಚ್ಚಿಬಿದ್ದ ಸಂಗೀತಾ ಕೂಡಲೇ ಪತಿಗೆ ಮಾಹಿತಿ ನೀಡಿದ್ದಾಳೆ. ಸಾಜಿದ್ ಹಾಗೂ ಆತನ ಸಹೋದರ ಜಾವೇದ್ ಅಲ್ಲಿಂದ ಪರಾರಿಯಾಗಲು ಮುಂದಾಗಿದ್ಧಾರೆ. ಪೊಲೀಸರಿಗೆ ಮಾಹಿತಿ ತಿಳಿದು ಅಲ್ಲಿಗೆ ಧಾವಿಸಿದ್ದು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಸಾಜಿದ್ ಮೇಲೆ ಗುಂಡು ಹಾರಿಸಿ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದಾರೆ.
ಸಾಜಿದ್ ಕೆಳ ಭಾಗದಲ್ಲಿಯೇ ಕ್ಷೌರದ ಅಂಗಡಿ ನಡೆಸುತ್ತಿದ್ದುದರಿಂದ ಆತನಿಗೆ ಸಹಾಯ ಮಾಡಲು ನಾವು ಮುಂದಾದೆವು. ಆತನೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳೂ ಇರಲಿಲ್ಲ. ಆದರೆ ಈ ರೀತಿ ಆತ ಯಾಕೆ ಮಾಡಿದ ಎನ್ನುವುದೇ ತಿಳಿಯುತ್ತಿಲ್ಲ. ನನ್ನಿಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿದ್ದು, ಅಲ್ಲಿಂದ ಓಡಲು ಯತ್ನಿಸಿದ. ಕೆಳಕ್ಕೆ ಆತನ ಸಹೋದರ ಜಾವೇದ್ ಬೈಕ್ ನಿಲ್ಲಿಸಿಕೊಂಡು ನಿಂತಿದ್ದನ್ನು ನೋಡಿದೆ ಎಂದು ಸಂಗೀತಾ ಪೊಲೀಸರಿಗೆ ನೀಡಿರುವ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಾಗಿದೆ.
ಸಾಜಿದ್ ಹಾಗೂ ವಿನೋದ್ ನಡುವೆ ವ್ಯವಹಾರಿಕ ಭಿನ್ನಾಭಿಪ್ರಾಯಗಳಿದ್ದವು ಎನ್ನುವ ಮಾಹಿತಿ ಇದೆ. ಆದರೂ ಮಕ್ಕಳನ್ನು ಕೊಂದು ಹಾಕಲು ಕಾರಣವೇನು ಎನ್ನುವುದು ತಿಳಿದಿಲ್ಲ. ಈ ಕುರಿತು ತನಿಖೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.