ವಿಶ್ವ ಚಾಂಪಿಯನ್ ಡಿ ಗುಕೇಶ್ ಶಾಲೆಗೆ ಹೋಗಿದ್ದು 5ನೇ ತರಗತಿವರೆಗೆ; ದಿಟ್ಟ ನಿರ್ಧಾರದ ಬಗ್ಗೆ ತಾಯಿ ಪದ್ಮಾ ಕುಮಾರಿ ಮನದ ಮಾತು
ಡಿ ಗುಕೇಶ್ ಚೆಸ್ ಮೇಲೆ ಹೆಚ್ಚು ಗಮನ ಹರಿಸಲು ಅವರು ಔಪಚಾರಿಕ ಶಾಲಾ ಶಿಕ್ಷಣದಿಂದ ಹೊರಗುಳಿಯಬೇಕಾಯ್ತು. ಗುಕೇಶ್ ತಂದೆ-ತಾಯಿ ಮಗನ ಭವಿಷ್ಯವನ್ನು ರೂಪಿಸಲು ದೃಢ ನಿರ್ಧಾರ ತೆಗೆದುಕೊಂಡರು. ಇದು ಅವರು ಇಂದು ವಿಶ್ವ ಚಾಂಪಿಯನ್‌ಶಿಪ್ ಗೆಲ್ಲಲು ನೆರವಾಯ್ತು.
ನೂತನ ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್, ವಿಶ್ವ ದಾಖಲೆಯ ಹಾದಿ ಸುಗಮವಾಗಿರಲಿಲ್ಲ. ನಿರಂತರ ಪ್ರಯತ್ನದ ಫಲವಾಗಿ, ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ತಮಿಳುನಾಡಿನ ಹುಡಗ ನಿರ್ಮಿಸಿದರು. ಚೆನ್ನೈನಿಂದ ಸಿಂಗಾಪುರದವರೆಗಿನ ಅವರ ಪ್ರಾಯಣದ ಹಾದಿಯಲ್ಲಿ ಹಲವು ಸವಾಲುಗಳಿದ್ದವು. ಅವರ ಐತಿಹಾಸಿಕ ಗೆಲುವಿನ ಹಿಂದೆ ಅವರ ಅಸಾಧಾರಣ ಪ್ರತಿಭೆ ಎದ್ದು ಕಾಣುತ್ತದೆ. ಇದರೊಂದಿಗೆ ಅವರ ತಂದೆ-ತಾಯಿಯರ ಅವಿರತ ಸಹಕಾರವೂ ಇದೆ.
ಗುಕೇಶ್ ತಾಯಿ-ತಂದೆಯ ಹೆಸರು ಪದ್ಮಾ ಕುಮಾರಿ ಮತ್ತು ರಜನಿಕಾಂತ್. ಇಂದು ಗುಕೇಶ್ ಸಾಧನೆ ಹಿಂದೆ ಇವರ ಬೆಂಬಲ ಮತ್ತು ತ್ಯಾಗ ಎದ್ದು ಕಾಣುತ್ತದೆ. ಚೆಸ್ ಬೇಸ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪದ್ಮಾ ಕುಮಾರಿ ಮತ್ತು ರಜನಿಕಾಂತ್, ತಮ್ಮ ಮಗನನ್ನು ಚೆಸ್‌ನಲ್ಲಿ ಉತ್ತಮ ಸಾಧನೆ ಮಾಡಲು ತೆಗೆದುಕೊಂಡ ಮಹತ್ವದ ನಿರ್ಧಾರಗಳ ಬಗ್ಗೆ ಮಾತನಾಡಿದರು.
ಗುಕೇಶ್ 5ನೇ ತರಗತಿಯವರೆಗೆ ಮಾತ್ರ ಶಾಲೆಗೆ ಹೋಗಿ ಓದಿದ್ದಾರೆ. ಆ ನಂತರ ನಂತರ ಗುಕೇಶ್ ಔಪಚಾರಿಕ ಶಿಕ್ಷಣವನ್ನು ನಿಲ್ಲಿಸುವ ನಿರ್ಧಾರಕ್ಕೆ ತಂದೆ ತಾಯಿ ಬಂದರು. ಇದು ಮಹತ್ವದ ನಿರ್ಧಾರ ಎಂಬುದರಲ್ಲಿ ಅನುಮಾನವೇ ಇಲ್ಲ. ತಾವು ಮತ್ತು ಪತಿ ತೆಗೆದುಕೊಂಡ ದಿಟ್ಟ ನಿರ್ಧಾರದ ಕುರಿತು ಪದ್ಮಾ ಕುಮಾರಿ ಮಾತನಾಡಿದರು.
ನಮ್ಮ ಮೇಲೆಯೇ ಅನುಮಾನವಿತ್ತು
“ನಾವು ನಮ್ಮನ್ನೇ ಅನುಮಾನಿಸಿದೆ ಅಸಂಖ್ಯಾತ ಕ್ಷಣಗಳಿವೆ” ಎಂಬುದನ್ನು ಪದ್ಮಾಕುಮಾರಿ ಒಪ್ಪಿಕೊಂಡರು. “ಬಾಲ್ಯದಲ್ಲಿ ಗುಕೇಶ್ ಕೆಲವು ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡದಿದ್ದಾಗ, ನಾವು ಸರಿಯಾದ ನಿರ್ಧಾರ ಮಾಡಿದ್ದೇವೆಯೇ ಎಂದು ನಮ್ಮನ್ನೇ ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದೆವು. ಆಗ ಅವ ಒಬ್ಬ ಮಗುವಾಗಿದ್ದ. ಹೀಗಾಗಿ ಅವನ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿತ್ತು,” ಎಂದು ಅವರು ಹೇಳಿದ್ದಾರೆ.
"ಗುಕೇಶ್ ಸಾಮರ್ಥ್ಯದ ಬಗ್ಗೆ ನಮಗೆ ಸ್ವಲ್ಪವೂ ಅನುಮಾನ ಇರಲಿಲ್ಲ. ಆದರೆ ಶಾಲೆಗಿಂತ ಚೆಸ್‌ಗೆ ಆದ್ಯತೆ ನೀಡುವ ನಿರ್ಧಾರವನ್ನು ನಾವು ಮತ್ತೆ ಮತ್ತೆ ಪರೀಕ್ಷಿಸಬೇಕಾಯ್ತು.
ಗುಕೇಶ್ ಅವರ ಸ್ಥಿತಿಸ್ಥಾಪಕತ್ವ ಮತ್ತು ದೃಢನಿಶ್ಚಯವು ಅವನ ತಂದೆ ರಜನಿಕಾಂತ್ ಅವರಿಂದ ಆಳವಾಗಿ ಪ್ರಭಾವಿತವಾಗಿತ್ತು. ಒಂದು ಕಾರ್ಯವನ್ನು ಆರಂಭಿಸಿದ ನಂತರ ಅದನ್ನು ಮುಗಿಸುವವರೆಗೆ ಇರಬೇಕಾದ ದೃಢ ನಿಲುವು ಗುಕೇಶ್‌ಗೆ ಸ್ಪೂರ್ತಿಯಾಯ್ತು.
ಅಪ್ಪನೇ ಆತನಲ್ಲಿ ಹಿಂದೆ ಸರಿಯಬೇಡ ಎಂದಿದ್ದರು
“ಆತ ಚಿಕ್ಕವನಿದ್ದಾಗ, ಯಾವುದಾದರೂ ಪಂದ್ಯಾವಳಿಯು ಉತ್ತಮವಾಗಿ ನಡೆಯದಿದ್ದರೆ ಅದರಿಂದ ಹಿಂದೆ ಸರಿಯುತ್ತಿದ್ದ. ಆದರೆ ಅವನ ತಂದೆ, 'ನೀನು ಪಂದ್ಯಾವಳಿಯನ್ನು ಮುಗಿಸಬೇಕು, ಅದಕ್ಕಾಗಿ ಕೊನೆಯವರೆಗೂ ಹೋರಾಡಬೇಕು' ಎಂದು ಹೇಳಿದರು. ಹೀಗಾಗಿ 'ಎಂದಿಗೂ ಬಿಟ್ಟುಕೊಡಬೇಡ' (ನೆವರ್ ಗಿವ್ ಅಪ್) ಎಂಬ ಮನೋಭಾವವು ತನ್ನ ತಂದೆ ತನ್ನಲ್ಲಿ ತುಂಬಿದ ಪ್ರಮುಖ ಮೌಲ್ಯಗಳಲ್ಲಿ ಒಂದಾಗಿದೆ ಎಂದು ಗುಕೇಶ್ ಈಗಲೂ ಒಪ್ಪಿಕೊಳ್ಳುತ್ತಾನೆ” ಎಂದು ಪದ್ಮಾ ಹೇಳಿದರು.