ಸ್ವಚ್ಛವಾಗಿರೋದಷ್ಟೇ ಅಲ್ಲ, ಪ್ರತಿದಿನ ಸ್ನಾನ ಮಾಡುವುದರಿಂದ ಇಷ್ಟೆಲ್ಲಾ ಪ್ರಯೋಜನ; ಖಿನ್ನತೆ ನಿವಾರಣೆಯಿಂದ ಉತ್ತಮ ನಿದ್ದೆವರೆಗೆ
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಚ್ಛವಾಗಿರೋದಷ್ಟೇ ಅಲ್ಲ, ಪ್ರತಿದಿನ ಸ್ನಾನ ಮಾಡುವುದರಿಂದ ಇಷ್ಟೆಲ್ಲಾ ಪ್ರಯೋಜನ; ಖಿನ್ನತೆ ನಿವಾರಣೆಯಿಂದ ಉತ್ತಮ ನಿದ್ದೆವರೆಗೆ

ಸ್ವಚ್ಛವಾಗಿರೋದಷ್ಟೇ ಅಲ್ಲ, ಪ್ರತಿದಿನ ಸ್ನಾನ ಮಾಡುವುದರಿಂದ ಇಷ್ಟೆಲ್ಲಾ ಪ್ರಯೋಜನ; ಖಿನ್ನತೆ ನಿವಾರಣೆಯಿಂದ ಉತ್ತಮ ನಿದ್ದೆವರೆಗೆ

ದಿನಕ್ಕೊಮ್ಮೆಯಾದ್ರೂ ಸ್ನಾನ ಮಾಡಿಲ್ಲ ಅಂದ್ರೆ ಮನಸ್ಸಿಗೆ ಏನೋ ಒಂಥರಾ ಕಸಿವಿಸಿ,ದೇಹಕ್ಕೆ ಕಿರಿಕಿರಿ. ಸ್ನಾನ ಮಾಡಿದ ಮೇಲೆ ಫ್ರೆಶ್ ಫೀಲ್ ಮೂಡುತ್ತೆ. ಸ್ನಾನ ಅಥವಾ ಜಳಕ ಮಾಡೋದ್ರಿಂದ ನಮ್ಮ ದೇಹ ಸ್ವಚ್ಛ ಆಗೋದು ಮಾತ್ರವಲ್ಲ, ಇದ್ರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಅಂದ್ರೆ ನೀವು ನಂಬ್ತೀರಾ.

ಪ್ರತಿದಿನ ಸ್ನಾನ ಮಾಡುವುದರ ಪ್ರಯೋಜನಗಳು
ಪ್ರತಿದಿನ ಸ್ನಾನ ಮಾಡುವುದರ ಪ್ರಯೋಜನಗಳು (PC: Canva)

ನಮ್ಮ ದೈನಂದಿನ ದಿನಚರಿಯಲ್ಲಿ ಸ್ನಾನ ಮಾಡುವುದು ಕೂಡ ಒಂದು ಭಾಗ. ನಮ್ಮ ದೇಹವನ್ನ ಸ್ವಚ್ಛವಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಪ್ರತಿದಿನ ತಪ್ಪದೇ ಸ್ನಾನ ಮಾಡುತ್ತೇವೆ. ಸ್ನಾನ ಮಾಡಿಲ್ಲ ಅಂದ್ರೆ ದೇಹ, ಮನಸ್ಸಿಗೆ ಕಿರಿಕಿರಿ ಅನ್ನಿಸುತ್ತದೆ. ಪ್ರತಿದಿನ ಸ್ನಾನ ಮಾಡಿದ್ರೆ ಮಾತ್ರ ಒಂಥರಾ ಫ್ರೆಶ್ ಫೀಲ್ ಇರುತ್ತೆ.

ಆದರೆ ಇತ್ತೀಚಿನ ಬ್ಯುಸಿ ಜಮಾನದಲ್ಲಿ ಸ್ನಾನ ಮಾಡಲು ಕೂಡ ಸಮಯ ಇಲ್ಲದಂತಾಗಿದೆ. ಆದರೆ ಸ್ನಾನ ಮಾಡುವುದು ಕೇವಲ ಶುದ್ಧವಾಗುವ ದೃಷ್ಟಿಯಿಂದ ಮಾತ್ರವಲ್ಲ, ಇದರಿಂದ ಆರೋಗ್ಯಕ್ಕೂ ಕೆಲವು ‍ಪ್ರಯೋಜನಗಳಿವೆ ಎಂದು ಹಾರ್ವಡ್‌ ವಿಶ್ವವಿದ್ಯಾಲಯದ ಅಧ್ಯಯನವೊಂದು ತಿಳಿಸಿದೆ. ಹಾಗಾದರೆ ‍ಪ್ರತಿದಿನ ತಪ್ಪದೇ ಸ್ನಾನ ಮಾಡಬೇಕು ಅನ್ನೋದಕ್ಕೆ ಕಾರಣಗಳೇನು ನೋಡಿ.

ಮಾನಸಿಕ ಆರೋಗ್ಯ ವೃದ್ಧಿ

ಪ್ರತಿದಿನ ತಪ್ಪದೇ ಸ್ನಾನ ಮಾಡುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಇದು ಒತ್ತಡ ಹಾರ್ಮೋನುಗಳ ನಿಯಂತ್ರಣಕ್ಕೂ ಸಹಕಾರಿ. ಮನಸ್ಥಿತಿಯನ್ನು ನಿಯಂತ್ರಿಸುವ ಸಿರೊಟೋನಿನ್ ಹಾರ್ಮೋನುಗಳ ಮಟ್ಟವನ್ನ ಸಮತೋಲನಗೊಳಿಸಲು ಕೂಡ ಸ್ನಾನ ಸಹಕಾರಿ. ಇದು ಮನಸ್ಥಿತಿಯನ್ನು ನಿಯಂತ್ರಿಸುತ್ತದೆ. ಒತ್ತಡವ ನಿಯಂತ್ರಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ಇದರಿಂದ ಸ್ನಾಯು ಸೆಳೆತ, ಹೃದ್ರೋಗ, ಅಜೀರ್ಣ, ಆ್ಯಸಿಡ್ ರಿಫ್ಲಕ್ಸ್, ರೋಗನಿರೋಧಕ ಶಕ್ತಿ ದುರ್ಬಲವಾಗುವುದು, ತೂಕ ಹೆಚ್ಚಾಗುವುದು ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಖಿನ್ನತೆ ದೂರಾಗುತ್ತದೆ.

ಉತ್ತಮ ನಿದ್ದೆಗೆ ಸಹಕಾರಿ

ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ, ಪ್ರತಿದಿನ 8-9 ಗಂಟೆಗಳ ಕಾಲ ನಿಮ್ಮ ನಿದ್ರೆಯ ಮಾಡುವುದು ಬಹಳ ಮುಖ್ಯ. ತಜ್ಞರು ಪ್ರಕಾರ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಬಹಳ ಬೇಗ ಹಾಗೂ ಉತ್ತಮ ನಿದ್ದೆ ಸಾಧ್ಯ. ಸ್ನಾನ ಮಾಡುವುದರಿಂದ ದೇಹ ಉಷ್ಣತೆ ಕಡಿಮೆಯಾಗುತ್ತದೆ. ಇದರಿಂದ ದೇಹ, ಮನಸ್ಸಿಗೆ ವಿಶ್ರಾಂತಿ ಸಿಕ್ಕು ಚೆನ್ನಾಗಿ ನಿದ್ದೆ ಬರುತ್ತದೆ. ಸ್ನಾನವು ಧ್ಯಾನಕ್ಕೆ ಉತ್ತಮವಾದ ಪರಿಸರ ಮತ್ತು ವಾತಾವರಣವನ್ನು ಸಹ ಸೃಷ್ಟಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ದೈನಂದಿನ ಒತ್ತಡದಿಂದ ಪಾರಾಗಲು ನಿಮಗೆ ಸಹಾಯ ಮಾಡುತ್ತದೆ. ಚೆನ್ನಾಗಿ ನಿದ್ದೆ ಬರಬೇಕು ಎಂದರೆ ಮಲಗಲು 1 ಗಂಟೆ ಇರುವಾಗ 15 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.

ಗಾಯವನ್ನು ವೇಗವಾಗಿ ಗುಣಪಡಿಸಲು ಸಹಕಾರಿ

ಪ್ರತಿದಿನ ಸ್ನಾನ ಮಾಡುವುದರಿಂದ ಗಾಯ ಹಾಗೂ ಹುಣ್ಣಿನಂತಕ ಸೋಂಕು ನಿವಾರಣೆಯಾಗುತ್ತದೆ. ಬೆಚ್ಚಗಿನ ಉಪ್ಪುನೀರಿನ ದ್ರಾವಣದೊಂದಿಗೆ ಗಾಯವಾಗಿರುವ ಜಾಗಕ್ಕೆ ನೀರು ಹಾಕುವುದರಿಂದ ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.

ಸ್ನಾಯು, ಕೀಲುನೋವುಗಳನ್ನ ಶಮನ ಮಾಡುತ್ತದೆ

ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಸ್ನಾಯು ನೋವು, ಉದ್ವೇಗ ಮತ್ತು ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ವೈದ್ಯರ ಪ್ರಕಾರ, ಸ್ನಾನವು ನಿಮ್ಮ ಸ್ನಾಯುಗಳ ನೋವನ್ನು ನಿವಾರಿಸಲು ಮತ್ತು ನಿಮ್ಮ ಚಲನೆಯ ವ್ಯಾಪ್ತಿಯನ್ನು ಮತ್ತು ವ್ಯಾಯಾಮ ಮಾಡುವ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸ್ನಾಯು ನೋವು ನಿವಾರಣೆಗೆ ಐಸ್ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ.

ಸ್ಕಿನ್ ಎಕ್ಸ್‌ಫೋಲಿಯೇಷನ್‌

ಸ್ನಾನವು ನಿಮ್ಮನ್ನು ಸ್ವಚ್ಛವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ, ಏಕೆಂದರೆ ಬೆವರು ಮತ್ತು ಕೊಳಕು ಚರ್ಮಕ್ಕೆ ಅಂಟಿಕೊಂಡು ರಂಧ್ರಗಳನ್ನು ಮುಚ್ಚಿಹಾಕುತ್ತದೆ ಮತ್ತು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ಉಂಟುಮಾಡುತ್ತದೆ. ಇದು ವಿವಿಧ ರೀತಿಯ ಸೋಂಕುಗಳಿಗೆ ಕಾರಣವಾಗುತ್ತದೆ. ‘ಬೆಚ್ಚಗಿನ ನೀರು ನಿಮ್ಮ ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಇದರಿಂದ ತ್ವಚೆಯ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಸ್ನಾನ ಮಾಡುವಾಗ ವಾರಕ್ಕೊಮ್ಮೆ ನಿಮ್ಮ ಮುಖ ಮತ್ತು ದೇಹದಾದ್ಯಂತ ಸ್ಕ್ರಬ್ಬಿಂಗ್ ಮಾಡಬೇಕು. ಇದರಿಂದ ನಿಮ್ಮ ಚರ್ಮ ರೇಷ್ಮೆಯಂತೆ ಮೃದುವಾಗುತ್ತದೆ. ಇದರಿಂದ ನಿರ್ಜೀವ ಚರ್ಮದ ಕೋಶಗಳಿಂದ ಉಂಟಾಗುವ ಕಿರಿಕಿರಿ ಉರಿಯೂತ ಮತ್ತು ಹುಣ್ಣುಗಳಾಗದಂತೆ ತಡೆಯಬಹುದು. ಬೆಚ್ಚಗಿನ ನೀರು ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಇದು ಚರ್ಮದಲ್ಲಿ ಉಂಟಾಗುವ ಕೊಳೆಯನ್ನು ನಿವಾರಿಸುತ್ತದೆ.

ದಿನದಲ್ಲಿ ಎಷ್ಟು ಬಾರಿ ಸ್ನಾನ ಮಾಡಬೇಕು

ದಿನದಲ್ಲಿ ಎಷ್ಟು ಬಾರಿ ಸ್ನಾನ ಮಾಡಬೇಕು ಎಂಬುದನ್ನು ಪಾಲಿಸುವುದು ನಿಮಗೆ ಬಿಟ್ಟಿದ್ದು. ಆದರೆ ಒಂದು ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಮಲಗುವ ಮುನ್ನ ಒಮ್ಮೆ ಸ್ನಾನ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

Whats_app_banner