Binge Eating: ನಮ್ಮ ಆರೋಗ್ಯಕ್ಕೆ ತಿನ್ನುವ ಚಪಲವೇ ದೊಡ್ಡ ಶತ್ರು; ಡಯಟ್‌, ವರ್ಕೌಟ್‌ ಬಗ್ಗೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿ ಕಿವಿಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  Binge Eating: ನಮ್ಮ ಆರೋಗ್ಯಕ್ಕೆ ತಿನ್ನುವ ಚಪಲವೇ ದೊಡ್ಡ ಶತ್ರು; ಡಯಟ್‌, ವರ್ಕೌಟ್‌ ಬಗ್ಗೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿ ಕಿವಿಮಾತು

Binge Eating: ನಮ್ಮ ಆರೋಗ್ಯಕ್ಕೆ ತಿನ್ನುವ ಚಪಲವೇ ದೊಡ್ಡ ಶತ್ರು; ಡಯಟ್‌, ವರ್ಕೌಟ್‌ ಬಗ್ಗೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿ ಕಿವಿಮಾತು

Binge Eating: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಅನ್ನೋದು ತಿಳಿದಿದ್ದರೂ ನಿರ್ಲಕ್ಷ್ಯದಿಂದಲೇ ಸಮಸ್ಯೆಗಳನ್ನು ತಂದುಕೊಳ್ಳುತ್ತೇವೆ. ಅದರಲ್ಲಿ ತಿನ್ನುವ ಚಪಲ ಕೂಡಾ ಒಂದು. ನಾಲಗೆ ಕೇಳಿದ್ದನ್ನೆಲ್ಲಾ ತಿನ್ನುತ್ತಾ ಹೋದರೆ ನಂತರ ಅನುಭವಿಸುವವರು ನಾವೇ. ಇದಕ್ಕೆ ಸಂಬಂಧಿಸಿದಂತೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಡಯಟ್‌, ವರ್ಕೌಟ್‌ ಬಗ್ಗೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿ ಕಿವಿಮಾತು
ಡಯಟ್‌, ವರ್ಕೌಟ್‌ ಬಗ್ಗೆ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿ ಕಿವಿಮಾತು (PC: Rangaswamy Mookanahalli, Unsplash)

Binge Eating: ಹೊಸ ವರ್ಷ ಬಂತು, ಸಾಮಾನ್ಯವಾಗಿ ಹೊಸ ವರ್ಷದ ರೆಸ್ಯುಲೂಷನ್‌ ಹೆಸರಿನಲ್ಲಿ ನಾವೆಲ್ಲರೂ ನಾನಾ ಪಟ್ಟಿಗಳನ್ನು ಸಿದ್ಧಪಡಿಸುತ್ತೇವೆ. ಅದರಲ್ಲಿ ಆರಂಭಿಸುವುದು, ಮುಂದುವರೆಸುವುದು ಒಂದನ್ನೋ, ಎರಡನ್ನೋ. ಹಾಗೇ 100 ಜನರಲ್ಲಿ ತಾವು ಹಾಕಿದ ರೆಸ್ಯುಲೂಷನ್‌ ಶುರು ಮಾಡುವವರು ಕೂಡಾ ಶೇ.10ರಷ್ಟು ಜನರು ಮಾತ್ರ.

ಬಹುತೇಕ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತೂಕದ ಸಮಸ್ಯೆ ಪ್ರಮುಖವಾದುದು. ಕಣ್ಣಿಗೆ ಕಂಡಿದ್ದು, ಇಷ್ಟವಾಗಿದ್ದನ್ನೆಲ್ಲಾ ತಿಂದು ದಪ್ಪ ಆಗೋದು ಬಹಳ ಸುಲಭದ ಮಾತು. ಆದರೆ ಸಣ್ಣ ಆಗುವುದು ಅಷ್ಟು ಸುಲಭ ಅಲ್ಲ. ಮೊದಲ ದಿನ ಡಯಟ್‌, ವರ್ಕೌಟ್‌ ಶುರು ಮಾಡಿ ಅದನ್ನು ಮುಗಿಸುವುದು ದೊಡ್ಡ ಚಾಲೆಂಜ್‌, ಹಾಗೇ 2-3 ದಿನಗಳು ಕಳೆಯುವಷ್ಟರಲ್ಲಿ ಸಾಕಪ್ಪಾ ಈ ಡಯಟ್‌ ಎನಿಸುತ್ತದೆ. ಬಹಳಷ್ಟು ಜನರಿಗೆ ಬಾಯಿ ಕಟ್ಟಲು ಸಾಧ್ಯವಾಗುವುದಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ಸಾಹಿತಿ ರಂಗಸ್ವಾಮಿ ಮೂಕನಹಳ್ಳಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಜನರಿಗೆ ಒಂದಿಷ್ಟು ಸಲಹೆ ನೀಡಿದ್ದಾರೆ.

ರೆಸ್ಟಿಂಗ್ ಎನರ್ಜಿ ಅಂದ್ರೇನು?

ಜಗತ್ತಿನಾದ್ಯಂತ ಸಣ್ಣಗಿರುವವರನ್ನ ದಪ್ಪ ಮಾಡುವುದು ಮತ್ತು ದಪ್ಪಗಿರುವವರನ್ನ ಸಣ್ಣ ಮಾಡುವ ಬಿಸಿನೆಸ್ ಸಾವಿರಾರು ಕೋಟಿ ರೂಪಾಯಿ ಮೀರಿಸುತ್ತೆ. ಸರಳ ಸತ್ಯವೇನೆಂದರೆ ನಾವೆಷ್ಟು ಶಕ್ತಿ ಸಂಗ್ರಹಿಸುತ್ತೇವೆ (ಕ್ಯಾಲೋರಿ ಎಂದು ಓದಿಕೊಳ್ಳಿ ) ಅಷ್ಟನ್ನ ಖರ್ಚು ಮಾಡಿಬಿಡಬೇಕು. ಇಲ್ಲದಿದ್ದರೆ ಅದು ಸಹಜವಾಗಿ ಹೊಟ್ಟೆ , ಪಕ್ಕೆ ಮತ್ತು ತೊಡೆಯ ಭಾಗದಲ್ಲಿ ಸಂಗ್ರಹವಾಗಲು ಶುರುವಾಗುತ್ತದೆ.

ಉದಾಹರಣೆಗೆ ನೀವು 2500 ಕ್ಯಾಲೋರಿ ಊಟವನ್ನ ದಿನದಲ್ಲಿ ಸೇವಿಸಿದ್ದೀರಿ ಎಂದುಕೊಳ್ಳಿ ಅಷ್ಟನ್ನೂ ಖರ್ಚು ಮಾಡಿದರೆ ಅದು ಮೈಂಟೆನನ್ಸ್ ಲೆಕ್ಕದಲ್ಲಿ ಬರುತ್ತದೆ. 2600 ಖರ್ಚು ಮಾಡಿದರೆ ಆಗ ನೀವು ಸ್ವಲ್ಪ ತಿಂಗಳುಗಳಲ್ಲಿ ಒಂದಷ್ಟು ಸಪೂರವಾಗುತ್ತೀರಿ , ಇದಕ್ಕೆ ವಿರುದ್ಧವಾಗಿ 2300/2200 ಕ್ಯಾಲೋರಿ ವ್ಯಯಿಸಿದರೆ ಆಗ ಅದು ದಪ್ಪವಾಗಲು ಸಹಕರಿಸುತ್ತದೆ. ನೀವೇನೇ ಮಾಡಿ ಅಥವಾ ಬಿಡಿ ಅಂದರೆ ಸುಮ್ಮನೆ ಕುಳಿತಿದ್ದರೂ , ನಿಂತಿದ್ದರೂ , ಮಲಗಿದ್ದರೂ , ಮಾತನಾಡುತ್ತಿದ್ದರೂ ಒಂದಷ್ಟು ಕ್ಯಾಲೋರಿ ಖರ್ಚಾಗುತ್ತದೆ. ಹೀಗೆ ಖರ್ಚಾಗುವ ಕ್ಯಾಲೋರಿಯನ್ನ ರೆಸ್ಟಿಂಗ್ ಎನರ್ಜಿ ಎನ್ನಲಾಗುತ್ತದೆ. 24 ಗಂಟೆಗಳ ಒಂದು ದಿನದಲ್ಲಿ ಸರಾಗವಾಗಿ ಗಂಡಸರು 1800/2000 ಕ್ಯಾಲೋರಿಯನ್ನ ರೆಸ್ಟಿಂಗ್ ಎನರ್ಜಿ ಮೂಲಕ ಖರ್ಚು ಮಾಡುತ್ತಾರೆ. ಹೆಂಗಸರಿಗೆ 1500/1800 ಖರ್ಚಾಗುತ್ತದೆ. ಇದು ವಯಸ್ಸು ಮತ್ತು ದೇಹದ ತೂಕದ ಮೇಲೂ ಅವಲಂಬಿತವಾಗಿರುತ್ತದೆ.

ತಿನ್ನುವ ಚಪಲವೇ ಆರೋಗ್ಯದ ಶತ್ರು

ಉಳಿದಂತೆ ನಿತ್ಯದ ವ್ಯಾಯಾಮ , ನಡಿಗೆ ಇತ್ಯಾದಿ ಆಕ್ಟಿವಿಟಿ ಮೂಲಕ ಕಳೆಯುವ ಎನರ್ಜಿಯದ್ದು ಬೇರೆ ಲೆಕ್ಕಾಚಾರ. ಹೈ ಆಕ್ಟಿವ್ ಆಗಿರುವ ನನ್ನಂತಹವರಿಗೆ 430 ಕ್ಯಾಲೋರಿ ನಿತ್ಯ ಆಕ್ಟಿವ್ ಎನರ್ಜಿ ಸುಟ್ಟರೆ ಸಾಕು. ಆದರೆ ನಾನು ನಿತ್ಯವೂ 550 ರಿಂದ 600 ಕ್ಯಾಲೋರಿ ಬರ್ನ್ ಮಾಡುತ್ತಿದ್ದೇನೆ. ಹೀಗಾಗಿ ನಾನು ನಿತ್ಯವೂ 2500 ಕ್ಯಾಲೋರಿ ಡಯಟ್ ಚಾರ್ಟ್ ಫಾಲೋ ಮಾಡಿದರೆ ಸಾಕು. ಈ 2500 ಕ್ಯಾಲೋರಿ ಕೂಡಾ ಎಲ್ಲಿಂದ ಬಂತು ಅಂದರೆ ಏನನ್ನ ತಿಂದು ಬಂದಿತು ಎನ್ನುವುದು ಅತಿ ಮುಖ್ಯ. ಕಾಳು , ಬೇಳೆ , ಲೀನ್ ಮೀಟ್, ಮೊಟ್ಟೆ , ಹಣ್ಣು ಮತ್ತು ತರಕಾರಿಯಿಂದ ಬರುವ ಶಕ್ತಿ ಉತ್ತಮವಾದದ್ದು. ಸಕ್ಕರೆ , ಕರಿದ ಪದಾರ್ಥ , ಪ್ರೋಸೆಸ್ಡ್ ಫುಡ್‌ಗಳಿಂದ ಸಿಗುವ ಕ್ಯಾಲೋರಿ ಒಳ್ಳೆಯದಲ್ಲ. ಅದು ಶಕ್ತಿ ನೀಡುವುದಕ್ಕಿಂತ ಸುಸ್ತು ಮಾಡುತ್ತವೆ .

ಮೀನು ಮೊಟ್ಟೆ , ಮಾಂಸ ತಿನ್ನದ ನನ್ನಂತವರು ಮೊಳಕೆ ಕಟ್ಟಿದ ಕಾಳುಗಳು ಮತ್ತು ಸೋಯಾ ಬಳಕೆಯಿಂದ ಪ್ರೊಟೀನ್ ಕೊರತೆಯನ್ನ ತುಂಬಿಕೊಳ್ಳಬಹುದು, ಆದರೆ ನೆನಪಿರಲಿ ಪ್ಲಾಂಟ್ ಬೇಸ್ಡ್ ಪ್ರೊಟೀನ್, ದೇಹದಲ್ಲಿ ಸಂಗ್ರಹವಾಗುವುದಿಲ್ಲ , ಹೀಗಾಗಿ ನಿತ್ಯವೂ ನಿಯಮಿತವಾಗಿ ಇವುಗಳನ್ನ ಸೇವಿಸದೆ ಬೇರೆ ದಾರಿಯಿಲ್ಲ. ಒಟ್ಟಿನಲ್ಲಿ ಸ್ವಲ್ಪ ಮಟ್ಟಿನ ಆಹಾರದ ಬಗ್ಗೆಯ ತಿಳುವಳಿಕೆ ನಮ್ಮ ದೇಹವನ್ನ ಸುಸ್ಥಿಯಲ್ಲಿಡಲು ಸಹಕಾರಿ. ನೆನಪಿರಲಿ ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಜೀವಿಸಲು ಸಾಧ್ಯ. ಆರೋಗ್ಯವಂತ ದೇಹದಲ್ಲಿ ಜೀವಿಸುವದಕ್ಕಿಂತ ಖುಷಿ ಬೇರೊಂದಿಲ್ಲ.

ನಮ್ಮ ಆರೋಗ್ಯದ ಅತಿ ದೊಡ್ಡ ಶತ್ರು, ನಮ್ಮ ತಿನ್ನುವ ಚಪಲ. ಅದನ್ನು ಬಿಡಲು ಅಚಲ ಮನಸ್ಸು ಬೇಕು. ಒಂದು ವಾರ ಮನಸ್ಸನ್ನು ಕಂಟ್ರೋಲ್ ಮಾಡಿದರೆ ಸಾಕು ಎಂಟನೇ ದಿನದಿಂದ ಅದೇ ಬದುಕಾಗುತ್ತದೆ. ವಿಷಯ ಏನಪ್ಪಾ ಅಂದ್ರೆ ಮನಸ್ಸು ಮಾಡಬೇಕು ಅಷ್ಟೇ ಎಂದು ರಂಗಸ್ವಾಮಿ ಮೂಕನಹಳ್ಳಿ ಬರೆದುಕೊಂಡಿದ್ದಾರೆ.

ಜನರು ಪ್ರತಿಕ್ರಿಯಿಸಿದ್ದು ಹೀಗೆ

1. ನಮ್ಮ ದೇಹ, ನಮ್ಮ ಆಹಾರದ ಕುರಿತು ನಮಗೆ ಅರಿವಿರಬೇಕು ಎನ್ನುವ ವಿಷಯ ನೂರಕ್ಕೆ ನೂರು ಸತ್ಯ. ಜೊತೆಗೆ ನಮ್ಮ ನಾಲಗೆ ಚಪಲದ ಮೇಲೆ, ತಿನ್ನುವುದರ ಮೇಲೆ ಹಿಡಿತ ಇರಬೇಕು ಎನ್ನುವುದಂತೂ ಇನ್ನೂರು ಪರ್ಸೆಂಟ್ ನಿಜ. ಆದರೆ ಕೆಲವು ವಿಷಯದ ಬಗ್ಗೆ ನನ್ನ ಅಭಿಪ್ರಾಯ ಬೇರೆ ಇದೆ. ಸ್ವಾಸ್ಥ್ಯ multidimensional ವಿಷಯ. ಹಾಗಾಗಿ ಕ್ಯಾಲರಿ ಲೆಕ್ಕಾಚಾರವಷ್ಟೇ ಸಾಕಾಗುವುದಿಲ್ಲ. ಹಾಗೂ ಕೂಡಿ ಕಳೆಯುವ ಈ ಲೆಕ್ಕಾಚಾರ weight management ನಲ್ಲಿ ಹೆಚ್ಚು ಪರಿಣಾಮಕಾರಿ ಆಗುವುದಿಲ್ಲ. 2. ಸರ್ ನಾನು ಡೆಲಿವರಿ ಸಮಯದಲ್ಲಿ ಡಾಕ್ಟರ್ ಹತ್ತಿರ ಹೋಗಿದ್ದು ಈಗ ನನಗೆ 37 ವರ್ಷ ಇವತ್ತಿನವರೆಗೂ ಒಂದೇ ಒಂದು ದಿನ ಕೂಡ ಡಾಕ್ಟರ್ ಹತ್ತಿರ ಹೋಗಿ 1 ರೂಪಾಯಿ ಕೂಡಾ ಖರ್ಚು ಮಾಡಿಲ್ಲ. ನನಗೆ ಗ್ಯಾಸ್ಟ್ರಿಕ್‌, ತಲೆನೋವು, ಬಾಡಿ ಪೇಯ್ನ್‌, ಯಾವತ್ತೂ ನೋಡಿಲ್ಲ ಮತ್ತೆ ನಾನು ಯಾವತ್ತೂ ಉಪವಾಸ ಮಾಡಲ್ಲ, ನನಗೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ ಬೇಕೆ ಬೇಕು, ಮದ್ಯಾಹ್ನ ಊಟ ಜಾಸ್ತಿ ಮಾಡಿದಿನಿ ಅನಿಸಿದರೆ ರಾತ್ರಿ ಹಣ್ಣುಗಳನ್ನ ತಿನ್ನುತ್ತಿನಿ ಎಂದು ಜನರು ರಂಗಸ್ವಾಮಿ ಮೂಕನಹಳ್ಳಿ ಹಂಚಿಕೊಂಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

Whats_app_banner