ಪ್ಯಾರಿಸ್ ಒಲಿಂಪಿಕ್ಸ್: ಭಾರತದ ಜುಲೈ 30ರ ಸಂಪೂರ್ಣ ವೇಳಾಪಟ್ಟಿ, 2ನೇ ಪದಕದ ನಿರೀಕ್ಷೆ ಹೆಚ್ಚಿಸಿದ ಮನು ಭಾಕರ್
ಭಾರತದ ಕ್ರೀಡಾಪಟುಗಳಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಮೂರು ದಿನಗಳಲ್ಲಿ ಭಾರತ ಒಂದು ಪದಕ ಮಾತ್ರವೇ ಗೆದ್ದಿದೆ. ನಾಲ್ಕನೇ ದಿನದಾಟವಾದ ಇಂದು ಎರಡನೇ ಪದಕ ಗೆಲ್ಲುವ ಅವಕಾಶವಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಪದಕದ ಬೆಡಗಿ ಮನು ಭಾಕರ್, ಎರಡನೇ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಈಗಾಗಲೇ ಪ್ಯಾರಿಸ್‌ನಲ್ಲಿ ಮೂರು ದಿನಗಳ ಕ್ರೀಡೆಗಳು ಮುಗಿದಿದ್ದು, ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನವಾದ ಜುಲೈ 30ರ ಮಂಗಳವಾರ ಭಾರತಕ್ಕೆ ಮತ್ತೆ ಪದಕ ಗೆಲ್ಲುವ ಅವಕಾಶವಿದೆ. ಈಗಾಗಲೇ ವನಿತೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಪ್ಯಾರಿಸ್‌ನಲ್ಲಿ ಪದಕಬೇಟೆಯ ಶುಭಾರಂಭ ಮಾಡಿದ ಮನು, ಇದೀಗ ಏರ್ ಪಿಸ್ತೂಲ್ ಮಿಶ್ರ ತಂಡ ಈವೆಂಟ್‌ನಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಆಡಲಿದ್ದಾರೆ. ತಮ್ಮ ಪಾಲುದಾರ ಸರಬ್ಜೋತ್ ಸಿಂಗ್ ಅವರೊಂದಿಗೆ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಮನು ಮತ್ತು ಸರಬ್ಜೋತ್ 580 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದ್ದರು. ಹೀಗಾಗಿ ಕಂಚಿನ ಪದಕ ಸುತ್ತಿನಲ್ಲಿ ಮಂಗಳವಾರ ದಕ್ಷಿಣ ಕೊರಿಯಾವನ್ನು ಎದುರಿಸಲಿದ್ದಾರೆ.
ಅರ್ಜೆಂಟೀನಾ ವಿರುದ್ಧದ ಪಂದ್ಯ ಡ್ರಾಗೊಳಿಸಿದ ನಂತರ, ಭಾರತೀಯ ಪುರುಷರ ಹಾಕಿ ತಂಡವು ತಮ್ಮ ಪೂಲ್ ಪಂದ್ಯದಲ್ಲಿ ಇಂದು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಉಳಿದಂತೆ ಬಾಕ್ಸಿಂಗ್, ಬ್ಯಾಡ್ಮಿಂಟನ್ ಪಂದ್ಯಗಳು ನಡೆಯಲಿವೆ.
ಜುಲೈ 30ರಂದು ಭಾರತದ ಕ್ರೀಡಾಪಟುಗಳು ಭಾಗಿಯಾಗಲಿರುವ ಈವೆಂಟ್‌ಗಳು ಯಾವುವು ಎಂಬುದನ್ನು ನೋಡೋಣ.
- ಮಧ್ಯಾಹ್ನ 12:30 : ಶೂಟಿಂಗ್ - ಮಹಿಳೆಯರ ಟ್ರ್ಯಾಪ್ ಅರ್ಹತಾ ಸುತ್ತು ದಿನ 1ರಲ್ಲಿ ಶ್ರೇಯಸಿ ಸಿಂಗ್ ಮತ್ತು ರಾಜೇಶ್ವರಿ ಕುಮಾರಿ.
- ಮಧ್ಯಾಹ್ನ 12:30 : ಶೂಟಿಂಗ್ - ಪುರುಷರ ಟ್ರ್ಯಾಪ್ ಅರ್ಹತಾ ಸುತ್ತು ದಿನ 2ರಲ್ಲಿ ಪೃಥ್ವಿರಾಜ್ ತೊಂಡೈಮಾನ್.
- ಮಧ್ಯಾಹ್ನ 1 ಗಂಟೆ: ಶೂಟಿಂಗ್ (ಪದಕದ ಸ್ಪರ್ಧೆ) - 10 ಮೀಟರ್ ಮಿಶ್ರ ಟೀಮ್ ಏರ್ ಪಿಸ್ತೂಲ್. ಕಂಚಿನ ಪದಕದ ಪಂದ್ಯದಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್. ದಕ್ಷಿಣ ಕೊರಿಯಾ ವಿರುದ್ಧ.
- ಮಧ್ಯಾಹ್ನ 1 ಗಂಟೆಯ ನಂತರ: ರೋಯಿಂಗ್ - ಪುರುಷರ ಸಿಂಗಲ್ಸ್ ಸ್ಕಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಬಾಲರಾಜ್ ಪನ್ವಾರ್.
- ಮಧ್ಯಾಹ್ನ 2:30: ಇಕ್ವೆಸ್ಟ್ರಿಯನ್ - ಅನುಷ್ ಅಗರ್ವಾಲಾ ಮತ್ತು ಕುದುರೆ ಸರ್ ಕ್ಯಾರಮೆಲ್ಲೊ ಓಲ್ಡ್. ಡ್ರೆಸ್ಸೇಜ್ ವೈಯಕ್ತಿಕ ಗ್ರಾಂಡ್ ಪ್ರಿಕ್ಸ್ ಈವೆಂಟ್.
- ಸಂಜೆ 4:45: ಹಾಕಿ - ಪುರುಷರ ಪೂಲ್ ಪಂದ್ಯದಲ್ಲಿ ಭಾರತ ಮತ್ತು ಐರ್ಲೆಂಡ್ ಪಂದ್ಯ.
- ಸಂಜೆ 5:14: ಆರ್ಚರಿ - ಮಹಿಳೆಯರ ರೌಂಡ್ ಆಫ್ 64 ವೈಯಕ್ತಿಕ ಪಂದ್ಯದಲ್ಲಿ ಅಂಕಿತಾ ಭಕತ್ ಅವರು ಪೋಲೆಂಡ್‌ನ ವಿಯೊಲೆಟಾ ಮೈಸ್ಜೋರ್ ಅವರನ್ನು ಎದುರಿಸಲಿದ್ದಾರೆ.
- ಸಂಜೆ 5:27: ಆರ್ಚರಿ - ಮಹಿಳೆಯರ ರೌಂಡ್ 64 ಪಂದ್ಯದಲ್ಲಿ ಇಂಡೋನೇಷ್ಯಾದ ಸಿಫಿಯಾ ಕಮಲ್ ವಿರುದ್ಧ ಭಜನ್ ಕೌರ್.
- ಸಂಜೆ 5:30: ಬ್ಯಾಡ್ಮಿಂಟನ್ - ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ಅರ್ಡಿಯಾಂಟೊ ವಿರುದ್ಧ ಸೆಣಸಲಿದೆ.
ಭಾರತದ ಜೋಡಿ ಈಗಾಗಲೇ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ. ಇವರಿಬ್ಬರು ಕೇವಲ ಒಂದು ಪಂದ್ಯ ಮಾತ್ರ ಆಡಿದ್ದಾರೆ. ಜರ್ಮನಿಯ ಮಾರ್ಕ್ ಲ್ಯಾಮ್ಸ್‌ಫಸ್-ಮಾರ್ವಿನ್ ಸೀಡೆಲ್ ವಿರುದ್ಧದ ಅವರ ಎರಡನೇ ಪಂದ್ಯ ರದ್ದುಗೊಳಿಸಲಾಯಿತು. ಲ್ಯಾಮ್‌ಫಸ್ ಗಾಯಗೊಂದ ಕಾರಣ ಕಾರಣ ಜರ್ಮನಿ ಆಟದಿಂದ ಹಿಂದೆ ಸರಿದಿತ್ತು.
- ಸಂಜೆ 6:20ರ ನಂತರ: ಬ್ಯಾಡ್ಮಿಂಟನ್ - ಮಹಿಳೆಯರ ಡಬಲ್ಸ್ ಗುಂಪು ಹಂತದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ವಿರುದ್ಧ ಸೆಟ್ಯಾನಾ ಮಪಾಸಾ ಮತ್ತು ಏಂಜೆಲಾ ಯು. ಭಾರತದ ಜೋಡಿ ಈಗಾಗಲೇ ತಮ್ಮ ಗುಂಪು ಹಂತದ ಎರಡೂ ಪಂದ್ಯಗಳಲ್ಲಿ ಸೋತಿದ್ದಾರೆ. ಹೀಗಾಗಿ ಇಲ್ಲಿ ಗೆದ್ದರೂ ಮುಂದಿನ ಸುತ್ತಿಗೆ ಪ್ರವೇಶಿಸುವುದಿಲ್ಲ.
- ಸಂಜೆ 7:16: ಬಾಕ್ಸಿಂಗ್ - ಪುರುಷರ 50 ಕೆಜಿ ರೌಂಡ್ ಆಫ್ 16 ಪಂದ್ಯದಲ್ಲಿ ಅಮಿತ್ ಪಂಗಲ್ ವಿರುದ್ಧ ಜಾಂಬಿಯಾದ ಪ್ಯಾಟ್ರಿಕ್ ಚಿನ್ಯೆಂಬಾ.
- ರಾತ್ರಿ 9:30: ಬಾಕ್ಸಿಂಗ್ - ಮಹಿಳೆಯರ 57 ಕೆಜಿ ರೌಂಡ್ ಆಫ್ 32 ಪಂದ್ಯದಲ್ಲಿ ಫಿಲಿಪೈನ್ಸ್‌ನ ನೆಸ್ತಿ ಪೆಟೆಸಿಯೊ ವಿರುದ್ಧ ಭಾರತದ ಜೈಸ್ಮಿನ್.
- ರಾತ್ರಿ 10:46: ಆರ್ಚರಿ - ಪುರುಷರ ವೈಯಕ್ತಿಕ 64ರ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಆಡಮ್ ಲಿ ವಿರುದ್ಧ ಧೀರಜ್ ಬೊಮ್ಮದೇವರ.
- ರಾತ್ರಿ 1:06: ಬಾಕ್ಸಿಂಗ್ - ಮಹಿಳೆಯರ 54 ಕೆಜಿ ರೌಂಡ್ ಆಫ್ 16 ಪಂದ್ಯದಲ್ಲಿ ಕೊಲಂಬಿಯಾದ ಯೆನಿ ಏರಿಯಾಸ್ ವಿರುದ್ಧ ಭಾರತದ ಪ್ರೀತಿ ಪವಾರ್.
ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಎಷ್ಟು ವಿಧ; ರೈಫಲ್ ಮತ್ತು ಪಿಸ್ತೂಲ್‌ಗೆ ವ್ಯತ್ಯಾಸಗಳೇನು? ಕ್ರೀಡೆಯ ನಿಯಮಗಳ ಸರಳ ವಿವರಣೆ