Bajrang Punia: ವಿನೇಶ್ ಫೋಗಾಟ್ ಸ್ವಾಗತಿಸುವ ಭರದಲ್ಲಿ 'ತಿರಂಗಾ' ಮೇಲೆ ನಿಂತ ಬಜರಂಗ್ ಪೂನಿಯಾ; ಭಾರೀ ಟೀಕೆ
ಕನ್ನಡ ಸುದ್ದಿ  /  ಕ್ರೀಡೆ  /  Bajrang Punia: ವಿನೇಶ್ ಫೋಗಾಟ್ ಸ್ವಾಗತಿಸುವ ಭರದಲ್ಲಿ 'ತಿರಂಗಾ' ಮೇಲೆ ನಿಂತ ಬಜರಂಗ್ ಪೂನಿಯಾ; ಭಾರೀ ಟೀಕೆ

Bajrang Punia: ವಿನೇಶ್ ಫೋಗಾಟ್ ಸ್ವಾಗತಿಸುವ ಭರದಲ್ಲಿ 'ತಿರಂಗಾ' ಮೇಲೆ ನಿಂತ ಬಜರಂಗ್ ಪೂನಿಯಾ; ಭಾರೀ ಟೀಕೆ

Bajrang Puniat: ಪ್ಯಾರಿಸ್​ನಿಂದ ದೆಹಲಿಗೆ ಬಂದ ವಿನೇಶ್ ಫೋಗಾಟ್ ಅವರನ್ನು ಸ್ವಾಗತಿಸುವ ಭರದಲ್ಲಿ ಬಜರಂಗ್ ಪೂನಿಯಾ ಅವರು 'ತಿರಂಗಾ' ಮೇಲೆ ನಿಂತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಷ್ಟ್ರ ಧ್ವಜದ ಮೇಲೆ ನಿಂತಿರುವ ಬಜರಂಗ್ ಪೂನಿಯಾ.
ರಾಷ್ಟ್ರ ಧ್ವಜದ ಮೇಲೆ ನಿಂತಿರುವ ಬಜರಂಗ್ ಪೂನಿಯಾ.

ಆಗಸ್ಟ್​ 17ರ ಶನಿವಾರ ಪ್ಯಾರಿಸ್​ನಿಂದ ಭಾರತಕ್ಕೆ ಮರಳಿದ ಸ್ಟಾರ್​ ಕುಸ್ತಿಪಟು ವಿನೇಶ್ ಫೋಗಾಟ್ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿತು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು. ಆದರೆ, ಈ ವೇಳೆ ಕುಸ್ತಿಪಟು ಬಜರಂಗ್ ಪೂನಿಯಾ ಅವರು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ವಿನೇಶ್ ಫೋಗಾಟ್ ಅವರ ಮೆರವಣಿಗೆ ನಡೆಯುತ್ತಿದ್ದ ವೇಳೆ ಅದೇ ಕಾರಿನಲ್ಲಿದ್ದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಮಾಧ್ಯಮದವರನ್ನು ನಿಭಾಯಿಸುವ ಸಂದರ್ಭದಲ್ಲಿ ಎಡವಟ್ಟು ಮಾಡಿದ್ದಾರೆ. ವಿನೇಶ್​​ಗೆ ಸ್ವಾಗತ ಕೋರುವ ಬ್ಯಾನರ್​​ ಅನ್ನು ಕಾರು ಬಾನೆಟ್​ ಮೇಲೆ ಕಟ್ಟಲಾಗಿತ್ತು. ಆ ಬ್ಯಾನರ್​ ಮೇಲೆ ತ್ರಿವರ್ಣ ಧ್ವಜವೂ ಇತ್ತು. ಆದರೆ, ತಿರಂಗಾ ಮೇಲೆ ಬಜರಂಗ್ ಪೂನಿಯಾ ಕಾಲಿಟ್ಟಿದ್ದರು.

ನಿಗದಿಗಿಂತ 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್​ 2024 ಕುಸ್ತಿ ಫೈನಲ್​ನಿಂದ ಅನರ್ಹಗೊಂಡು ಪದಕ ವಂಚಿತರಾದ ವಿನೇಶ್ ಫೋಗಾಟ್ ಅವರನ್ನು ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ, ವಿಜೇಂದರ್ ಸಿಂಗ್ ಸೇರಿದಂತೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಆದರೆ, ಈ ವೇಳೆ ಮಾಧ್ಯದವರು ವಿನೇಶ್​ ಅವರ ಪ್ರತಿಕ್ರಿಯೆಗಾಗಿ ಮೈಕ್​ ಹಿಡಿದು ಸುತ್ತುವರೆದರು.

ಆದರೆ ಕಾರ್​ನ ಬಾನೆಟ್​ನ ಮೇಲೆ ಕಟ್ಟಿದ್ದ ರಾಷ್ಟ್ರ ಧ್ವಜದ ಬ್ಯಾನರ್​ ಮೇಲೆ ಬಜರಂಗ್ ಪೂನಿಯಾ ನಿಂತಿದ್ದರು. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ಕಿಡಿಕಾರಿದ್ದು, ಇದೇನಾ ರಾಷ್ಟ್ರ ಧ್ವಜಕ್ಕೆ ನೀಡುವ ಗೌರವ ಎಂದು ಪ್ರಶ್ನಿಸಿದ್ದಾರೆ. ಇದು ನಿಜವಾಗಲೂ ಅಚ್ಚರಿ ಮೂಡಿಸುತ್ತಿದೆ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಬೇಸರವನ್ನೂ ಹೊರಹಾಕಿದ್ದಾರೆ.

ವಿನೇಶ್ ಫೋಗಾಟ್​ ಕಣ್ಣೀರು

ನಿಗದಿಗಿಂತ 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್​ 2024 ಕುಸ್ತಿ ಫೈನಲ್​ನಿಂದ ಅನರ್ಹಗೊಂಡು ಪದಕ ವಂಚಿತರಾದ ವಿನೇಶ್ ಫೋಗಾಟ್ ಅವರು ಕ್ರೀಡಾಕೂಟ ಮುಕ್ತಾಯಗೊಂಡ ಆರು ದಿನಗಳ ಮತ್ತು ಕ್ರೀಡಾ ನ್ಯಾಯಾಲಯ ಮೇಲ್ಮನವಿ ವಜಾಗೊಳಿಸಿದ ಬಳಿಕ ಭಾರತಕ್ಕೆ ಮರಳಿದ್ದಾರೆ. ಆಗಸ್ಟ್​ 17ರಂದು ಶನಿವಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸ್ಟಾರ್ ಕುಸ್ತಿಪಟುಗೆ ಅದ್ಧೂರಿ ಸ್ವಾಗತ ದೊರೆಯಿತು.

ವಿನೇಶ್ ಅವರು ರಾಷ್ಟ್ರ ರಾಜಧಾನಿಗೆ ಬಂದಿಳಿಯುತ್ತಿದ್ದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಒಲಿಂಪಿಕ್ಸ್‌ನಲ್ಲಿ 100 ಗ್ರಾಂ ತೂಕದ ಮಿತಿ ಮೀರಿದ ಕಾರಣ ಭಾರತದ ಕುಸ್ತಿಪಟು 50 ಕೆಜಿ ಫ್ರೀಸ್ಟೈಲ್​​ ಫೈನಲ್​ನಿಂದ ಅನರ್ಹಗೊಂಡರು. ಇದರ ಬೆನ್ನಲ್ಲೇ ಜಂಟಿ ಬೆಳ್ಳಿ ಪದಕಕ್ಕಾಗಿ ಕ್ರೀಡಾ ನ್ಯಾಯಾಲಯಕ್ಕೆ ವಿನೇಶ್ ಫೋಗಟ್ ಮನವಿ ಮಾಡಿದ್ದರು. ಆದರೆ, ಈ ವಾರದ ಆರಂಭದಲ್ಲಿ ಆ ಮನವಿ ವಜಾಗೊಳಿಸಲಾಯಿತು. ಹೀಗಾಗಿ ಅವರು ಪ್ಯಾರಿಸ್​ನಲ್ಲೇ ಉಳಿದುಕೊಳ್ಳಬೇಕಾಯಿತು.

ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಅಭಿಮಾನ ಕಂಡು ವಿನೇಶ್ ಕಣ್ಣೀರು ಹಾಕಿದರು. ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್​ರನ್ನು ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಫ್ಯಾನ್ಸ್ ಪ್ರೀತಿ ಕಂಡು ಕಣ್ಣೀರು ಹಾಕುತ್ತಾ ಕೈಮುಗಿದು ಧನ್ಯವಾದ ಅರ್ಪಿಸಿದರು. ಈ ವೇಳೆ ಅವರೊಂದಿಗೆ ಕುಟುಂಬದ ಸದಸ್ಯರು, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಕುಸ್ತಿಪಟುಗಳು ಜೊತೆಗಿದ್ದರು. ಅದರಲ್ಲೂ ಸಾಕ್ಷಿ ಮಲಿಕ್ ಬಿಗಿಯಾಗಿ ಅಪ್ಪಿಕೊಂಡು ಕಣ್ಣೀರು ಹಾಕಿದರು.

ಒಂದು ರಾತ್ರಿಗೆ ಹೆಚ್ಚಾಗಿತ್ತು 2 ಕೆಜಿ ತೂಕ

ಫೈನಲ್​ಗೂ ಮುನ್ನ ನಡೆದ ಫ್ರೀ ಕ್ವಾರ್ಟರ್​ ಫೈನಲ್, ಕ್ವಾರ್ಟರ್​ ಫೈನಲ್ ಮತ್ತು ಸೆಮಿಫೈನಲ್​​ ಪಂದ್ಯದಲ್ಲಿ ವಿನೇಶ್ 49.9 ಕೆಜಿ ತೂಕ ಇದ್ದರು. ಆದರೆ ಫೈನಲ್​​ಗೂ ಮುನ್ನ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ್ದರು. ಹಾಗಾಗಿ ಅವರು 2 ಕೆಜಿಗೂ ಹೆಚ್ಚು ತೂಕ ಹೆಚ್ಚಳವಾಗಿದ್ದರು. ಹಾಗಾಗಿ, ತೂಕ ಇಳಿಸಲು ಅವರು ರಾತ್ರಿ ಇಡೀ ಕಷ್ಟಪಟ್ಟಿದ್ದರು. ರಕ್ತ ಡ್ರಾ ಮಾಡಲಾಗಿತ್ತು. ಕೂದಲು ಕಟ್ ಮಾಡಲಾಗಿತ್ತು. ಸ್ಕಿಪಿಂಗ್, ರನ್ನಿಂಗ್, ಸೈಕ್ಲಿಂಗ್ ಸೇರಿ ಎಲ್ಲವನ್ನೂ ಮಾಡಿದ್ದರು. ಆದರೂ 100 ಗ್ರಾಂ ಹೆಚ್ಚಿದ್ದರು.

ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿಜೇಂದರ್ ಸಿಂಗ್ ಅವರೊಂದಿಗೆ ತೆರೆದ ವಾಹನದಲ್ಲಿ ವಿನೇಶ್ ನಿಂತು ಫ್ಯಾನ್ಸ್​ಗೆ ಧನ್ಯವಾದ ಅರ್ಪಿಸಿದರು. ನಾನು ಇಡೀ ದೇಶಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಆಕೆ ನಮ್ರತೆಯಿಂದ ಕೈ ಮುಗಿದು ಹೇಳಿದರು. ಫೋಗಟ್​ಗೆ ರಾಷ್ಟ್ರ ರಾಜಧಾನಿಗೆ ಬಂದಿಳಿದಿದ್ದರಿಂದ ದಟ್ಟವಾದ ಭದ್ರತೆ ಇತ್ತು. ಹಲವಾರು ಕಾರುಗಳು ಮತ್ತು ಅಭಿಮಾನಿಗಳೊಂದಿಗೆ ಮೆರವಣಿಗೆಯ ಮೂಲಕ ವಿಮಾನ ನಿಲ್ದಾಣದಿಂದ ಹರಿಯಾಣಕ್ಕೆ ಪ್ರಯಾಣಿಸಿದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.