ಎಐ ಇದ್ದರೆ ಸಾಕು, ಮನುಷ್ಯರು ಬೇಡ ಎನ್ನುವ ಕಂಪನಿಗಳಲ್ಲಿ ಬದಲಾಗಿವೆ ಉದ್ಯೋಗ ನೀತಿ, ಇಲ್ಲಿದೆ ಸೈಲೆಂಟ್ ಫೈರಿಂಗ್ ಮಾಹಿತಿ
ಉದ್ಯೋಗ ಕ್ಷೇತ್ರದ ಬಹುತೇಕ ವಿಭಾಗಗಳಲ್ಲೂ ಎಐ ಬಳಕೆ ಶುರುವಾಗಿದೆ. ಕೆಲವು ಉದ್ಯೋಗ ಹೊಣೆಗಾರಿಕೆಗಳನ್ನು ಪೂರ್ಣವಾಗಿ ಎಐಗೆ ವಹಿಸಲಾಗುತ್ತಿದೆ. ಬದಲಾದ ಸನ್ನಿವೇಶದಲ್ಲಿ ಎಐ ಇದ್ದರೆ ಸಾಕು, ಮನುಷ್ಯರು ಬೇಡ ಎನ್ನುವ ಕಂಪನಿಗಳು ತಮ್ಮ ಉದ್ಯೋಗ ನೀತಿ ಬದಲಾಯಿಸಿವೆ. ಇದರ ಪರಿಣಾಮದ ಕುರಿತ ಸಮೀಕ್ಷಾ ವರದಿಯ ವಿವರ ಇಲ್ಲಿದೆ.
ಬೆಂಗಳೂರು/ ನವದೆಹಲಿ: ಉದ್ಯೋಗ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಬಳಕೆ ಹೆಚ್ಚಾಗತೊಡಗಿದೆ. ಎಲ್ಲೆಲ್ಲಿ ಎಐ ಬಳಕೆ ಸೂಕ್ತ ಎನಿಸುವುದೋ ಅಲ್ಲಿ ಮನುಷ್ಯರ ಕೆಲಸ ಬೇಕಾಗಿರಲ್ಲ. ಅಂತಹ ಉದ್ಯೋಗಗಳಿಂದ ಮನುಷ್ಯರನ್ನು ಬಿಡಿಸುವುದಕ್ಕೆ ಕಂಪನಿಗಳು ತಮ್ಮ ಉದ್ಯೋಗ ನೀತಿಯನ್ನು ಬದಲಾಯಿಸತೊಡಗಿವೆ. ಇದನ್ನು ಕ್ವೈಟ್ ಕ್ವಿಟ್ಟಿಂಗ್ ಮತ್ತು ರೇಜ್ ಅಪ್ಲೈಯಿಂಗ್ ಮುಂತಾದ ಶಬ್ದಗಳಿಂದ ಕರೆಯಲಾಗುತ್ತಿದ್ದು, ಇದೀಗ ಎಲ್ಲದಕ್ಕೂ ಒಟ್ಟಾಗಿ ಸೈಲೆಂಟ್ ಫೈರಿಂಗ್ ಎಂದು ವ್ಯಾಖ್ಯಾನಿಸಲಾಗಿದೆ. ಸುಲಭವಾಗಿ ಹೇಳಬೇಕು ಎಂದರೆ ಇದು ಉದ್ಯೋಗಿಗಳು ತಾವಾಗಿಯೇ ಕೆಲಸ ಬಿಟ್ಟುಹೋಗುವಂತಹ ವಾತಾವರಣವನ್ನು ಸೃಷ್ಟಿಸುವುದು ಎಂಬರ್ಥದಲ್ಲಿ ಬಳಕೆಯಾಗಿದೆ. ಅಮೆರಿಕದಲ್ಲಿ ಇದು ಹೆಚ್ಚು ಚಾಲ್ತಿಯಲ್ಲಿದೆ. ಉದ್ಯೋಗದಾತರು ತಮ್ಮ ಉದ್ಯೋಗಿಗಳನ್ನು "ನಿಶ್ಯಬ್ದವಾಗಿ ತೊರೆಯಲು" ಬಿಡುವ ಬದಲು, ಉದ್ಯೋಗದ ಅವಶ್ಯಕತೆಗಳನ್ನು ತುಂಬಾ ಕಠಿಣವಾಗಿಸುವ ಮೂಲಕ ಅವರನ್ನು "ಅವರಾಗಿಯೇ ಕೆಲಸ ಬಿಡುವಂತೆ" ಮಾಡುವ ವಾತಾವರಣ ಸೃಷ್ಟಿಸುತ್ತಾರೆ. ಇದರಿಂದ ಉಂಟಾಗುವ ಒತ್ತಡದ ಕಾರಣ ಕಾರ್ಮಿಕರು ಅವರಾಗಿಯೇ ಉದ್ಯೋಗ ಬಿಡುತ್ತಾರೆ. ಅವರು ಬಿಟ್ಟ ಕೂಡಲೇ ಆ ಸ್ಥಾನವನ್ನು ಕೃತಕ ಬುದ್ಧಿಮತ್ತೆಯಿಂದ ಭರ್ತಿಮಾಡಿಕೊಳ್ಳಲಾಗುತ್ತಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಏನಿದು ಸೈಲೆಂಟ್ ಫೈರಿಂಗ್
ಪ್ರಾಸ್ಪೆರೊ.ಎಐ (Prospero.Ai) ಕಂಪನಿ ಸಿಇಒ ಜಾರ್ಜ್ ಕೈಲಾಸ್ ಹೇಳುವ ಪ್ರಕಾರ, ಅಮೆಜಾನ್ ಕಂಪನಿಯಲ್ಲಿ ಈ ಸೈಲೆಂಟ್ ಫೈರಿಂಗ್ ಟ್ರೆಂಡ್ ಚಾಲ್ತಿಯಲ್ಲಿದೆ. ಹೆಚ್ಚಿನ ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಬೇಕು ಎಂಬ ನೀತಿಗೆ ವಿರುದ್ಧವಾಗಿದ್ದರೂ ಅಮೆಜಾನ್ ಕಂಪನಿ ತನ್ನ ನೌಕರರನ್ನು ವಾರದಲ್ಲಿ ಐದು ದಿನ ಕಚೇರಿಗೆ ಬರುವಂತೆ ಒತ್ತಾಯಿಸುತ್ತಿದೆ. ಪರಿಣಾಮ, 73 ಪ್ರತಿಶತದಷ್ಟು ಕೆಲಸಗಾರರು ತಮ್ಮ ಉದ್ಯೋಗ ತೊರೆಯಲು ಯೋಚಿಸಿದ್ದಾರೆ. ಅದೇ ರೀತಿ ಮನೆಯಿಂದಲೇ ಮಾಡುವ ಕೆಲಸದ ವಿಧಾನವು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂಬುದನ್ನೂ ಸಮೀಕ್ಷಾ ವರದಿ ವಿವರಿಸಿದೆ.
ಆದರೆ ಅಮೆಜಾನ್‌ನಂತಹ ಕಂಪನಿಗಳು ತಮ್ಮ ನೀತಿಗಳನ್ನು ಬದಲಾವಣೆ ಮಾಡಿ ಜಾರಿಗೊಳಿಸುವ ಮೂಲಕ "ಸೈಲೆಂಟ್ ಫೈರಿಂಗ್" ಶುರುಮಾಡಿವೆ. ಇಂತಹ ಅತಿರೇಕದ ಕ್ರಮಗಳು ಎಐ ಅನ್ವಯಿಸುವಿಕೆ ಅಥವಾ ಬಳಕೆಯನ್ನು ಹೆಚ್ಚಿಸುವುದಕ್ಕೆ ಇರುವ ತಂತ್ರ ಎಂದು ಕೈಲಾಸ್ ಹೇಳಿದರು.
ನಿಜವಾಗಿಯೂ ಕೆಲಸಗಾರರ ಸ್ಥಾನವನ್ನು ಎಐ ತುಂಬಬಲ್ಲದೇ?
ಮುಂದಿನ 10 ವರ್ಷಗಳಲ್ಲಿ ಕೇವಲ 5 ಪ್ರತಿಶತದಷ್ಟು ಉದ್ಯೋಗಗಳನ್ನು ಮಾತ್ರ ಎಐ ಮೂಲಕ ಬದಲಾಯಿಸಬಹುದು ಅಥವಾ ಸಹಾಯ ಮಾಡಬಹುದು ಎಂದು ಅರ್ಥಶಾಸ್ತ್ರಜ್ಞ ಮತ್ತು ಎಂಐಟಿ ಪ್ರೊಫೆಸರ್ ಡರೋನ್ ಅಸೆಮೊಗ್ಲು ಹೇಳಿದ್ದಾರೆ.
"ಇಂತಹ ಬದಲಾವಣೆಗೆ ಬಹಳಷ್ಟು ಹಣ ವ್ಯರ್ಥವಾಗಲಿದೆ. ಇದರ ಮೂಲಕ ಶೇಕಡಾ 5 ರಷ್ಟು ಕೂಡ ಆರ್ಥಿಕ ಕ್ರಾಂತಿ ಆಗುವುದಿಲ್ಲ. ಕಾರ್ಮಿಕರು ಬಹಳ ವಿಶ್ವಾಸದಿಂದ ಮತ್ತು ನಿಷ್ಠೆಯಿಂದ ಮಾಡುತ್ತಿದ್ದ ಕೆಲಸಗಳಿಗೆ ಸಾಮರ್ಥ್ಯ, ತಿಳಿವಳಿಕೆಗಳ ಅಗತ್ಯ ಇದೆ. ತಂತ್ರಜ್ಞಾನ ಅಷ್ಟು ಮುಂದುವರಿಯಲು ಸದ್ಯ ಕಾಲಘಟ್ಟದಲ್ಲಂತೂ ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.
ಹೊಸ ತಲೆಮಾರಿನ ಉದ್ಯೋಗಿಗಳು ವಿಶೇಷವಾಗಿ ಜೆನ್ ಝೆಡ್ ಉದ್ಯೋಗಿಗಳು ಕೆಲಸ ಮತ್ತು ಜೀವನದ ಸಮತೋಲನ ಕಳೆದುಕೊಳ್ಳುವುದರ ಜೊತೆಗೆ, ಆದಾಯದ ಅಸಮಾನತೆಯನ್ನೂ ಅನುಭವಿಸಲಿದ್ದಾರೆ ಎಂದು ಅವರು ವಿವರಿಸಿದರು.
ಇನ್ನೊಂದು ಗಮನಿಸಬೇಕಾದ ವಿದ್ಯಮಾನ "ಗ್ರೇಟ್ ಡಿಟ್ಯಾಚ್ಮೆಂಟ್" ಎಂಬ ಹೆಸರಿನ ಉದ್ಯೋಗ ಪ್ರವೃತ್ತಿ. ಇದು ಉದ್ಯೋಗಿಗಳ ಪಾಲ್ಗೊಳ್ಳುವಿಕೆ ಕಡಿಮೆಯಾಗುವುದು ಮತ್ತು ಕೆಲಸದ ಮೇಲೆ ಅಸಮಾಧಾನ ಹೆಚ್ಚಾಗುವ ಪ್ರವೃತ್ತಿಯನ್ನು ಬಿಂಬಿಸುತ್ತದೆ. ಸಮೀಕ್ಷಾ ವರದಿ ಪ್ರಕಾರ, ಜೆನ್ ಝೆಡ್‌ನ ಉದ್ಯೋಗಿಗಳ ಪಾಲ್ಗೊಳ್ಳುವಿಕೆ ಶೇಕಡ 5 ಕುಸಿತ ಕಂಡಿದೆ. ಅದೇ ರೀತಿ, 10 ಉದ್ಯೋಗಿಗಳಿದ್ದರೆ ಅವರ ಪೈಕಿ ಮೂವರು ಸಕ್ರಿಯರಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.