ಬಾಬಾ ಸಿದ್ದಿಕ್ಗೆ ಆದ ಗತಿಯೇ ನಿನಗೂ..; ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಜೀವ ಬೆದರಿಕೆ ಹಾಕಿದ್ದ ಫಾತಿಮಾ ಖಾನ್ ಯಾರು?
Fatima Khan: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ 24 ವರ್ಷದ ಫಾತಿಮಾ ಖಾನ್ ಎಂಬಾಕೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಂಬೈ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಫಾತಿಮಾ ಖಾನ್ (Who is Fatima Khan) ಎಂಬಾಕೆಯನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ನಂಬರ್ಗೆ ಶನಿವಾರ (ನವೆಂಬರ್ 2) ಅಪರಿಚಿತ ನಂಬರ್ನಿಂದ ಸಂದೇಶ ಬಂದಿದೆ. ಯೋಗಿ ಆದಿತ್ಯನಾಥ್ ಅವರು 10 ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ (Baba Siddique) ಅವರಂತೆ ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದಿಕ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಫಾತಿಮಾ ಖಾನ್ ಸಂದೇಶವನ್ನು ಕಳುಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಮುಂಬೈ ಭಯೋತ್ಪಾದನಾ ನಿಗ್ರಹ ದಳ (ATS) ಉಲ್ಲಾಸ್ನಗರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಮಹಿಳೆಯನ್ನು ಪತ್ತೆ ಹಚ್ಚಿ ಬಂಧಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹಾಗಾದರೆ ಮುಖ್ಯಮಂತ್ರಿಯನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆ ಫಾತಿಮಾ ಖಾನ್ ಯಾರು? ಇಲ್ಲಿದೆ ವಿವರ.
ಫಾತಿಮಾ ಖಾನ್ ಯಾರು?
24 ವರ್ಷದ ಫಾತಿಮಾ ಖಾನ್ ತನ್ನ ಕುಟುಂಬ ಸದಸ್ಯರೊಂದಿಗೆ ನೆರೆಯ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆಕೆಯ ತಂದೆ ಮರದ ವ್ಯಾಪಾರಿ. ಖಾನ್ ಮಾಹಿತಿ ತಂತ್ರಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ (ಬಿಎಸ್ಸಿ) ಪದವಿ ಪಡೆದಿದ್ದಾರೆ. ಆದರೆ ಈಕೆ ಮಾನಸಿಕವಾಗಿ ಅಸ್ಥಿರಳಾಗಿದ್ದಾಳೆ" ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆ ಸಂದೇಶದ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ಯೋಗಿ ಆದಿತ್ಯನಾಥ್ ಅವರು ನವೆಂಬರ್ 20ರ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಮಹಾರಾಷ್ಟ್ರಕ್ಕೆ (Maharashtra Assembly Polls) ಭೇಟಿ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬೆದರಿಕೆ ಸಂದೇಶ ಬಂದಿರುವುದು ಆತಂಕ ಸೃಷ್ಟಿಸಿದೆ.
ಪಪ್ಪು ಯಾದವ್ಗೆ ಬೆದರಿಕೆ
ಬಾಬಾ ಸಿದ್ದಿಕ್ ಅವರನ್ನು ಅಕ್ಟೋಬರ್ 12 ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ವತಂತ್ರ ಸಂಸದ ರಾಜೇಶ್ ರಂಜನ್ (ಪಪ್ಪು ಯಾದವ್) ಅವರಿಗೆ ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಅವರ ಸಹವರ್ತಿ ಎಂದು ವ್ಯಕ್ತಿಯೊಬ್ಬರಿಂದ ಕೊಲೆ ಬೆದರಿಕೆ ಬಂದಿತ್ತು. ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಅವರ ಸಹವರ್ತಿ ಎಂದು ವ್ಯಕ್ತಿಯೊಬ್ಬರು ಸಂಸದ ರಾಜೇಶ್ ರಂಜನ್ (ಪಪ್ಪು ಯಾದವ್) ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ಬೆದರಿಕೆ ಹಾಕಿದ್ದವನನ್ನು ಬಿಹಾರ ಪೊಲೀಸರು ದೆಹಲಿಯ ವ್ಯಕ್ತಿಯನ್ನು ಬಂಧಿಸಿದ್ದಾರೆ.