ಬೆಂಗಳೂರು ಕೂಡ್ಲು ಬಳಿ ರಸ್ತೆ ದೌರ್ಜನ್ಯ, ಕಾರು ಪ್ರಯಾಣಿಕರನ್ನು ಬೆದರಿಸಿದ ಪುಂಡರು, ಮೂಕರಂತಿದ್ದ ಪೊಲೀಸರು; ಎಕ್ಸ್‌ನಲ್ಲಿ ಅಸಮಾಧಾನ
ಬೆಂಗಳೂರಿನ ಕೂಡ್ಲು ಪ್ರದೇಶದಲ್ಲಿ ರಸ್ತೆ ದೌರ್ಜನ್ಯ ನಡೆದಿದೆ. ಕಾರು ಪ್ರಯಾಣಿಕರನ್ನು ಪುಂಡರು ಬೆದರಿಸುವಾಗ ಪೊಲೀಸರು ಮೂಕರಂತಿದ್ದರು. ಈ ಬಗ್ಗೆ ಬೆಂಗಳೂರಿಗರೊಬ್ಬರು ಎಕ್ಸ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ವಿವರ ಇಲ್ಲಿದೆ.
ಬೆಂಗಳೂರು: ನಗರದ ಕೂಡ್ಲು ಪ್ರದೇಶದ ಜನನಿಬಿಡ ರಸ್ತೆಯಲ್ಲಿ ತಮ್ಮ ಕಾರಿನ ಮೇಲೆ ಜನರ ಗುಂಪೊಂದು ದಾಳಿ ನಡೆಸಿದೆ ಎಂದು ಬೆಂಗಳೂರಿನ ನಿವಾಸಿಯೊಬ್ಬರು ನೋವಿನ ಅನುಭವವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ವಿವರಿಸಿದ್ದಾರೆ. ವಿಡಿಯೋವನ್ನೂ ಶೇರ್ ಮಾಡಿದ್ದಾರೆ. ದೇವನ್ ಮೆಹ್ತಾ ಎಂಬುವವರು ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡಿದ್ದು, ದಾಳಿ ನಡೆಸಿದವರು ನಿಂದಿಸುವ ಮತ್ತು ಪ್ರಯಾಣಿಕರನ್ನು ಬೆದರಿಸುತ್ತಿರುವುದು ಕಂಡುಬಂದಿದೆ. ಮೆಹ್ತಾ ಅವರ ಕಾರಿನ ಗಾಜುಗಳನ್ನು ಒಡೆದು ಹಾಕಿದ ದಾಳಿಕೋರರು, ಕಲ್ಲುಗಳನ್ನು ಎಸೆದರು. ಒಬ್ಬ ಮಹಿಳೆ ಮತ್ತು ಪ್ರಯಾಣಿಕರಿಗೆ ಬೆದರಿಕೆ ಹಾಕಿದರು. ಇದೇ ವೇಳೆ, ಸಂಚಾರ ಪೊಲೀಸ್ ಸಿಬ್ಬಂದಿ ಅಲ್ಲಿದ್ದರೂ ಅವರನ್ನು ಅಲ್ಲಿಂದ ದೂರ ಮಾಡುವ ಪ್ರಯತ್ನ ಮಾಡಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಪೊಲೀಸರು, ಹೆಚ್ಚಿನ ಮಾಹಿತಿಯನ್ನು ಅವರ ಸಂಪರ್ಕ ವಿವರವನ್ನು ನೇರ ಸಂದೇಶದ ಮೂಲಕ ಒದಗಿಸುವಂತೆ ಮನವಿ ಮಾಡಿರುವುದು ಕಂಡುಬಂದಿದೆ. ಆದಾಗ್ಯೂ, ಸುರಕ್ಷತೆಯ ಕಾರಣಗಳನ್ನು ಉಲ್ಲೇಖಿಸಿ ಮೆಹ್ತಾ ನಿರಾಕರಿಸಿದರು. " ಆದ್ದರಿಂದ ನಾವು ಉತ್ತಮ ಪೊಲೀಸ್ ಮತ್ತು ಸುರಕ್ಷತಾ ಸೇವೆಗಳನ್ನು ಹೊಂದುವವರೆಗೆ ಹೆಚ್ಚಿನ ಜನರು ಬೀದಿಗಳಲ್ಲಿ ಜಾಗರೂಕರಾಗಿರಲು ಮತ್ತು ಜಾಗರೂಕರಾಗಿರಲು ನಾನು ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ" ಅವರು ಬರೆದಿದ್ದಾರೆ.
ದೇವನ್ ಮೆಹ್ತಾ ಅವರ ಟ್ವೀಟ್ ಇಲ್ಲಿದೆ
ಈ ವಿಡಿಯೋ 42,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ನೂರಾರು ಲೈಕ್ಸ್ ಮತ್ತು ರೀಶೇರ್ ಆಗಿದೆ.
ಜನರ ಪ್ರತಿಕ್ರಿಯೆ ಹೀಗಿದೆ
ಮೆಹ್ತಾ ಅವರ ಪೋಸ್ಟ್ ಹೆಚ್ಚಿನವ ಗಮನಸೆಳೆದಿದ್ದು, ಬಹುತೇಕರು ಪೊಲೀಸ್ ಮೇಲೆ ವಿಶ್ವಾಸದ ಕೊರತೆ, ಕಾನೂನು ಉಲ್ಲಂಘನೆ ಹೆಚ್ಚಳದ ಬಗ್ಗೆ ಹತಾಶೆ ವ್ಯಕ್ತಪಡಿಸಿರುವುದು ಕಂಡುಬಂದಿದೆ.
“ ಪ್ರಸ್ತುತ ಪೊಲೀಸರ ಮೇಲೆ ವಿಶ್ವಾಸ ತಗ್ಗಿದೆ. ಹೆಚ್ಚಿನವರು ಹಫ್ತಾ ವಸೂಲಿಯಿಂದ ಬದುಕುತ್ತಾರೆ ಮತ್ತು ಅಪರಾಧಿಗಳಿಗೆ ಜನರ ಮಾಹಿತಿಯನ್ನು ಸೋರಿಕೆ ಮಾಡುತ್ತಾರೆ. ಅವರೊಂದಿಗೆ ವಿವರಗಳನ್ನು ಹಂಚಿಕೊಂಡರೆ ಯಾರಾದರೂ ಸುರಕ್ಷಿತವಾಗಿರುತ್ತಾರಾ?" ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.
ಇನ್ನೊಬ್ಬ ಬಳಕೆದಾರರು, “ಈ ಸಮಸ್ಯೆಗಳು ದಿನನಿತ್ಯದ ವಿಷಯವಾಗುತ್ತಿವೆ. ದಯವಿಟ್ಟು ಬೆಂಗಳೂರು ಕಾನೂನು ಬಾಹಿರ ಸ್ಥಳವಾಗಲು ಬಿಡಬೇಡಿ.” ಎಂದು ಮನವಿ ಮಾಡಿದ್ದಾರೆ.
ನಗರದಲ್ಲಿ ಅಪರಾಧ ಕೃತ್ಯಗಳನ್ನು ನಿಭಾಯಿಸಲು ಪೊಲೀಸರ ಸನ್ನದ್ಧತೆಯನ್ನೂ ನಾಗರಿಕರು ಪ್ರಶ್ನಿಸುತ್ತಿದ್ದಾರೆ. "ಬೆಂಗಳೂರಿನಲ್ಲಿ ಇದು ನಡೆಯುತ್ತಿದೆ ಎಂದು ತೋರುತ್ತದೆ. ಈ ದರೋಡೆಕೋರರನ್ನು ಹಿಡಿಯಲು ನಿಮ್ಮ ಬಳಿ ಸಾಕಷ್ಟು ವ್ಯವಸ್ಥೆ ಇಲ್ಲವೇ? ಎಂದು ಒಬ್ಬ ಬಳಕೆದಾರ ಕೇಳಿದ್ದಾರೆ. ಬೆಳೆಯುತ್ತಿರುವ ಅಭದ್ರತೆಯ ಭಾವವನ್ನು ಈ ಮೂಲಕ ಪ್ರತಿಬಿಂಬಿಸಿದರು.
ಕಸವನಹಳ್ಳಿಯಲ್ಲಿ ಪುಂಡರ ರಸ್ತೆ ದೌರ್ಜನ್ಯ; 5 ವರ್ಷದ ಬಾಲಕನಿಗೆ ಗಾಯ
ಇತ್ತೀಚೆಗೆ ಅಕ್ಟೋಬರ್ 30ಕ್ಕೆ ಬೆಂಗಳೂರಿನ ಕಸವನಹಳ್ಳಿಯಲ್ಲಿ ಪುಂಡರ ರಸ್ತೆ ದೌರ್ಜನ್ಯ ಪ್ರಕರಣದಲ್ಲಿ 5 ವರ್ಷದ ಬಾಲಕನಿಗೆ ಗಾಯವಾಗಿತ್ತು. ಪುಂಡರು ಕಾರಿನ ಮೇಲೆ ಕಲ್ಲೆಸೆದ ಕಾರಣ ಬಾಲಕ ಗಾಯಗೊಂಡಿದ್ದ. ಸಂತ್ರಸ್ತರು ಅಕ್ಟೋಬರ್ 31 ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ಈ ದಾಳಿ ನಡೆಸಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಈ ವಿಷಯವನ್ನು ಸಂತ್ರಸ್ತ ಅನೂಪ್ ಜಾರ್ಜ್, ಎಕ್ಸ್ ಖಾತೆಯಲ್ಲಿ ಬಹಿರಂಗಪಡಿಸಿದ್ದರು. ಸಂಬಂಧಪಟ್ಟ ವಿಡಿಯೋವನ್ನೂ ಶೇರ್ ಮಾಡಿದ್ದರು. ಬಂಧಿತನನ್ನು ಚೂಡ ಸಂದ್ರದ ನಿವಾಸಿ ಕೃಷ್ಣಮೂರ್ತಿ (24) ಎಂದು ಗುರುತಿಸಲಾಗಿದೆ. ಅನೂಪ್ ಜಾರ್ಜ್ ದಂಪತಿ ಕಾರಿನಲ್ಲಿ ಹೋಗುವಾಗ ಬೆಳ್ಳಂದೂರು ಸಮೀಪ ಒಂದು ಕಡೆ ಆರೋಪಿಗಳ ದ್ವಿಚಕ್ರ ವಾಹನಕ್ಕೆ ಕಾರು ತಾಗಿಸಿಕೊಂಡು ಹೋಗಿದ್ದರು. ಈ ಘಟನೆಯಿಂದ ಆಕ್ರೋಶಿತರಾಗಿದ್ದಾಗಿ ಆರೋಪಿ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.