Viral News: ಪ್ರಕರಣದಿಂದ ಹೆಸರು ಕೈ ಬಿಡಲು ಆಲೂಗಡ್ಡೆ ಲಂಚ ಪಡೆದ ಪೊಲೀಸ್‌ ಅಧಿಕಾರಿ ಸಸ್ಪೆಂಡ್‌ !
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral News: ಪ್ರಕರಣದಿಂದ ಹೆಸರು ಕೈ ಬಿಡಲು ಆಲೂಗಡ್ಡೆ ಲಂಚ ಪಡೆದ ಪೊಲೀಸ್‌ ಅಧಿಕಾರಿ ಸಸ್ಪೆಂಡ್‌ !

Viral News: ಪ್ರಕರಣದಿಂದ ಹೆಸರು ಕೈ ಬಿಡಲು ಆಲೂಗಡ್ಡೆ ಲಂಚ ಪಡೆದ ಪೊಲೀಸ್‌ ಅಧಿಕಾರಿ ಸಸ್ಪೆಂಡ್‌ !

SI Suspended ವ್ಯಕ್ತಿಯೊಬ್ಬರ ಪ್ರಕರಣ ಸೆಟ್ಲ್‌ ಮಾಡಲು ಆಲೂಗಡ್ಡೆ ಲಂಚ ಪಡೆದ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಅಮಾನಾತದ ಎಸ್‌ಐ ಆರ್‌ ಕೆ ಸಿಂಗ್‌
ಅಮಾನಾತದ ಎಸ್‌ಐ ಆರ್‌ ಕೆ ಸಿಂಗ್‌

ಲಕ್ನೋ: ಅಧಿಕಾರಿಗಳು ಹಣವನ್ನೋ ಆಭರಣವನ್ನೋ ಲಂಚ ಪಡೆದು ಸಿಕ್ಕಿ ಹಾಕಿಕೊಂಡ ಉದಾಹರಣೆಗಳಿಗೆ. ಇಲ್ಲೊಬ್ಬ ಪೊಲೀಸ್‌ ಅಧಿಕಾರಿ ಪ್ರಕರಣವೊಂದರಿಂದ ವ್ಯಕ್ತಿಯನ್ನು ಪಾರು ಮಾಡಲು ಆಲೂಗಡ್ಡೆಯನ್ನು ಲಂಚವಾಗಿ ಪಡೆದುಕೊಂಡು ಅಮಾನತುಗೊಂಡಿದ್ದಾರೆ. ಅದೂ ಮೂರು ಕೆಜಿ ಆಲೂಗಡ್ಡೆಗಾಗಿ ಈಗಿರುವ ಹುದ್ದೆಯನ್ನೇ ಕಳೆದುಕೊಳ್ಳುವ ಸ್ಥಿತಿಯೂ ಎದುರಾಗಿದೆ. ಇದು ನಡೆದಿರುವುದು ಉತ್ತರ ಪ್ರದೇಶ ರಾಜ್ಯದಲ್ಲಿ. ಆಲೂಗಡ್ಡೆಯನ್ನು ನೀಡುವಂತೆ ವ್ಯಕ್ತಿಗೆ ಕೋರಿಕೆ ಸಲ್ಲಿಸಿದ ಆಡಿಯೋ ವೈರಲ್‌ ಆಗುತ್ತಿದ್ದಂತೆ ಪೊಲೀಸ್‌ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಪೊಲೀಸ್‌ ಕೆಳ ಹಂತದ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆಯೂ ಆದೇಶಿಸಿದ್ದಾರೆ.

ಇವರ ಹೆಸರು ರಾಮಕೃಪಾಲ್‌ ಸಿಂಗ್‌. ಉತ್ತರ ಪ್ರದೇಶದ ಕನ್ನೌಜ್‌ ಜಿಲ್ಲೆಯ ಭಾವಲ್‌ ಪುರ ಚಪುನ್ನಾ ಚೌಕಿ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌. ಕೆಲ ವರ್ಷದಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ಆದರೆ ಯಾವುದೇ ಸಾಕ್ಷ್ಯಗಳು ಇರಲಿಲ್ಲ. ಆರ್‌ಕೆ ಸಿಂಗ್‌ ಈ ಬಾರಿ ಠಾಣೆಯ ವ್ಯಕ್ತಿಯೊಬ್ಬರ ಮೇಲೆ ದಾಖಲಾಗಿದ್ದ ಪ್ರಕರಣದ ವಿಚಾರದಲ್ಲಿ ಲಂಚ ಪಡೆಯಲು ಮುಂದಾದರು. ಆತನೊಂದಿಗೆ ದೂರವಾಣಿಯಲ್ಲೇ ಮಾತುಕತೆ ನಡೆಸಿದ್ದರು. ನಿನ್ನನ್ನು ಪ್ರಕರಣದಿಂದ ಹೊರಗಿಡಲು ಐದು ಕೆಜಿ ಆಲೂಗಡ್ಡೆಯನ್ನು ತಂದುಕೊಡು. ನಿನ್ನ ಕೇಸ್‌ ಸೆಟ್ಲ್‌ ಮಾಡುವೆ ಎಂದು ಹೇಳಿದ್ದರು. ಆದರೆ ವ್ಯಕ್ತಿ ನನಗೆ ಎರಡು ಕೆಜಿ ಆಲೂಗಡ್ಡೆ ಮಾತ್ರ ಕೊಡಿಸಲು ಸಾಧ್ಯ ಎಂದು ಅಲವತ್ತುಕೊಂಡಿದ್ದರು. ಆದರೆ ಪೊಲೀಸ್‌ ಅಧಿಕಾರಿ ಕೊನೆಗೆ ಮೂರು ಕೆಜಿ ತಂದುಕೊಡು ಎಂದು ತಾಕೀತು ಮಾಡಿದ್ದರು. ಇದಕ್ಕೆ ವ್ಯಕ್ತಿಗೂ ಹೀನಾಯಮಾನವಾಗಿ ಬೈದಿದ್ದರು ಕೂಡ. ಇದನ್ನು ವ್ಯಕ್ತಿ ರೆಕಾರ್ಡ್‌ ಮಾಡಿಕೊಂಡಿದ್ದ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದ. ಅಲ್ಲದೇ ಈ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಕೂಡ ಆಗಿತ್ತು.

ಇದು ಉತ್ತರ ಪ್ರದೇಶದ ಹಿರಿಯ ಪೊಲೀಸ್‌ ಅಧಿಕಾರಿಗಳ ಗಮನಕ್ಕೂ ಬಂದಿತ್ತು. ಮಾಹಿತಿ ಕಲೆ ಹಾಕಿದ ಕನೌಜ್‌ ಎಸ್ಪಿ ಅಮಿತ್‌ ಕುಮಾರ್‌ ಆನಂದ್‌ ಅವರು ವರದಿ ಪಡೆದು ಆರ್‌ ಕೆ ಸಿಂಗ್‌ ಅವರನ್ನು ಅಮಾನತುಗೊಳಿಸಿದ್ದರು. ಎಕ್ಸ್‌ ಖಾತೆಯಲ್ಲಿ ಆರ್‌ ಕೆ ಸಿಂಗ್‌ ಅಮಾನತುಗೊಳಿಸಿರುವುದನ್ನೂ ಎಸ್ಪಿ ದೃಢಪಡಿಸಿದ್ದರು.

ಆರ್‌ಕೆಸಿಂಗ್‌ ಅವರು ಆಲೂಗಡ್ಡೆ ಲಂಚ ಕೇಳಿರುವುದು ಅವರದ್ದೇ ಮಾತುಗಳಲ್ಲಿ ಖಚಿತವಾಗಿದೆ. ಮೇಲ್ನೋಟಕ್ಕೆ ಇದು ಅಪರಾಧವೇ. ಪೊಲೀಸ್‌ ಅಧಿಕಾರಿ ಕೂಡ ಈ ನಿಟ್ಟಿನಲ್ಲಿ ವರದಿ ನೀಡಿದ್ದಾರೆ. ಇದನ್ನಾಧರಿಸಿ ಕ್ರಮ ವಹಿಸಿ ಅಮಾನತುಗೊಳಿಸಲಾಗಿದೆ. ಈ ಕುರಿತು ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಕನೌಜ್‌ ನಗರ ಇನ್ಸ್‌ ಪೆಕ್ಟರ್‌ ಕಮ್ಲೇಶ್‌ ಕುಮಾರ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.