ಬದುಕು ಗಣಿತ, ಸಮಸ್ಯೆ ಅಗಣಿತ; ಎಲ್ಲರೂ ಓಡುತ್ತಿದ್ದೇವೆ, ಎಲ್ಲಿಗೆ ಎಂದು ಕೇಳಿಕೊಳ್ಳುವ ವ್ಯವಧಾನವೇ ಇಲ್ಲ- ರಂಗನೋಟ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಬದುಕು ಗಣಿತ, ಸಮಸ್ಯೆ ಅಗಣಿತ; ಎಲ್ಲರೂ ಓಡುತ್ತಿದ್ದೇವೆ, ಎಲ್ಲಿಗೆ ಎಂದು ಕೇಳಿಕೊಳ್ಳುವ ವ್ಯವಧಾನವೇ ಇಲ್ಲ- ರಂಗನೋಟ ಅಂಕಣ

ಬದುಕು ಗಣಿತ, ಸಮಸ್ಯೆ ಅಗಣಿತ; ಎಲ್ಲರೂ ಓಡುತ್ತಿದ್ದೇವೆ, ಎಲ್ಲಿಗೆ ಎಂದು ಕೇಳಿಕೊಳ್ಳುವ ವ್ಯವಧಾನವೇ ಇಲ್ಲ- ರಂಗನೋಟ ಅಂಕಣ

ರಂಗಸ್ವಾಮಿ ಮೂಕನಹಳ್ಳಿ: ಈಗ ಚುನಾವಣೆ ಸಮಯ ಬೇರೆ. ಸಂಖ್ಯೆಗಳು ಇನ್ನಷ್ಟು ಮಹತ್ವದ ಪಾತ್ರ ವಹಿಸುತ್ತವೆ. ಈ ಸಂಖ್ಯೆಗಳನ್ನು ಸರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯವುಳ್ಳವರು ಜಯಗಳಿಸುತ್ತಾರೆ.

ಮಾಹಿತಿ ಮತ್ತು ಗಣಿತ, ಸಮಸ್ಯೆ ಅಗಣಿತ. (ರಂಗಸ್ವಾಮಿ ಮೂಕನಹಳ್ಳಿ ಅವರ 'ರಂಗ' ನೋಟ ಅಂಕಣ)
ಮಾಹಿತಿ ಮತ್ತು ಗಣಿತ, ಸಮಸ್ಯೆ ಅಗಣಿತ. (ರಂಗಸ್ವಾಮಿ ಮೂಕನಹಳ್ಳಿ ಅವರ 'ರಂಗ' ನೋಟ ಅಂಕಣ)

ರಂಗ ನೋಟ ಅಂಕಣ: ಒಮ್ಮೆ ಹಾಗೆಯೇ ಗಮನಿಸಿ ನೋಡಿ ಬದುಕಿನಲ್ಲಿ ಸಂಖ್ಯೆಗಳದ್ದೇ ಸಾಮ್ರಾಜ್ಯ. ವ್ಯಕ್ತಿ ಎಷ್ಟೇ ಶ್ರೀಮಂತನಿರಲಿ ಅಥವಾ ಬಡವನಿರಲಿ ಎಲ್ಲರ ಬದುಕಿನಲ್ಲೂ ಸಂಖ್ಯೆ ಮಾತ್ರ ಇದ್ದೆ ಇರುತ್ತದೆ. ಸಂಖ್ಯೆಗಳಿಲ್ಲದ ಬದುಕನ್ನು ಇಂದಿಗೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ವ್ಯಕ್ತಿ ಹುಟ್ಟಿದ ದಿನದಿಂದ ಶುರುವಾಗುವ ಈ ಸಂಖ್ಯೆಗಳ ಆಟ ನಿಲ್ಲುವುದು ಕೂಡ ಸಂಖ್ಯೆಯೊಂದಿಗೆ. ಸಂಖ್ಯೆ ಅಥವಾ ನಂಬರ್ಸ್ ಬದುಕಿನ ಅತಿ ಮುಖ್ಯ ಭಾಗ. ಕೆಲವೊಮ್ಮೆ ನಾವು ಅದರ ಬಗ್ಗೆ ಮಾತನಾಡದೆ ಇದ್ದರೂ ಅದು ನಮ್ಮ ಜೀವನದಲ್ಲಿ ಮಾತ್ರ ಇದ್ದೇ ಇರುತ್ತದೆ. ಮಕ್ಕಳಿದ್ದಾಗ ಶಾಲೆಯಲ್ಲಿ ತೆಗೆಯುವ ಅಂಕ ಮುಖ್ಯವಾದರೆ, ಯೌವ್ವನದಲ್ಲಿ ಗಳಿಸುವ ಆದಾಯ, ಮಧ್ಯ ವಯಸ್ಸಿನಲ್ಲಿ ಬಿಪಿ ಶುಗರ್ ಸಂಖ್ಯೆ, ಮುಪ್ಪು ಆವರಿಸಲು ಆರಂಭಿಸಿದಂತೆ ತಿನ್ನುವ ಗುಳಿಗೆಗಳ ಲೆಕ್ಕ; ಒಟ್ಟಿನಲ್ಲಿ ಬದುಕೆಂದರೆ ಅದೊಂದು ಗಣಿತ. ಎಲ್ಲವೂ ಸಂಖ್ಯಾಶಾಸ್ತ್ರ!

ಈಗ ಚುನಾವಣೆ ಸಮಯ ಬೇರೆ. ಸಂಖ್ಯೆಗಳು ಇನ್ನಷ್ಟು ಮಹತ್ವದ ಪಾತ್ರ ವಹಿಸುತ್ತವೆ. ಈ ಸಂಖ್ಯೆಗಳನ್ನು ಸರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯವುಳ್ಳವರು ಜಯಗಳಿಸುತ್ತಾರೆ. ಇದನ್ನು ಡೇಟಾ ಕಲೆಕ್ಷನ್ ಅಂತಲೂ ಕರೆಯುತ್ತೇವೆ. ಕೊನೆಗೂ ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಫಲಿತಾಂಶ ಏನಾಯಿತು ಎನ್ನುವುದು ಕೂಡ ಸಂಖ್ಯೆಯಲ್ಲಿ ನಮೂದಿಸಿಸಲ್ಪಡುತ್ತವೆ.

ಚುನಾವಣೆಗೆ ಬೇಕಾಗುವ ಅತಿ ಮುಖ್ಯ ಅಂಕಿಅಂಶಗಳೇನು ? ಎನ್ನುವುದನ್ನು ಒಮ್ಮೆ ಅವಲೋಕಿಸೋಣ .

1) ಎಲ್ಲಕ್ಕೂ ಮೊದಲು ಎಷ್ಟು ಜನ ವೋಟ್ ಮಾಡುವ ಅಧಿಕಾರ ಪಡೆದಿದ್ದಾರೆ ಎನ್ನುವುದು ಅತಿ ಮುಖ್ಯ ಮಾಹಿತಿಯಾಗುತ್ತದೆ. ಈ ಬಾರಿ 97 ಕೋಟಿ ಜನ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

2) ಎರಡು ಕೋಟಿ ಮತದಾರರು 18 ಅಥವಾ 19 ವಯಸ್ಸಿನವರು. ಇವರು ಇದೇ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಲಿದ್ದಾರೆ.

3) ಹತ್ತಿರಹತ್ತಿರ ಒಂದು ಲಕ್ಷ ಅನಿವಾಸಿ ಭಾರತೀಯರು ಮತ ಚಲಾಯಿಸಲು ನೊಂದಣಿ ಮಾಡಿಕೊಂಡಿದ್ದಾರೆ.

4) ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1 ರ ವರೆಗೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ಶುರುವಾಗುತ್ತದೆ ಮತ್ತು ಅದೇ ದಿನ ಫಲಿತಾಂಶ ಕೂಡ ಪ್ರಕಟವಾಗಲಿದೆ.

5) ಒಟ್ಟು 543 ಸಂಸತ್ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಂಸದರಾಗುವ ಆಕಾಂಕ್ಷೆಯಿಂದ ಸುಮಾರು 8,000 ಮಂದಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ.

6) ಹೆಂಗಸರು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ 49 ರಷ್ಟಿದ್ದಾರೆ. ಆದರೆ ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇ 11 ಮಾತ್ರವೇ ಇದೆ.

7) ಉತ್ತರ ಪ್ರದೇಶವು ಅತಿ ಹೆಚ್ಚು ಸದಸ್ಯರನ್ನು ಸಂಸತ್ತಿಗೆ ಕಳಿಸುತ್ತದೆ. ಒಟ್ಟು 543 ಸಂಸತ್ ಸದಸ್ಯರ ಪೈಕಿ ಉತ್ತರ ಪ್ರದೇಶದಿಂದ 80 ಮಂದಿ ಆಯ್ಕೆಯಾಗುತ್ತಾರೆ.

ಮೇಲೆ ಹೇಳಿದ ಏಳೂ ಸಹ ಅತ್ಯಂತ ಮೂಲ ಅಂಶಗಳು. ಇದರೊಂದಿಗೆ ಪ್ರತಿ ಹಂತದಲ್ಲೂ ಅವುಗಳನ್ನ ಮತ್ತಷ್ಟು ಆಳವಾಗಿ ವಿಭಾಗಿಸಲಾಗುತ್ತದೆ. ಉದಾಹರಣೆಗೆ ಎರಡು ಕೋಟಿ 18 / 19 ವರ್ಷ ವಯೋಮಾನದ ಹೊಸ ಮತದಾರರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೆಷ್ಟು? ಗಂಡು ಮಕ್ಕಳ ಸಂಖ್ಯೆಯೆಷ್ಟು? ಇವರಲ್ಲಿ ಎಷ್ಟು ಜನ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ? ಎಷ್ಟು ಜನ ಹಳ್ಳಿಗಳಲ್ಲಿ? ಅವರ ಆರ್ಥಿಕ ಹಿನ್ನೆಲೆ, ಅವರ ಸಾಂಸ್ಕೃತಿಕ ಹಿನ್ನೆಲೆ ಹೀಗೆ ಪ್ರತಿಯೊಂದನ್ನೂ ಅತ್ಯಂತ ಸೂಕ್ಷ್ಮವಾಗಿ ವಿಭಜಿಸಿ ವಿಶ್ಲೇಷಣೆ ಮಾಡಲಾಗುತ್ತದೆ.

ಇಂಟರ್ನೆಟ್ ಬಳಕೆದಾರರ ಸಂಖ್ಯೆ 75 ಕೋಟಿ

ಹೊಸ ತಲೆಮಾರು ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. ಭಾರತದಲ್ಲಿ 75 ಕೋಟಿ ಜನ ಇಂಟರ್ನೆಟ್ ಬಳಕೆದಾರರಿದ್ದಾರೆ. ಇವರೆಲ್ಲರೂ ನಿತ್ಯವೂ ತಮಗೆ ಅರಿವಿಲ್ಲದೆ ತಮ್ಮ ಬದುಕುವ ರೀತಿಯನ್ನು, ತಮ್ಮ ಇಷ್ಟಗಳನ್ನು, ಬೇಕು-ಬೇಡಗಳ ಗುರುತು ಉಳಿಸಿ ಹೋಗುತ್ತಿದ್ದಾರೆ. ಇದನ್ನೇ 'ಡಿಜಿಟಲ್ ಫುಟ್ ಪ್ರಿಂಟ್' ಎನ್ನಲಾಗುತ್ತದೆ. ನಮ್ಮ ಮಾಹಿತಿ ಕಲೆ ಹಾಕಿದ ನಂತರ ಅವುಗಳನ್ನು ನಮ್ಮ ಪ್ರಚೋದನೆಗೆ ಬಳಸಲಾಗುತ್ತದೆ.

ಭಾರತದಲ್ಲಿ ಇಂದು 112 ಕೋಟಿ ಮೊಬೈಲ್ ಫೋನ್‌ಗಳಿವೆ. ಅವುಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ 70 ಕೋಟಿ. 2025 ರ ವೇಳೆಗೆ ಇದು 120 ಕೋಟಿ ತಲುಪಲಿದೆ ಎನ್ನುತ್ತದೆ ಅಂಕಿಅಂಶ. ಅಂದರೆ ಗಮನಿಸಿ, ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾಗಳು ಅತ್ಯಂತ ಪ್ರಬಲ ಅಸ್ತ್ರಗಳಾಗುತ್ತವೆ. ಅದು ಚುನಾವಣೆ ಇರಬಹುದು. ಅಥವಾ ಮತ್ಯಾವುದೇ ಪ್ರಮುಖ ಘಟನೆಯಾಗಿರಬಹುದು. ಸೋಷಿಯಲ್ ಮೀಡಿಯಾ ಅಲ್ಲಿನ ಫಲಿತಾಂಶದ ಮೇಲೆ ನಿಚ್ಚಳ ಪರಿಣಾಮ ಬೀರುತ್ತದೆ .

ಹಾಗೆ ನೋಡಿದರೆ 2014 ರಲ್ಲಿ ಶ್ರೀ ನರೇಂದ್ರ ಮೋದಿಯವರ ಗೆಲುವಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿಗೆ, ಬ್ರೆಕ್ಸಿಟ್ ಎನ್ನುವ ಹೊಸ ನಾಟಕ ಶುರುವಿಗೆ ಎಲ್ಲದಕ್ಕೂ ಸೋಷಿಯಲ್ ಮೀಡಿಯಾ ಕಾಣಿಕೆ ಬಹಳಷ್ಟಿದೆ. 2019 ರ ಭಾರತದ ಮಹಾನ್ ಚುನಾವಣೆಯಲ್ಲಿ ಕೂಡ ಸೋಷಿಯಲ್ ಮೀಡಿಯಾಗಳ ಅಬ್ಬರ ಬಹಳಷ್ಟಿದೆ. ಈ ಅಸ್ತ್ರವನ್ನು ಸರಿಯಾಗಿ ಬಳಸಲು ಬರುವವರು ಮಾತ್ರ ಜಯಶೀಲರಾಗಿ ಹೊರಹೊಮ್ಮುತ್ತಾರೆ. ಭಾರತದ ಆಡಳಿತ ಪಕ್ಷಕ್ಕೆ ಈ ಅಸ್ತ್ರವನ್ನು ಬಳಸಿಕೊಳ್ಳುವ ಕಲೆ ಸಿದ್ದಿಸಿದೆ. ಪ್ರಧಾನ ವಿರೋಧ ಪಕ್ಷ ಈ ವಿಷಯದಲ್ಲಿ ಸ್ವಲ್ಪ ಹಿಂದೆ ಇದೆ. ಆದರೆ 2014 ಕ್ಕೆ ಹೋಲಿಸಿ ನೋಡಿದರೆ ಅಂತರ ಕಡಿಮೆಯಾಗಿದೆ ಎನ್ನಬಹುದು.

ಕೊನೆಯ ಮಾತು: 97 ಕೋಟಿ ಬಹುದೊಡ್ಡ ಸಂಖ್ಯೆ. 145 ಕೋಟಿಗೂ ಹೆಚ್ಚಿರುವ ಭಾರತದ ಜನಸಂಖ್ಯೆಯಲ್ಲಿ 97 ಕೋಟಿ ಜನರು ಈ ಬಾರಿ ಮತದಾನ ಮಾಡಲು ಅರ್ಹರಾಗಿದ್ದಾರೆ. ಈ ಸಂಖ್ಯೆಯು ಭಾರತವನ್ನು ಜಗತ್ತಿನ ಅತಿದೊಡ್ಡ ಗಣತಂತ್ರವನ್ನಾಗಿಸಿದೆ. 2024 ರ ಈ ಚುನಾವಣೆಯನ್ನು ಜಗತ್ತಿನ ಅತಿ ದೊಡ್ಡ ಚುನಾವಣೆ ಎಂದು ಪರಿಗಣಿಸಲಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಜನರನ್ನು ಮಾಹಿತಿ ಅತಿ ವೇಗದಲ್ಲಿ ತಲುಪುತ್ತಿದೆ. ಹೀಗೆ ತಲುಪುವ ಮಾಹಿತಿ ಸರಿಯೋ ತಪ್ಪೋ ಎಂದು ನೋಡುವರಾರು? ಒಂದು ವಾಟ್ಸ್ಯಾಪ್ ಗ್ರೂಪ್‌ನಲ್ಲಿ 256 ಜನರನ್ನ ಸೇರಿಸಬಹುದು. ಮಾಹಿತಿಯನ್ನು ಫಾರ್ವಾರ್ಡ್ ಮಾಡುವುದಕ್ಕೆ 5 ಸಂಖ್ಯೆಯ ಮಿತಿ ವಿಧಿಸಲಾಗಿದೆ. ಹೀಗಿದ್ದೂ 1280 ಜನರನ್ನು ಅರೆಗಳಿಗೆಯಲ್ಲಿ ಸುಮ್ಮನೆ ಒಂದು ಸಣ್ಣ ಬಟನ್ ಒತ್ತುವುದರ ಮೂಲಕ ತಲುಪಿಬಿಡಬಹುದು.

ಸ್ಮಾರ್ಟ್‌ಫೋನ್ ವಿಸ್ಫೋಟವ ತಡೆಯುವವರು ಯಾರು?

ಚುನಾವಣೆ ಬರುತ್ತದೆ ಹೋಗುತ್ತದೆ. ಆ ವಿಷಯ ಹಾಗಿರಲಿ, ಜನಸಂಖ್ಯಾ ಸ್ಫೋಟದೊಂದಿಗೆ ಮಾಹಿತಿ ಸ್ಪೋಟವಾಗುತ್ತಿದೆ. ಸರಿಯೋ ತಪ್ಪೋ ತಿಳಿಯದ ವಯಸ್ಸಿನ ಮಕ್ಕಳ ಕೈಯಲ್ಲಿ ಸ್ಮಾರ್ಟ್‌ಫೋನ್ ರಾರಾಜಿಸುತ್ತಿದೆ. ಈ ವಿಸ್ಪೋಟವ ತಡೆಯುವರಾರು? ಪ್ರಣಾಳಿಕೆಯನ್ನು ಆಧರಿಸಿದ ಚುನಾವಣೆ ನಮ್ಮಲ್ಲಿ ನಡೆಯುವುದೆಂದು? ಯಾವುದೇ ರಾಜಕೀಯ ಪಕ್ಷ ಇಂತಹ ವಿಸ್ಪೋಟವನ್ನು ತಡೆಯುತ್ತೇವೆ ಎನ್ನುವ ಪ್ರಣಾಳಿಕೆಯನ್ನು ಏಕೆ ಬಿಡುಗಡೆ ಮಾಡಿಲ್ಲ? ಕೈಲಿರುವ ಫೋನ್‌ ಮಾತ್ರವೇ ಸ್ಮಾರ್ಟ್ ಆದರೆ ಸಾಕೆ? ನಾವೆಲ್ಲಾ ಧಾವಂತದಿಂದ ಓಡುತ್ತಿದ್ದೇವೆ, ವಿಪರ್ಯಾಸವೆಂದರೆ ಎಲ್ಲಿಗೆ ಎಂದು ಯಾರಿಗೂ ಗೊತ್ತಿಲ್ಲ. ಓಡುವ ಆತುರದಲ್ಲಿ ಎಲ್ಲಿಗೆ ಎಂದು ಕೇಳಿಕೊಳ್ಳುವ ಆಲೋಚನೆಯೂ ನಮಗಿಲ್ಲ.

(ಬರಹ: ರಂಗಸ್ವಾಮಿ ಮೂಕನಹಳ್ಳಿ)

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

(This copy first appeared in Hindustan Times Kannada website. For latest updates on Karnataka news, lifestyle, cricket, lifestyle and many more subjects please visit kannada.hindustantimes.com )

Whats_app_banner