Digital Jagathu: ಡಾರ್ಕ್‌ ವೆಬ್‌ ಎಂಬ ಆನ್‌ಲೈನ್‌ ಅಂಡರ್‌ವರ್ಲ್ಡ್‌, ಹೊಸ ಅಂಕಣ ಡಿಜಿಟಲ್‌ ಜಗತ್ತು ಆರಂಭ
ಕನ್ನಡ ಸುದ್ದಿ  /  ಜೀವನಶೈಲಿ  /  Digital Jagathu: ಡಾರ್ಕ್‌ ವೆಬ್‌ ಎಂಬ ಆನ್‌ಲೈನ್‌ ಅಂಡರ್‌ವರ್ಲ್ಡ್‌, ಹೊಸ ಅಂಕಣ ಡಿಜಿಟಲ್‌ ಜಗತ್ತು ಆರಂಭ

Digital Jagathu: ಡಾರ್ಕ್‌ ವೆಬ್‌ ಎಂಬ ಆನ್‌ಲೈನ್‌ ಅಂಡರ್‌ವರ್ಲ್ಡ್‌, ಹೊಸ ಅಂಕಣ ಡಿಜಿಟಲ್‌ ಜಗತ್ತು ಆರಂಭ

Technology Column: ಡಿಜಿಟಲ್‌ ಜಗತ್ತು ಎಚ್‌ಟಿ ಕನ್ನಡದ ಹೊಸ ಅಂಕಣ. ಪ್ರತಿ ಗುರುವಾರ ಸಂಜೆ 6 ಗಂಟೆಗೆ ಪ್ರಕಟವಾಗಲಿದೆ. ಇಂದು ಆನ್‌ಲೈನ್‌ ಜಗತ್ತಿನ ಇನ್ನೊಂದು ಮುಖವಾದ ಡಾರ್ಕ್‌ ವೆಬ್‌ ಎಂಬ ಆನ್‌ಲೈನ್‌ ಅಂಡರ್‌ವರ್ಲ್‌ (Digital Underworld) ವಿಷಯವನ್ನು ಓದುಗರೊಂದಿಗೆ ಹಂಚಿಕೊಳ್ಳಲಾಗಿದೆ.

ಡಾರ್ಕ್‌ ವೆಬ್‌ ಎಂಬ ಆನ್‌ಲೈನ್‌ ಅಂಡರ್‌ವರ್ಲ್ಡ್‌
ಡಾರ್ಕ್‌ ವೆಬ್‌ ಎಂಬ ಆನ್‌ಲೈನ್‌ ಅಂಡರ್‌ವರ್ಲ್ಡ್‌

ಪ್ರೀತಿಯ ಡಿಜಿಟಲ್‌ ಓದುಗ, ಇದು ನಿಮಗೆ ನಾನು ಬರೆಯುತ್ತಿರುವ ಮೊದಲ ಪತ್ರ. ನಾನು ಕ್ಷೇಮ, ಈ ಡಿಜಿಟಲ್‌ ಜಗತ್ತಿನಲ್ಲಿ ನೀವೂ ಕ್ಷೇಮವೆಂದು ನಂಬಿದ್ದೇನೆ. ಮೊದಲಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವನ್ನು ನಿತ್ಯ ಓದುತ್ತಿರುವುದಕ್ಕೆ ಥ್ಯಾಂಕ್ಸ್‌. ಹೇಳಲು ತುಂಬಾ ವಿಷಯಗಳಿವೆ. ಇಂದು ನಿಮ್ಮ ಜತೆ ಹೇಳಲು ಮುಖ್ಯವಾದ ವಿಷಯವಿದೆ. ಎಚ್‌ಟಿ ಕನ್ನಡದಲ್ಲೊಂದು ಹೊಸ ಅಂಕಣ ಬರೆಯುತ್ತಿದ್ದೇನೆ. ಅಂಕಣದ ಹೆಸರು: ಡಿಜಿಟಲ್‌ ಜಗತ್ತು. ಸರಳವಾಗಿ ನಿಮ್ಗೆ ಅರ್ಥ ಆಗೋ ರೀತಿ ಡಿಜಿಟಲ್‌ ಲೋಕವನ್ನು ಪರಿಚಯಿಸುವ ಪ್ರಯತ್ನ ನನ್ನದು. ಆನ್‌ಲೈನ್‌ ಜಗತ್ತಿಗೆ ಕನೆಕ್ಟ್‌ ಆಗುವ ಪ್ರತಿಯೊಂದು ವಿಷಯವೂ ಈ ಅಂಕಣಕ್ಕೆ ಸ್ವತ್ತು.

ನಿಮಗೆ ನನ್ನ ಪರಿಚಯ ಇರಬಹುದು. ಇಲ್ಲದೆಯೂ ಇರಬಹುದು. ಈ ಡಿಜಿಟಲ್‌ ಜಗತ್ತಿನಲ್ಲಿ ಎಲ್ಲರೂ ಪರಿಚಿತರು, ಎಲ್ಲರೂ ಅಪರಿಚಿತರರು. ನೆನಪಿಸಿಕೊಳ್ಳಲು ಹೇಳುತ್ತಿದ್ದೇನೆ. ನನ್ನ ಹೆಸರು ಪ್ರವೀಣ್‌ ಚಂದ್ರ ಪುತ್ತೂರು. ಡಿಜಿಟಲ್‌ ಕ್ಷೇತ್ರ ನನ್ನ ಆಸಕ್ತಿ, ನನ್ನ ಗುರು, ನನ್ನ ಪೊರೆಯುವ ಲೋಕ. ಸದ್ಯಕ್ಕೆ ಪರಿಚಯ ಇಷ್ಟು ಸಾಕು. ಈ ಪತ್ರದ ಕೊನೆಗೆ ಇಮೇಲ್‌ ನೀಡಿದ್ದೇನೆ. ಮಾರುತ್ತರ ಬರೆಯಲು ಮರೆಯದಿರಿ. ಸರಿ, ಈಗ ವಿಷಯಕ್ಕೆ ಬರುವೆ. ಇಂದು ಡಿಜಿಟಲ್‌ ಜಗತ್ತಿನ ಅಂಡರ್‌ವರ್ಲ್ಡ್‌ ಎಂದೇ ಕರೆಯಲ್ಪಡುವ ಡಾರ್ಕ್‌ ವೆಬ್‌ ಕುರಿತು ತಿಳಿಸಬೇಕೆಂದಿದ್ದೇನೆ. ನಿಮಗೆ ಈ ಲೋಕದ ಪರಿಚಯ ಇರಬಹುದು, ಇಲ್ಲದೆಯೂ ಇರಬಹುದು. ಆದರೆ, ಈ ಲೋಕದ ಕುರಿತು ಮರೆಯಬೇಡಿ, ನೆಗ್ಲೆಕ್ಟ್‌ ಮಾಡಬೇಡಿ ಎಂದು ಎಚ್ಚರಿಕೆಯನ್ನು ಪ್ರೀತಿಯಿಂದ ನೀಡುತ್ತಿದ್ದೇನೆ.

ನಿಮಗೆ ನೆನಪಿರಬಹುದು, ಹಲವು ವರ್ಷಗಳ ಹಿಂದೆ ಸುದ್ದಿಪತ್ರಿಕೆಗಳಲ್ಲಿ, ಟೀವಿಗಳಲ್ಲಿ "ಅಂಡರ್‌ವರ್ಲ್ಡ್‌" ಸುದ್ದಿಗಳು ಇರುತ್ತಿದ್ದವು. ದಾವೋದ್‌ ಇಬ್ರಾಹಿಂ, ಛೋಟಾ ರಾಜನ್‌, ಹಾಜಿ ಮಸ್ತಾನ್‌, ಕರೀಂ ಲಾಲಾ, ಅಬು ಸಲೇಂ, ಛೋಟಾ ಶಕೀಲ್‌, ರವಿ ಪೂಜಾರಿ, ಮುತ್ತಪ್ಪ ರೈ... ಹೀಗೆ ಹಲವು ಕುಖ್ಯಾತರು ಪಾತಕ ಜಗತ್ತಿನಲ್ಲಿ ಸುದ್ದಿ ಮಾಡುತ್ತಿದ್ದರು. ಯಾವಾಗ ಮೊಬೈಲ್‌ ಫೋನ್‌ ಬಂತೋ ಕುಖ್ಯಾತ ಅಂಡರ್‌ವರ್ಲ್ಡ್‌ ಡಾನ್‌ಗಳಿಂದ ಹಿಡಿದು ಸಾಮಾನ್ಯ ಕಳ್ಳರು ಪೊಲೀಸರು ಬಲೆಗೆ ಬೀಳತೊಡಗಿದರು. ಮೊಬೈಲ್‌ ಸಿಮ್‌, ಮೊಬೈಲ್‌ ಸೆಟ್‌, ಹೀಗೆ, ಯಾವುದಾದರೋಂದು ಡಿಜಿಟಲ್‌ ಸುಳಿವು ಇಂತಹ ಜನರನ್ನು ಬಲೆಗೆ ಬೀಳಿಸುತ್ತಿದ್ದವು. ಆನ್‌ಲೈನ್‌ ಜಗತ್ತು ಇಂತಹ ಕೊಡುಗೆಗಳನ್ನು ಕೊಡುತ್ತಿರುವ ಸಂದರ್ಭದಲ್ಲಿಯೇ ಸೈಲೆಂಟಾಗಿ ಆನ್‌ಲೈನ್‌ ಅಂಡರ್‌ವರ್ಲ್ಡ್‌ ಆರಂಭವಾಯಿತು. ಇಲ್ಲಿನ ಪಾತಕ ಹಣಕಾಸು ವಂಚನೆ, ಮೋಸ ಇತ್ಯಾದಿಗಳಿಗೆ ಸೀಮಿತ ಎಂದುಕೊಳ್ಳುವಂತೆ ಇಲ್ಲ. ಇಲ್ಲೂ ಕ್ರೌರ್ಯ, ಭೀಭತ್ಸ ಜಗತ್ತು ಇದೆ. ಇದೇ ಡಿಜಿಟಲ್‌ ಜಗತ್ತಿನ ಇನ್ನೊಂದು ಮುಖ. ಇದರ ಬಗ್ಗೆ ನೀವು ತಿಳಿದಿರಲೇಬೇಕು.

ನಿಮಗೆ ಗೊತ್ತ, ಆನ್‌ಲೈನ್‌ ಅಂಡರ್‌ವರ್ಲ್ಡ್‌ ಒಂಥರ ಕತ್ತಲ ಜಗತ್ತು. ಬೆಂಗಳೂರಿನಂತಹ ನಗರಗಳಲ್ಲಿ ನಾವೆಲ್ಲ ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವಾಗ ಇನ್ನೊಂದು ರಾತ್ರಿ ಜಗತ್ತು ತೆರೆದುಕೊಳ್ಳುತ್ತದೆಯಲ್ವ, ಅದೇ ರೀತಿ ಇದು. ಇದು ನಗರಗಳಿಗೆ ಮಾತ್ರ ಸೀಮಿತವಲ್ಲ, ಕೆಲವು ಹಳ್ಳಿಗಳಲ್ಲಿಯೂ ಮಧ್ಯರಾತ್ರಿ ಏನೇನೋ ನಡೆಯುತ್ತಿದೆ ಎಂಬ ವರ್ತಮಾನ ನಿಮಗೆ ಸಿಕ್ಕಿರಬಹುದು. ನಿಮಗೆ ಗೊತ್ತಿರಬಹುದು. ನಾವು ಗೂಗಲ್ ಇತ್ಯಾದಿ ನಿತ್ಯ ಬಳಸುವ ಮುಕ್ತ ವೆಬ್‌ ಮಾತ್ರವಲ್ಲದೆ ಬೇರೆ ವೆಬ್‌ಗಳೂ ಇವೆ. ಅಲ್ಲಿ ಏನೇನೋ ನಡೆಯುತ್ತಿದೆ ಎಂಬ ಗುಸುಗುಸು.

ಇಂಟರ್‌ನೆಟ್‌ ಮೂರು ಪದರಗಳನ್ನು ಹೊಂದಿರುತ್ತದೆ. ಅದರಲ್ಲಿ ಮೊದಲ ಪದರ ನಾವು ನೀವು ಹೆಚ್ಚಾಗಿ ಬಳಸುವ ಓಪನ್‌ ವೆಬ್‌. ಗೂಗಲ್ ಕ್ರೋಮ್‌, ಸಫಾರಿ, ಎಡ್ಜ್‌, ಸಫಾರಿಯಂತಹ ಬ್ರೌಸರ್‌ಗಳಲ್ಲಿ ಇದನ್ನ ಬಳಸ್ತಿವಿ. ಇಲ್ಲಿ ಗೂಗಲ್‌ ಸರ್ಚ್‌, ಯಾಹೂ ಸರ್ಚ್‌, ವಿಕಿಪೀಡಿಯಾ, ಫೇಸ್‌ಬುಕ್‌, ಟ್ವಿಟ್ಟರ್‌, ಯೂಟ್ಯೂಬ್‌ ಇತ್ಯಾದಿಗಳು ಇರುತ್ತವೆ. ಇಲ್ಲೂ ವಂಚನೆ, ಮೋಸ, ಅನೈತಿಕತೆ ನಡೆಯುತ್ತಿದೆ. ಅದು ಬೇರೆಯದ್ದೇ ವಿಷಯ. ಲೊಕ್ಯಾಂಟೊದಂತಹ ಆಪ್‌ ಮೂಲಕವೇ ವೈಶ್ಯಾವಾಟಿಕೆ ನಡೆಯುತ್ತಿರುವುದು ಗೊತ್ತಿರಬಹುದು. ಆನ್‌ಲೈನ್‌ ರಮ್ಮಿಯಂತಹ ಆಟಗಳ ಮೂಲಕ ಜನರಿಗೆ ನಡೆಸುವ ವಂಚನೆಯೂ ಇದೆ. ಈ ಓಪನ್‌ ವೆಬ್‌ ಅನ್ನೇ ಬೃಹತ್‌ ಆನ್‌ಲೈನ್‌ ಜಗತ್ತು ಎಂದುಕೊಳ್ಳಬಹುದು. ಕಾಸ್ಪರ್‌ಸ್ಕೈ ಎಂಬ ಆನ್‌ಲೈನ್‌ ಸೆಕ್ಯುರಿಟಿ ಸಾಫ್ಟ್‌ವೇರ್‌ ವರದಿ ಓದಿದೆ. ಅದರಲ್ಲಿ ಇದ್ದ ಮಾಹಿತಿ ಪ್ರಕಾರ, ಈ ಮುಕ್ತ ವೆಬ್‌ ಒಟ್ಟಾರೆ ಇಂಟರ್‌ನೆಟ್‌ ಜಗತ್ತಿನ ಶೇಕಡ 5 ಅಷ್ಟೇ. ಹಾಗಾದರೆ, ಉಳಿದ ಶೇಕಡ 95 ವೆಬ್‌ ಏನದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅದನ್ನೇ ಈ ಪತ್ರದಲ್ಲಿ ಹೇಳಲು ಹೊರಟದ್ದು. ಅದುವೇ ಕತ್ತಲ ವೆಬ್‌ ಜಗತ್ತು.

ಈ ಪತ್ರವನ್ನು ಪೂರ್ತಿ ಓದಿ, ಇನ್ನು ಸ್ವಲ್ಪವೇ ಇರೋದು. ಓಪನ್‌ ವೆಬ್‌ ಬಳಿಕ ಇಂಟರ್‌ನೆಟ್‌ನ ಎರಡನೇ ಲೇಯರ್‌ ಡೀಪ್‌ ವೆಬ್‌. ಈ ವೆಬ್‌ನಲ್ಲಿರುವ ಮಾಹಿತಿ ಗೂಗಲ್‌ ಅಥವಾ ಇತರೆ ಸರ್ಚ್‌ ಎಂಜಿನ್‌ಗಳಲ್ಲಿ ದೊರಕುವುದಿಲ್ಲ. ಅಂದ್ರೆ, ಈ ಕಂಟೆಂಟ್‌ಗಳು ಇಂಡೆಕ್ಸ್‌ ಆಗಿರುವುದಿಲ್ಲ. ಈ ಕಂಟೆಂಟ್‌ಗಳು ಪಾಸ್‌ವರ್ಡ್‌ ಸುರಕ್ಷತೆಯನ್ನು ಹೊಂದಿರುತ್ತವೆ. ಇದೊಂದು ರೀತಿ ಬೇರೆಯದ್ದೇ ಜಗತ್ತು. ಜಂಪ್‌ಸ್ಟಾರ್ಟ್‌ಮ್ಯಾಗ್‌ ವರದಿಯೊಂದರ ಪ್ರಕಾರ ಈ ಡೀಪ್‌ ಇಂಟರ್‌ನೆಟ್‌ ಜಗತ್ತಿನ ಬಾಕಿ ಶೇಕಡ 95 ಪಾಲನ್ನು ಆಕ್ರಮಿಸಿಕೊಂಡಿದೆ. ನೀನು ಕೂಡ ಆನ್‌ಲೈನ್‌ ಸೇಫ್ಟಿ ಬಗ್ಗೆ ಜಾಗೃತಿ ಹೆಚ್ಚಿಸಿಕೊಳ್ಳಲು ಇಂತಹ ವರದಿಗಳು ಕಣ್ಣಿಗೆ ಬಿದ್ದಾಗ ಓದುತ್ತ ಇರು. ಫೇಸ್‌ಬುಕ್‌ ಇತ್ಯಾದಿಗಳಲ್ಲಿ ಹೆಚ್ಚು ಸಮಯ ಕಳೆಯಬೇಡ, ಡಿಜಿಟಲ್‌ ಜಗತ್ತನ್ನು ವಿಶ್ವವಿದ್ಯಾಲಯ ಅಂದುಕೊಂಡು ನಿಯಮಿತವಾಗಿ ಸ್ಟಡಿ ಮಾಡ್ತ ಇರಿ.

ಈ ಡೀಪ್‌ ವೆಬ್‌ನೊಳಗೆ ಇರೋದೇ ಡಾರ್ಕ್‌ ವೆಬ್‌. ಇದನ್ನೇ ಆನ್‌ಲೈನ್‌ ಅಂಡರ್‌ವರ್ಲ್ಡ್‌ ಎಂದು ಹೇಳುವುದು. ಈ ಕರಾಳ ವೆಬ್‌ನೊಳಗೆ ಹಲವು ವೆಬ್‌ಸೈಟ್‌ಗಳು ಅಗೋಚರವಾಗಿ ಇರುತ್ತವೆ. ಇವನ್ನು ವಿಶೇಷ ನೆಟ್‌ವರ್ಕ್‌ಗಳ ಮೂಲಕ ಮಾತ್ರ ಬಳಸಬಹುದು. ಡೀಪ್‌ ವೆಬ್‌ನೊಳಗೆ ಡಾರ್ಕ್‌ ವೆಬ್‌ ಪಾಲು ಸುಮಾರು ಶೇಕಡ 5ರಷ್ಟು ಇರಬಹುದು.

ಡೀಪ್‌ ವೆಬ್‌ ಹಲವು ಒಳ್ಳೆಯ ಉದ್ದೇಶಗಳಿಗೆ ಬಳಕೆಯಾಗುತ್ತಿರಬಹುದು. ಸಂಶೋಧನಾ ಡೇಟಾಬೇಸ್‌, ಖಾಸಗಿ ಚರ್ಚೆಗಳಿಗೆ ಬಳಕೆಯಾಗುತ್ತದೆ. ಆದರೆ, ಹೆಚ್ಚಾಗಿ ಡಾರ್ಕ್‌ ವೆಬ್‌ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಡ್ರಗ್‌ ಟ್ರಾಫಿಕ್ಕಿಂಗ್‌, ಸೈಬರ್‌ ವಂಚನೆ, ಸುಲಿಗೆ ಇತ್ಯಾದಿಗಳಿಗೆ ಬಳಕೆಯಾಗುತ್ತದೆ. ಇವು ಕಾನೂನುಗಳ ಕೈಗೆ ಎಟುಕದಂತೆ ವ್ಯವಹಾರ ನಡೆಸುತ್ತ ಇರುತ್ತವೆ. ಇಲ್ಲಿ ಲೆಕ್ಕವಿಲ್ಲದಷ್ಟು ಮೊತ್ತದ ಕಳ್ಳ ವ್ಯವಹಾರಗಳು ನಡೆಯುತ್ತವೆ. ಮಾದಕವಸ್ತು ವ್ಯವಹಾರ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾತ್ರವಲ್ಲದೆ ಮಕ್ಕಳು ಅಥವಾ ಮಹಿಳೆಯರ ಶೋಷಣೆ, ಹಿಂಸೆ, ಪೈಶಾಚಿಕತೆಯ ಚಿತ್ರ, ವಿಡಿಯೋ ವ್ಯವಹಾರವೂ ಇಲ್ಲಿ ನಡೆಯುತ್ತದೆ.

ನನಗ್ಯಾಕೆ ಇದನ್ನು ಹೇಳ್ತಿಯಾ, ನಂಗೆ ಈ ಕರಾಳ ವೆಬ್‌ ಜಗತ್ತಿನ ಸಹವಾಸ ಬೇಡ ಎಂದುಕೊಳ್ಳಬೇಡಿ. ನಿಮಗೆ ಬೇಡ ಎಂದರೂ ಅದು ನಿಮ್ಮ ಬಳಿಗೆ ಬರಬಹುದು. ನೀವು ಯಾವುದೋ ಸಾಫ್ಟ್‌ವೇರ್‌ ದುಡ್ಡು ಕೊಟ್ಟು ಖರೀದಿಸೋದ್ಯಾಕೆ ಎಂದು ಉಚಿತವಾಗಿ ದೊರಕುತ್ತದೆಯೋ ಎಂದು ಹುಡುಕುತ್ತ ಇರಬಹುದು, ನೀವು ಅಶ್ಲೀಲ ವಿಡಿಯೋ ವೆಬ್‌ಗಳನ್ನು ನೋಡುವುದಿಲ್ಲ ಎಂದು ಗೊತ್ತು. ವಾಟ್ಸಪ್‌ನಲ್ಲಿ ಐಫೋನ್‌ ಉಚಿತ ಎಂಬ ಲಿಂಕ್‌ ಬಂದ್ರೆ ಕ್ಲಿಕ್‌ ಮಾಡದೆ ಇರ್ತಿರಾ ಅನ್ನೋದು ನನ್ನ ಡೌಟ್‌. ನಮ್ಮ ನಿಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್‌ಗಳಿಗೆ ಇಂತಹ ಲಿಂಕ್‌ಗಳ ಮೂಲಕ ಈ ಡಾರ್ಕ್‌ ವೆಬ್‌ ಕಳ್ಳರು ಅಥವಾ ಇತರೆ ವಂಚಕರು ಪ್ರವೇಶಿಸ್ತಾರೆ. ನಮ್ಗೆ ಗೊತ್ತೆ ಇಲ್ಲದಂತೆ ನಮ್ಮ ಮೊಬೈಲ್‌ ಡೇಟಾ ಪಡೆದುಕೊಳ್ತಾರೆ. ಇದೇ ಕಾರಣಕ್ಕೆ ಆನ್‌ಲೈನ್‌ ಸೆಕ್ಯುರಿಟಿ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತದೆ. ಆನ್‌ಲೈನ್‌ ವಂಚನೆಯ ಕುರಿತು ಸವಿಸ್ತಾರವಾಗಿ ನಿಮಗೆ ಇನ್ನೊಂದು ಪತ್ರದಲ್ಲಿ ಮಾಹಿತಿ ನೀಡುವೆ.

ಡಿಜಿಟಲ್‌ ಜಗತ್ತಿನ ವಂಚನೆಗೆ ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಬಲಿಯಾಗುತ್ತಿದ್ದಾರೆ. ಆಮೀಷಗಳಿಗೆ ಬಲಿಯಾಗದೆ ಇರುವುದು ಇಂತಹ ಜಗತ್ತಿನಿಂದ ಪಾರಾಗಲು ಇರುವ ದಾರಿ ಎಂದು ಹೇಳುತ್ತ ಈ ಪತ್ರ ಮುಗಿಸುವೆ. ಹೇಳಲು ತುಂಬಾ ವಿಷಯಗಳಿವೆ. ಮುಂದಿನ ವಾರ ಸಿಗೋಣ.

ಪ್ರೀತಿಯಿಂದ ಪ್ರವೀಣ್‌ ಚಂದ್ರ ಪುತ್ತೂರು

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in

Whats_app_banner