ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9 ನೇ ತರಗತಿ ಎಕ್ಸಾಂ ಗೊಂದಲ, ಇದುವರೆಗೆ ಏನೇನಾಯಿತು ಇಲ್ಲಿದೆ 10 ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9 ನೇ ತರಗತಿ ಎಕ್ಸಾಂ ಗೊಂದಲ, ಇದುವರೆಗೆ ಏನೇನಾಯಿತು ಇಲ್ಲಿದೆ 10 ಅಂಶಗಳು

ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9 ನೇ ತರಗತಿ ಎಕ್ಸಾಂ ಗೊಂದಲ, ಇದುವರೆಗೆ ಏನೇನಾಯಿತು ಇಲ್ಲಿದೆ 10 ಅಂಶಗಳು

ರಾಜ್ಯದ 5,8,9 ನೇ ತರಗತಿಯ ಕರ್ನಾಟಕ ಬೋರ್ಡ್ ಪರೀಕ್ಷೆಯ ಭವಿಷ್ಯ ಗೊಂದಲಕ್ಕೀಡಾಗಿದ್ದು, ನ್ಯಾಯಾಲಯದ ತೀರ್ಪನ್ನು ಅವಲಂಬಿಸಿದೆ. ನ್ಯಾಯಾಂಗ ಹೋರಾಟದ ಗೊಂದಲದ ನಡುವೆಯೇ ಕೆಲವು ಪರೀಕ್ಷೆಗಳನ್ನು ರಾಜ್ಯ ಶಿಕ್ಷಣ ಇಲಾಖೆ ನಡೆಸಿದ್ದು, 4 ಪರೀಕ್ಷೆಗಳಷ್ಟೇ ಬಾಕಿ ಉಳಿದಿದ್ದವು. ಇದುವರೆಗೆ ಏನೇನಾಯಿತು 10 ಅಂಶಗಳ ವಿವರಣೆ ಇಲ್ಲಿದೆ.

ಕರ್ನಾಟಕ ಹೈಕೋರ್ಟ್‌ (ಎಡ ಚಿತ್ರ); ಕರ್ನಾಟಕ ವಿಧಾನ ಸೌಧ ( ಬಲ ಚಿತ್ರ)
ಕರ್ನಾಟಕ ಹೈಕೋರ್ಟ್‌ (ಎಡ ಚಿತ್ರ); ಕರ್ನಾಟಕ ವಿಧಾನ ಸೌಧ ( ಬಲ ಚಿತ್ರ)

ಬೆಂಗಳೂರು: ಕರ್ನಾಟಕದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿಚಾರ ಈಗ ಗೊಂದಲಕ್ಕೆ ಒಳಗಾಗಿದೆ. ಈ ವಿಚಾರ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ವಿಚಾರಣೆ ಮುಗಿಸಿದ್ದು, ತೀರ್ಪಿನ ನಿರೀಕ್ಷೆಯಲ್ಲಿದೆ.

ಬೋರ್ಡ್ ಪರೀಕ್ಷೆ ಇದೆ, ಬೋರ್ಡ್ ಪರೀಕ್ಷೆ ಇಲ್ಲ ಎಂಬ ಗೊಂದಲದ ನಡುವೆಯೇ ಕೆಲವು ಪರೀಕ್ಷೆಗಳು ಮುಗಿದಿವೆ. ಇನ್ನು 4 ಪರೀಕ್ಷೆಗಳು ಬಾಕಿ ಇರುವುದಾಗಿ ಪಾಲಕರು ಹೇಳುತ್ತಿದ್ದಾರೆ. ಪರೀಕ್ಷೆ ನಡೆಯುವ ಹಂತದಲ್ಲಿ ಈ ವಿಚಾರವನ್ನು ಕೋರ್ಟ್‌ಗೆ ಕೊಂಡೊಯ್ದು ಗೊಂದಲ ಉಂಟುಮಾಡಿರುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ತೀವ್ರ ಅಸಮಾಧಾನವಿದೆ.

ಈ ತಿಂಗಳ ಆರಂಭದಲ್ಲಿ 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ ಬೋರ್ಡ್ ಪರೀಕ್ಷೆಗೆ ಸಿದ್ಧತೆ ನಡೆದಿತ್ತು. 5, 8, 9ನೇ ತರಗತಿಗೆ ಮಾರ್ಚ್ 11ರಿಂದ ಪರೀಕ್ಷೆ ಶುರುವಾಗಿದೆ. ಈ ಪರೀಕ್ಷೆಗೆ ಬೆರಳೆಣಿಕೆ ದಿನ ಇರುವಾಗ ಕೋರ್ಟ್ ತೀರ್ಪು ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿದ ತೀರ್ಪು ಬಂತು. ಹೀಗಾಗಿ ಇನ್ನು ಬೋರ್ಡ್ ಪರೀಕ್ಷೆ ಇರಲ್ಲ ಎನ್ನುತ್ತಿರುವಾಗಲೇ, ಉನ್ನತ ನ್ಯಾಯಪೀಠ ಸರ್ಕಾರದ ಪರವಾಗಿ ಪರೀಕ್ಷೆ ನಡೆಸಲು ತೀರ್ಪು ನೀಡಿತು. ಪರೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿದ್ದವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು. ಹೀಗೆ ಮುಂದುವರಿ ನ್ಯಾಯಾಂಗ ಹೋರಾಟದ ನಡುವೆ, ಪರೀಕ್ಷೆ ನಡೆಯುವುದೇ ಅಥವಾ ಇಲ್ಲವೇ ಎಂಬುದರ ತೀರ್ಮಾನವಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು.

ಕರ್ನಾಟಕ ಬೋರ್ಡ್ ಪರೀಕ್ಷೆ ವಿವಾದ; ಇದುವರೆಗಿನ ವಿದ್ಯಮಾನ

1) 2023ರ ಅಕ್ಟೋಬರ್ 6 ಮತ್ತು 9: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಎರಡು ಸುತ್ತೋಲೆಗಳು ಪ್ರಕಟವಾಗಿದ್ದು, 5, 8, 9, 11ನೇ ತರಗತಿಗೆ ಬೋರ್ಡ್ ಎಕ್ಸಾಂ ನಡೆಸಲು ಸರ್ಕಾರ ನಿರ್ಧಾರವನ್ನು ಅಧಿಕೃತವಾಗಿ ಸೂಚಿಸಲಾಯಿತು.

2) ಸರ್ಕಾರದ ಸುತ್ತೋಲೆಗಳನ್ನು ವಿರೋಧಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ' (ರುಪ್ಪಾ) ಹಾಗೂ “ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ' (ಅವರ್ ಸ್ಕೂಲ್) ಕೋರ್ಟ್‌ನಲ್ಲಿ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಕೆ ಮಾಡಿದವು. ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ನಡೆಸಿತು.

3) 2024 ಮಾರ್ಚ್‌ 6: ಬೋರ್ಡ್ ಪರೀಕ್ಷೆಗೆ ಸಂಬಂಧಿಸಿ ಸರ್ಕಾರ ಪ್ರಕಟಿಸಿದ ಎರಡೂ ಸುತ್ತೋಲೆಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದುಗೊಳಿಸಿತು. ಇದರಿಂದಾಗಿ, ಮಾ.11ರಿಂದ ನಡೆಯಬೇಕಿದ್ದ ಬೋರ್ಡ್ ಪರೀಕ್ಷೆ ರದ್ದುಗೊಂಡಿತು.

4) ಹೈಕೋರ್ಟ್‌ನ ಏಕಸದಸ್ಯ ಪೀಠ ಹೇಳಿದ್ದೇನು?

  • ಶಿಕ್ಷಣ ಕಾಯ್ದೆ ಪ್ರಕಾರ ಮೌಲ್ಯ ಮಾಪನ ನಿರ್ಧಾರ ಕೈಗೊಳ್ಳಲು ಸರ್ಕಾರ ಸ್ಪಷ್ಟ ನಿಯಮ ರೂಪಿಸಬೇಕು. ಯಾವುದೇ ನಿಯಮ ರೂಪಿಸುವ/ ಬದಲಾವಣೆ ಮಾಡುವಂತೆ ಆದೇಶಿಸುವ ಮುನ್ನ ಶಾಸನಸಭೆಯಲ್ಲಿ ಚರ್ಚೆಯಾಗಬೇಕು.
  • ನಿಯಮಗಳನ್ನು ರೂಪಿಸದೆ ಅಧಿಸೂಚನೆ ಹೊರಡಿಸಿ ಬೋರ್ಡ್ ಪರೀಕ್ಷೆ ನಿಗದಿಪಡಿಸಿದ್ದಲ್ಲದೆ, ಸುತ್ತೋಲೆ ಪ್ರಕಟಿಸಿ ಬಲವಂತ ಮಾಡಲಾಗಿದೆ. ಸುತ್ತೋಲೆ ಮೂಲಕ ಯಾವುದೇ ನಿಯಮ ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಸುತ್ತೋಲೆಯು ರದ್ದುಪಡಿಸುವುದಕ್ಕೆ ಅರ್ಹವಾಗಿದೆ.

ಇದನ್ನೂ ಓದಿ| ಕರ್ನಾಟಕದ 5,8,9,11ನೇ ತರಗತಿಗೆ ಬೋರ್ಡ್ ಪರೀಕ್ಷೆ ಗೊಂದಲ; ಮತ್ತೆ ಮುಂದೂಡಿಕೆ, ವಿಭಾಗೀಯ ಪೀಠದಲ್ಲಿ ವಿಚಾರಣೆ

5) 2024 ಮಾರ್ಚ್‌ 7: ಕರ್ನಾಟಕ ಸರ್ಕಾರದ ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ ಸೋಮಶೇಖರ್‌ ಮತ್ತು ರಾಜೇಶ್ ರೈ ಕೆ ಅವರಿದ್ದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿತು. ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆಯಲ್ಲಿ ಇಲ್ಲದ ಕಾರಣ, ಅದಕ್ಕೆ ಮಧ್ಯಂತರ ತಡೆ ನೀಡುವ ಪ್ರಶ್ನೆ ಇಲ್ಲ. ಆದರೆ ತಡೆ ನೀಡದೇ ಇದ್ದರೆ ಪರೀಕ್ಷೆಯ ಮುನ್ನಾದಿನದ ಈ ತೀರ್ಪು ವಿದ್ಯಾರ್ಥಿಗಳ ಗೊಂದಲ, ಅನಿಶ್ಚಿತ ಸನ್ನಿವೇಶವನ್ನು ಹೆಚ್ಚಿಸುತ್ತದೆ. ಹೀಗಾಗಿ ಸಿದ್ದತೆ ಮಾಡಿಕೊಂಡಿರುವ ಪರೀಕ್ಷೆ ನಡೆಯಲಿ ಎಂದು ನ್ಯಾಯಪೀಠ ತೀರ್ಪು ನೀಡಿತು.

6) ಸುಪ್ರೀಂ ಕೋರ್ಟ್‌ಗೆ ಹೋರಾಟ: ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಪ್ರಕಟವಾದ ಬೆನ್ನಿಗೆ, ಇದರ ವಿರುದ್ಧ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ' (ರುಪ್ಪಾ) ಹಾಗೂ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ' (ಅವರ್ ಸ್ಕೂಲ್) ಸುಪ್ರೀಕೋರ್ಟ್ ಮೆಟ್ಟಿಲೇರಿದವು.

7) 2024ರ ಮಾರ್ಚ್ 12: ಕರ್ನಾಟಕ ಬೋರ್ಡ್ ಪರೀಕ್ಷೆ ಸಂಬಂಧ ಸಲ್ಲಿಕೆಯಾದ ಈ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಪಂಕಜ್‌ ಮಿತ್ತಲ್‌ ಅವರಿದ್ದ ನ್ಯಾಯಪೀಠವು ವಿಚಾರಣೆಗೆ ಎತ್ತಿಕೊಂಡಿತು. ಅಲ್ಲದೆ, ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶದ ವಿರುದ್ಧ ಮಾರ್ಚ್ 7ರಂದು ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು. ಅಲ್ಲದೆ, ಇದರ ವಿಚಾರಣೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದಲ್ಲೇ ಮುಂದುವರಿಯಲಿದೆ ಎಂದು ಹೇಳಿತು.

8) 2024ರ ಮಾರ್ಚ್ 12: ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ತಾನು ನಡೆಸುತ್ತಿದ್ದ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿಬಿ ಕಾವೇರಿ ಈ ಆದೇಶ ಹೊರಡಿಸಿದ್ದಾರೆ.

9) 2024 ಮಾರ್ಚ್ 18: ಕರ್ನಾಟಕ ಬೋರ್ಡ್ ಪರೀಕ್ಷೆ ಸಂಬಂಧ ಪರ-ವಿರೋಧ ವಾದಗಳನ್ನು ಆಲಿಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ವಿಚಾರಣೆ ಮುಗಿದಿದ್ದು, ಶೀಘ್ರವೇ ಅಂತಿಮ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.

10) ಗೊಂದಲ ಬಗೆಹರಿಯುವ ನಿರೀಕ್ಷೆ: ಕರ್ನಾಟಕದ 5, 8, 9, 11ನೇ ತರಗತಿಗೆ ಬೋರ್ಡ್ ಪರೀಕ್ಷೆ ಸಂಬಂಧ ಉಂಟಾಗಿರುವ ಗೊಂದಲ ಶೀಘ್ರ ಬಗೆಹರಿಯುವ ನಿರೀಕ್ಷೆ ಇದೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಪರೀಕ್ಷೆಗಳು ಮುಗಿದಿರುವ ಕಾರಣ, ಕೋರ್ಟ್ ತೀರ್ಪು ಈ ಸಲದ ಪರೀಕ್ಷೆಗಳ ಭವಿಷ್ಯವನ್ನು ನಿರ್ಧರಿಸಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner