AI Anchor: ಸುದ್ದಿವಾಹಿನಿ ನಿರೂಪಕಿ ಸೀಟ್‌ನಲ್ಲಿ ಎಐ, ಒಟಿವಿ ಟಿವಿ ಚಾನೆಲ್‌ಗೆ ಬಂದಳು ಕೈಮಗ್ಗದ ಸೀರೆಯುಟ್ಟ ಲಿಸಾ, ಆಂಕರ್‌ಗಳಿಗೆ ಆತಂಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ai Anchor: ಸುದ್ದಿವಾಹಿನಿ ನಿರೂಪಕಿ ಸೀಟ್‌ನಲ್ಲಿ ಎಐ, ಒಟಿವಿ ಟಿವಿ ಚಾನೆಲ್‌ಗೆ ಬಂದಳು ಕೈಮಗ್ಗದ ಸೀರೆಯುಟ್ಟ ಲಿಸಾ, ಆಂಕರ್‌ಗಳಿಗೆ ಆತಂಕ

AI Anchor: ಸುದ್ದಿವಾಹಿನಿ ನಿರೂಪಕಿ ಸೀಟ್‌ನಲ್ಲಿ ಎಐ, ಒಟಿವಿ ಟಿವಿ ಚಾನೆಲ್‌ಗೆ ಬಂದಳು ಕೈಮಗ್ಗದ ಸೀರೆಯುಟ್ಟ ಲಿಸಾ, ಆಂಕರ್‌ಗಳಿಗೆ ಆತಂಕ

OTV AI news Anchor Lisa: ಟಿವಿ ಚಾನೆಲ್‌ಗಳ ಆಂಕರ್‌ ಸೀಟ್‌ನಲ್ಲೀಗ ತಂತ್ರಜ್ಞಾನ ಕುಳಿತಿದೆ. ಲಿಸಾ ಹೆಸರಿನ ಎಐ ಸುದ್ದಿ ನಿರೂಪಕಿಯನ್ನು ಒಡಿಸ್ಸಾ ರಾಜ್ಯಕ್ಕೆ ಒಟಿವಿ ಪರಿಚಯಿಸಿದೆ. ಸುದ್ದಿ ಮಾಧ್ಯಮ ಕ್ಷೇತ್ರಗಳಲ್ಲಿ ಪತ್ರಕರ್ತರು, ಕಂಟೆಂಟ್‌ ಬರಹಗಾರರು, ವಾರ್ತಾ ವಾಚಕರ ಸ್ಥಾನವನ್ನು ಎಐ ಆಕ್ರಮಿಸಿಕೊಳ್ಳುತ್ತಿದೆ.

ಒಟಿವಿ ಟಿವಿ ಚಾನೆಲ್‌ಗೆ ಬಂದಳು  ಕೈಮಗ್ಗದ ಸೀರೆಯುಟ್ಟ ಲಿಸಾ
ಒಟಿವಿ ಟಿವಿ ಚಾನೆಲ್‌ಗೆ ಬಂದಳು ಕೈಮಗ್ಗದ ಸೀರೆಯುಟ್ಟ ಲಿಸಾ (OTV| Twitter)

ಟೆಲಿವಿಷನ್‌ನಲ್ಲಿ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಆಂಕರ್‌ಗಳ ಸ್ಥಾನದಲ್ಲಿ ಇನ್ನು ಮುಂದೆ "ಎಐ" ಕುಳಿತುಕೊಳ್ಳಲಿದೆ. ಇದೇ ಮೊದಲ ಬಾರಿಗೆ ಒಟಿವಿ ಎಂಬ ಒಡಿಸ್ಸಾದ ಖಾಸಗಿ ಸುದ್ದಿ ವಾಹಿನಿಯೊಂದು ರಾಜ್ಯದ ಮೊದಲ ವರ್ಚ್ಯುವಲ್‌ ನ್ಯೂಸ್‌ ಪ್ರಸೆಂಟರ್‌ ಪರಿಚಯಿಸಿದೆ. ಆ ಸುದ್ದಿ ವಾಚಕಿ ಹೆಸರು ಲಿಸಾ. ಅವಳು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸೃಷ್ಟಿ. ಭುವನೇಶ್ವರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಲೀಸಾಳನ್ನು ಪರಿಚಯಿಸಲಾಗಿದೆ. ಇದರಿಂದ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುವ ಸಾಕಷ್ಟು ಆಂಕರ್‌ಗಳು ಆತಂಕಕ್ಕೆ ಈಡಾಗಿದ್ದಾರೆ. ತಮ್ಮಷ್ಟೇ ಸುಂದರ, ತಮಗಿಂತಲೂ ಸುಂದರವಾದ ಎಐ ಆಂಕರ್‌ಗಳು ಇನ್ನು ಮುಂದೆ ತಮ್ಮ ಸ್ಥಾನ ಕಿತ್ತುಕೊಳ್ಳಬಹುದೆಂದು ಭಯಪಡುತ್ತಿದ್ದಾರೆ.

ಹೇಗಿದ್ದಾಳೆ ಲಿಸಾ?

ಎಐ ಸುದ್ದಿ ನಿರೂಪಕಿಯೆಂದರೆ ಯಾವುದೋ ರೋಬೊವನ್ನು ಕಲ್ಪಿಸಿಕೊಳ್ಳಬೇಡಿ. ಈ ಲೀಸಾ ಒಡಿಸ್ಸದ ಕೈಮಗ್ಗ ಸಾರಿ ಉಟ್ಟುಕೊಂಡು ಥೇಟ್‌ ಸುಂದರ ಯುವತಿಯಂತೆಯೇ ಕಾಣಿಸುತ್ತಾಳೆ. ಈ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸಾಮರ್ಥ್ಯದ ನ್ಯೂಸ್‌ ಆಂಕರ್‌ ಒಡಿಯಾ ಮತ್ತು ಇಂಗ್ಲಿಷ್‌ ಭಾಷೆಯ್ಲಲಿ ಸುದ್ದಿ ನಿರೂಪಿಸುತ್ತಾಳೆ. ಒಟಿವಿ ನೆಟ್‌ವರ್ಕ್‌ನ ಟೆಲಿವಿಷನ್‌ ಮತ್ತು ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಈಕೆ ಸುದ್ದಿ ಓಡುತ್ತಾಳೆ.

"ಒಡಿಸ್ಸಾದ ಮೊದಲ ಎಐ ನ್ಯೂಸ್‌ ಆಂಕರ್‌ ಮೂಲಕ ನಾವು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ. ಪುನಾರವರ್ತಿತ ಕಾರ್ಯಗಳು ಮತ್ತು ದೊಡ್ಡ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಲು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಮಗೆ ನೆರವು ನೀಡಲಿದೆ" ಎಂದು ಒಟಿವಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಜಗಿ ಮಂಗತ್‌ ಪಾಂಡಾ ಹೇಳಿದ್ದಾರೆ.

ಆದರೆ, ಈ ಎಐ ಸುದ್ದಿ ನಿರೂಪಕಿಯರು ಮನುಷ್ಯರಂತೆ ಕಾರ್ಯನಿರ್ವಹಿಸಬಲ್ಲರೇ ಎಂಬ ಪ್ರಶ್ನೆ ಎಲ್ಲರಲ್ಲೂ ಇರಬಹುದು. ಈ ಕುರಿತು ಒಟಿವಿಯ ಡಿಜಿಟಲ್‌ ವ್ಯವಹಾರದ ಮುಖ್ಯಸ್ಥೆ ಲಿತಿಶಾ ಮಂಗತ್‌ ಪಾಂಡಾ ಹೇಳೋದು ಹೇಗೆ. "ಈ ಅದ್ಭುತ ತಂತ್ರಜ್ಞಾನವು ಮಾನವ ನಿರೂಪಕರಂತೆ ನಿರರ್ಗಳವಾಗಿ ಮಾತನಾಡುವುದು ಕಷ್ಟ. ಆದರೆ, ಗೂಗಲ್‌ ಅನುವಾದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡಬಲ್ಲರು. ಸುದ್ದಿಯನ್ನು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ಎಐಐ ಮತ್ತು ಎಎಲ್‌ಎಲ್‌ಎಂ ಶಕ್ತಿಯನ್ನು ಲಿಸಾ ಹೊಂದಿದ್ದಾಳೆ. ಅಲ್ಗಾರಿದಮ್‌ಗಳನ್ನು ವರ್ಚುವಲ್‌ ನಿರೂಪಕರ ಜತೆ ಸಂಯೋಜಿಸುವ ಮೂಲಕ ತಂತ್ರಜ್ಞಾನ ಮತ್ತು ಪತ್ರಿಕೋದ್ಯೋಮದ ಸಮ್ಮೀಳನವಾಗುವ ಗುರಿಯನ್ನು ಹೊಂದಿದ್ದಾರೆ" ಎಂದು ಅವರು ಹೇಳಿದ್ದಾರೆ.

ಈ ಹಿಂದಿನ ಎಐ ನ್ಯೂಸ್‌ ಆಂಕರ್‌ಗಳು

ಭಾರತಕ್ಕೆ ಇದೇ ಮೊದಲ ಬಾರಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನ್ಯೂಸ್‌ ಆಂಕರ್‌ ಪರಿಚಯಿಸಿರುವುದಲ್ಲ. ಮಾರ್ಚ್‌ ತಿಂಗಳಲ್ಲಿ ಇಂಡಿಯಾ ಟುಡೇಯ ಚೇರ್ಮನ್‌ ಕಾಲ್ಲಿ ಪುರೈ ಅವರು ಸನ ಹೆಸರಿನ ಮೊದಲ ನ್ಯೂಸ್‌ ಆಂಕರ್‌ಳನ್ನು ಪರಿಚಯಿಸಿದ್ದರು. ಅಜ್‌ ತಕ್‌ ಟೀವಿಗೆ ಈಕೆ ಆಂಕರ್‌ ಆಗಿದ್ದಳು. ನ್ಯೂಸ್‌ ಬ್ರಾಡ್‌ಕಾಸ್ಟಿಂಗ್‌ ಕ್ಷೇತ್ರಕ್ಕೆ ಕಂಪ್ಯೂಟರ್‌ ಸೃಷ್ಟಿಸಿದ ಅವತಾರಗಳು ಆಗಮಿಸುವ ಕುರಿತು ಆ ಸಮಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಕುವೈತ್‌ ನ್ಯೂಸ್‌ನ ಟ್ವಿಟ್ಟರ್‌ ಹ್ಯಾಂಡಲ್‌ಗಾಗಿ ಫೆದಾ ಹೆಸರಿನ ಎಐ ಆಂಕರ್‌ ಪರಿಚಯಿಸಲಾಗಿತ್ತು.

ಭಾರತದಲ್ಲಿ ಇಷ್ಟೆಲ್ಲ ಆಗುವಾಗ ಚೀನಾ ಇನ್ನಷ್ಟು ಮುಂದಕ್ಕೆ ಹೋಗಿದೆ. 2018ರಲ್ಲಿಯೇ ಜಗತ್ತಿನ ಮೊದಲ ಎಐ ಚಾಲಿತ ಸುದ್ದಿ ನಿರೂಪಕನನ್ನು ಚೀನಾ ಪರಿಚಯಿಸಿತ್ತು. ಚೀನಾದ ಕ್ಷಿನುಹಾ ನ್ಯೂಸ್‌ ಏಜೆನ್ಸಿ ಈ ರೀತಿಯ ತಂತ್ರಜ್ಞಾನ ಪರಿಚಯಿಸಿದ ಬಳಿಕ ಜಗತ್ತಿನ ವಿವಿಧೆಡೆ ಎಐ, ರೋಬೊ ಸುದ್ದಿ ಆಂಕರ್‌ಗಳ ಪ್ರವೇಶವಾಗಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.