Digital Jagathu: ಎಐಗೆ ಹಾಯ್ ಹೇಳುವ ಹೊತ್ತು, ಡಿಜಿಟಲ್ ಜಗತ್ತಿನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕರಾಮತ್ತು
Artificial intelligence Explained: ಡಿಜಿಟಲ್ ಜಗತ್ತಿನಲ್ಲಿ ಈಗ ಚಾಟ್‌ಜಿಪಿಟಿಯಂತಹ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನಗಳ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಎಚ್‌ಟಿ ಕನ್ನಡದ ಟೆಕ್ ಅಂಕಣ "ಡಿಜಿಟಲ್ ಜಗತ್ತಿನಲ್ಲಿ" ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದ ಕುರಿತು ಕೊಂಚ ಮಾಹಿತಿ ಪಡೆಯೋಣ ಬನ್ನಿ.
ಇಸವಿ 2040. ತಾರೀಖು ಜೂನ್ 15. ಬೆಳಗ್ಗೆ 7 ಗಂಟೆ. ಹಾಸಿಗೆಯಲ್ಲಿ ಮಲಗಿದ್ದ ತಾತಾ ಯಾಕೋ ಎದ್ದು ಕುಳಿತು ಕೆಮ್ಮತೊಡಗಿದರು. ಹತ್ತಿರ ಹೋದ ಮಗ "ಏನಪ್ಪ ಏನಾಗುತ್ತಿದೆ?ʼʼ ಎಂದು ಕೇಳಿದ. "ಯಾಕೋ ತಲೆ ಸುತ್ತುತ್ತಿದೆ ಮಗ, ಜತೆಗೆ ಈ ಕೆಮ್ಮು ಬೇರೆ, ಡಾಕ್ಟರ್‌ನ ಕರೀತಿಯಾ" ಅಂದ್ರು. ಓಕೆ ಅಪ್ಪ ಎಂದ ಮಗ ಸ್ಮಾರ್ಟ್‌ಫೋನ್ ತೆರೆದ. ಜತೆಗೆ ಬೇರೊಂದು ಎಕ್ಸ್‌ಟರ್ನಲ್ ಡಿವೈಸ್ ತಂದು ತಾತಾನ ಬೆರಳಿಗೆ ಇಟ್ಟ. ಮೊಬೈಲ್‌ನಲ್ಲಿ ಎಐ ಡಾಕ್ಟರ್ ಎಂಬ ಆಪ್ ತೆರೆದ. ಅದರಲ್ಲಿ ತನ್ನ ತಾತಾನ ಹೆಲ್ತ್ ಅಪ್‌ಡೇಟ್ ನೀಡಿದ. ಕೊರಳಲ್ಲಿ ಸ್ಟೆತಸ್ಕೋಪ್ ಧರಿಸಿದ ರೊಬಾಟ್‌ನಂತಹ ಒಂದು ಜೀವಿ ಆಪ್‌ನೊಳಗಿನಿಂದ ಮಾತನಾಡತೊಡಗಿತು. "ಏನ್ ತಾತಾ, ನಿನ್ನೆ ರಾತ್ರಿ ಏನು ತಿನ್ನದೇ ಹಾಗೆಯೇ ಮಲಗಿದ್ದೀರಾ, ಬಿಪಿ ಮಾತ್ರೆ ಸರಿಯಾಗಿ ತೆಗೆದುಕೊಳ್ಳುತ್ತಿದ್ದೀರಾ?...."
ಇಸವಿ 2040. ತಾರೀಖು ಜೂನ್ 15. ಬೆಳಗ್ಗೆ 9 ಗಂಟೆ. ಆ ತಾತನ ಮೊಮ್ಮಗ ಗಡಿಬಿಡಿಯಿಂದ ತಾತಾನ ಕೊಠಡಿಗೆ ಬಂದ. "ತಾತಾ ಡಾಕ್ಟರ್ ಏನಂದ್ರು, ಔಷಧಿ ಎಲ್ಲಾ ಡ್ರೋನ್‌ನಲ್ಲಿ ಡೆಲಿವರಿ ಆಯ್ತ, ಎಐ ಡಾಕ್ಟರ್ ಹೇಳಿದ್ದಂತೆ ಕೇಳು, ಬೇಗ ಹುಷಾರಾಗ್ತಿಯಾ" ಎಂದ. ಸರಿ ತಾತಾ ನನಗೆ ಕ್ಲಾಸ್ ಇದೆ ಎಂದು ಹೇಳಿ ತನ್ನ ಕೊಠಡಿಗೆ ಸೇರಿದ. ಅವನು ಮಾತ್ರವಲ್ಲದೆ ಬಹುತೇಕ ವಿದ್ಯಾರ್ಥಿಗಳು ಈಗ ಮನೆಯಲ್ಲಿಯೇ ಓದೋದು. ಶಾಲಾ ಕಟ್ಟಡಗಳು ಕಡಿಮೆಯಾಗಿವೆ. ಈಗ ವಿದ್ಯಾರ್ಥಿಗಳಿಗೆ ಎಐ ಟ್ಯೂಟರ್ ಟೀಚ್ ಮಾಡ್ತಾರೆ. ಒಮ್ಮೆ ಕಿಟಕಿಯಿಂದ ಹೊರಕ್ಕೆ ನೋಡಿದರೆ ಅಲ್ಲಿ ಸಾಕಷ್ಟು ಕಾರುಗಳು ಓಡಾಡುತ್ತಿವೆ. ಯಾವ ಕಾರುಗಳಿಗೂ ಚಾಲಕರಿಲ್ಲ. ಎಲ್ಲವೂ ಸ್ವಯಂಚಾಲಿತ ಕಾರುಗಳು. ಬ್ಯಾಂಕ್‌ಗೆ ಹೋದರೆ ಅಲ್ಲಿ ಎಐ ಚಾಲಿತ ರೋಬೊಗಳೇ ಎಲ್ಲ ಕಾರ್ಯ ಮಾಡ್ತವೆ.....
***
ಮೇಲಿನ ಕಲ್ಪನೆಯಿಂದ ಹೊರಬಂದು ಮತ್ತೆ 2023ಕ್ಕೆ ಬರೋಣ. ಈಗಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮೆಷಿನ್ ಲರ್ನಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗಳು, ಅನ್ವೇಷಣೆಗಳಿಂದ ಭವಿಷ್ಯದ ಡಿಜಿಟಲ್ ಜಗತ್ತು ಸಾಕಷ್ಟು ಬದಲಾಗುವುದು ನಿಶ್ಚಿತ. ಮೊನ್ನೆ ಮೈಕ್ರೊಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಸಂದರ್ಶನದಲ್ಲಿ ಕೆಲವು ಕನಸುಗಳನ್ನು ಹಂಚಿಕೊಂಡಿದ್ದರು. ಭವಿಷ್ಯದಲ್ಲಿ ಈ ಭೂಮಿಯ ಎಂಟು ಬಿಲಿಯನ್ ಜನರು ಎಐ ಟ್ಯೂಟರ್, ಎಐ ಡಾಕ್ಟರ್, ಪ್ರೋಗ್ರಾಮರ್ ಅಥವಾ ಎಐ ಕನ್ಸಲ್ಟೆಂಟ್ ಅನ್ನು ನೋಡಲಿದ್ದಾರೆ ಎಂದಿದ್ದರು. ತಂತ್ರಜ್ಞಾನ ಜಗತ್ತು ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದ ಕುರಿತು ವಹಿಸುತ್ತಿರುವ ಆಸಕ್ತಿ ಗಮನಿಸಿದರೆ ಅವರ ಕನಸು ನನಸಾಗುವುದು ಕಷ್ಟವೇನಲ್ಲ.
ಕೃತಕ ಬುದ್ಧಿಮತ್ತೆ ಎಂಬ ವಾಸ್ತವ
ಎಐ ಇತ್ತೀಚೆಗೆ ಬಂದಿರುವುದಲ್ಲ. ಎಐ, ಮೆಷಿನ್ ಲರ್ನಿಂಗ್ ಇತ್ಯಾದಿಗಳು ಹಲವು ವರ್ಷಗಳಿಂದ ಟೆಕ್ ಜಗತ್ತಿನಲ್ಲಿ ಅಭಿವೃದ್ಧಿ ಕಾಣುತ್ತ ಇವೆ. ಆದರೆ, ಇತ್ತೀಚೆಗೆ ಚಾಟ್‌ಜಿಪಿಟಿ ಬಂದ ಬಳಿಕ ಸಾಕಷ್ಟು ಜನರು ಈ ಹೊಸ ಜಗತ್ತಿನ ಸಾಧ್ಯತೆಗಳ ಕುರಿತು ಬೆರಗಾಗಿದ್ದಾರೆ. ಚಾಟ್‌ಜಿಪಿಟಿ ಕುರಿತು ಈಗಾಗಲೇ ಸಾಕಷ್ಟು ಸುದ್ದಿಗಳನ್ನು ಓದಿರುತ್ತೀರಿ. ನೀವಿನ್ನೂ ಚಾಟ್ ಜಿಪಿಟಿಯನ್ನು ಗಮನಿಸದೆ ಇರುವವರಾಗಿದ್ದರೆ https://chat.openai.com ಲಿಂಕ್ ಮೂಲಕ ಲಾಗಿನ್ ಆಗಿ. ಬಳಿಕ ಅದರಲ್ಲಿ ಪ್ರಶ್ನೆಗಳನ್ನು ಕೇಳಿ, ಸಹಾಯ ಕೇಳಿ, ಯಾವುದಾದರೂ ವಿಷಯದ ಕುರಿತು ಪ್ರಬಂಧ ಬರೆಯಲು ಹೇಳಿ. ಅದು ನೀಡುವ ಉತ್ತರ ನೋಡಿ ಅಚ್ಚರಿ ಪಡೆದೆ ಇರಲಾರಿರಿ. ಚಾಟ್ ಜಿಪಿಟಿಯು ಈಗಾಗಲೇ ಹಲವು ಪರೀಕ್ಷೆಗಳನ್ನು ಮನುಷ್ಯರಂತೆ ಬರೆದು ತನ್ನ ಬುದ್ಧಿವಂತಿಕೆಯನ್ನು ಜಗತ್ತಿಗೆ ತೋರಿಸಿದೆ.
ಕೆಲವು ದಿನದ ಹಿಂದೆ ಚಾಟ್‌ಜಿಪಿಟಿಯನ್ನೇ ಪಾದ್ರಿಯಾಗಿ ಸ್ವೀಕರಿಸಿ ಚರ್ಚ್‌ನ ಕಾರ್ಯಕಲಾಪಗಳನ್ನು ಅದರ ಮೂಲಕವೇ ಜರ್ಮನಿಯಲ್ಲಿ ನಡೆಸಲಾಗಿತ್ತು. ನಿಗದಿತ ಸಮಯಕ್ಕೆ ನೂರಾರು ಜನರು ಆಗಮಿಸಿ ಈ ಚಾಟ್‌ಜಿಪಿಟಿ ನೀಡಿದ ಧರ್ಮೋಪದೇಶ ಪಡೆದುಕೊಂಡಿದ್ದರು. ಹಿಂದಿನ ನೋವುಗಳನ್ನು ಮರೆತುಬಿಡಿ, ವರ್ತಮಾನದಲ್ಲಿ ಬದುಕಿ, ಸಾವಿಗೆ ಭಯ ಪಡಬೇಡಿ, ಏಸುಕ್ರಿಸ್ತನ ಮೇಲೆ ನಂಬಿಕೆ ಇಡಿ ಎಂದು ಈ ಚಾಟ್ ಜಿಪಿಟಿ ಉಪದೇಶ ನೀಡಿತ್ತು. ಈ ಮೂಲಕ ಧರ್ಮಕ್ಕೂ ಎಐ ಪ್ರವೇಶಿಸಿತು.
ಮೈಕ್ರೊಸಾಫ್ಟ್‌ನ ಚಾಟ್‌ಜಿಪಿಟಿ ಮಾತ್ರವಲ್ಲದೆ ಗೂಗಲ್ ಕೂಡ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಸ್ನಾಪ್‌ಚಾಟ್ ಜಿಪಿಟಿ ಎಐಯೂ ಬಂದಿದೆ. ಭವಿಷ್ಯದಲ್ಲಿ ಎಐ ಎಲ್ಲೆಲ್ಲಿ ಪಾರಮ್ಯ ಮೆರೆಯಬಹುದು? ಈ ಪ್ರಶ್ನೆಗೆ ಇಂತಿಷ್ಟೇ ಪ್ರಾಡಕ್ಟ್‌ಗಳನ್ನು ಲಿಸ್ಟ್ ಮಾಡುವುದು ತಪ್ಪಾಗಬಹುದು. ಈಗ ನಮ್ಮ ಗೂಗಲ್ ಹುಡುಕಾಟದಲ್ಲಿಯೂ ಎಐ ಇದೆ. ಸ್ವಯಂ ಚಾಲಿತ ಕಾರುಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ತಯಾರಿಕಾ ವಲಯಕ್ಕೂ ಎಐ ರೋಬೊಗಳು ಬರುತ್ತಿವೆ. ಈಗಾಗಲೇ ರೋಬೊಗಳಿಂದ ಹಲವು ಉತ್ಪಾದನೆ ಕೆಲಸಗಳಿಗೆ ಕಾರ್ಮಿಕರ ಅಗತ್ಯ ಈಗ ಇಲ್ಲ. ಮುಂದೆ ಇದು ಇನ್ನಷ್ಟು ಅಭಿವೃದ್ಧಿ ಕಂಡು ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನೆಗೆ ಮನುಷ್ಯರ ಅಗತ್ಯವೇ ಇಲ್ಲ ಎಂಬ ಕಾಲ ಬಂದರೂ ಅಚ್ಚರಿಯಿಲ್ಲ. ಆರೋಗ್ಯಸೇವೆ ನಿರ್ವಹಣೆ, ಸ್ವಯಂಚಾಲಿತ ಹಣಕಾಸು ಹೂಡಿಕೆ, ವರ್ಚುವಲ್ ಟ್ರಾವೆಲ್ ಬುಕ್ಕಿಂಗ್ ಏಜೆಂಟ್, ಸೋಷಿಯಲ್ ಮೀಡಿಯಾ ಮಾನಿಟರ್ ಮಾಡಲು, ಮಾರ್ಕೆಟಿಂಗ್ ಚಾಟ್‌ಬಾಟ್ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಇನ್ನು ಕೆಲವು ವರ್ಷಗಳಲ್ಲಿ ಎಐ ಪಾರುಪತ್ಯ ಹೆಚ್ಚಾಗಲಿದೆ.
ಮನುಷ್ಯರ ರೀತಿ ಸ್ವಂತ ಯೋಚನೆ ಮಾಡುವ ಎಐ
ಮೊದಲೆಲ್ಲ ಏನು ಫೀಡ್ ಮಾಡಲಾಗಿದೆಯೋ ಅದಕ್ಕೆ ತಕ್ಕಂತೆ ರೋಬೊಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈ ಎಐ ರೋಬೊಗಳು ಸ್ವಯಂ ಆಲೋಚನಾ ಶಕ್ತಿ ಹೊಂದಿವೆ. ಇದೇ ಕಾರಣಕ್ಕೆ ಎಐಗಳ ಕುರಿತು ಒಂದಿಷ್ಟು ಮಂದಿ ಆತಂಕ ವ್ಯಕ್ತಪಡಿಸಿರುವುದು. ಐ ರೋಬಾಟ್ ಎಂಬ ರೋಬೊ ಈಗಾಗಲೇ ಮೆಸಾಚುಸೆಟ್ಸ್‌ನಲ್ಲಿ ಸಿದ್ಧವಾಗಿದೆ. ಚೀನಾದ ಸೋಫಿಯಾ ಎಂಬ ರೊಬೊ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾಳೆ. ಕ್ಯಾಲಿಫೋರ್ನಿಯಾದ ಸಾಫ್ಟ್‌ಬ್ಯಾಂಕ್‌ನಲ್ಲಿ ಪೆಪ್ಪರ್ ಎಂಬ ರೋಬೊ ಕೂಡ ಎಐ ರೋಬೊ. ಅಡುಗೆಮನೆಯಲ್ಲಿ ಸಹಾಯಕನಾಗಿ ಮಿಸೊ ರೊಬೊ ಇದೆ.
ಹೆಲ್ತ್‌ಕೇರ್‌ಗೂ ಈಗಾಗಲೇ ಎಐ ಪ್ರವೇಶಿಸಿದೆ. ಪಥಾಯಿ ಅಥವಾ ಪಾಥ್‌ಎಐ ಎನ್ನುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇರುವ ಪೆಥಾಲಜಿಸ್ಟ್. ಅಂಗಾಂಶ ವಿಶ್ಲೇಷಣೆ ಮಾಡಿ ನಿಖರವಾಗಿ ರೋಗ ನಿರ್ಣಯ ಮಾಡುತ್ತದೆ. ಉತ್ತರ ಕರೊಲಿನಾದಲ್ಲಿ ವೆಲ್ ಎಂಬ ಕಂಪನಿಯು ರೋಗಿಗಳ ಸ್ಥಿತಿ ಬಗ್ಗೆ ಮಾಹಿತಿ ಪಡೆಯಲು ವೆಲ್ ಹೆಸರಿನ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಆಟಂವೈಸ್ ಎಂಬ ಎಐ ಮತ್ತು ಡೀಪ್ ಲರ್ನಿಂಗ್ ತಂತ್ರಜ್ಞಾನವು ಔಷಧ ಅನ್ವೇಷಣೆಗೆ ನೆರವಾಗುತ್ತಿದೆ. ಜಗತ್ತಿನಾದ್ಯಂತ ತಪ್ಪು ರೋಗ ನಿರ್ಣಯ ಕಡಿಮೆ ಮಾಡುವ ಉದ್ದೇಶದಿಂದ ಕೊವೆರಾ ಹೆಲ್ತ್ ಎಂಬ ಎಐ ನೆರವಾಗುತ್ತಿದೆ. ತಲೆನೋವು, ಮೈಕೈ ನೋವು ಇತ್ಯಾದಿ ಸಣ್ಣಪುಟ್ಟ ಕಾಯಿಲೆ ಇರುವವರಿಗೆ ಪೇಜರ್ ಎಂಬ ಎಐ ನೆರವಾಗುತ್ತಿದೆ. ರೋಗಿಗಳ ರೋಗದ ಇತಿಹಾಸ, ರೋಗಿಗಳು, ವೈದ್ಯರು ಮತ್ತು ನರ್ಸ್ ಜತೆ ಚಾಟಿಂಗ್ ಮಾಡಿ ಅಪಾಯಿಂಟ್‌ಮೆಂಟ್ ಶೆಡ್ಯೂಲ್ ಮಾಡುವುದು, ಪ್ರಿಸ್ಕ್ರಿಪ್ಷನ್ ಬರೆಯುವುದು, ಹಣ ಪಡೆಯುವುದು ಇತ್ಯಾದಿ ಹಲವು ಕಾರ್ಯವನ್ನು ಪೇಜರ್ ಮಾಡುತ್ತಿದೆ.
ಎಐನಿಂದಾಗಿ ಉದ್ಯೋಗ ಕಡಿತದ ಆತಂಕವೂ ಹೆಚ್ಚಾಗಿದೆ. ಇತ್ತೀಚೆಗೆ ಗ್ರೇ ಆಂಡ್ ಕ್ರಿಸ್ಮಸ್ ಐಎನ್‌ಸಿ ಮೇ ತಿಂಗಳ ಉದ್ಯೊಗ ಕಡಿತದ ವರದಿ ಪ್ರಕಟಿಸಿತ್ತು. ಆ ವರದಿಯಲ್ಲಿ 3900 ಜನರು ಉದ್ಯೋಗ ಕಳೆದುಕೊಳ್ಳಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಾರಣ ಎಂದು ಬೊಟ್ಟು ಮಾಡಲಾಗಿತ್ತು. ಬಹುತೇಕ ಕಂಪನಿಗಳು ಉದ್ಯೋಗಿಗಳ ನೇಮಕಾತಿ ಕಡಿಮೆ ಮಾಡಲು ಆರಂಭಿಸಿವೆ. ಎಐ, ಮೆಷಿನ್ ಲರ್ನಿಂಗ್ ಇತ್ಯಾದಿಗಳಿಗೆ ಹೆಚ್ಚಿನ ಹೂಡಿಕೆ ಮಾಡುತ್ತಿವೆ. ಡಿಜಿಟಲ್ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಉದ್ಯೋಗಿಗಳು ನೋಡುತ್ತ ಇದ್ದರೆ ಸಾಲದು. ಹೊಸ ಕೌಶಲಗಳನ್ನು ಕಲಿಯುತ್ತ ಬದಲಾಗುವ ಜಗತ್ತಿಗೆ ತಕ್ಕಂತೆ ಅಪ್‌ಡೇಟ್ ಆಗುವುದು ಇಂದಿನ ತುರ್ತು.
ಇದೇ ಸಮಯದಲ್ಲಿ ಜಗತ್ತಿನಾದ್ಯಂತ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತನ್ನ ಕರಾಮತ್ತು ತೋರಿಸಲು ಆರಂಭಿಸಿದ ಈ ಹೊತ್ತಿನಲ್ಲಿ ಐರೋಪ್ಯ ಒಕ್ಕೂಟವು ಎಐಗಾಗಿ ಹೊಸ ಕಾನೂನು ರೂಪಿಸಲು ಮುಂದಾಗಿದೆ. ಇಯು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಕ್ಟ್ (ಎಐಎ) ಜಾರಿಗೆ ತರಲು ಯುರೋಪ್ ಪಾರ್ಲಿಮೆಂಟ್ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕೂ ಮೊದಲೇ ಚೀನಾವು ಎಐ ನಿಯಂತ್ರಣ ಕಾಯಿದೆ ತಂದಿದೆ. ಈಗಾಗಲೇ ಅದರ ಕರಡು ಕೂಡ ಬಿಡುಗಡೆಯಾಗಿದೆ. ಭಾರತ ಸೇರಿದಂತೆ ಇತರೆ ದೇಶಗಳೂ ಮುಂದಿನ ದಿನಗಳಲ್ಲಿ ಎಐ ಕಾಯಿದೆ ಜಾರಿಗೆ ತರುವುದು ನಿಶ್ಚಿತ. ಏಕೆಂದರೆ, ಎಐ ಎಂದರೆ ಕೇವಲ ಯಂತ್ರ, ತಂತ್ರಜ್ಞಾನವಲ್ಲ. ಅದಕ್ಕೆ ಸ್ವಂತ ಯೋಚಿಸುವ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರುತ್ತದೆ.
ಈ ಭೂಮಿಯಲ್ಲಿ ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಿ ಸ್ವಂತವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುವ ಮಾನವನೆಂಬ ಜೀವಿ ಮಾಡಿರುವ ಸಾಧನೆಗಳಿಗೆ ಲೆಕ್ಕವಿಲ್ಲ. ಮಾನವ ಜೀವಿಯು ಸ್ವಂತವಾಗಿ ಆಲೋಚಿಸುವ ಎಐಯನ್ನು ಈ ಭೂಮಿಗೆ ಪರಿಚಯಿಸುತ್ತಿದ್ದಾನೆ. ಆ ಎಐ ಒಳ್ಳೆಯ ಉದ್ದೇಶಗಳಿಗೆ ಮಾತ್ರ ಬಳಕೆಯಾಗಲಿ. ಓಪನ್ ವೆಬ್ ಮಾತ್ರವಲ್ಲದೆ ಡೀಪ್ ವೆಬ್ ಎಂಬ ಆನ್‌ಲೈನ್ ಅಂಡರ್‌ವರ್ಲ್ ಇರುವಂತೆ, ಎಐಯು ಹೊಸ ವಿಲನ್ ಜಗತ್ತನ್ನು ಸೃಷ್ಟಿಸದೆ ಇರಲಿ ಎಂದು ಆಶಿಸೋಣ.
ಡಿಜಿಟಲ್ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in