ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಎಷ್ಟು ವಿಧ; ರೈಫಲ್ ಮತ್ತು ಪಿಸ್ತೂಲ್‌ಗೆ ವ್ಯತ್ಯಾಸಗಳೇನು? ಕ್ರೀಡೆಯ ನಿಯಮಗಳ ಸರಳ ವಿವರಣೆ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಪದಕ ಶೂಟಿಂಗ್‌ನಲ್ಲಿ ಬಂದಿದೆ. ಏರ್ ಪಿಸ್ತೂಲ್ ಈವೆಂಟ್‌ನಲ್ಲಿ ಮನು ಭಾಕರ್ ಕಂಚಿನ ಪದಕಕ್ಕೆ ಶೂಟ್ ಮಾಡಿದ್ದಾರೆ. ಆ ಬಳಿಕ ನಡೆದ ಏರ್ ರೈಫಲ್ ಈವೆಂಟ್‌ನಲ್ಲಿ ಭಾರತ ಪದಕ ಗೆಲ್ಲಲು ವಿಫಲವಾಗಿದೆ. ಹಾಗಿದ್ದರೆ ಶೂಟಿಂಗ್‌ನಲ್ಲಿ ಎಷ್ಟು ವಿಧಗಳ ಈವೆಂಟ್‌ಗಳಿವೆ? ಅವುಗಳ ನಿಯಮವೇನು ಎಂಬುದು ಇಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ಬಂದಿದೆ. ಮನು ಭಾಕರ್ ಅವರು 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆದ್ದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎನಿಸಿಕೊಂಡರು. ಇಂದು, ಅಂದರೆ ಜುಲೈ 29ರಂದು 10 ಮೀಟರ್ ಏರ್ ರೈಫಲ್‌ನಲ್ಲಿ ಅರ್ಜುನ್ ಬಾಬುತಾ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾದರು. ಇವೆರಡೂ ಶೂಟಿಂಗ್ ವಿಭಾಗದಲ್ಲಿ ಬಂದರೂ, ಆರ್ ಪಿಸ್ತೂಲ್ ಹಾಗೂ ಏರ್ ರೈಫಲ್ ಬೇರೆ ಬೇಎರ ಈವೆಂಟ್ ಆಗಿವೆ. ಎರಡನ್ನೂ ಬೇರೆ ಬೇರೆ ಸ್ಪರ್ಧೆಗಳಾಗಿ ನಡೆಸಲಾಗುತ್ತದೆ. ಹಾಗಿದ್ದರೆ, ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಎಷ್ಟು ವಿಧಗಳಿವೆ? ಅವುಗಳ ನಡುವಿನ ವ್ಯತ್ಯಾಸಗಳೇನು? ಪಿಸ್ತೂಲ್ ಹಾಗೂ ರೈಫಲ್‌ಗಳ ನಡುವಣ ವ್ಯತ್ಯಾಸಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಶೂಟಿಂಗ್ ಕ್ರೀಡೆಯಲ್ಲಿ ಭಾಗಿಯಾಗುವವರಿಗೆ ತಾಳ್ಮೆ ಬೇಕು. ಗಮನವನ್ನು ಕೇಂದ್ರೀಕರಿಸಿ ಆಡುವ ಆಟ ಇದಾಗಿದ್ದು, ಹೆಚ್ಚು ನಿಖರತೆ ಮತ್ತು ಗಮನಹರಿಸಬೇಕಾದ ಕ್ರೀಡೆ. 1896ರಲ್ಲಿ ನಡೆದ ಅಥೆನ್ಸ್ ಒಲಿಂಪಿಕ್ಸ್‌ನಿಂದಲೇ ಶೂಟಿಂಗ್ ಒಲಿಂಪಿಕ್ ಕ್ರೀಡಾಕೂಟದ ಅವಿಭಾಜ್ಯ ಅಂಗವಾಗಿತ್ತು. 1904 ಮತ್ತು 1928ರ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಇರಲಿಲ್ಲ. ಇದನ್ನು ಹೊರತುಪಡಿಸಿ ಇತರ ಎಲ್ಲಾ ಬೇಸಿಗೆ ಕ್ರೀಡಾಕೂಟಗಳಲ್ಲಿಯೂ ಶೂಟಿಂಗ್ ಸ್ಪರ್ಧೆ ಇತ್ತು. ಈ ಬಾರಿಯೂ ಶೂಟಿಂಗ್ ಒಲಿಂಪಿಕ್ಸ್‌ನಲ್ಲಿ ನಡೆಯುತ್ತಿದೆ.
ಒಲಿಂಪಿಕ್ಸ್‌ನಲ್ಲಿ ಪ್ರಮುಖ ಕ್ರೀಡೆಯಾಗಿರುವ ಶೂಟಿಂಗ್‌ನ ನಿಯಮಗಳೇನು. ಎಷ್ಟು ವಿಧದ ಈವೆಂಟ್‌ಗಳು ಶೂಟಿಂಗ್‌ನಲ್ಲಿ ನಡೆಯುತ್ತವೆ, ಹಾಗೂ ಬಳಸುವ ಗನ್‌ಗಳ ವಿಶೇಷವೇನು ಎಂಬುದನ್ನು ತಿಳಿಯೋಣ.
ಒಲಿಂಪಿಕ್ ಶೂಟಿಂಗ್‌ಗೆ ಬಳಸುವ ಗನ್ ವಿಧಗಳು
ಒಲಿಂಪಿಕ್ ಶೂಟಿಂಗ್ ಸ್ಪರ್ಧೆಯು ಸಾಮಾನ್ಯವಾಗಿ ಮೂರು ವಿಭಾಗಗಳಲ್ಲಿ ನಡೆಯುತ್ತವೆ. ಇದಕ್ಕೆ ಮೂರು ವಿಧದ ಬಂದೂಕು ಅಥವಾ ಗನ್‌ಗಳನ್ನು ಬಳಸಲಾಗುತ್ತದೆ. ಅವುಗಳೇ ರೈಫಲ್, ಪಿಸ್ತೂಲ್ ಮತ್ತು ಶಾಟ್‌ಗನ್ (Rifle, Pistol and Shotgun). ವಿಶೇಷವೆಂದರೆ ರೈಫಲ್ ಮತ್ತು ಪಿಸ್ತೂಲ್ ಈವೆಂಟ್‌ಗಳಲ್ಲಿ, ಕ್ರೀಡಾಪಟುಗಳು ಒಳಾಂಗಣದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಜೋಡಿಸಲಾದ ಗುರಿಗಳ ಮೇಲೆ ಶೂಟ್ ಮಾಡುತ್ತಾರೆ. ಆದರೆ, ಶಾಟ್‌ಗನ್ ಹಾಗಲ್ಲ. ಇದನ್ನು ಹೊರಾಂಗಣದಲ್ಲಿ ನಡೆಸಲಾಗುತ್ತದೆ. ಶೂಟರ್‌ಗಳು ಗಾಳಿಯಲ್ಲಿ ಹಾರಿಸಲಾಗುವ ಗುರಿಗಳನ್ನು ಗುರಿಯಾಗಿರಿಸಿಕೊಂಡು ಶೂಟ್ ಮಾಡಬೇಕಾಗುತ್ತದೆ. ಹೀಗಾಗಿ ರೈಫಲ್ ಹಾಗೂ ಪಿಸ್ತೂಲ್ ಬಹುತೇಕ ಒಂದೇ ರೀತಿಯ ಆಟ. ಇದರಲ್ಲಿ ಸಣ್ಣ ವ್ಯತ್ಯಾಸಗಳಷ್ಟೇ ಇವೆ.
ಪ್ರತಿ ಶೂಟಿಂಗ್ ಸ್ಪರ್ಧೆಯನ್ನು ನಿಗದಿತ ದೂರದ ಲೆಕ್ಕಾಚಾರದ ಪ್ರಕಾರ ಬೇರೆ ಬೇರೆ ವಿಭಾಗಗಳಲ್ಲಿ ನಡೆಸಲಾಗುತ್ತದೆ. 10ಮೀ, 25ಮೀ ಹಾಗೂ 50ಮೀಟರ್ ಹೀಗೆ ಬೇರೆಬೇರೆ ವಿಭಾಗಗಳಿವೆ.
ಮೂರು ಗನ್‌ಗಳು ಹೇಗಿರುತ್ತವೆ?
- ರೈಫಲ್: ಇದು 5.6 ಮಿಲಿಮೀಟರ್ ಕ್ಯಾಲಿಬರ್‌ನ (ಗನ್ ಬ್ಯಾರೆಲ್‌ನ ಒಳ ವ್ಯಾಸ) ಸಿಂಗಲ್ ಲೋಡೆಡ್ ಗನ್. ಇದನ್ನು ಎಲ್ಲಾ ಈವೆಂಟ್‌ಗಳಲ್ಲಿ ಬಳಸಲಾಗುತ್ತದೆ. ಅಂದರೆ 10ಮೀ ಜೊತೆಗೆ 25ಮೀ ಹಾಗೂ 50ಮೀಟರ್‌ಗೂ ಇದೇ ಗನ್ ಬಳಸಲಾಗುತ್ತದೆ. ರೈಫಲ್ ಗಾತ್ರ ಪಿಸ್ತೂಲ್‌ಗಿಂತ ದೊಡ್ಡದಾಗಿರುತ್ತದೆ.
- ಪಿಸ್ತೂಲ್: 10 ಮೀಟರ್ ಏರ್ ಪಿಸ್ತೂಲ್ ಈವೆಂಟ್‌ನಲ್ಲಿ ಬಳಸಲಾಗುವ ಪಿಸ್ತೂಲ್ 4.5 ಮಿಲಿಮೀಟರ್ ಕ್ಯಾಲಿಬರ್‌ನ ಸಿಂಗಲ್ ಲೋಡೆಡ್ ಪಿಸ್ತೂಲ್. 25 ಮೀಟರ್ ಈವೆಂಟ್‌ಗಳಲ್ಲಿ ಬಳಸಲಾಗುವ ಪಿಸ್ತೂಲ್ 5.6 ಕ್ಯಾಲಿಬರ್ ಸಾಮರ್ಥ್ಯದ್ದಾಗಿವೆ. ಇದು ರಾಪಿಡ್ ಫೈರ್ ಪಿಸ್ತೂಲ್ ಆಗಿದೆ.
- ಶಾಟ್‌ಗನ್: ಶಾಟ್‌ಗನ್ ಎಂದರೆ 18.5 ಮಿಲಿಮೀಟರ್ ಕ್ಯಾಲಿಬರ್ ಹೊಂದಿರುವ 12 ಗೇಜ್ ಆಗಿದೆ. ಗೇಜ್ ಎಂಬುದು ಬಂದೂಕುಗಳ ಅಳತೆಯ ಘಟಕವಾಗಿದೆ. ಈ ಶಾಟ್‌ಗನ್‌ನಲ್ಲಿ ಗೇಜ್ ಅನ್ನು ಒಂದು ಪೌಂಡ್ ಸೀಸದಿಂದ ಮಾಡಿದ ಸಮಾನ ತೂಕದ ಗೋಳಾಕಾರದ ಚೆಂಡುಗಳ ಸಂಖ್ಯೆಯಿಂದ ನಿರ್ಧರಿಸಲಾಗುತ್ತದೆ. ಅದು ಗನ್ ಬ್ಯಾರೆಲ್‌ನೊಳಗೆ ಹೊಂದಿಕೊಳ್ಳುತ್ತದೆ.
ಇದನ್ನೂ ಓದಿ | ಮನು ಭಾಕರ್‌ಗೂ ಮುನ್ನ ಒಲಿಂಪಿಕ್ ಪದಕ ಗೆದ್ದ ಭಾರತೀಯ ಶೂಟರ್‌ಗಳಿವರು; ಒಬ್ಬರಿಂದ ಬಂಗಾರದ ಸಾಧನೆ
ರೈಫಲ್ ಈವೆಂಟ್‌ಗಳು ಮತ್ತು ನಿಯಮಗಳು
ರೈಫಲ್ ಶೂಟಿಂಗ್ ಈವೆಂಟ್ ಅನ್ನು ಎರಡು ಉಪವರ್ಗಗಳಾಗಿ ವಿಂಗಡಿಸಲಾಗಿದೆ. 50ಮೀ ರೈಫಲ್ ಮತ್ತು 10ಮೀ ಏರ್ ರೈಫಲ್ ಎಂಬುದಾಗಿ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಇದರಲ್ಲಿ ಕ್ರೀಡಾಪಟುಗಳು ನಿಗದಿತ ದೂರದಲ್ಲಿ ನಿಂತು ಗುರಿಯತ್ತ ಶೂಟ್ ಮಾಡುತ್ತಾರೆ. ನಿರ್ದಿಷ್ಟ ಸ್ಥಳದಲ್ಲಿ ಬೋರ್ಡ್‌ನಂಥಾ ಗುರಿ ಇರಿಸಲಾಗುತ್ತದೆ. 10 ಕೇಂದ್ರೀಕೃತ ವೃತ್ತಗಳನ್ನು ಹೊಂದಿರುವ ಗುರಿಯತ್ತ ಶೂಟರ್‌ಗಳು ಗುಂಡು ಹಾರಿಸುತ್ತಾರೆ. ಅಂದರೆ ತಮ್ಮ ರೈಫಲ್‌ನಿಂದ ಶೂಟ್ ಮಾಡುತ್ತಾರೆ.
10 ಮೀಟರ್ ಏರ್ ರೈಫಲ್: ಶೂಟರ್‌ಗಳು ಒಂದು ಗಂಟೆ ಮತ್ತು 15 ನಿಮಿಷಗಳ ಕಾಲಾವಧಿಯೊಳಗೆ ಗುರಿಯತ್ತ 60 ಸುತ್ತು ಗುಂಡು ಹಾರಿಸುತ್ತಾರೆ. ಇಲ್ಲಿ ಹೆಚ್ಚು ಅಂಕ ಗಳಿಸಿದ ಎಂಟು ಶೂಟರ್‌ಗಳು ಫೈನಲ್ ಪ್ರವೇಶಿಸುತ್ತಾರೆ.
50 ಮೀಟರ್ ರೈಫಲ್ 3 ಸ್ಥಾನಗಳು: ಈ ಈವೆಂಟ್‌ನಲ್ಲಿ ಕ್ರೀಡಾಪಟುಗಳು ಮೂರು ವಿಭಿನ್ನ ಸ್ಥಾನ ಅಥವಾ ಭಂಗಿಗಳಲ್ಲಿ ಗುರಿಯತ್ತ ಶೂಟ್ ಮಾಡುತ್ತಾರೆ. ಮಂಡಿಯೂರಿ, ಮಲಗಿ ಮತ್ತು ನಿಂತಿರುವ ಭಂಗಿಯಲ್ಲಿ ರೈಫಲ್ ಹಿಡಿದು ಶೂಟ್ ಮಾಡಬೇಕು. ಪ್ರತಿ ಸ್ಪರ್ಧಿಗಳು ಎರಡು ಗಂಟೆ 45 ನಿಮಿಷಗಳ ಕಾಲಮಿತಿಯೊಳಗೆ ಈ ಮೂರು ಭಂಗಿಗಳಲ್ಲಿ ಇದ್ದು ಪ್ರತಿಯೊಂದರಲ್ಲೂ 40 ಗುಂಡು ಹಾರಿಸುತ್ತಾರೆ. ಇಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಗ್ರ ಎಂಟು ಶೂಟರ್‌ಗಳು ಪದಕ ಸುತ್ತಿಗೆ (ಫೈನಲ್) ಪ್ರವೇಶಿಸುತ್ತಾರೆ.
ಪುರುಷರ ಮತ್ತು ಮಹಿಳೆಯರ ಸಿಂಗಲ್ ವಿಭಾಗಗಳ ಜೊತೆಗೆ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯೂ ಇರುತ್ತದೆ. ಇದರಲ್ಲಿ ಒಂದು ಪುರುಷ ಮತ್ತು ಒಬ್ಬ ಮಹಿಳಾ ಅಥ್ಲೀಟ್ ಇರುತ್ತಾರೆ. ಅರ್ಹತಾ ಸುತ್ತಿನಲ್ಲಿ ಪ್ರತಿ ತಂಡದ ಸದಸ್ಯರು 50 ನಿಮಿಷಗಳಲ್ಲಿ ಗುರಿಯತ್ತ 40 ಸುತ್ತು ಶೂಟ್ ಮಾಡ್ತಾರೆ. ನಂತರ ಅಗ್ರ ಐದು ತಂಡಗಳು ಅಂತಿಮ ಸುತ್ತಿಗೆ ಪ್ರವೇಶಿಸುತ್ತವೆ.
ಪಿಸ್ತೂಲ್ ಶೂಟಿಂಗ್ ನಿಯಮಗಳು
ಪಿಸ್ತೂಲ್ ಶೂಟಿಂಗ್‌ನಲ್ಲಿ ಮೂರು ಉಪವಿಭಾಗಗಳಿವೆ. ಅಂದರೆ 25ಮೀ ರಾಪಿಡ್ ಫೈರ್ ಪಿಸ್ತೂಲ್, 25ಮೀ ಪಿಸ್ತೂಲ್ ಮತ್ತು 10ಮೀ ಏರ್ ಪಿಸ್ತೂಲ್ ಈವೆಂಟ್ ನಡೆಸಲಾಗುತ್ತದೆ. ಪಿಸ್ತೂಲ್ ಶೂಟಿಂಗ್ ಅನ್ನು ಕ್ರೀಡಾಪಟುಗಳು ಕೇವಲ ಒಂದು ಕೈ ಮಾತ್ರ ಬಳಸಿ ದೇಹದ ಬೆಂಬಲವಿಲ್ಲದೆ ಶೂಟ್ ಮಾಡಬೇಕು.
25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್: ಇದು ಪುರುಷರಿಗಾಗಿ ಮಾತ್ರವೇ ಇರುವ ಈವೆಂಟ್. ಇಲ್ಲಿ ಶೂಟರ್‌ಗಳು ಎಂಟು, ಆರು ಮತ್ತು ನಾಲ್ಕು ಸೆಕೆಂಡುಗಳ ಅಲ್ಪಾವಧಿಯೊಳಗೆ ಸತತವಾಗಿ ಶೂಟ್ ಮಾಡಬೇಕಾಗುತ್ತದೆ. ಅರ್ಹತಾ ಸುತ್ತಿನಲ್ಲಿ ತಲಾ 30 ಹೊಡೆತಗಳ ಎರಡು ಸುತ್ತುಗಳಿರುತ್ತವೆ. ಹೆಚ್ಚು ಅಂಕ ಗಳಿಸಿದ ಎಂಟು ಶೂಟರ್‌ಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.
25 ಮೀಟರ್ ಪಿಸ್ತೂಲ್: ಇದು ಮಹಿಳೆಯರಿಗೆ ಮಾತ್ರವೇ ನಡೆಸುವ ಸ್ಪರ್ಧೆ. ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಈವೆಂಟ್‌ನಂತೆ, ತಲಾ 30 ಹೊಡೆತಗಳ ಎರಡು ಅರ್ಹತಾ ಸುತ್ತುಗಳು ಇರುತ್ತವೆ. ಅರ್ಹತಾ ಮಾನದಂಡ ಕೂಡಾ ಅದರಂತೆಯೇ ಇರುತ್ತದೆ.
10 ಮೀಟರ್ ಏರ್ ಪಿಸ್ತೂಲ್: ಇದರಲ್ಲಿ ಪುರುಷ, ಮಹಿಳಾ ಮತ್ತು ಮಿಶ್ರ ತಂಡ ವಿಭಾಗಳಿರುತ್ತವೆ. ಒಂದು ಗಂಟೆ ಮತ್ತು 15 ನಿಮಿಷಗಳ ಕಾಲಮಿತಿಯೊಳಗೆ 60 ಬಾರಿ ಗುರಿಯತ್ತ ಶೂಟ್ ಮಾಡಬೇಕು. ಏಕವ್ಯಕ್ತಿ ವಿಭಾಗಗಳಲ್ಲಿ ಅಗ್ರ ಎಂಟು ಮಂದಿ ಪದಕ ಸುತ್ತಿಗೆ ಅರ್ಹತೆ ಪಡೆಯುತ್ತಾರೆ. ಮಿಶ್ರ ತಂಡ ವಿಭಾಗದಲ್ಲಿ ಪ್ರತಿ ತಂಡದ ಸದಸ್ಯರು 40 ಸುತ್ತ ಫೈರ್ ಮಾಡುತ್ತಾರೆ. ಅಗ್ರ ಐದು ಸ್ಥಾನ ಪಡೆದ ತಂಡಗಳು ಫೈನಲ್ ಆಡುತ್ತವೆ.
ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಒಲಿಂಪಿಕ್ಸ್: ಲಕ್ಷ್ಯ ಸೇನ್ ಗೆಲುವು, ಆರ್ಚರಿ ತಂಡಕ್ಕೆ ಕ್ವಾರ್ಟರ್ ಫೈನಲ್ನಲ್ಲಿ ಸೋಲು; ಅರ್ಜೆಂಟೀನಾ ವಿರುದ್ಧದ ಹಾಕಿ ಪಂದ್ಯ ಡ್ರಾ