Yuzvendra Chahal: ನಾನು ಅವರನ್ನು ಭೇಟಿಯಾದಾಗೆಲ್ಲಾ ಥ್ಯಾಂಕ್ಸ್ ಹೇಳ್ತೇನೆ; ಎಬಿಡಿ ಸಲಹೆ ಬಗ್ಗೆ ಚಹಾಲ್ ಮಾತು
ಕನ್ನಡ ಸುದ್ದಿ  /  ಕ್ರೀಡೆ  /  Yuzvendra Chahal: ನಾನು ಅವರನ್ನು ಭೇಟಿಯಾದಾಗೆಲ್ಲಾ ಥ್ಯಾಂಕ್ಸ್ ಹೇಳ್ತೇನೆ; ಎಬಿಡಿ ಸಲಹೆ ಬಗ್ಗೆ ಚಹಾಲ್ ಮಾತು

Yuzvendra Chahal: ನಾನು ಅವರನ್ನು ಭೇಟಿಯಾದಾಗೆಲ್ಲಾ ಥ್ಯಾಂಕ್ಸ್ ಹೇಳ್ತೇನೆ; ಎಬಿಡಿ ಸಲಹೆ ಬಗ್ಗೆ ಚಹಾಲ್ ಮಾತು

Chahal on AB de Villiers: ಮಿಸ್ಟರ್‌ 360 ಎಬಿ ಡಿವಿಲಿಯರ್ಸ್ ಅವರೊಂದಿಗಿನ ವಿಶೇಷ ನಂಟನ್ನು ಚಹಾಲ್‌ ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ ಹಾಗೂ ಭಾರತ ತಂಡದಲ್ಲಿ ಮಾರಕ ಸ್ಪಿನ್ನರ್‌ ಆಗಿ ಹೊರಹೊಮ್ಮುವಲ್ಲಿ ಎಬಿಡಿ ಪಾತ್ರವನ್ನು ಚಹಾಲ್‌ ತಿಳಿಸಿದ್ದಾರೆ.

ಯಜುವೇಂದ್ರ ಚಹಾಲ್ ಜೊತೆ ಎಬಿ ಡಿವಿಲಿಯರ್ಸ್
ಯಜುವೇಂದ್ರ ಚಹಾಲ್ ಜೊತೆ ಎಬಿ ಡಿವಿಲಿಯರ್ಸ್ (IPL)

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬೌಲರ್ ಯಜುವೇಂದ್ರ ಚಹಾಲ್‌ (Yuzvendra Chahal) ಐಪಿಎಲ್‌ನಲ್ಲಿ ದಾಖಲೆ ನಿರ್ಮಿಸಿದರು. ಬರೋಬ್ಬರಿ 184 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಇತಿಹಾಸ ನಿರ್ಮಿಸಿದರು. ಮುಂಬೈ ಇಂಡಿಯನ್ಸ್‌ ಮೂಲಕ ಐಪಿಎಲ್‌ ವೃತ್ತಿಜೀವನವನ್ನು ಆರಂಭಿಸಿದ ಚಹಾಲ್‌, ಆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಯಶಸ್ವಿಯಾದರು. ಆರ್‌ಸಿಬಿ ಪರ ಎಂಟು ಋತುಗಳಲ್ಲಿ ಆಡಿದ ಅವರನ್ನು ಆ ಬಳಿಕ ಫ್ರಾಂಚೈಸಿಯು ಕೈಬಿಟ್ಟಿತು.

ಚಹಾಲ್ 2016ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್‌ ತಂಡದ ಅವಿಭಾಜ್ಯ ಅಂಗವಾಗಿದ್ದರು. ತಂಡವು ಫೈನಲ್‌ಗೆ ತಲುಪುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಆದರೆ, ತಂಡವು ಅಂತಿಮವಾಗಿ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೋಲೊಪ್ಪಿಕೊಂಡಿತ್ತು. ಆರ್‌ಸಿಬಿ ಪರ ಲೆಗ್-ಸ್ಪಿನ್ನರ್ ಸ್ಥಿರ ಪ್ರದರ್ಶನ ನೀಡುತ್ತಿದ್ದ ಹಿನ್ನೆಲೆಯಲ್ಲಿ, ಅವರಿಗೆ ಟೀಮ್‌ ಇಂಡಿಯಾ ಬಾಗಿಲು ತೆರೆಯಿತು. ಈಗಲೂ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ ಜೊತೆಗಿನ ಮಾತುಕತೆ ವೇಳೆ, ಚಾಹಲ್ ಅವರು ಈ ಹಿಂದೆ ಆರ್‌ಸಿಬಿ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಆರ್‌ಸಿಬಿ ತಂಡದ ಮಾಜಿ ಸಹ ಆಟಗಾರ ಮಿಸ್ಟರ್‌ 360 ಎಬಿ ಡಿವಿಲಿಯರ್ಸ್ ಅವರೊಂದಿಗಿನ ವಿಶೇಷ ನಂಟನ್ನು ಚಹಾಲ್‌ ಬಹಿರಂಗಪಡಿಸಿದ್ದಾರೆ. ಆರ್‌ಸಿಬಿ ಹಾಗೂ ಭಾರತ ತಂಡದಲ್ಲಿ ಮಾರಕ ಸ್ಪಿನ್ನರ್‌ ಆಗಿ ಹೊರಹೊಮ್ಮುವಲ್ಲಿ ಎಬಿಡಿ ಪಾತ್ರವನ್ನು ಚಹಾಲ್‌ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕನೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಮಾತನಾಡಿದ 32 ವರ್ಷದ ಸ್ಪಿನ್ನರ್, ತಮ್ಮ ವೃತ್ತಿಜೀವನದ ಮೇಲೆ ಆದ ಬದಲಾವಣೆಯನ್ನು ವಿವರಿಸಿದ್ದಾರೆ.

“2014ರಲ್ಲಿ ನಾನು ಆರ್‌ಸಿಬಿಗೆ ಆಗಮಿಸಿದ ಬಳಿಕ ನನ್ನ ಜೀವನವೇ ಬದಲಾಯಿತು. ಜನರು ನನ್ನ ಸಾಮರ್ಥ್ಯವನ್ನು ಅರಿತುಕೊಂಡರು. ಆರ್‌ಸಿಬಿಯಲ್ಲಿದ್ದಾಗ ನಾನು ನನ್ನ ಕನಸನ್ನು ನನಸಾಗಿಸಿಕೊಂಡೆ. ಮೊದಲ 2ರಿಂದ 3 ವರ್ಷಗಳಲ್ಲಿ ನಾನು ಎಬಿ ಸರ್ ಅವರೊಂದಿಗೆ ಹೆಚ್ಚು ಮಾತನಾಡಿಲ್ಲ. ಅವರು ಒಬ್ಬ ದಿಗ್ಗಜ ಕ್ರಿಕೆಟಿಗನಾದ್ದರಿಂದ ಅವರೊಂದಿಗೆ ಮಾತನಾಡಲು ನನ್ನಿಂದ ಆಗುತ್ತಿರಲಿಲ್ಲ. ಆದರೆ ಒಂದು ರಾತ್ರಿ, ನಾವಿಬ್ಬರೂ ಹಲವು ಗಂಟೆಗಳ ಕಾಲ ಕುಳಿತು ಮಾತನಾಡಿದೆವು. ಆ ವೇಳೆ ಅವರು ‘ಸಮತೋಲನ’ದ ಬಗ್ಗೆ ನನ್ನೊಂದಿಗೆ ಮಾತನಾಡಿದರು. ಸಮತೋಲನದ ಅರ್ಥವೇನು ಎಂದು ನಾನು ಕೇಳಿದೆ” ಎಂದು ಚಹಾಲ್‌ ವಿವರಿಸಿದ್ದಾರೆ.

“ಎಲ್ಲವೂ ಸಮತೋಲನದಲ್ಲಿರಬೇಕು ಎಂದು ಅವರು ಹೇಳಿದರು. ನಿಮ್ಮ ವೈಯಕ್ತಿಕ ಬದುಕು ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಇದು 60-40 ಆಗಿರಬಾರದು. ಯಾವಾಗಲೂ ಸರಿಯಾದ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿ ಎಂದು ಹೇಳಿದರು. ಅದು ನನಗೆ ತುಂಬಾ ಸಹಾಯ ಮಾಡಿದ ಒಂದು ಸಲಹೆ. ಆ ಬಳಿಕ ನಾನು ಅವರನ್ನು ಭೇಟಿಯಾದಾಗಲೆಲ್ಲಾ, ಆ ಸಲಹೆಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಚಹಾಲ್ ಹೇಳಿದ್ದಾರೆ.

ಲೆಗ್-ಸ್ಪಿನ್ನರ್ ಚಹಾಲ್‌ ಅವರನ್ನು 2021ರ ಋತುವಿನ ಕೊನೆಯಲ್ಲಿ ಆರ್‌ಸಿಬಿಯು ತಂಡದಿಂದ ಬಿಡುಗಡೆ ಮಾಡಿತು. ಆದರೆ, ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡವು ಬರೋಬ್ಬರಿ 6.50 ಕೋಟಿ ರೂಪಾಯಿಗೆ ಮೆಗಾ ಹರಾಜಿನಲ್ಲಿ ಖರೀದಿಸಿತು. ಈಗಲೂ ರಾಜಸ್ಥಾನ ಪರ ಚಹಾಲ್‌ ಮಿಂಚುತ್ತಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.