Isle of Man vs Spain: ಕೇವಲ ಎರಡೇ ಎರಡು ಎಸೆತಗಳಲ್ಲಿ ಚೇಸಿಂಗ್ ಮುಕ್ತಾಯ.. ಟಿ20ಯಲ್ಲಿ ನೂತನ ವಿಶ್ವದಾಖಲೆ ಬರೆದ ಸ್ಪೇನ್.!
Isle of Man vs Spain: ಐಸಲ್ ಆಫ್ ಮ್ಯಾನ್ ತಂಡ ವಿರುದ್ಧದ 6ನೇ ಟಿ20 ಪಂದ್ಯದಲ್ಲಿ ಸ್ಪೇನ್ ತಂಡವು ಐತಿಹಾಸಿಕ ಗೆಲುವನ್ನು ದಾಖಲಿಸಿದೆ. ಐಸಲ್ ಆಫ್ ಮ್ಯಾನ್ ತಂಡ ನೀಡಿದ್ದ 10 ರನ್ಗಳ ಗುರಿಯನ್ನು ಸ್ಪೇನ್ ಕೇವಲ ಎರಡೇ ಎಸೆತಗಳಲ್ಲಿ ಗೆದ್ದು ಬೀಗಿದೆ. ಆ ಮೂಲಕ ವಿಶ್ವ ದಾಖಲೆಯ ಪುಟಗಳಲ್ಲಿ ಹೆಸರನ್ನು ಬರೆದಿದೆ.
ಕ್ರಿಕೆಟ್ ಎಂಬ ಜಂಟಲ್ಮೆನ್ ಗೇಮ್ನಲ್ಲಿ ಏನು ಬೇಕಾದರೂ ಜರುಗಬಹುದು. ಪಂದ್ಯವು ಉಸಿರು ಬಿಗಿದಿಡುವಂತೆ ಮಾಡುತ್ತದೆ. ಸೋಲಾ..? ಗೆಲುವಾ..? ಎಂಬ ಕೌತುಕವನ್ನು ಸೃಷ್ಟಿಸುತ್ತದೆ. ಕೆಲವೊಮ್ಮೆ ಪಂದ್ಯವು ಕೊನೆಯ ಎಸೆತದವರೆಗೂ ಹೋಗಬಹುದು. ಇನ್ನೊಮ್ಮೆ 10 ಓವರ್ಗಳ ಒಳಗೆಯೇ ಮುಗಿಯಬಹುದು. ಆದರೆ ನೀವು ಎಂದಾದರೂ ಕೇವಲ 2 ಎಸೆತಗಳಲ್ಲಿ ಪಂದ್ಯ ಮುಗಿದಿರುವುದನ್ನು ನೋಡಿದ್ದೀರಾ..? ಇದು ನಂಬಲು ಸಾಧ್ಯವೇ.? ಇದು ಕ್ರಿಕೆಟ್ ಜಗತ್ತು. ಇಲ್ಲಿ ಯಾವುದೂ ಅಸಾಧ್ಯವಲ್ಲ. ಹೀಗೆ ಹೇಳುತ್ತಿದ್ದೇವೆ ಅಂದರೆ ಅದಕ್ಕೆ ಸಾಕ್ಷಿಯೂ ಇದೆ.
ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಕೇವಲ ಎರಡೇ ಬಾಲ್ಗಳಲ್ಲಿ ಪಂದ್ಯ ಮುಗಿದು ಹೋಗಿದೆ. ಇದು ಹೇಗೆ ಸಾಧ್ಯ ಎಂದು ನೀವು ಆಶ್ಚರ್ಯಚಕಿತರಾಗಿದ್ದೀರಿ ಅಲ್ವಾ.? ಈ ವಿಚಿತ್ರ ಪಂದ್ಯ ವಿಶ್ವ ದಾಖಲೆಯ ಪುಟಗಳಲ್ಲೂ ದಾಖಲಾಗಿದೆ ಎಂಬುದು ಮತ್ತೊಂದು ವಿಶೇಷ. ಬರೋಬ್ಬರಿ 118 ಎಸೆತಗಳನ್ನು ಬಾಕಿ ಉಳಿಸಿ ದೊಡ್ಡ ಮಾರ್ಜಿನ್ ಗೆಲುವು ಸಾಧಿಸಿ ಕ್ರಿಕೆಟ್ ಜಗತ್ತು ಇರುವರೆಗೂ ಇತಿಹಾಸ ಪುಟಗಳಲ್ಲಿ ಈ ಸಾಧನೆ ಅಚ್ಚಳಿಯದೇ ಇರಲಿದೆ.
ಇಂತಹ ನಂಬಲು ಅಸಾಧ್ಯವಾದ ಘಟನೆ ನಡೆದಿರೋದು, ಸ್ಪೇನ್ ಮತ್ತು ಐಸಲ್ ಆಫ್ ಮ್ಯಾನ್ ರಾಷ್ಟ್ರೀಯ ಕ್ರಿಕೆಟ್ ತಂಡಗಳ ನಡುವೆ.! ಹೌದು.! ಐಸಲ್ ಆಫ್ ಮ್ಯಾನ್ ತಂಡವು 6 ಪಂದ್ಯಗಳ ಟಿ20 ಸರಣಿಗಾಗಿ ಸ್ಪೇನ್ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲಿ ವೈಟ್ವಾಶ್ ಮುಖಭಂಗಕ್ಕೆ ಒಳಗಾಗಿರುವ ಐಸಲ್ ಆಫ್ ಮ್ಯಾನ್ ವಿಶ್ವದ ಅತ್ಯಂತ ಕೆಟ್ಟ ದಾಖಲೆ ಬರೆದ ಕುಖ್ಯಾತಿಗೂ ಪಾತ್ರವಾಗಿದೆ. ಸರಣಿಯ 6 ಟಿ20 ಪಂದ್ಯದಲ್ಲಿ ಈ ಕಳಪೆ ಸಾಧನೆ ಮಾಡಿದ್ದರೆ, ಸ್ಪೇನ್ ಇತಿಹಾಸ ಪುಟ ಸೇರಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಐಸಲ್ ಆಫ್ ಮ್ಯಾನ್, 8.4 ಓವರ್ಗಳಲ್ಲಿ ಗಳಿಸಿದ್ದೆಷ್ಟು ಗೊತ್ತಾ..? ಕೇವಲ 10 ರನ್ ಅಷ್ಟೆ.! ಜೋಸೆಫ್ ಬರೋಸ್ ಗಳಿಸಿದ 4 ರನ್ಗಳೇ ಐಸಲ್ ಆಫ್ ಮ್ಯಾನ್ ಪರ ಗರಿಷ್ಠ ಸ್ಕೋರ್ ಆಗಿದೆ. ಜಾರ್ಜ್ ಬರೋಸ್, ಜೇಕಬ್ ಬಟ್ಲರ್, ಫ್ರಾಸರ್ ಕ್ಲಾರ್ಕ್ ತಲಾ 2 ರನ್ ಸಿಡಿಸಿದರು. ಸ್ಪೇನ್ ಬೌಲಿಂಗ್ ದಾಳಿಗೆ ತತ್ತರಿಸಿದ ಎದುರಾಳಿ, ಬರೀ 10 ರನ್ಗಳಿಗೆ ಕುಸಿತ ಕಂಡಿತು. ಆ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಕಡಿಮೆ ರನ್ಗೆ ಆಲೌಟ್ ಆದ ಮೊದಲ ತಂಡ ಎಂಬ ಕುಖ್ಯಾತಿಗೆ ಒಳಗಾಗಿದೆ. ಮೊಹಮ್ಮದ್ ಕಮ್ರಾನ್, ಅತಿಫ್ ಮೆಹಮೂದ್ ತಲಾ 4 ವಿಕೆಟ್ ಪಡೆದರೆ, ಲೋರ್ನೆ ಬರ್ನ್ಸ್ 2 ವಿಕೆಟ್ ಕಬಳಿಸಿ ಮಿಂಚಿದ್ದರು.
ಆದರೆ ಈ ಸುಲಭ ಗುರಿ ಬೆನ್ನಟ್ಟಲು ಸ್ಪೇನ್ ತೆಗೆದುಕೊಂಡಿದ್ದು 2 ಎಸೆತಗಳನ್ನು ಮಾತ್ರ.! ಕ್ರೀಸ್ಗೆ ಬಂದ ಓಪನರ್ ಅವೈಸ್ ಅಹ್ಮದ್ ಈ ಪಂದ್ಯ ಮುಗಿಸಲು ಹೆಚ್ಚು ಸಮಯ ತೆಗೆದುಯಕೊಳ್ಳಲಿಲ್ಲ. ಎರಡು ಎಸೆತಗಳಿಗೆ 2 ಸಿಕ್ಸರ್ಗಳನ್ನು ಬಾರಿಸಿ ಪಂದ್ಯವನ್ನು ಬೇಗನೇ ಮುಗಿಸಿದರು. ಪಂದ್ಯದ ಮೊದಲ ಎಸೆತದಲ್ಲೇ ನೋಬಾಲ್ ಎಸೆದ ಜೋಸೆಫ್ ಬರೋಸ್, ಫ್ರೀ ಹಿಟ್ಗೆ ಸಿಕ್ಸ್ ನೀಡಿದರು. ಮರು ಎಸೆತದಲ್ಲೂ ಮತ್ತೊಂದು ಸಿಕ್ಸ್ ಚಚ್ಚಿಸಿಕೊಂಡರು. ಇದರೊಂದಿಗೆ ಪಂದ್ಯವು ಖಲ್ಲಾಸ್ ಆಯಿತು.
10 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದ ಸ್ಪೇನ್, 118 ಎಸೆತಗಳ ಬಿಗೆಸ್ಟ್ ಮಾರ್ಜಿನ್ (ಎಸೆತಗಳ ಅಂತರದಲ್ಲಿ) ಗೆಲುವು ದಾಖಲಿಸಿತು. ಸರಣಿ ಸೋತ ಐಸಲ್ ಆಫ್ ಮ್ಯಾನ್, ಕೆಟ್ಟ ದಾಖಲೆಗೆ ಒಳಗಾದ ಹಣೆಪಟ್ಟಿಯನ್ನು ಸೇರಿಸಿಕೊಂಡಿತು. 2ನೇ ಟಿ20 ಪಂದ್ಯ ರದ್ದಾಗಿದ್ದು ಹೊರತುಪಡಿಸಿ, ಉಳಿದ 5 ಪಂದ್ಯಗಳಲ್ಲೂ ಸ್ಪೇನ್ ದೊಡ್ಡ ಗೆಲುವುಗಳನ್ನೇ ದಾಖಲಿಸಿದೆ. ಕ್ರಿಕೆಟ್ನಲ್ಲಿ ಸಾಧ್ಯ. ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಈ ಪಂದ್ಯವೇ ಬೆಸ್ಟ್ ಎಕ್ಸಾಂಪಲ್.
ವಿಭಾಗ