ಧಾರವಾಡ: ಪತ್ರಕರ್ತ ಶಂಕರ ಪಾಗೋಜಿ ಬರೆದ ಗಾಂಧಿ ಮಂದಿರ ಕಥಾ ಸಂಕಲನ ಬಿಡುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  ಧಾರವಾಡ: ಪತ್ರಕರ್ತ ಶಂಕರ ಪಾಗೋಜಿ ಬರೆದ ಗಾಂಧಿ ಮಂದಿರ ಕಥಾ ಸಂಕಲನ ಬಿಡುಗಡೆ

ಧಾರವಾಡ: ಪತ್ರಕರ್ತ ಶಂಕರ ಪಾಗೋಜಿ ಬರೆದ ಗಾಂಧಿ ಮಂದಿರ ಕಥಾ ಸಂಕಲನ ಬಿಡುಗಡೆ

ಮಹಾತ್ಮ ಗಾಂಧೀಜಿ ಅತ್ಯಂತ ಶ್ರೇಷ್ಠ ವ್ಯಕ್ತಿ. ಇಂತಹ ಅನೇಕ ಮಹನೀಯರ ಹೋರಾಟದ ಫಲದಿಂದ ಬಂದ ಸ್ವಾತಂತ್ರ್ಯ ದುರ್ಬಳಕೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿಷಾದಿಸಿದ್ದಾರೆ.

ಶಂಕರ ಪಾಗೋಜಿ ಬರೆದ ಗಾಂಧಿ ಮಂದಿರ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ
ಶಂಕರ ಪಾಗೋಜಿ ಬರೆದ ಗಾಂಧಿ ಮಂದಿರ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ

ಧಾರವಾಡ ನಗರದ‌ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಭವನದಲ್ಲಿ ಪತ್ರಕರ್ತ ಶಂಕರ ಪಾಗೋಜಿ ವಿರಚಿತ 'ಗಾಂಧಿ ಮಂದಿರ' ಕಥಾ ಸಂಕಲನವನ್ನು ಶುಕ್ರವಾರ (ಡಿಸೆಂಬರ್‌ 20) ಬಿಡುಗಡೆ ಮಾಡಲಾಯ್ತು. ಪುಸ್ತಕ ಬಿಡುಗಡೆ ಮಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಗತ್ತಿನಲ್ಲಿ ಮಹಾತ್ಮ ಗಾಂಧೀಜಿ ಅತ್ಯಂತ ಶ್ರೇಷ್ಠ ವ್ಯಕ್ತಿ. ತಮ್ಮ ಮೈಮೇಲೆ ಬಟ್ಟೆ ಹಾಕದೆ, ಇಡೀ ದೇಶಕ್ಕಾಗಿ ಜೀವನ ಮುಡಿಪು ಇಟ್ಟವರು. ಇಂತಹ ಅನೇಕ ಮಹನೀಯರ ಹೋರಾಟದ ಫಲದಿಂದ ಬಂದ ಸ್ವಾತಂತ್ರ್ಯ ದುರ್ಬಳಕೆಯಾಗುತ್ತಿದೆ ಎಂದು ವಿಷಾದಿಸಿದರು. ಯುವಜನತೆ ದೇಶ ಕಟ್ಟುವ ಕಾಯಕ ಮಾಡಬೇಕು ಎಂದು ಕೋರಿದರು.

ಬದಲಾದ ಕಾಲಘಟ್ಟದಲ್ಲಿ ಹಾಗೂ ಮೊಬೈಲ್ ಜಗತ್ತಿನಲ್ಲಿ ಪುಸ್ತಕ ಓದುವುದು ಹಾಗೂ ಪುಸಕ್ತ ಬರೆಯುವವರ ಸಂಖ್ಯೆಯೂ ಕಡಿಮೆ. ಕಲೆ, ಸಾಹಿತ್ಯ, ಸಂಗೀತ ಹೀಗೆ ಎಲ್ಲ ಕಲೆಗಳು ನಶಿಸುತ್ತಿವೆ. ಪತ್ರಕರ್ತ ಶಂಕರ ಪಾಗೋಜಿ ಒತ್ತಡದ ನಡುವೆಯೂ ಗಾಂಧಿ ಮಂದಿರ ಪುಸ್ತಕ ಬರೆದಿರುವುದು ಶ್ಲಾಘನೀಯ ಎಂದರು.

ಇಂದಿನ ರಾಜಕಾರಣ ಬಹಳ ಕಲುಷಿತಗೊಂಡು, ದ್ವೇಷದ ರಾಜಕಾರಣ ಹೆಚ್ಚಿದೆ. ಹಿಂದಿನ ಆದರ್ಶದ ರಾಜಕಾರಣಿಗಳು ಇಲ್ಲ. ರಾಜಕಾರಣ ಶುದ್ಧೀಕರಣಗೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಸಾರ್ವಜನಿಕರು ಎಲ್ಲಿಯವರೆಗೂ ಹಣ ಪಡೆದು ಓಟ್ ಹಾಕುತ್ತೀರೋ, ಅಲ್ಲಿಯವರೆಗೂ ವ್ಯವಸ್ಥೆಯನ್ನು ಬದಲಾಣೆ ಮಾಡುವುದು ಅಸಾಧ್ಯ. ಈ ವ್ಯವಸ್ಥೆಯೊಂದಿಗೆ ಬದುಕುವ ಸಂದಿಗ್ಧ ಎದುರಾಗಿದೆ. ಹೀಗಾಗಿ ಹಣ ಪಡೆದು ಮತ ಹಾಕುವ ಕೆಟ್ಟ ಪ್ರವೃತ್ತಿ ಬಿಡಬೇಕು ಎಂದು ನೆರದ ಜನರಿಗೆ ಸಲಹೆ ನೀಡಿದರು.

17 ಕಥೆಗಳ ಪುಸ್ತಕ

ಕೃತಿ ಪರಿಚಯಸಿದ ನಟರಾಜ ಮೂರಶಿಹಳ್ಳಿ, ಶಂಕರ ಪಾಗೋಜಿ ಅವರ ಗಾಂಧಿ ಮಂದಿರ ಪುಸ್ತಕವು 17 ಕಥೆಗಳನ್ನು ಒಳಗೊಂಡಿದೆ. ಕೃತಿಯ ಬರಹದ ಭಾವ, ಸಂಸ್ಕೃತಿ, ಗ್ರಾಮೀಣರ ಜನಜೀವನ, ಅಂತರ್ ಜಾತಿ ಮತ್ತು ಪ್ರೇಮ ವಿವಾಹ ಚಿತ್ರಣ ಕೃತಿಯಲ್ಲಿ ಕಟ್ಟಿಕೊಟ್ಟ ಪ್ರಯತ್ನ ಅದ್ಭುತ ಎಂದರು.

ಸಾಹಿತಿಗಳನ್ನು ಪರಿಚಯಿಸುವ ಕೈಂಕರ್ಯ ಹೆಚ್ಚೆಚ್ಚು ನಡೆಯಬೇಕು. ಮುಖ್ಯವಾಗಿ ಯುವಜನ ಮೊಬೈಲ್ ಜಗತ್ತಿನಿಂದ ಹೊರಬಂದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನದ ಕ್ಷಿತಿಜ ಹೆಚ್ಚಿಸಿಕೊಳ್ಳಬೇಕು. ನಶಿಸುತ್ತಿರುವ ಸಂಸ್ಕೃತಿ, ಸಂಸ್ಕಾರ ಉಳಿಸುವಂತೆ ಕರೆ ನೀಡಿದರು. ಬೆಂಗಳೂರಿನ ಸಿರಿವರ ಪ್ರಕಾಶನದ ಪ್ರಕಾಶಕ ರವೀಂದ್ರನಾಥ ಸಿರಿವರ, ಜಿಲ್ಲಾ ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು.

ಸೇಂಟ್ ಮೇರಿಸ್ ವಿದ್ಯಾರ್ಥಿಗಳಿಂದ ಗುರುವಂದನೆ

ಹುಬ್ಬಳ್ಳಿ ನಗರದ ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ 1999 - 2000ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶನಿವಾರ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದರು. ಸುಮಾರು 60 ವಿದ್ಯಾರ್ಥಿಗಳು ಹಾಗೂ ೩೦ ಶಿಕ್ಷಕರು ಭಾಗವಹಿಸಿದ್ದರು. ತಮ್ಮ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ ಇಂದಿನ ಜೀವನ ವರೆಗಿನ ಪಯಣದ ಅನುಭವಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡರು. ತಮ್ಮ ಜೀವನವನ್ನು ಬಹಳ ಚೆನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ ಎಲ್ಲ ಶಿಕ್ಷಕರನ್ನು ವಿದ್ಯಾರ್ಥಿಗಳು ಸತ್ಕರಿಸಿದರು.

ಧಾರವಾಡದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner