Lionel Messi: ಫ್ರೆಂಚ್ ಲೀಗ್ ಕ್ಲಬ್‌ ಪಿಎಸ್‌ಜಿ ತೊರೆಯಲಿರುವ ಮೆಸ್ಸಿ; ಖಚಿತಪಡಿಸಿದ ಕೋಚ್ ಗಾಲ್ಟಿಯರ್
ಕನ್ನಡ ಸುದ್ದಿ  /  ಕ್ರೀಡೆ  /  Lionel Messi: ಫ್ರೆಂಚ್ ಲೀಗ್ ಕ್ಲಬ್‌ ಪಿಎಸ್‌ಜಿ ತೊರೆಯಲಿರುವ ಮೆಸ್ಸಿ; ಖಚಿತಪಡಿಸಿದ ಕೋಚ್ ಗಾಲ್ಟಿಯರ್

Lionel Messi: ಫ್ರೆಂಚ್ ಲೀಗ್ ಕ್ಲಬ್‌ ಪಿಎಸ್‌ಜಿ ತೊರೆಯಲಿರುವ ಮೆಸ್ಸಿ; ಖಚಿತಪಡಿಸಿದ ಕೋಚ್ ಗಾಲ್ಟಿಯರ್

ಲಿಯೋನೆಲ್ ಮೆಸ್ಸಿ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್‌ನಲ್ಲಿ ಎರಡು ವರ್ಷಗಳವರೆಗೆ ಆಡಿ, ಪ್ರಸಕ್ತ ಋತುವಿನ ಕೊನೆಯಲ್ಲಿ ಕ್ಲಬ್‌ ತೊರೆಯಲಿದ್ದಾರೆ.

ಕೈಲಿಯನ್ ಎಂಬಪ್ಪೆ ಮತ್ತು ಲಿಯೋನೆಲ್ ಮೆಸ್ಸಿ
ಕೈಲಿಯನ್ ಎಂಬಪ್ಪೆ ಮತ್ತು ಲಿಯೋನೆಲ್ ಮೆಸ್ಸಿ (REUTERS)

ಫುಟ್ಬಾಲ್‌ ವಿಶ್ವಕಪ್‌ ವಿಜೇತ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi), ಪ್ಯಾರಿಸ್ ಸೇಂಟ್-ಜರ್ಮೈನ್ (Paris Saint Germain) ಕ್ಲಬ್‌ ಅನ್ನು ತೊರೆಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕ್ಲಬ್‌ನಲ್ಲಿ ಎರಡು ವರ್ಷಗಳ ಕಾಲ ಆಡಿದ ಬಳಿಕ ಪ್ರಸಕ್ತ ಋತುವಿನ ಕೊನೆಯಲ್ಲಿ ತಂಡ ತೊರೆಯಲಿದ್ದಾರೆ ಎಂದು ಕ್ಲಬ್‌ ತಂಡದ ಕೋಚ್ ಕ್ರಿಸ್ಟೋಫ್ ಗಾಲ್ಟಿಯರ್ ಇಂದು (ಗುರುವಾರ) ಹೇಳಿದ್ದಾರೆ.

ಶನಿವಾರ ಕ್ಲೆರ್ಮಾಂಟ್ ತಂಡದ ವಿರುದ್ಧ ಪಿಎಸ್‌ಜಿಯ ಪಂದ್ಯವಿದೆ. ಪಾರ್ಕ್ ಡೆಸ್ ಪ್ರಿನ್ಸಸ್‌ನಲ್ಲಿ ನಡೆಯಲಿರುವ ಈ ಪಂದ್ಯವು ಮೆಸ್ಸಿ ಪಾಲಿಗೆ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್‌ ಪರ ಕೊನೆಯ ಪಂದ್ಯವಾಗಲಿದೆ ಎಂದು ಕ್ರಿಸ್ಟೋಫ್ ಗಾಲ್ಟಿಯರ್ ಸ್ಪಷ್ಟಪಡಿಸಿದ್ದಾರೆ. ಜೂನ್ ಅಂತ್ಯದ ವೇಳೆಗೆ ಈ ಕ್ಲಬ್‌ ಜೊತೆಗಿನ ಮೆಸ್ಸಿಯ ಒಪ್ಪಂದ ಅಂತ್ಯವಾಗಲಿದೆ.

“ಫುಟ್ಬಾಲ್ ಇತಿಹಾಸದಲ್ಲೇ ಅತ್ಯುತ್ತಮ ಆಟಗಾರನಿಗೆ ತರಬೇತಿ ನೀಡುವ ಭಾಗ್ಯ ನನಗೆ ಸಿಕ್ಕಿತು” ಎಂದು ಗಾಲ್ಟಿಯರ್ ಹೇಳಿಕೊಂಡಿದ್ದಾರೆ. “ಇದು ಪಾರ್ಕ್ ಡೆಸ್ ಪ್ರಿನ್ಸಸ್‌ನಲ್ಲಿ ಅವರ ಕೊನೆಯ ಪಂದ್ಯವಾಗಲಿದೆ. ಈ ಪಂದ್ಯದಲ್ಲಿ ಅವರು ಅಭೂತಪೂರ್ವ ಸ್ವಾಗತವನ್ನು ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿಕೊಂಡಿದ್ದಾರೆ.

2021ರ ಆಗಸ್ಟ್‌ ತಿಂಗಳಲ್ಲಿ, ಚಾಂಪಿಯನ್ಸ್ ಲೀಗ್ ಗೆಲ್ಲುವ ಮಹತ್ವಾಕಾಂಕ್ಷೆಯೊಂದಿಗೆ ಪಿಎಸ್‌ಜಿ ಕ್ಲಬ್‌ ಮೆಸ್ಸಿಯನ್ನು ತಂಡಕ್ಕೆ ನೇಮಿಸಿಕೊಂಡಿತು. ಆದರೆ, ಈ ಟ್ರೋಫಿ ಗೆಲ್ಲಲು ತಂಡದಿಂದ ಇನ್ನೂ ಸಾಧ್ಯವಾಗಿಲ್ಲ. ಅದರ ನಡುವೆ ಮೆಸ್ಸಿ ಕ್ಲಬ್‌ ತೊರೆಯುತ್ತಿದ್ದಾರೆ.

ಈ ವರ್ಷ ಇದೇ ಕ್ಲಬ್‌ ತಂಡವು ತನ್ನ 11ನೇ ಫ್ರೆಂಚ್ ಲೀಗ್ ಪ್ರಶಸ್ತಿಯನ್ನು ಗೆದ್ದಿತು. ಆದರೆ, ಯುರೋಪ್‌ನ ಅಗ್ರ ಪಂದ್ಯಾವಳಿಯಿಂದ ಮತ್ತೆ 16ರ ಸುತ್ತಿನಲ್ಲಿ ನಿರ್ಗಮಿಸಿತು.

ಫ್ರೆಂಚ್ ಲೀಗ್‌ಗೆ ಹೊಂದಿಕೊಳ್ಳಲು ಆರಂಭದಲ್ಲಿ ಹೆಣಗಾಡಿದ ಮೆಸ್ಸಿ, ತಮ್ಮ ಮೊದಲ 26 ಪಂದ್ಯಗಳಲ್ಲಿ ಕೇವಲ ಆರು ಲೀಗ್ ಗೋಲುಗಳನ್ನು ಬಾರಿಸಲು ಸಮರ್ಥರಾದರು. ಈ ಋತುವಿನಲ್ಲಿ ಅವರು ಫ್ರಾನ್ಸ್‌ನ ದೈತ್ಯ ಫುಟ್ಬಾಲ್‌ ಆಟಗಾರ ಎಂಬಪ್ಪೆಯೊಂದಿಗೆ ಆಡಿದ್ದರಿಂದ ಪ್ರದರ್ಶನದಲ್ಲಿ ಸುಧಾರಣೆ ಕಂಡಿದೆ. ಒಟ್ಟು 31 ಲೀಗ್ ಪಂದ್ಯಗಳಲ್ಲಿ, 35 ವರ್ಷದ ಮೆಸ್ಸಿ 16 ಗೋಲುಗಳನ್ನು ಗಳಿಸಿದ್ದಾರೆ.

ಈ ಋತುವಿನ ಆರಂಭದಲ್ಲಿ, ಕ್ಲಬ್‌ನ ಅನುಮತಿಯಿಲ್ಲದೆ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದ ಮೆಸ್ಸಿ ಅವರನ್ನು ಕ್ಲಬ್ ಅಮಾನತುಗೊಳಿಸಿತ್ತು. ಮಧ್ಯಪ್ರಾಚ್ಯ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸೌದಿ ಅರೇಬಿಯಾದೊಂದಿಗೆ ಮೆಸ್ಸಿ ವಾಣಿಜ್ಯ ಒಪ್ಪಂದವನ್ನು ಹೊಂದಿದ್ದಾರೆ. ಹೀಗಾಗಿ ಅವರು ಸೌದಿಗೆ ತೆರಳಿದ್ದರು.

ತಮ್ಮ ಅನುಮೋದನೆಯಿಲ್ಲದೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದಕ್ಕಾಗಿ ಮೆಸ್ಸಿಯನ್ನು ಇತ್ತೀಚೆಗೆ ಪ್ಯಾರಿಸ್ ಸೇಂಟ್-ಜರ್ಮೈನ್ ಎಫ್‌ಸಿ ಕ್ಲಬ್‌ ಅಮಾನತುಗೊಳಿಸಿತ್ತು. ಹೀಗಾಗಿ ಫುಟ್‌ಬಾಲ್ ಸೂಪರ್‌ಸ್ಟಾರ್ ತಮ್ಮ ಅನಧಿಕೃತ ಭೇಟಿಗಾಗಿ ಕ್ಲಬ್‌ಗೆ ಕ್ಷಮೆಯಾಚಿಸಿದ್ದರು. ವರದಿಗಳ ಪ್ರಕಾರ, ತರಬೇತಿಗೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ಅವರನ್ನು ಎರಡು ವಾರಗಳ ಕಾಲ ಅಮಾನತುಗೊಳಿಸಲಾಗಿತ್ತು. “ನಾನು ನನ್ನ ತಂಡದ ಆಟಗಾರರಿಗೆ ಮತ್ತು ಕ್ಲಬ್‌ಗೆ ಕ್ಷಮೆಯಾಚಿಸಲು ಬಯಸುತ್ತೇನೆ” ಎಂದು ಮೆಸ್ಸಿ ತಮ್ಮ ಸೌದಿ ಭೇಟಿಯ ನಂತರ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.