Year in Review 2022: ಭಾರತೀಯ ಚಿತ್ರರಂಗಕ್ಕೆ ಆಘಾತ ತಂದುಕೊಟ್ಟ ವರ್ಷ.. 2022ರಲ್ಲಿ ಮಡಿದ ಜನಪ್ರಿಯ ತಾರೆಯರ ಫೋಟೋ ಸಹಿತ ವಿವರ ಇಲ್ಲಿದೆ
- 2022 - ಭಾರತೀಯ ಚಿತ್ರರಂಗಕ್ಕೆ ಆಘಾತ ತಂದುಕೊಟ್ಟ ವರ್ಷವೂ ಹೌದು. ಬೆಳ್ಳಿತೆರೆ ಮಾತ್ರವಲ್ಲದೇ ಕಿರುತೆರೆಯ ಹಲವು ಜನಪ್ರಿಯ ತಾರೆಯರನ್ನೂ ನಾವು ಕಳೆದುಕೊಂಡಿದ್ದೇವೆ. ಲತಾ ಮಂಗೇಶ್ಕರ್, ಶಿವಮೊಗ್ಗ ಸುಬ್ಬಣ್ಣ, ಮೋಹನ್ ಜುನೇಜ, ಕೆಕೆ, ರಾಜು ಶ್ರೀವಾತ್ಸವ್ ಸೇರಿದಂತೆ ಈ ವರ್ಷ ಅಸುನೀಗಿದ ಸೆಲೆಬ್ರಿಟಿಗಳ ಫೋಟೋ ಸಹಿತ ವಿವರ ಇಲ್ಲಿದೆ..
- 2022 - ಭಾರತೀಯ ಚಿತ್ರರಂಗಕ್ಕೆ ಆಘಾತ ತಂದುಕೊಟ್ಟ ವರ್ಷವೂ ಹೌದು. ಬೆಳ್ಳಿತೆರೆ ಮಾತ್ರವಲ್ಲದೇ ಕಿರುತೆರೆಯ ಹಲವು ಜನಪ್ರಿಯ ತಾರೆಯರನ್ನೂ ನಾವು ಕಳೆದುಕೊಂಡಿದ್ದೇವೆ. ಲತಾ ಮಂಗೇಶ್ಕರ್, ಶಿವಮೊಗ್ಗ ಸುಬ್ಬಣ್ಣ, ಮೋಹನ್ ಜುನೇಜ, ಕೆಕೆ, ರಾಜು ಶ್ರೀವಾತ್ಸವ್ ಸೇರಿದಂತೆ ಈ ವರ್ಷ ಅಸುನೀಗಿದ ಸೆಲೆಬ್ರಿಟಿಗಳ ಫೋಟೋ ಸಹಿತ ವಿವರ ಇಲ್ಲಿದೆ..
(1 / 19)
ಲತಾ ಮಂಗೇಶ್ಕರ್: ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಖ್ಯಾತ ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ (92) ಫೆಬ್ರವರಿ 6ರಂದು ಅಸುನೀಗಿದ್ದರು. ಇವರು 36 ಭಾಷೆಗಳಲ್ಲಿ 25,000ಕ್ಕೂ ಅಧಿಕ ಹಾಡನ್ನು ಹಾಡಿದ್ದರು. ಸಂಗೀತ ಕ್ಷೇತ್ರಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ಪದ್ಮವಿಭೂಷಣ, ದಾದಾ ಸಾಹೇಬ್ ಪಾಲ್ಕೆ, ಭಾರತ ರತ್ನ ಸೇರಿದಂತೆ ಹಲವರು ಪ್ರತಿಷ್ಠಿತ ಪ್ರಶಸ್ತಿ ಹಾಗೂ ಗೌರವಗಳು ಸಂದಿವೆ.
(2 / 19)
ಮೋಹನ್ ಜುನೇಜ: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಮೋಹನ್ ಜುನೇಜ ಅವರು ಮೇ 7 ರಂದು ನಿಧನರಾಗಿದ್ದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದ್ದಾರೆ. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್ ಜುನೇಜ ಅವರು ಹಾಸ್ಯಪಾತ್ರಗಳ ಮೂಲಕ ಪ್ರಸಿದ್ಧರಾಗಿದ್ದರು. ಹಾಸ್ಯನಟರಾಗಿ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ. ಯಶ್ ಅಭಿನಯದ ಸೂಪರ್ಹಿಟ್ ಸಿನಿಮಾ ‘ಕೆಜಿಎಫ್ -1’ ಹಾಗೂ ‘ಕೆಜಿಎಫ್-2’ ರಲ್ಲೂ ನಟಿಸಿ ಜನಮನ ಗೆದ್ದಿದ್ದರು.
(3 / 19)
KK: ಕೆಕೆ ಎಂದೇ ಜನಪ್ರಿಯರಾಗಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (55) ಮೇ 31 ರಂದು ಸಾವನ್ನಪ್ಪಿದ್ದರು. ಕಳೆದ ಮೂರು ದಶಕಗಳಲ್ಲಿ ಭಾರತೀಯ ಸಂಗೀತ ಪ್ರೇಮಿಗಳಿಗೆ ಅನೇಕ ಹಿಟ್ ಹಾಡುಗಳನ್ನು ನೀಡಿರುವ ಕೆಕೆ, ಆ ದಿನ ರಾತ್ರಿ ಗುರುದಾಸ್ ಕಾಲೇಜಿನ ನಜ್ರುಲ್ ಮಂಚ್‌ನಲ್ಲಿ ಲೈವ್ ಪ್ರದರ್ಶನದಲ್ಲಿ ಭಾಗಿಯಾಗುತ್ತಿದ್ದಂತೆ, ಆರೋಗ್ಯದಲ್ಲಿ ಏರುಪೇರಾಗಿದೆ. ಹೊಟೇಲ್ ಕೋಣೆಗೆ ಹೋಗಿ ಕೊಂಚ ಕಾಲ ಸಾವರಿಸಿಕೊಂಡಿದ್ದಾರೆ. ಅದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಬದುಕುಳಿಯಲಿಲ್ಲ.
(4 / 19)
ವೈಶಾಲಿ ಟಕ್ಕರ್: ಹಿಂದಿಯ "ಯೇ ರಿಶ್ತಾ ಕ್ಯಾ ಕೆಹ್ಲಾತಾ" ಮತ್ತು "ಸಸುರಲ್ ಸಿಮಾರ್ ಕಾ"ದಲ್ಲಿ ಕೆಲಸ ಮಾಡಿದ್ದ ಕಿರುತೆರೆ ನಟಿ 30 ವರ್ಷ ವಯಸ್ಸಿನ ವೈಶಾಲಿ ಟಕ್ಕರ್ ಅಕ್ಟೋಬರ್ನಲ್ಲಿ ಇಂದೋರ್‌ನ ತಮ್ಮ ಮನೆಯಲ್ಲಿ ನೇಣುಗೆ ಶರಣಾಗಿದ್ದರು. ಪ್ರೇಮವೈಫಲ್ಯ ಮತ್ತು ಮಾಜಿ ಪ್ರೇಮಿಯ ಕಿರುಕುಳವೂ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಖಿನ್ನತೆಯಿಂದಲೂ ವೈಶಾಲಿ ಬಳಲುತ್ತಿದ್ದರಂತೆ.
(5 / 19)
ಸಿಧು ಮೂಸೆವಾಲಾ: ಮೇ 29ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯ ಜವಾಹರ್ಕೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ನಾಯಕನೂ ಆಗಿರುವ ಪಂಜಾಬ್ ಗಾಯಕ ಸಿಧು ಮೂಸೆ ವಾಲಾ ಅವರನ್ನು ಹತ್ಯೆಗೈಯ್ಯಲಾಗಿತ್ತು. ಇವರಿಗೆ ನೀಡಿದ್ದ ವಿಶೇಷ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದ ಮರುದಿನವೇ ಘಟನೆ ನಡೆದಿತ್ತು.
(6 / 19)
ಬಪ್ಪಿ ಲಹಿರಿ: 1980 ಮತ್ತು 90ರ ದಶಕಗಳಲ್ಲಿ ಭಾರತದಲ್ಲಿ ಡಿಸ್ಕೋ ಸಂಗೀತ ಜನಪ್ರಿಯಗೊಳಿಸಿದ್ದ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಮುಂಬೈನ ಆಸ್ಪತ್ರೆಯಲ್ಲಿ ಫೆಬ್ರವರಿ 16 ರಂದು ನಿಧನರಾದರು. ಇವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಲ್ತೆ ಚಲ್ತೇ, ಡಿಸ್ಕೋ ಡ್ಯಾನ್ಸರ್ ಮತ್ತು ಶರಾಬಿಯಂತಹ ಹಲವಾರು ಹಾಡುಗಳನ್ನು ಬಾಲಿವುಡ್‌ಗೆ ನೀಡಿ ಹೆಸರುವಾಸಿಯಾಗಿದ್ದರು. ಇವರ ಕೊನೆಯ ಹಾಡು 2020ರ ಬಾಘಿ-3 ಚಿತ್ರದ್ದಾಗಿತ್ತು.
(7 / 19)
ಕುಂಬಳೆ ಸುಂದರ ರಾವ್: ಯಕ್ಷಗಾನ ಕ್ಷೇತ್ರದ ಸಾಧಕ ಕುಂಬ್ಳೆ ಸುಂದರ ರಾವ್ ನವೆಂಬರ್ 30 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಯಕ್ಷಗಾನ ಅಭಿಮಾನಿಗಳಿಗೆ, ವಿಶೇಷವಾಗಿ ಕರಾವಳಿಯ ಜನತೆಗೆ ಇವರು ಚಿರಪರಿಚಿತರು. ತಾಳಮದ್ದಳೆ ಮತ್ತು ಬಯಲಾಟ ಎಂಬ ಯಕ್ಷಗಾನದ ಎರಡೂ ವಿಭಾಗಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದ ಅವರು 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಒಂದು ಅವಧಿಗೆ ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
(8 / 19)
ಶಿವಮೊಗ್ಗ ಸುಬ್ಬಣ್ಣ: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಆಗಸ್ಟ್ 11 ರಂಧು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಕಾಡು ಕುದುರೆ ಓಡಿ ಬಂದಿತ್ತಾ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನ ನೀಡಿರುವುದಕ್ಕೆ ಇವರಿಗೆ ರಜತ ಕಮಲ ರಾಷ್ಟ್ರಪ್ರಶಸ್ತಿ ದೊರಕಿತ್ತು.
(9 / 19)
ಕೃಷ್ಣ: ತೆಲುಗು ಸೂಪರ್ ಸ್ಟಾರ್, ಮಹೇಶ್ ಬಾಬು ತಂದೆ ಕೃಷ್ಣ ನವೆಂಬರ್ 15 ರಂದು ಸಾವನ್ನಪ್ಪಿದ್ದರು.. ಅನಾರೋಗ್ಯ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಪತ್ನಿ ಇಂದಿರಾ ಅವರನ್ನು ಕಳೆದುಕೊಂಡ ಸೂಪರ್ ಸ್ಟಾರ್ ಕೃಷ್ಣ, ಕೊಂಚ ನಲುಗಿ ಹೋಗಿದ್ದರು. ಜತೆಗೆ 79 ವರ್ಷ ವಯಸ್ಸಾಗಿರುವುದರಿಂದ ವಯೋಸಹಜ ಸಮಸ್ಯೆಯೂ ಕೃಷ್ಣ ಅವರನ್ನು ಕಾಡುತ್ತಿತ್ತು. ಉಸಿರಾಟದ ತೊಂದರೆಯೂ ಎದುರಾಗಿತ್ತು.
(10 / 19)
ಮಂಡ್ಯ ರವಿ: ಬಹು ಅಂಗಾಗ್ಯ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆ ನಟ ರವಿ ಪ್ರಸಾದ್. ಎಂ ಸೆಪ್ಟೆಂಬರ್ 14ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಮೂಲತ: ಮಂಡ್ಯದವರಾದ ರವಿ ಪ್ರಸಾದ್. ಎಂ ಮಂಡ್ಯ ರವಿ ಎಂದೇ ಫೇಮಸ್. ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ರವಿ, ಚಂದು ಭಾರ್ಗಿ ಪಾತ್ರದಲ್ಲಿ ನಟಿಸಿದ್ದರು.
(11 / 19)
ರಾಹುಲ್ ಕೋಲಿ: ಗುಜರಾತಿ ಸಿನಿಮಾ 'ಚೆಲೋ ಶೋ' ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿದ್ದರಿಂದ ಸಹಜವಾಗಿ ಸಿನಿಮಾ ಮೇಲೆ ಎಲ್ಲರ ಕಣ್ಣಿತ್ತು. ಆದರೆ ಅಕ್ಟೋಬರ್ನಲ್ಲಿ ಸಿನಿಮಾ ತಂಡದಿಂದ ನೋವಿನ ವಿಚಾರ ಇದೀಗ ಹೊರಬಿದ್ದಿತ್ತು. ಈ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದ ಬಾಲ ನಟ ರಾಹುಲ್ ಕೋಲಿ ನಿಧನಹೊಂದಿದ್ದನು. ರಾಹುಲ್ ಕೋಲಿಗೆ ಲುಕೆಮಿಯಾ ಕ್ಯಾನ್ಸರ್ ಆಗಿತ್ತು.
(12 / 19)
ರಾಜೇಶ್: ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್ ಹಿರಿಯ ನಟ ರಾಜೇಶ್ (87) ಫೆಬ್ರವರಿ 19 ರಂದು ಕೊನೆಯುಸಿರೆಳೆದಿದ್ದರು. ಇವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಶಕ್ತಿ ನಾಟಕ ಮಂಡಳಿ ಸ್ಥಾಪಿಸಿದ್ದ ಇವರು ಅನೇಕ ನಾಟಕಗಳಲ್ಲಿಯೂ ಅಭಿನಯಿಸಿದ್ದರು.
(13 / 19)
ಗಂಡಸಿ ನಾಗರಾಜ್: ಚಂದನವನದಲ್ಲಿ ವಸ್ತ್ರಾಲಂಕಾರ ಕಲಾವಿದನಾಗಿ ಗುರುತಿಸಿಕೊಂಡಿದ್ದ ಮತ್ತು ಹಾಸ್ಯನಟನಾಗಿಯೂ ಕೆಲಸ ಮಾಡಿದ್ದ 57 ವರ್ಷದ ಗಂಡಸಿ ನಾಗರಾಜ್ ಡಿಸೆಂಬರ್ 11 ರಂದು ನಿಧನರಾದರು. ಇವರಿಗೆ ಓರ್ವ ಮಗ ಇದ್ದಾನೆ. ಕೋವಿಡ್ ಸಮಯದಲ್ಲಿ ಮಗಳೂ ನಿಧನರಾಗಿದ್ದರೆ, ಇದಕ್ಕೂ ಮೊದಲು ಹೃದಯಾಘಾತದಿಂದ ಪತ್ನಿಯೂ ಸಾವನ್ನಪ್ಪಿದ್ದರು. ಗಂಡಸಿ ನಾಗರಾಜ್ 2020ರಲ್ಲಿಯೇ ತಮ್ಮ ಎರಡೂ ಕಿಡ್ನಿಯನ್ನು ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗಿದ್ದರು.
(14 / 19)
ಮಿಥಿಲೇಶ್ ಚತುರ್ವೇದಿ : ಬಾಲಿವುಡ್ನ ಹಿರಿಯ ನಟ, ರಂಗಭೂಮಿ ಕಲಾವಿದ ಮಿಥಿಲೇಶ್ ಚತುರ್ವೇದಿ ಆಗಸ್ಟ್ ತಿಂಗಳಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಮಿಥಿಲೇಶ್ ಚತುರ್ವೇದಿ ಅವರು 'ಕೋಯಿ ಮಿಲ್ ಗಯಾ', 'ಅಶೋಕ', 'ಗದರ್ ಏಕ್ ಪ್ರೇಮ್ ಕಥಾ', 'ಕ್ರಿಶ್', 'ತಾಲ್', 'ಬಂಟಿ ಔರ್ ಬಬ್ಲಿ', 'ಫಿಜಾ' ಮತ್ತು 'ರೆಡಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಸಿನಿಮಾದಲ್ಲಿ ಸಕ್ರಿಯರಾಗಿದ್ದರು. ಈ ವರ್ಷ ತೆರೆಕಂಡ 'ಬಂಚಾಡ' ಅವರ ಕೊನೆಯ ಚಿತ್ರವಾಗಿದೆ.
(15 / 19)
ಲೋಹಿತಾಶ್ವ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್ ಹಿರಿಯ ನಟ ಟಿ.ಎಸ್. ಲೋಹಿತಾಶ್ವ ನವೆಂಬರ್ 9 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆರೋಗ್ಯ ಸಮಸ್ಯೆಯಿಂದ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಲೋಹಿತಾಶ್ವ ಅವರಿಗೆ ಆಸ್ಪತ್ರೆಯಲ್ಲೇ ಹೃದಯಾಘಾತವಾಗಿತ್ತು. ಮೆದುಳು ಕೂಡಾ ಕೆಲಸ ಮಾಡುತ್ತಿರಲ್ಲ.
(16 / 19)
ಉದಯ್ ಹುತ್ತಿನಗದ್ದೆ: 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಪೋಷಕ ಪಾತ್ರಗಳ ಮೂಲಕ ಹೆಚ್ಚಾಗಿ ಗುರುತಿಸಿಕೊಂಡಿದ್ದ ನಟ ಉದಯ್ ಹುತ್ತಿನಗದ್ದೆ ಜೂನ್ 2 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದರು. ಉದಯ್ ಹುತ್ತಿನಗದ್ದೆ 1987ರಲ್ಲಿ ತೆರೆಕಂಡ 'ಆರಂಭ' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. ನಂತರ ಡಾ. ರಾಜ್ಕುಮಾರ್ ಅಭಿನಯದ 'ದೇವತಾ ಮನುಷ್ಯ' ಚಿತ್ರದಲ್ಲಿ ಸುಧಾರಾಣಿಗೆ ನಾಯಕನಾಗಿ ನಟಿಸಿದ್ದರು.
(17 / 19)
ರಾಜು ಶ್ರೀವಾತ್ಸವ್: ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡ್ ಅಪ್ ಕಾಮಿಡಿಯನ್, ಬಾಲಿವುಡ್ ಹಾಸ್ಯ ನಟ ರಾಜು ಶ್ರೀವಾತ್ಸವ (58) ಸೆಪ್ಟೆಂಬರ್ 21 ರಂದು ಕೊನೆಯುಸಿರೆಳೆದಿದ್ದರು. ಭಾರತ ಮಾತ್ರವಲ್ಲ ಹೊರ ದೇಶಗಳಲ್ಲಿ ಕೂಡಾ ರಾಜು ಶ್ರೀವಾತ್ಸವ್ ಶೋ ನೀಡಿದ್ದಾರೆ. ಮೈ ನೆ ಪ್ಯಾರ್ ಕಿಯಾ, ಬಾಜಿಗರ್, ಬಾಂಬೆ ಟು ಗೋವಾ ಸೇರಿದಂತೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ಕೂಡಾ ರಾಜು ನಟಿಸಿದ್ದಾರೆ
(18 / 19)
ಭಾರ್ಗವಿ ನಾರಾಯಣ್: ರಂಗಭೂಮಿ ಹಾಗು ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಹಿರಿಯ ಪೊಷಕ ನಟಿ ಭಾರ್ಗವಿ ನಾರಾಯಣ್ (84) ಫೆಭ್ರವರಿ 14 ರಂದು ಅಸುನೀಗಿದ್ದರು. ಎರಡು ವರ್ಷಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಇವರ ಸೊಂಟದ ಮೂಳೆ ಮುರಿತಕ್ಕೊಳಗಾಗಿತ್ತು. ಅಂದು ಸಂಜೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು.
ಇತರ ಗ್ಯಾಲರಿಗಳು