ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸದ್ದಿಲ್ಲದೆ ಆವರಿಸುತ್ತಿದೆ ವಿಶ್ವಯುದ್ಧದ ಕಾರ್ಮೋಡ, ಜಗತ್ತಿನೆಲ್ಲೆಡೆ ತಲ್ಲಣಿಸುತ್ತಿದೆ ಜನಸಾಮಾನ್ಯರ ಬದುಕು -ರಂಗ ನೋಟ ಅಂಕಣ

ಸದ್ದಿಲ್ಲದೆ ಆವರಿಸುತ್ತಿದೆ ವಿಶ್ವಯುದ್ಧದ ಕಾರ್ಮೋಡ, ಜಗತ್ತಿನೆಲ್ಲೆಡೆ ತಲ್ಲಣಿಸುತ್ತಿದೆ ಜನಸಾಮಾನ್ಯರ ಬದುಕು -ರಂಗ ನೋಟ ಅಂಕಣ

ರಂಗಸ್ವಾಮಿ ಮೂಕನಹಳ್ಳಿ: ಚೀನಾ ಹುಚ್ಚುಚ್ಚಾಗಿ ಬಂಗಾರ ಶೇಖರಣೆಗೆ ತೊಡಗಿದೆ. ಭಾರತ ಕೂಡ ಈ ರೇಸ್‌ನಲ್ಲಿ ಹಿಂದೆ ಬಿದ್ದಿಲ್ಲ. ಬಂಗಾರಕ್ಕೆ ಹೆಚ್ಚು ಮಹತ್ವ ಬರುವುದು, ಬೆಲೆಯೇರಿಕೆ ಆಗುವುದು ಯುದ್ಧದ ಸಮಯದಲ್ಲಿ ಮತ್ತು ಅಸ್ಥಿರತೆಯಲ್ಲಿ. ಈ ಸಲದ ಬೇಡಿಕೆಗೆ ಕಾರಣ ಏನಿರಬಹುದು?

ಸ್ಪೇನ್ ದೇಶದ ಮಾಲ್‌ನಲ್ಲಿ ಅಸಹಾಯಕರಾಗಿ ಕುಳಿತಿರುವ ಹಿರಿಯ ನಾಗರಿಕರು.
ಸ್ಪೇನ್ ದೇಶದ ಮಾಲ್‌ನಲ್ಲಿ ಅಸಹಾಯಕರಾಗಿ ಕುಳಿತಿರುವ ಹಿರಿಯ ನಾಗರಿಕರು. (ಚಿತ್ರ: ರಂಗಸ್ವಾಮಿ ಮೂಕನಹಳ್ಳಿ)

ಯುದ್ಧ ಯಾರಿಗೆ ಬೇಕು ಹೇಳಿ? ಹೌದು ಯುದ್ಧ ಜಗತ್ತಿನಲ್ಲಿ ಶೇ 99.99 ಪ್ರತಿಶತ ಜನರಿಗೆ ಬೇಡದ ವಿಷಯ. ಆದರೆ ಆ ಉಳಿದ ಶೇ .001 ಪ್ರತಿಶತ ಜನರಿದ್ದಾರಲ್ಲಾ ಅವರು ಮಹತ್ವಕಾಂಕ್ಷಿಗಳು. ಜಗತ್ತನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಹಂಬಲದವರು. ಅವರ ವಿಷಯವನ್ನು ಬದಿಗಿಟ್ಟು ನೋಡಿದರೆ ಜಗತ್ತಿನ ಉಳಿದೆಲ್ಲಾ ಜನರ ಭಾವನೆ ಮುಕ್ಕಾಲು ಪಾಲು ಒಂದೇ ಇದೆ. ಅವರಿಗೆ ಬೇಕಿರುವುದು ಒಂದು ಶಾಂತಿಯುತ, ಉತ್ತಮ ಗುಣಮಟ್ಟದ ಜೀವನ. ಯುದ್ಧದ ಸಮಯದಲ್ಲಿ ಮಾತ್ರ ಜನರ ಜೀವನ ಅಸ್ತವ್ಯಸ್ತವಾಗುತ್ತದೆ ಎಂದು ನೀವೆಂದುಕೊಂಡಿದ್ದರೆ ಅದು ಪೂರ್ಣಸತ್ಯವಲ್ಲ. ಮುಂದುವರಿದ ದೇಶಗಳಲ್ಲಿ ಎಲ್ಲಕ್ಕೂ ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ. ಹೀಗಾಗಿ ಜಗತ್ತಿನಲ್ಲಿ ಆಗುವ ಸಣ್ಣಪುಟ್ಟ ವ್ಯತ್ಯಾಸಗಳು ಜನಸಾಮಾನ್ಯನ ಬದುಕಿಗೆ ಹೆಚ್ಚಿನ ಹೊಡೆತವನ್ನು ನೀಡುತ್ತದೆ. ಬಹುಪಾಲು ಜನರಿಗೆ ಯೂರೋಪ್ ಎಂದರೆ ಅದೊಂದು ಸ್ವರ್ಗ ಎನ್ನುವ ಭಾವನೆಯಿದೆ, ಅದು ನಿಜವೂ ಹೌದು. ಯಾವಾಗ ಎಂದರೆ ಜೇಬಿನ ತುಂಬ ಹಣವನ್ನು ತುಂಬಿಕೊಂಡು ಪ್ರವಾಸಿಗರಾಗಿ ಹೋದಾಗ ಅದು ನಿಜಕ್ಕೂ ಸ್ವರ್ಗದಂತೆ ಕಂಡರೆ ಮತ್ತು ಪ್ರವಾಸಿಗರು ಅದನ್ನ ನಿಜವೆಂದು ನಂಬಿದರೆ ಅದರಲ್ಲಿ ಅವರ ತಪ್ಪು ಹೆಚ್ಚೇನೂ ಇಲ್ಲ ಎನ್ನಬಹುದು.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ವಾಸ್ತವವಾಗಿ ಯೂರೋಪಿನಲ್ಲಿ ಹಿರಿಯ ನಾಗರಿಕರ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ. ಸಾಮಾನ್ಯ ಪಿಂಚಣಿದಾರನಿಗೆ ಸಿಗುವ ಪಿಂಚಣಿ ಹೊಟ್ಟೆಗಾದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ ಎನ್ನುವಂತಿದೆ. ಬಾರ್ಸಿಲೋನಾ ಮಹಾನಗರದ ಕಸದಬುಟ್ಟಿಯಲ್ಲಿ ಅವರಿವರು ಎಸೆದಿರುವ ಆಹಾರವನ್ನು ಹೆಕ್ಕುವ ಬಹಳಷ್ಟು ಹಿರಿಯ ನಾಗರಿಕರನ್ನ ಕಂಡ ಅನುಭವ ನನ್ನದು. ಈ ರೀತಿಯ ಬಡತನ ಅನುಭವಿಸುತ್ತಿರುವ ಜನರ ಸಂಖ್ಯೆ ಒಂದೆಡೆಯಾದರೆ, ಹೊಟ್ಟೆಬಟ್ಟೆಗೆ ಅಷ್ಟೊಂದು ತತ್ವಾರವಿಲ್ಲದ ಇನ್ನೊಂದು ವರ್ಗವಿದೆ. ಆದರೆ ಈ ವರ್ಗದ ಬಡತನವನ್ನು ನೀವು ಚಳಿಗಾಲದಲ್ಲಿ ಕಾಣಬಹುದು.

ಕರೆಂಟ್ ಬಿಲ್ ಹೆಚ್ಚಾದರೆ ಹೊಟ್ಟೆಗೇನು ಮಾಡೋದು

ಅಂದರೆ ಗಮನಿಸಿ; ಚಳಿಗಾಲದಲ್ಲಿ ಪೂರ್ಣ ದಿನ ಮನೆಯಲ್ಲಿ ಉಳಿದುಕೊಂಡರೆ ಚಳಿ ತಡೆಯಲಾಗದೆ ಹೀಟರ್ ಹಾಕಬೇಕಾಗುತ್ತದೆ. ರಾತ್ರಿ ಬೇರೆ ದಾರಿಯಿಲ್ಲ. ಆದರೆ ಹಗಲಿನಲ್ಲಿಯೂ ಕೂಡ ಹೀಟರ್ ಹಾಕಿದರೆ 300 ರಿಂದ 350 ಯುರೋ ಎಲೆಕ್ಟ್ರಿಸಿಟಿ ಬಿಲ್ ಮಾಸಿಕ ಬರುವುದು ಗ್ಯಾರಂಟಿ. ಹೆಚ್ಚಿನ ಸಂಬಳಕ್ಕೆ ಕೆಲಸ ಮಾಡದ ಅತಿ ಸಾಧಾರಣ ವ್ಯಕ್ತಿಗೆ ಬರುವ ಮಾಸಿಕ ಪಿಂಚಣಿ (ಪೆನ್ಷನ್) 450 ರಿಂದ 600 ಯೂರೋ ಮಾತ್ರ. ಇದರಲ್ಲಿ 350 ಯೂರೋ ಎಲೆಕ್ಟ್ರಿಸಿಟಿ ಬಿಲ್ ಕಟ್ಟಿದರೆ ತಿನ್ನುವುದೇನು? ಬೇರೆ ಖರ್ಚುಗಳ ಬಾಬ್ತು ನಿಭಾಯಿಸುವುದು ಹೇಗೆ? ಹೀಗಾಗಿ ಇಲ್ಲಿನ (ಸ್ಪೇನ್‌ ದೇಶದ) ಹಿರಿಯ ನಾಗರಿಕರು ಒಂದು ವಿಧಾನ ಕಂಡುಕೊಂಡಿದ್ದಾರೆ.

ನೀವು ಯಾವುದೇ ದೊಡ್ಡ ಮಾಲ್‌ಗಳಿಗೆ ಹೋದರೂ ಅಲ್ಲೆಲ್ಲಾ ನಿಧಾನವಾಗಿ ಅತ್ತಿತ್ತ ಸುತ್ತಾಡುವ ಹಿರಿಯ ನಾಗರಿಕರ ದಂಡು ಕಾಣಬಹುದು. ಹೇಗಾದರೂ ಮಾಡಿ ದಿನದಲ್ಲಿನ ಎಂಟ್ಹತ್ತು ಗಂಟೆ ಹೊರಗಡೆ ಕಳೆಯಬೇಕು ಎನ್ನುವ ದರ್ದಿಗೆ ಇವರು ಬಿದ್ದಿರುತ್ತಾರೆ. ಹೀಗೆ ಅಚ್ಚುಕಟ್ಟಾಗಿ ಸೂಟ್‌ನಲ್ಲಿ ಓಡಾಡುವ ಹಿರಿಯ ನಾಗರಿಕರ ಹಿಂದೆ ಇರುವ ಈ ಕರಾಳ ಬಡತನದ ಛಾಯೆ ಹೊರಗಿನವರಿಗೆ ತಿಳಿಯುವುದಿಲ್ಲ. ಖುಷಿಗೆ ಒಂದೆರೆಡು ದಿನ ಮಾಲ್‌ನಲ್ಲಿ ಸುತ್ತಾಡುವುದಕ್ಕೂ ವರ್ಷದ 8 ತಿಂಗಳು ಕಾಡುವ ಚಳಿಯಿಂದ ಬಚಾವಾಗುವ ಕಾರಣಕ್ಕೆ ಮಾಲ್‌ನಲ್ಲಿ ಸುತ್ತಾಡುವುದಕ್ಕೂ ಬಹಳ ವ್ಯತ್ಯಾಸವಿದೆ.

ಐರೋಪ್ಯ ದೇಶಗಳಲ್ಲಿ ರಸ್ತೆ ಬದಿ ಕಂಡುಬರುವ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ.
ಐರೋಪ್ಯ ದೇಶಗಳಲ್ಲಿ ರಸ್ತೆ ಬದಿ ಕಂಡುಬರುವ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ. (ಚಿತ್ರ: ರಂಗಸ್ವಾಮಿ ಮೂಕನಹಳ್ಳಿ)

ದಕ್ಷಿಣ ಭಾರತವೇ ಬೆಸ್ಟ್

ಯುದ್ಧದ ವಿಷಯ ಹೇಳುತ್ತಾ ಇದೇನಿದು ಬಾರ್ಸಿಲೋನಾ ದಲ್ಲಿನ ಹಿರಿಯ ನಾಗರಿಕರ ವಿದ್ಯುಚ್ಚಕ್ತಿ ವಿಚಾರ, ಬಡತನದ ಬಗ್ಗೆ ಹೇಳಲು ಕಾರಣವಿದೆ. ಮೇಲೆ ಹೇಳಿದ ಸ್ಥಿತಿ ಸಾಮಾನ್ಯ ದಿನಗಳದ್ದು ಯುದ್ಧದ ಸಮಯದಲ್ಲಿ ಬೆಲೆ ಏರಿಕೆಯಾಗುತ್ತದೆ. ಜಗತ್ತಿನಾದ್ಯಂತ ಸಾಮಾನ್ಯ ಜನರ ಬದುಕು ಬಹಳ ಕಷ್ಟವಾಗುತ್ತದೆ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಹವಾಮಾನ ಬದುಕಿಗೆ ಬಹಳ ಪೂರಕವಾಗಿದೆ. ಹೀಗಾಗಿ ವರ್ಷದ ಹನ್ನೆರೆಡೂ ತಿಂಗಳು ನಾವು ಬೀದಿಗಳಲ್ಲಿ ಬೀಡುಬೀಸಾಗಿ ಓಡಾಡಿಕೊಂಡಿರಬಹುದು. ರಾಗಿಮುದ್ದೆ , ಗೊಜ್ಜು ತಿಂದು ದಿನ ಕಳೆದುಬಿಡಬಹುದು. ಇಲ್ಲಿ ಕಾಸ್ಟ್ ಆಫ್ ಲಿವಿಂಗ್ ಅಂದರೆ ಬದುಕಲು ಬೇಕಾಗುವ ಹಣ ಬಹಳ ಕಡಿಮೆ. ಯೂರೋಪಿನಲ್ಲಿ ಹೊಟ್ಟೆಗೆ ಊಟವಿಲ್ಲದಿದ್ದರೂ ಬಟ್ಟೆಯ ಮೇಲೆ ಸೆಂಟ್ ಸಿಂಪಡಿಸುವುದು ಮಾತ್ರ ತಪ್ಪಿಸುವಂತಿಲ್ಲ.

ರಷ್ಯಾ ತೈಲ ಕೊಡದಿದ್ದರೆ ಅರ್ಧ ಯೂರೋಪು ಚಳಿಯಲ್ಲಿ ಸಾಯುತ್ತೆ

ನನಗಿನ್ನೂ ಚೆನ್ನಾಗಿ ನೆನಪಿದೆ 2014 ರ ಫೆಬ್ರುವರಿಯಲ್ಲಿ ರಷ್ಯಾ ದೇಶವು ಉಕ್ರೇನ್ ದೇಶದ ಕ್ರಿಮಿಯಾ ಎನ್ನುವ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಅಂದಿಗೆ ಇದು ಬಹುದೊಡ್ಡ ಅಂತಾರಾಷ್ಟ್ರೀಯ ಸುದ್ದಿಯಾಗಲಿಲ್ಲ. ಅಂದರೆ ಇಂದಿನ ಮಟ್ಟದ ಸುದ್ದಿಯಾಗಲಿಲ್ಲ, ಮಾರ್ಚ್ ತಿಂಗಳಲ್ಲಿ ಅದನ್ನು ರಷ್ಯಾ ತನ್ನ ಭಾಗವನ್ನಾಗಿಯೂ ಮಾಡಿಕೊಂಡಿರು. ನಿಮಗೆಲ್ಲಾ ಗೊತ್ತಿರಲಿ ರಷ್ಯಾದ ಮೂಲಕ ಬರುವ ತೈಲ ಮತ್ತು ಅನಿಲ (ಆಯಿಲ್ ಅಂಡ್ ಗ್ಯಾಸ್) ನಾಲ್ಕು ದಿನ ಬರದೇ ನಿಂತು ಹೋದರೆ ಅರ್ಧ ಯೂರೋಪು ಚಳಿಯಲ್ಲಿ ಸತ್ತು ಹೋಗುತ್ತದೆ.

ಯೂರೋಪಿನ ಸಾಮಾನ್ಯರಲ್ಲಿ ಸಾಮಾನ್ಯ ಜೀವನ ನಡೆಸಲು ಕೂಡ ಹೆಚ್ಚಿನ ಹಣದ ಅವಶ್ಯಕತೆಯಿದೆ. ಕಾಸ್ಟ್ ಆಫ್ ಲಿವಿಂಗ್ ಬಹಳ ಹೆಚ್ಚು. ಸಾಮಾನ್ಯನ ಬದುಕು ಕೂಡ ಇಲ್ಲಿ ದುಬಾರಿ. ಅಂದಿನ ದಿನಗಳಲ್ಲಿ ಉಂಟಾದ ಅವ್ಯವಸ್ಥೆ ಯೂರೋಪಿನ ಜನರ ಬದುಕನ್ನು ಎಷ್ಟರಮಟ್ಟಿಗೆ ತಲ್ಲಣಕ್ಕೆ ತಳ್ಳಿತ್ತು ಎನ್ನುವುದನ್ನ ಪ್ರತ್ಯಕ್ಷ ಕಂಡ ಅನುಭವ ಇನ್ನೂ ಮಸ್ತಕದಲ್ಲಿ ಹಾಗೆ ಇದೆ. ಈಗ ಇನ್ನೊಂದು ಯುದ್ಧದ ಸನ್ನಿವೇಶದಲ್ಲಿ ನಾವಿದ್ದೇವೆ. ಯಾರೋ ಒಂದಿಬ್ಬರು ತೆಗೆದುಕೊಳ್ಳುವ ನಿರ್ಧಾರಕ್ಕೆ ಜಗತ್ತಿನ ಬಹಳಷ್ಟು ಮಂದಿಯ ಜೀವನ, ಬದುಕುವ ರೀತಿ ಬದಲಾಗುವುದು ಮಾತ್ರ ಸಹಿಸಿಕೊಳ್ಳುವುದು ಕಷ್ಟ.

ಬಂಗಾರದ ಓಟ ಶುಭ ಶಕುನವಲ್ಲ

ಇರಾನ್-ಇಸ್ರೇಲ್ ಯುದ್ಧ ಶುರುವಾಗಿದೆ. ಉಕ್ರೇನ್-ರಷ್ಯಾ ಯುದ್ಧ ಇನ್ನೂ ನಿಂತಿಲ್ಲ. ಈ ಮಧ್ಯೆ ಚೀನಾ ಹುಚ್ಚುಚ್ಚಾಗಿ ಬಂಗಾರ ಶೇಖರಣೆಗೆ ತೊಡಗಿದೆ. ಭಾರತ ಕೂಡ ಈ ರೇಸ್‌ನಲ್ಲಿ ಹಿಂದೆ ಬಿದ್ದಿಲ್ಲ. ಬಂಗಾರಕ್ಕೆ ಹೆಚ್ಚು ಮಹತ್ವ ಬರುವುದು, ಬೆಲೆಯೇರಿಕೆ ಆಗುವುದು ಯುದ್ಧದ ಸಮಯದಲ್ಲಿ ಮತ್ತು ಅಸ್ಥಿರತೆಯಲ್ಲಿ. ಬಂಗಾರಕ್ಕೆ ಏರುತ್ತಿರುವ ಬೇಡಿಕೆಯು (ಡಿಮ್ಯಾಂಡ್) ನನ್ನ ಮೂಗಿಗಿಂತೂ ಕೆಟ್ಟ ವಾಸನೆ ಎನಿಸುತ್ತಿದೆ! ಇದು ಮೂರನೇ ವಿಶ್ವಯುದ್ಧಕ್ಕೆ ವೇದಿಕೆ ಸಜ್ಜಾಗುತ್ತಿರುವ ಮುನ್ಸೂಚನೆ ಇರಬಹುದೇ?

(ಬರಹ: ರಂಗಸ್ವಾಮಿ ಮೂಕನಹಳ್ಳಿ)

ಮೊಬೈಲ್ ಗೀಳು ಒಳ್ಳೆಯದಲ್ಲ: ರಂಗ ನೋಟ ಅಂಕಣ
ಮೊಬೈಲ್ ಗೀಳು ಒಳ್ಳೆಯದಲ್ಲ: ರಂಗ ನೋಟ ಅಂಕಣ (Rangaswamy Mookanahalli)

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

(This copy first appeared in Hindustan Times Kannada website. To read more on International relations, world affairs please visit kannada.hindustantimes.com )

IPL_Entry_Point