ಕನ್ನಡ ಸುದ್ದಿ  /  Lifestyle  /  Education In Overseas Most Of Time Myth Says Rangaswamy Mookanahalli All You Need To Know About Foregin Education Dmg

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ: ವಿದೇಶಕ್ಕೆ ಓದಲು ಹೋಗುವ ಮುನ್ನ ಇವಿಷ್ಟೂ ನಿಮಗೆ ತಿಳಿದಿರಲಿ -ರಂಗ ನೋಟ

ರಂಗಸ್ವಾಮಿ ಮೂಕನಹಳ್ಳಿ: ವಿದೇಶಕ್ಕೆ ಓದಲೆಂದು ಹೋದವರ ಪೈಕಿ ಅರ್ಧಕ್ಕೂ ಹೆಚ್ಚು ಜನರು ಅಲ್ಲಿ ಉಳಿಯಲು ಆಗದೆ ವಾಪಸ್ ಬರುತ್ತಾರೆ. ವಿದೇಶಗಳಲ್ಲಿ ಉಳಿದವರಲ್ಲಿಯೂ ಹಲವರು ಇಲ್ಲಿರುವವರಿಗೆ ನಿಜ ಹೇಳದೆ ಸುಳ್ಳಿನ ಸೌಧದಲ್ಲಿ ಬದುಕುತ್ತಾರೆ.

ವಿದೇಶಕ್ಕೆ ಓದಲು ಹೋಗುವ ಮುನ್ನ ಇವಿಷ್ಟೂ ನಿಮಗೆ ತಿಳಿದಿರಲಿ: ರಂಗ ನೋಟ ಅಂಕಣ
ವಿದೇಶಕ್ಕೆ ಓದಲು ಹೋಗುವ ಮುನ್ನ ಇವಿಷ್ಟೂ ನಿಮಗೆ ತಿಳಿದಿರಲಿ: ರಂಗ ನೋಟ ಅಂಕಣ (Rangaswamy Mookanahalli)

ದೇಶ ಯಾವುದೇ ಇರಲಿ, ಹೊಸದಾಗಿ ಹೋದಾಗ ಎಲ್ಲವೂ ಸುಂದರವಾಗಿಯೇ ಕಾಣುತ್ತದೆ. ಅಲ್ಲಿನ ಜನರ, ಸಮಾಜದ, ವ್ಯವಸ್ಥೆಯಲ್ಲಿನ ಹುಳುಕುಗಳು ಕಾಣುವುದಿಲ್ಲ. ನೀವು ಯಾವುದೇ ಪ್ರವಾಸಿ ಕಥನವನ್ನು ಓದಿ ನೋಡಿ. ಅಲ್ಲೆಲ್ಲ ಲೇಖಕರು ತಾವು ಕಂಡ ದೇಶದ ಗುಣಗಾನ ಮಾಡುತ್ತಾರೆ. ಅಲ್ಲಿ ಎಲ್ಲವೂ ಚೆನ್ನಾಗಿದೆ, ಭಾರತದಲ್ಲಿ ಮಾತ್ರ ಅವ್ಯವಸ್ಥೆ ಎನ್ನುವ ರೀತಿಯ ಹೇಳಿಕೆಗಳು ಹೇರಳವಾಗಿರುತ್ತವೆ. ಹತ್ತಾರು ವರ್ಷ ಹೊರ ದೇಶದಲ್ಲಿ ನೆಲಸಿರುವ ಅನಿವಾಸಿಗಳು ಕೂಡ ಭಾರತಕ್ಕೆ ಬಂದಾಗ ಅಲ್ಲಿನ ಹುಳುಕುಗಳನ್ನು ಹೇಳುವುದಿಲ್ಲ. ಬದಲಿಗೆ ತಾವೇನೋ ಮಹತ್ತರ ಸಾಧನೆ ಮಾಡಿದ್ದೇವೆ ಎನ್ನುವಂತೆ ವರ್ತಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕೆ ಎಂದು ಹೊರ ದೇಶಗಳಿಗೆ ಹೋಗುವುದು ಹೆಚ್ಚಾಗಿದೆ. ಹೀಗೆ ಕಡಿಮೆ ಅವಧಿಗೆ ಹೋದಾಗ ಎದುರಾಗುವ ತೊಂದರೆಗಳನ್ನು ಅವರು ಗಮನಿಸುತ್ತಾರೆ. ಆದರೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ಸಮಯದಲ್ಲಿ ವಿದೇಶಿ ಯೂನಿವೆರ್ಸಿಟಿ ಎಂದ ತಕ್ಷಣ ಹೆಚ್ಚು ಅದರ ಬಗ್ಗೆ ರಿಸರ್ಚ್ ಮಾಡದೆ ಒಪ್ಪಿಕೊಂಡು ಬಿಡುತ್ತಾರೆ. ನಿಮಗೆಲ್ಲ ಒಂದು ವಿಷಯ ಗೊತ್ತಿರಲಿ, ವಿದೇಶಗಳಲ್ಲಿ ಕೂಡ ನಮ್ಮಲ್ಲಿ ಇದ್ದಂತೆ ಸಣ್ಣಪುಟ್ಟ ಕಾಲೇಜುಗಳು ಗಲ್ಲಿಗೊಂದಿವೆ. ವೆಬ್‌ಸೈಟ್‌ನಲ್ಲಿ ಎಲ್ಲವೂ ಸುಂದರ ಮತ್ತು ಸುಸಜ್ಜಿತವಾಗಿ ಕಾಣುತ್ತವೆ. 'ದೂರವಿದ್ದಾಗ ಪರಿಮಳ, ಹತ್ತಿರ ಬಂದರೆ ಕಟು ವಾಸನೆ' ಎನ್ನುವ ಗಾದೆ ನಿಮಗೆ ಗೊತ್ತಿರಬಹುದು. ಅಲ್ಲಿಗೆ ಹೋದ ಮೇಲೆ ಮಾತ್ರ ನಿಜ ಬಣ್ಣ ಬಯಲಾಗುತ್ತದೆ.

2021 ರ ವರೆಗೆ ಎರಡೂವರೆಯಿಂದ ಮೂರು ಲಕ್ಷ ಹುಡುಗರು ಬೇರೆ ದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದರು. ಅದು ಪದವಿ (ಡಿಗ್ರಿ), ಸ್ನಾತಕೋತ್ತರ ಪದವಿ (ಮಾಸ್ಟರ್ಸ್), ಪಿಎಚ್‌ಡಿ ಯಾವುದೇ ಇರಲಿ ಮತ್ತು ಒಟ್ಟಾರೆ ಯಾವುದೇ ದೇಶಕ್ಕೆ ಹೋಗಿರಲಿ, ಒಟ್ಟಿನಲ್ಲಿ ಭಾರತದಿಂದ ಹೊರ ಹೋದ ವಿದ್ಯಾರ್ಥಿಗಳ ಸಂಖ್ಯೆ ಅಷ್ಟಿತ್ತು. 2022 ರಲ್ಲಿ ಅದು 60 ಪ್ರತಿಶತಕ್ಕೂ ಹೆಚ್ಚಾಗಿದೆ ಎನ್ನುತ್ತದೆ ಅಂಕಿಅಂಶ. 2023 ರಲ್ಲಿ ಏಳುವರೆ ಲಕ್ಷ ವಿದ್ಯಾರ್ಥಿಗಳು ಹೊರಹೋಗಿದ್ದಾರೆ. ಈ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವ ಪ್ರಶ್ನೆಯೇ ಇಲ್ಲ .

ಈಗ ಲೆಕ್ಕಾಚಾರಕ್ಕೆ ಬರೋಣ

ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಫೀಸು, ಪುಸ್ತಕ, ವಸತಿ, ಊಟ, ಬಟ್ಟೆ, ಓಡಾಟ, ಜೊತೆಗೆ ಭಾರತದಿಂದ ನೋಡಲು ಹೋಗುವ ಅಪ್ಪ ಅಮ್ಮನ ವೆಚ್ಚ ಇತ್ಯಾದಿಗಳನ್ನು ಲೆಕ್ಕ ಹಾಕಿದರೆ 24 ಲಕ್ಷ ರೂಪಾಯಿ ಬೇಕು. ಗಮನಿಸಿ ಈ ಲೆಕ್ಕಾಚಾರದಲ್ಲಿ ಐಷಾರಾಮಕ್ಕೆ ಜಾಗವಿಲ್ಲ. ಟೈಟ್ ಬಜೆಟ್‌ಲ್ಲಿ ಸಭ್ಯತೆಯಿಂದ ಬದುಕಲು ಇಷ್ಟು ಬೇಕು. ನೀವು ಪಬ್ಬು-ಕ್ಲಬ್ಬು ಎಂದು ಸೇರಿಸಿದರೆ ಲೆಕ್ಕಾಚಾರ ಬೇರೆಯಾದೀತು. ಈ ಸಂಖ್ಯೆ ದೇಶದಿಂದ ದೇಶಕ್ಕೆ, ಓದುವ ಕೋರ್ಸ್ ಮೇಲೆಯೂ ವೆಚ್ಚದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹೀಗಾಗಿ ಇಲ್ಲಿ ಆವೆರೇಜ್ ತೆಗೆದುಕೊಂಡಿದ್ದೇನೆ. ಈಗ ಲೆಕ್ಕ ಹಾಕಿ 2.5 ಲಕ್ಷವನ್ನು 24 ಲಕ್ಷದಿಂದ ಗುಣಿಸಿ, ಇದು ನಿಮಗೆ ನೀಡುವ ಸಂಖ್ಯೆ 18 ಸಾವಿರ ಕೋಟಿ! ಇದು ಎಷ್ಟು ದೊಡ್ಡ ದುಡ್ಡು ಎಂದು ಅರಿವಾಗಬೇಕಾದರೆ ಜಗತ್ತಿನ ಬಡ ದೇಶಗಳ ಪಟ್ಟಿಯನ್ನು ನೋಡಿ , ಆ ದೇಶದ ಜಿಡಿಪಿ ಕೂಡ ಇಷ್ಟಿರುವುದಿಲ್ಲ. ನಮ್ಮ ದೇಶದಿಂದ ಇಷ್ಟು ಹಣ ಒಟ್ಟಾರೆ 73 ದೇಶಗಳಿಗೆ ಹರಿದು ಹೋಗುತ್ತಿದೆ. ಇದರಲ್ಲಿ ಸಿಂಹಪಾಲು ಅಮೆರಿಕಾ , ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ ದೇಶಗಳು ಪಡೆದುಕೊಳ್ಳುತ್ತಿವೆ.

ಹೀಗೇಕೆ ಆಗುತ್ತಿದೆ?

ಇಂದಿನ ಕಾಲಘಟ್ಟದಲ್ಲಿ ನಿಮಗೆ ಟೀನೇಜ್ ಮಕ್ಕಳಿದ್ದರೆ ಈಗ ನಾನು ಹೇಳುವುದು ಅರ್ಥವಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಅದ್ಯಾವ ಮಟ್ಟದಲ್ಲಿ ಕುಸಿತ ಕಂಡಿದೆ ಎಂದರೆ ಅದನ್ನು ವಿವರಿಸಲು ಪದಗಳು ಸಾಲುವುದಿಲ್ಲ. ಸ್ಟೇಟ್ ಸಿಲಬಸ್ ಕೊಡಿಸಿದರೆ ಮಕ್ಕಳ ಸಾಮಾನ್ಯಜ್ಞಾನ ಕೂಡ ಹೆಚ್ಚುವುದಿಲ್ಲ. ಇನ್ನು ಸಿಬಿಎಸ್‌ಇ ಅದೆಷ್ಟು ಪ್ರಯೋಗಗಳನ್ನು ಮಾಡುತ್ತಿದೆ ಎಂದರೆ ಮಕ್ಕಳು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ. ಇಲ್ಲಿ 'ನೋ ಮರ್ಸಿ' (ದೆಯೆಯಿಲ್ಲ). ನೀವು ಆನೆಯೋ, ಕುದುರೆಯೋ, ಮಂಗವೋ, ಜಿಂಕೆಯೋ ಕೊನೆಗೆ ಅಮೆಯೋ ಗೊತ್ತಿಲ್ಲ. ಒಟ್ಟಿನಲ್ಲಿ 55 ಸಕೆಂಡಿನಲ್ಲಿ 100 ಮೀಟರ್ ಓಡಿದವರಿಗೆ ಮಾತ್ರ ಸೀಟು! ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಹೇಳುತ್ತಾ ಹೋದರೆ ಅದೇ ಒಂದು ಗ್ರಂಥವಾದೀತು.

ಇನ್ನು ಶಿಕ್ಷಕರ ಗುಣಮಟ್ಟದ ಬಗ್ಗೆ ಹೇಳುವುದು ಬೇಡ. ಶಾಲೆಗೂ ಫೀಸ್ ಮತ್ತೆ ಟ್ಯೂಷನ್ಗೂ ಫೀಸ್. ಇವತ್ತು ಟ್ಯೂಷನ್ ಇಲ್ಲದೆ ಮಕ್ಕಳು ಪಾಸಾಗಲು ಸಾಧ್ಯವಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಪಾಸಾಗುವ ಮಕ್ಕಳಿಗೆ ಮಾತ್ರ ಟ್ಯೂಷನ್ ಎನ್ನುವುದು ಭ್ರಮೆ. ಇವತ್ತು ಟ್ಯೂಷನ್ ಎಲ್ಲರಿಗೂ ಬೇಕು ಎನ್ನುವಂತಾಗಿದೆ.

ವಿದೇಶ ಹೋದರೆ ಒಳ್ಳೆಯದು ಎಂಬ ಭ್ರಮೆ

ಭಾರತದ ಕೇಂದ್ರ ಸರಕಾರ ಮನಸ್ಸು ಮಾಡಿದರೆ ಕನಿಷ್ಠ 18 ಸಾವಿರ ಕೋಟಿ ರೂಪಾಯಿ ಜಿಡಿಪಿ ಚಿಟಿಕೆಯಲ್ಲಿ ಏರಿಸಿಕೊಳ್ಳಬಹುದು. ವಿದ್ಯೆ ಎನ್ನುವುದು ಜ್ಞಾನಕ್ಕಾಗಿ, ಕಲಿಕೆಗಾಗಿ ಎನ್ನುವುದು ಮಂತ್ರವಾಗಲಿ, ದರಿದ್ರ ಓಟಕ್ಕೆ ಬಿದ್ದು ಮಕ್ಕಳ ಜೀವಕ್ಕೆ ಘಾತವಾಗದಿರಲಿ. ಅಂದಹಾಗೆ ಹೀಗೆ ವಿದೇಶಕ್ಕೆ ಹೋದವರೆಲ್ಲಾ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಎಂದು ಅರ್ಥವಲ್ಲ. ಅಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ವಾಪಸ್ಸು ಬಂದವರ ಸಂಖ್ಯೆ 60 ಪ್ರತಿಶತ. ಉಳಿದ 40 ರಲ್ಲಿ ಬದುಕಿನ ಬಂಡಿ ಎಳೆಯಲು ಸಿಕ್ಕ ಕೆಲಸ ಮಾಡಿಕೊಂಡು ಹೇಗೋ ಬದುಕವರ ಸಂಖ್ಯೆ ಅಸಂಖ್ಯ. ಇಲ್ಲಿನ ಜನರಿಗೆ ನಿಜ ಹೇಳದೆ ಸುಳ್ಳಿನ ಸೌಧದಲ್ಲಿ ಬದುಕುವವರು ಬಹಳ.

ದೂರದಲ್ಲಿರುವ ಬೆಟ್ಟ ಸಮತಟ್ಟವಾಗಿ ಕಾಣುತ್ತದೆ . ದೂರದಿಂದ ಅದನ್ನು ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನು ನೀಡುತ್ತದೆ. ನಿಜದ ಅರಿವು ಆಗಬೇಕೆಂದರೆ ಅದರ ಹತ್ತಿರ ಹೋಗಬೇಕು. ಹತ್ತಿರದಿಂದ ಬೆಟ್ಟದ ಮೇಲಿರುವ ಕಲ್ಲುಮುಳ್ಳುಗಳು ದುರ್ಗಮ ರಸ್ತೆ ಕಾಣಸಿಗುತ್ತದೆ. ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ ಕೂಡ. ಅಂದರೆ ದೂರದಿಂದ ಬಹಳ ಸುಂದರವಾಗಿ ಮತ್ತು ಸುಲಭವಾಗಿ ಕಂಡ ಬೆಟ್ಟ ಹತ್ತುವುದು ಕಂಡಷ್ಟು ಸುಲಭವಲ್ಲ ಎನ್ನುವುದು ಹತ್ತಿರ ಹೋಗಿ ಪ್ರಯತ್ನಿಸಿದ ಮೇಲಷ್ಟೇ ಗೊತ್ತಾಗುತ್ತದೆ. ವಿದೇಶಗಳ ಬಗ್ಗೆ ನಮ್ಮ ಭಾವನೆ ಕೂಡ ಹೀಗೆಯೇ, ಅನುಭವಕ್ಕೆ ಬರುವ ತನಕ ಎಲ್ಲವೂ ಸುಂದರವಾಗೇ ಇರುತ್ತದೆ. ಅಂದ ಮಾತ್ರಕ್ಕೆ ವಿದೇಶದಲ್ಲಿ ಯಾವುದೂ ಸರಿಯಿಲ್ಲ ಎನ್ನವುದು ಇಲ್ಲಿನ ಉದ್ದೇಶ ಕೂಡ ಅಲ್ಲ. ಎಲ್ಲಾ ಸಮಾಜದಲ್ಲೂ ಅದರದೇ ಆದ ನೋವು ಮತ್ತು ನಿಲುವುಗಳು ಇರುತ್ತವೆ ಎಂದು ಹೇಳುವುದಷ್ಟೇ ಉದ್ದೇಶ.

(ಬರಹ: ರಂಗಸ್ವಾಮಿ ಮೂಕನಹಳ್ಳಿ)

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.