PPF account: ಎಸ್‌ಬಿಐ ಬ್ಯಾಂಕ್ನಲ್ಲಿ ಆನ್‌ಲೈನ್ ಮೂಲಕ ಪಿಪಿಎಫ್ ಖಾತೆ ತೆರೆಯುವುದೇಗೆ? ಇಲ್ಲಿದೆ ಸರಳ ಪ್ರಕ್ರಿಯೆ
PPF account: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆನ್‌ಲೈನ್ ಮೂಲಕ ಪಿಪಿಎಫ್ ಖಾತೆ ತೆರೆಯುವುದೇಗೆ? ಏನೆಲ್ಲಾ ದಾಖಲೆಗಳು ಬೇಕು? ಇಲ್ಲಿದೆ ನೋಡಿ ಸರಳವಾದ ಪ್ರಕ್ರಿಯೆ.
ಭಾರತದ ಕಾರ್ಮಿಕ ವರ್ಗದ ಉಳಿತಾಯ ವಿಧಾನಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿಯೂ (Public Provident Fund Account) ಒಂದು. ಪಿಪಿಎಫ್ ಆಕರ್ಷಕ ಬಡ್ಡಿದರ ಮತ್ತು ಸುರಕ್ಷಿತ ಆದಾಯ ನೀಡುವ ಸರ್ಕಾರಿ ಬೆಂಬಲಿತ ಹೂಡಿಕೆ ಯೋಜನೆಯಾಗಿದೆ. ಇದೊಂದು ದೀರ್ಘಾವಧಿ ಹೂಡಿಕೆಯಾಗಿದ್ದು, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿವೆ. ಅಂದರೆ ಯಾವುದೇ ತೆರಿಗೆ ಇರುವುದಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿ ಎಲ್ಲಾ ಅಂಚೆ ಕಚೇರಿ ಮತ್ತು ಬ್ಯಾಂಕ್‌ಗಳಲ್ಲಿ ಪಿಪಿಎಫ್ ಖಾತೆ ತೆರೆಯಬಹುದು. ವಾರ್ಷಿಕ ಬಡ್ಡಿ ದರ 7.1ರಷ್ಟು ನಿಗದಿಯಾಗಿದೆ. ಉದಾಹರಣೆಗೆ 15 ವರ್ಷ ಹೂಡಿಕೆ ಮಾಡಿದರೆ, ನಿಮಗೆ ಅಸಲು ಮತ್ತು ಬಡ್ಡಿ ಸೇರಿ ನಿಮ್ಮ ಖಾತೆಗೆ ವರ್ಗಾಯಿಸುತ್ತದೆ. ವಾರ್ಷಿಕ ಕನಿಷ್ಠ 500 ರಿಂದ ಗರಿಷ್ಠ 1.50 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಒಂದು ವರ್ಷದಲ್ಲಿ ಎಷ್ಟು ಬಾರಿಯಾದರೂ ಹೂಡಿಕೆ ಮಾಡಬಹುದು. ಆದರೆ ಈ ಮೊತ್ತ 1.50 ಲಕ್ಷ ದಾಟುವಂತಿಲ್ಲ.
ಪಿಪಿಎಫ್ ಖಾತೆ ತೆರೆಯಲು ಯಾರೆಲ್ಲಾ ಅರ್ಹರು?
ಯಾವುದೇ ಭಾರತೀಯ ಪ್ರಜೆ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಪರವಾಗಿ ಖಾತೆಗಳನ್ನು ತೆರೆಯಬಹುದು. ಆದರೆ, ಹಿಂದೂ ಅವಿಭಜಿತ ಕುಟುಂಬಗಳು ಮತ್ತು ಅನಿವಾಸಿ ಭಾರತೀಯರು (NRI) ಪಿಪಿಎಫ್ ಖಾತೆಗಳನ್ನು ತೆರೆಯಲು ಅರ್ಹರಲ್ಲ. ಒಬ್ಬ ವ್ಯಕ್ತಿಯು ಒಂದು ಪಿಪಿಎಫ್ ಖಾತೆ ಹೊಂದಬಹುದು. ಹಾಗಿದ್ದರೆ ಎಸ್ಬಿಐನಲ್ಲಿ ಪಿಪಿಎಫ್ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ವಿವರ.
ಆನ್‌ಲೈನ್‌ನಲ್ಲಿ ಎಸ್‌ಬಿಐ ಪಿಪಿಎಫ್ ಖಾತೆ ತೆರೆಯುವುದು ಹೇಗೆ?
1. ಎಸ್‌ಬಿಐ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಅಗತ್ಯ ದಾಖಲೆಗಳೊಂದಿಗೆ ಲಾಗ್ ಇನ್ ಆಗಿ.
2. 'ಡೆಪಾಸಿಟ್ ಮತ್ತು ಇನ್ವೆಸ್ಟ್ಮೆಂಟ್ ಮೇಲೆ ಕ್ಲಿಕ್ ಮಾಡಿ ಮತ್ತು 'ಸಾರ್ವಜನಿಕ ಭವಿಷ್ಯ ನಿಧಿ (PPF)' ಆಯ್ಕೆಮಾಡಿ.
3. 'ಪಿಪಿಎಫ್ ಅಕೌಂಟ್ ಓಪನ್ (ವಿಥೌಟ್ ವಿಸಿಟಿಂಗ್ ಬ್ರಾಂಚ್)' ಮೇಲೆ ಕ್ಲಿಕ್ ಮಾಡಿ.
4. ನಿಯಮಗಳನ್ನು ಒಪ್ಪಿಕೊಳ್ಳಿ ಮತ್ತು ಅಪ್ಲೈ ಮೇಲೆ ಕ್ಲಿಕ್ ಮಾಡಿ.
5. ನಿಮ್ಮ ಖಾತೆ ವಿವರಗಳನ್ನು ಮೊದಲೇ ಭರ್ತಿ ಮಾಡಲಾಗಿರುತ್ತದೆ. ನಂತರ ಡೆಪಾಸಿಟ್ ಮೊತ್ತ ಮತ್ತು ನಾಮಿನಿ ವಿವರ ನಮೂದಿಸಿ. ಬಳಿಕ ಸಬ್ಮಿಟ್ ಮಾಡುವ ಮೊದಲು ಡಿಕ್ಲೆರೇಷನ್ ಸೆಲೆಕ್ಟ್ ಮಾಡಿ.
6. ಆರಂಭಿಕ ಠೇವಣಿಯನ್ನು ಆನ್‌ಲೈನ್ ಮೂಲಕ ಮಾಡಿ.
7. ಈ ಎಲ್ಲಾ ಪ್ರಕ್ರಿಯೆ ನಂತರ ನಿಮ್ಮ ಪಿಪಿಎಫ್ ಖಾತೆ ರಚನೆಯಾಗಲಿದ್ದು, ಖಾತೆ ಸಂಖ್ಯೆ ಡಿಸ್ಪ್ಲೇ ಮಾಡುತ್ತದೆ. ಪಿಪಿಎಫ್ ಸ್ಟೇಟ್ಮೆಂಟ್ ಅನ್ನು ನಾವು ಇಂಟರ್ನೆಟ್ ಬ್ಯಾಕಿಂಗ್ನಲ್ಲಿ ನೋಡಬಹುದು.
8. ಅಕೌಂಟ್ ತೆರೆಯುವ ಪ್ರಕ್ರಿಯೆ ಪೂರ್ಣಗೊಳಿಸಲು 30 ದಿನಗಳ ಒಳಗೆ ಪಿಪಿಎಫ್ ರಸೀದಿ, ಕೆವೈಸಿ ದಾಖಲೆಗಳು ಮತ್ತು ಪಾಸ್‌ಪೋರ್ಟ್ ಫೋಟೋದೊಂದಿಗೆ ಬ್ರಾಂಚ್ಗೆ ಭೇಟಿ ನೀಡಿ.
ಅಗತ್ಯವಿರುವ ದಾಖಲೆಗಳು
- ಪಿಪಿಎಫ್ ಖಾತೆ ತೆರೆಯುವ ನಮೂನೆ
- ಪಾಸ್‌ಪೋರ್ಟ್ ಫೋಟೋ
- ಅಡ್ರೆಸ್ ಪ್ರೂಫ್ (ಆಧಾರ್, ಪಾನ್ ಕಾರ್ಡ್.. ಇತ್ಯಾದಿ)
- ನಾಮ ನಿರ್ದೇಶನ ನಮೂನೆ (ನಾಮಿನೇಷನ್ ಫಾರ್ಮ್)
- ಪ್ಯಾನ್ ಕಾರ್ಡ್