Asian Games: ರೋಚಕ ಫೈನಲ್‌ನಲ್ಲಿ ಪಾಕ್‌ ಸೋಲಿಸಿ ಬಂಗಾರ ಗೆದ್ದ ಭಾರತ ಪುರುಷರ ಸ್ಕ್ವಾಷ್‌ ತಂಡ
ಕನ್ನಡ ಸುದ್ದಿ  /  ಕ್ರೀಡೆ  /  Asian Games: ರೋಚಕ ಫೈನಲ್‌ನಲ್ಲಿ ಪಾಕ್‌ ಸೋಲಿಸಿ ಬಂಗಾರ ಗೆದ್ದ ಭಾರತ ಪುರುಷರ ಸ್ಕ್ವಾಷ್‌ ತಂಡ

Asian Games: ರೋಚಕ ಫೈನಲ್‌ನಲ್ಲಿ ಪಾಕ್‌ ಸೋಲಿಸಿ ಬಂಗಾರ ಗೆದ್ದ ಭಾರತ ಪುರುಷರ ಸ್ಕ್ವಾಷ್‌ ತಂಡ

Asian Games 2023: ಭಾರತದ ಸೌರವ್ ಘೋಸಲ್, ಅಭಯ್ ಸಿಂಗ್ ಮತ್ತು ಮಹೇಶ್ ಮಂಗಾಂವ್ಕರ್ ಅವರನ್ನೊಳಗೊಂಡ ಪುರುಷರ ಸ್ಕ್ವಾಷ್ ತಂಡವು, ಫೈನಲ್‌ನಲ್ಲಿ ಪಾಕಿಸ್ತಾನವನ್ನು 2-1 ಸೆಟ್‌ಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದೆ.

ಪಾಕಿಸ್ತಾನ ವಿರುದ್ಧ ಚಿನ್ನದ ಪದಕ ಗೆದ್ದ ನಂತರ ಭಾರತ ಅಭಯ್ ಸಿಂಗ್ ಸಂಭ್ರಮಿಸಿದ ಪರಿ
ಪಾಕಿಸ್ತಾನ ವಿರುದ್ಧ ಚಿನ್ನದ ಪದಕ ಗೆದ್ದ ನಂತರ ಭಾರತ ಅಭಯ್ ಸಿಂಗ್ ಸಂಭ್ರಮಿಸಿದ ಪರಿ (PTI)

ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಶನಿವಾರ ಭಾರತದ ಕ್ರೀಡಾಪಟುಗಳು ಬಂಗಾರದ ಬೇಟೆ ಮುಂದುವರೆಸಿದ್ದಾರೆ. ಪುರುಷರ ತಂಡದ ಸ್ಕ್ವಾಷ್ (squash) ಈವೆಂಟ್‌ನಲ್ಲಿ ಚಿನ್ನ ಗೆದ್ದಿದೆ. ರೋಚಕ ಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಭಾರತ ತಂಡವು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ.

ಸೌರವ್ ಘೋಸಲ್, ಅಭಯ್ ಸಿಂಗ್ ಮತ್ತು ಮಹೇಶ್ ಮಂಗಾಂವ್ಕರ್ (Saurav Ghosal, Abhay Singh, Mahesh Mangaonkar) ಅವರನ್ನೊಳಗೊಂಡ ಪುರುಷರ ಸ್ಕ್ವಾಷ್ ತಂಡವು, ಫೈನಲ್‌ನಲ್ಲಿ ಪಾಕಿಸ್ತಾನವನ್ನು 2-1 ಸೆಟ್‌ಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದೆ.

ಪಂದ್ಯದ ಹೀರೋ ಆಗಿ ಮಿಂಚಿದ ಚೆನ್ನೈ ಮೂಲದ ಅಭಯ್ ಸಿಂಗ್, ಕೊನೆಯ ಸುತ್ತಿನಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟು ಬಂಗಾರವನ್ನು ಖಚಿತಪಡಿಸಿದರು. 2-2ರಿಂದ ಸಮಬಲವಾಗಿದ್ದ ಪಂದ್ಯದಲ್ಲಿ, ಭಾರತಕ್ಕೆ ಬಂಗಾರ ಒಲಿಯಲು ಅಂತಿಮ ಸುತ್ತನ್ನು ಗೆಲ್ಲಲೇಬೇಕಿತ್ತು. ಡಿಸೈಡರ್‌ ಪಂದ್ಯದಲ್ಲಿ ಪಾಕಿಸ್ತಾನದ ನೂರ್ ಜಮಾನ್ ಅವರನ್ನು ಸೋಲಿಸಿ 3-2 ಅಂಕಗಳೊಂದಿಗೆ ಭಾರತಕ್ಕೆ ಚಿನ್ನದ ಪದಕ ಖಚಿತವಾಯ್ತು. 25 ವರ್ಷದ ಯುವ ಆಟಗಾರನು ಅಂತಿಮ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಪದಕ ಪಟ್ಟಿಗೆ ಮತ್ತೊಂದು ಚಿನ್ನ ಸೇರಿಸಿದರು. ರೋಚಕ ಗೆಲುವಿನೊಂದಿಗೆ ಸ್ಕ್ವಾಷ್ ರಾಕೆಟ್ ಅನ್ನು ಗಾಳಿಯಲ್ಲಿ ಎಸೆದು ಅಭಯ್ ಸಿಂಗ್ ಸಂಭ್ರಮಿಸಿದರು.

ಮೊದಲ ಸುತ್ತಿನಲ್ಲಿ ಮಹೇಶ್ ಮಂಗಾಂವ್ಕರ್ ಅವರು ಪಾಕಿಸ್ತಾನದ ಇಕ್ಬಾಲ್ ನಾಸಿರ್‌ ವಿರುದ್ಧ ಸೋತು ನಿರಾಶೆ ಮೂಡಿಸಿದರು. ಆ ಬಳಿಕ ಅನುಭವಿ ಸೌರವ್ ಘೋಸಲ್ ಅವರು ಮುಹಮ್ಮದ್ ಅಸಿಮ್ ಖಾನ್ ವಿರುದ್ಧ 3-0 ಅಂತರದಿಂದ ಗೆದ್ದು, ಮತ್ತೆ ರೋಚಕ ಪೈಪೋಟಿಗೆ ಒಳಪಡಿಸಿದರು. 1-1ರಿಂದ ಸಮಬಲ ಸಾಧಿಸಿದ ಬಳಿಕ, ಕೊನೆಯ ಸುತ್ತಿನಲ್ಲಿ ಭಾರತವು ಗೆಲ್ಲಲೇಬೇಕಿತ್ತು. ಅಭಯ್ ಸಿಂಗ್ ಗೆಲುವು ಸಾಧಿಸಿಯೇ ಬಿಟ್ಟರು. ಆ ಮೂಲಕ ಏಷ್ಯನ್‌ ಗೇಮ್ಸ್‌ನ ಲೀಗ್ ಹಂತದಲ್ಲಿ ಪಾಕ್‌ ವಿರುದ್ಧದ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತು. ಅಲ್ಲದೆ ಬಂಗಾರವನ್ನು ಕೂಡಾ ಗೆದ್ದಿತು.

ಭಾರತ ಪುರುಷರ ತಂಡವು ಕೊನೆಯ ಬಾರಿಗೆ 2014ರಲ್ಲಿ ಇಂಚಿಯಾನ್‌ನಲ್ಲಿ ನಡೆದ ಸ್ಕ್ವಾಷ್‌ನಲ್ಲಿ ಚಿನ್ನ ಗೆದ್ದಿತ್ತು. ಪಾಕಿಸ್ತಾನವು ಅದಕ್ಕೂ ಮುನ್ನ 2010ರಲ್ಲಿ ಗುವಾನ್‌ಝೌನಲ್ಲಿ ಚಿನ್ನ ಗೆದ್ದಿತ್ತು.

ಪುರುಷರ ಸ್ಕ್ವಾಷ್ ತಂಡ ಚಿನ್ನದ ಪದಕ ಗೆದ್ದ ನಂತರ, ಭಾರತದ ಪದಕಗಳ ಸಂಖ್ಯೆ 36ಕ್ಕೆ ವಿಸ್ತರಿಸಿದೆ. ಸದ್ಯ 10 ಚಿನ್ನ, 13 ಬೆಳ್ಳಿ ಹಾಗೂ 13 ಕಂಚುಗಳೊಂದಿಗೆ ಭಾರತವು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ.

ಟೆನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಬಂಗಾರ ಗೆದ್ದ ರೋಹನ್ ಬೋಪಣ್ಣ-ರುತುಜಾ ಭೋಸಲೆ ಜೋಡಿ

ಶನಿವಾರ ನಡೆದ ಟೆನಿಸ್‌ ಮಿಶ್ರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಜೋಡಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಚೈನೀಸ್ ತೈಪೆಯ ಒಂಬತ್ತನೇ ಶ್ರೇಯಾಂಕದ ಜೋಡಿಯಾದ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ಅವರನ್ನು ರೋಚಕ 2-6, 6-3 ಹಾಗೂ 10-4 ಸೆಟ್‌ಗಳಿಂದ ಸೋಲಿಸಿದ ಭಾರತೀಯರು ಬಂಗಾರಕ್ಕೆ ಕೊರಳೊಡ್ಡಿದ್ದಾರೆ. ಈ ಗೆಲುವಿನೊಂದಿಗೆ ಭಾರತವು ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ. ಕಳೆದ ಆರು ಏಷ್ಯನ್ ಗೇಮ್ಸ್ ಆವೃತ್ತಿಗಳಲ್ಲಿ ಕನಿಷ್ಠ ಒಂದು ಟೆನಿಸ್‌ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದೆ.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.