ಜಾವೆಲಿನ್ ಥ್ರೋ: ಭರ್ಜಿಯ ಉದ್ದ-ಅಗಲ-ತೂಕ ಎಷ್ಟಿರಬೇಕು, ನಿಯಮಗಳು ಮತ್ತು ಸ್ಪರ್ಧೆಯ ಸ್ವರೂಪ ಹೇಗೆ? ಇಲ್ಲಿದೆ ವಿವರ
Javelin throw Know: ಜಾವೆಲಿನ್ ಥ್ರೋ ನಿಯಮಗಳೇನು, ಭರ್ಜಿಯ ಉದ್ದ, ಅಗಲ, ತೂಕ ಎಷ್ಟಿರಬೇಕು, ಸ್ಕೋರಿಂಗ್ ವ್ಯವಸ್ಥೆ ಹೇಗೆ? ಕ್ರೀಡೆಯ ಸ್ವರೂಪ ಹೇಗಿದೆ ಎಂಬುದರ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ಈಟಿ ಅಥವಾ ಭರ್ಜಿ ಎಸೆಯುವುದು ಮಾನವ ನಾಗರಿಕತೆಯಷ್ಟೇ ಹಳೆಯದು. ಅನಾದಿಕಾಲದಿಂದಲೂ ಬೇಟೆಯಾಡಲು ಮತ್ತು ಯುದ್ಧದ ಸಂದರ್ಭಗಳಲ್ಲಿ ಈಟಿಯನ್ನು ಬಳಸಲಾಗುತ್ತಿತ್ತು. ದಿನಗಳು ಉರುಳಿದಂತೆ ಮತ್ತು ನಾಗರಿಕತೆಯು ವಿಕಸನಗೊಂಡಂತೆ ಇದು ಕ್ರೀಡೆಯಾಗಿ ಮಾರ್ಪಟ್ಟಿದೆ. ಇಂದು ನಮಗೆ ತಿಳಿದಿರುವಂತೆ ಜಾವೆಲಿನ್ ಎಸೆತವು ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡೆಯಾಗಿದೆ. ಪ್ರಾಚೀನ ಕಾಲದ ಪ್ರಮುಖ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಸ್ವತಂತ್ರ ಕ್ರೀಡೆಯಾಗಿರಲಿಲ್ಲ. ಅದು ಬಹು-ಕ್ರೀಡಾ ಪೆಂಟಾಥ್ಲಾನ್ ಈವೆಂಟ್‌ನ ಭಾಗವಾಗಿತ್ತು. ಅಂದರೆ, ಲಾಂಗ್ ಜಂಪ್, ಡಿಸ್ಕಸ್ ಥ್ರೋ, ಸ್ಟೇಡಿಯನ್ ಫೂಟ್ ರೇಸ್ ಮತ್ತು ಕುಸ್ತಿ ಕ್ರೀಡೆಗಳಲ್ಲಿ ಜಾವೆಲಿನ್ ಕೂಡ ಒಂದಾಗಿತ್ತು.
ಆಧುನಿಕ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಪರಿಚಯವಾಗಿದ್ದು, 1908ರ ಲಂಡನ್ ಒಲಿಂಪಿಕ್ಸ್‌ನಲ್ಲಿ. ಅಂದಿನಿಂದ ಆಧುನಿಕ ಒಲಿಂಪಿಕ್ಸ್ನ ಭಾಗವಾಯಿತು. ಶಾಟ್ಪುಟ್, ಹ್ಯಾಮರ್, ಡಿಸ್ಕಸ್ ಥ್ರೋ ನಂತರ ಜಾವೆಲಿನ್ ಅನ್ನು ಕೊನೆಯದಾಗಿ ಈವೆಂಟ್ಗೆ ಸೇರಿಸಲಾಯಿತು. ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯು 1932 ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಯಿತು. ಅಂದಿನಿಂದ ಪುರುಷರ ಮತ್ತು ಮಹಿಳೆಯರ ಜಾವೆಲಿನ್ ಸ್ಫರ್ಧೆಗಳು ಇಂದು ಅತ್ಯಂತ ಜನಪ್ರಿಯ ಕ್ರೀಡೆಗಳಾಗಿ ಮಾರ್ಪಟ್ಟಿವೆ.
2020ರ ಟೊಕಿಯೊ ಒಲಿಂಪಿಕ್ಸ್‌ನಲ್ಲಿ (ಕೊರೊನಾ ಕಾರಣ 2021ರಲ್ಲಿ ನಡೆದಿತ್ತು) ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಭಾರತದಲ್ಲಿ ಜಾವೆಲಿನ್ ಥ್ರೋ ಕ್ರೀಡೆಯ ಕಡೆಗೆ ಯುವಕರ ಒಲವು ಹೆಚ್ಚಾಯಿತು. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಚೋಪ್ರಾ ಭರ್ಜಿ ಎಸೆತದಲ್ಲಿ ಮತ್ತೆ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಇದರ ಬೆನ್ನಲ್ಲೇ ಜಾವೆಲಿನ್ ಥ್ರೋ ಕುರಿತು ಹುಡುಕಾಟ ಹೆಚ್ಚಾಗಿದೆ. ಈ ಕ್ರೀಡೆಯ ಕುರಿತ ನಿಯಮಗಳು, ಭರ್ಜಿ ಉದ್ದ, ತೂಕ ಎಷ್ಟಿರಬೇಕು, ಸ್ಕೋರಿಂಗ್ ವ್ಯವಸ್ಥೆ ಹೇಗೆ? ಕ್ರೀಡೆಯ ಸ್ವರೂಪ ಹೇಗಿದೆ ಎಂಬುದನ್ನು ತಿಳಿಯಲು ಕ್ರೀಡಾಪ್ರೇಮಿಗಳು ಆಸಕ್ತಿ ತೋರುತ್ತಿದ್ದಾರೆ. ಅದರ ಭಾಗವಾಗಿ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ಜಾವೆಲಿನ್ ತೂಕ ಮತ್ತು ಉದ್ದ
ಜಾವೆಲಿನ್ ಅಥವಾ ಈಟಿ ಸಿಲಿಂಡರಾಕಾರ ಶೇಪ್ ಹೊಂದಿದೆ. ಎರಡೂ ತುದಿಗಳು ಚೂಪಾಗಿರುತ್ತವೆ. ಹಿರಿಯ ಪುರುಷರ ಸ್ಪರ್ಧೆಗಳಲ್ಲಿ ಬಳಸುವ ಜಾವೆಲಿನ್‌ಗಳು ಕನಿಷ್ಠ 800 ಗ್ರಾಂ ತೂಗಬೇಕು. 2.6 ಮೀಟರ್‌ನಿಂದ 2.7 ಮೀಟರ್ ಒಳಗೆ ಉದ್ದ ಇರಲಿದೆ. ಮಹಿಳೆಯರ ಜಾವೆಲಿನ್ ಸ್ಪರ್ಧೆಗಳಲ್ಲಿ ಬಳಸುವ ಭರ್ಜಿಯ ಕನಿಷ್ಠ ತೂಕ 600 ಗ್ರಾಂ ಇರಲಿದೆ. ಜಾವೆಲಿನ್ ಉದ್ದವು 2.2 ಮೀಟರ್ ಮತ್ತು 2.3 ಮೀಟರ್ ನಡುವೆ ಉದ್ದ ಇರಲಿದೆ.
ಒಂದು ಜಾವೆಲಿನ್ ಮೂರು ಭಾಗಗಳನ್ನು ಹೊಂದಿರುತ್ತದೆ. ಒಂದು ತಲೆ, ಒಂದು ಹಿಡಿಕೆ ಮತ್ತು ಬಳ್ಳಿಯ ಹಿಡಿತ (Cord Grip). ಜಾವೆಲಿನ್‌ನ ಹಿಡಿತ ಅಥವಾ ಮಧ್ಯಭಾಗ ಲೋಹದಿಂದ ಮಾಡಲ್ಪಟ್ಟಿರುತ್ತದೆ. ಮೃದುವಾದ ಫಿನಿಷಿಂಗ್ ಇರುತ್ತದೆ. ಜಾವೆಲಿನ್ನಲ್ಲಿ ಪುರುಷರು ಹಿಡಿಯುವ ಭಾಗವು ತುದಿಯಿಂದ 0.9 ಮೀಟರ್‌ನಿಂದ 1.06 ಮೀಟರ್ ಮಧ್ಯೆ ಹಿಡಿದುಕೊಳ್ಳಬೇಕು. ಮಹಿಳೆಯರಿಗೆ 0.8 ಮೀಟರ್‌ನಿಂದ 0.92 ಮೀಟರ್ ನಡುವೆ ಜಾವೆಲಿನ್ ಹಿಡಿದುಕೊಳ್ಳಬೇಕು. ಜಾವೆಲಿನ್ ದಪ್ಪ 0.8 ಮಿಲಿ ಮೀಟರ್ ಮೀರಬಾರದು.
ಜಾವೆಲಿನ್ ಎಸೆತ ಕ್ಷೇತ್ರ
ಜಾವೆಲಿನ್ ಥ್ರೋ ಸ್ಪರ್ಧೆಗಳು ನಡೆಯುವ ಕೇಂದ್ರವನ್ನು 2 ಭಾಗಗಳಾಗಿ ರನ್‌ವೇ ಮತ್ತು ಲ್ಯಾಂಡಿಂಗ್ ಸೆಕ್ಟರ್ ಎಂದು ವಿಂಗಡಿಸಲಾಗುತ್ತದೆ. ರನ್‌ವೇ ಅಥವಾ ಟೇಕ್ ಆಫ್ ಪ್ರದೇಶವು ಜಾವೆಲಿನ್ ಎಸೆಯುವ ಕೇಂದ್ರ ಸ್ಥಾನ. ರನ್‌ವೇ ಕನಿಷ್ಠ 30 ಮೀಟರ್ ಉದ್ದವಿರಬೇಕು. ಕೆಲವೊಮ್ಮೆ 36.50 ಮೀಟರ್ ಇರುತ್ತದೆ. ರನ್‌ವೇ ಕನಿಷ್ಠ ಅಗಲವು 4 ಮೀಟರ್ ಆಗಿರಬೇಕು. ಅಥ್ಲೀಟ್‌ಗಳು ತಮ್ಮ ಪ್ರಯತ್ನ ಪ್ರಾರಂಭಿಸಿದ ನಂತರ ರನ್‌ವೇ ಲೈನ್ ಮೀರಿ ಹೆಜ್ಜೆ ಇಡುವಂತಿಲ್ಲ. ಅಂದರೆ ಪೋಲ್ ಲೈನ್. ಲ್ಯಾಂಡಿಂಗ್ ಸೆಕ್ಟರ್ ಅಂದರೆ ಭರ್ಜಿ ಲ್ಯಾಂಡ್ ಆಗುವ ಪ್ರದೇಶ. ಅದನ್ನು ಹುಲ್ಲು ಅಥವಾ ಕೃತಕ ಟರ್ಫ್‌ನಿಂದ ಮುಚ್ಚಲಾಗಿರುತ್ತದೆ.
ಜಾವೆಲಿನ್ ಎಸೆತ ನಿಯಮಗಳು
ಕಿರಿದಾದ ಸಿಲಿಂಡರಾಕಾದ ಟೊಳ್ಳಾದ ಈಟಿಯನ್ನು ಬಹುದೂರ ಎಸೆದವರನ್ನು ವಿಜೇತರೆಂದು ನಿರ್ಧರಿಸಲಾಗುತ್ತದೆ. ಒಬ್ಬ ಆಟಗಾರನಿಗೆ ಆರು ಸಲ ಜಾವೆಲಿನ್ ಎಸೆಯಲು ಅವಕಾಶ ನೀಡಲಾಗುತ್ತದೆ. ಈ ಆರು ಪ್ರಯತ್ನಗಳಲ್ಲಿ ಯಾರು ಹೆಚ್ಚು ದೂರ ಎಸೆದಿರುತ್ತಾರೋ ಅವರನ್ನು ವಿಜೇತರೆಂದು ನಿರ್ಧರಿಸಲಾಗುತ್ತದೆ. ಅಂದರೆ, ಆರು ಅವಕಾಶಗಳಲ್ಲಿ ಮೂರನೇ ಪ್ರಯತ್ನದಲ್ಲಿ ಹೆಚ್ಚು ದೂರ ಎಸೆದಿದ್ದರೆ ಅದನ್ನೇ ಗಣನೆಗೆ ತೆಗೆದುಕೊಳ್ಳಲಾ ಎಸೆದ ಜಾವೆಲಿನ್ ನೇರವಾಗಿ ಲ್ಯಾಂಡಿಂಗ್ ಸೆಕ್ಟರ್ನಲ್ಲಿ ಇಳಿಯಬೇಕು. ಆ ಭರ್ಜಿ ನೆಲದಲ್ಲಿ ಗುರುತು ಮಾಡಬೇಕು. ಆದರೆ, ನೆಲದಲ್ಲಿ ಅಂಟಿ ನಿಂತುಕೊಳ್ಳಲೇಬೇಕು ಅಂತೇನಿಲ್ಲ. ಕ್ರೀಡಾಪಟುವು ಒಂದು ಕೈಯಿಂದ ಜಾವೆಲಿನ್ ಹಿಡಿತ ಹಿಡಿದಿರಬೇಕು.
ಎಸೆಯುವ ಕೈನಲ್ಲಿ ಕೈಗವಸು ಧರಿಸುವಂತಿಲ್ಲ. ಥ್ರೋ ಸಮಯದಲ್ಲಿ ಬೆರಳುಗಳಿಗೆ ಟೇಪ್ ಬಳಸಬಹುದು. ಆದರೆ ತೀರ್ಪುಗಾರರು ಸ್ಪರ್ಧೆಗೂ ಮೊದಲು ಟೇಪಿಂಗ್ ಪರಿಶೀಲಿಸುತ್ತಾರೆ. ಎರಡು ಅಥವಾ ಹೆಚ್ಚಿನ ಬೆರಳುಗಳಿಗೆ ಒಟ್ಟಿಗೆ ಟೇಪ್ ಮಾಡಲು ಅನುಮತಿ ಇರುವುದಲ್ಲ. ಎಸೆಯುವಿಕೆಯ ಸಂಪೂರ್ಣ ಪ್ರಕ್ರಿಯೆ ಉದ್ದಕ್ಕೂ ಜಾವೆಲಿನ್ ಅನ್ನು ಓವರ್‌ಹ್ಯಾಂಡ್ ಸ್ಥಾನದಲ್ಲಿ ಇಡಬೇಕು, ಅಂದರೆ ಭುಜದ ಮೇಲೆ ಅಥವಾ ಎಸೆಯುವ ತೋಳಿನ ಮೇಲಿನ ಭಾಗದ ಮೇಲಿರಬೇಕು. ಥ್ರೋ ಪೂರ್ಣಗೊಳ್ಳುವವರೆಗೆ ಕ್ರೀಡಾಪಟುಗಳು ಲ್ಯಾಂಡಿಂಗ್ ಸೆಕ್ಟರ್‌ಗೆ ಬೆನ್ನು ತಿರುಗಿ ಹೋಗುವಂತಿಲ್ಲ.
ಜಾವೆಲಿನ್ ಅನ್ನು ಬಿಡುಗಡೆ ಮಾಡುವಾಗ ಕ್ರೀಡಾಪಟುಗಳು ಫೌಲ್ ಲೈನ್ ಹಿಂದೆ ಇರಬೇಕು. ಕ್ರೀಡಾಪಟು ತಮ್ಮ ಎಸೆತವನ್ನು ಒಂದು ನಿಮಿಷದಲ್ಲಿ ಪೂರ್ಣಗೊಳಿಸಬೇಕು. ಮೇಲಿನ ಯಾವುದೇ ನಿಯಮಗಳನ್ನು ಅನುಸರಿಸದಿದ್ದರೆ ಫೌಲ್ ಆಗುತ್ತದೆ. ಅವರು ಎಷ್ಟೇ ದೂರ ಎಸೆದರೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಜಾವೆಲಿನ್ ಎಸೆತದಲ್ಲಿ ಇಲ್ಲಿ ದೂರವನ್ನು ಲೆಕ್ಕಹಾಕುತ್ತದೆ. ಜಾವೆಲಿನ್ ಎಸೆದ ಜಾಗದಿಂದ ಗುರಿ ಮುಟ್ಟಿದ ಸ್ಥಳ ಗುರುತಿಸಿ ಸ್ಕೋರಿಂಗ್ ವ್ಯವಸ್ಥೆ ಮಾಡಲಾಗುತ್ತದೆ.
ಜಾವೆಲಿನ್ ಎಸೆತ ಸ್ಪರ್ಧೆಯ ಸ್ವರೂಪ
ಜಾವೆಲಿನ್ ಥ್ರೋ ಈವೆಂಟ್‌ಗಳ ಸ್ವರೂಪಗಳು ಸ್ಪರ್ಧೆಯಿಂದ ಸ್ಪರ್ಧೆಗೆ ಬದಲಾಗುತ್ತದೆ. ಒಲಿಂಪಿಕ್ಸ್ ಸೇರಿ ಪ್ರಮುಖ ಸ್ಪರ್ಧೆಗಳಲ್ಲಿ ಜಾವೆಲಿನ್ ಥ್ರೋ 6 ಸುತ್ತುಗಳನ್ನು ಹೊಂದಿರುತ್ತದೆ. 8 ಸ್ಪರ್ಧಿಗಳಿಗಿಂತ ಕಡಿಮೆ ಇದ್ದರೆ ಎಲ್ಲಾ ಕ್ರೀಡಾಪಟುಗಳು 6 ಸುತ್ತುಗಳನ್ನು ಹೊಂದಿರಲಿದ್ದಾರೆ. ಆದಾಗ್ಯೂ, ಈವೆಂಟ್‌ನಲ್ಲಿ ಎಂಟಕ್ಕಿಂತ ಹೆಚ್ಚು ಅಥ್ಲೀಟ್‌ಗಳಿದ್ದರೆ, ಮೊದಲ ಮೂರು ಸುತ್ತುಗಳ ನಂತರ ಅಗ್ರ ಎಂಟು ಮಂದಿ ಮಾತ್ರ ಉಳಿದ ಮೂರು ಸುತ್ತುಗಳಲ್ಲಿ ಸ್ಪರ್ಧಿಸುತ್ತಾರೆ. ದೂರ ಎಸೆದ ಕ್ರೀಡಾಪಟುವನ್ನು ವಿಜೇತರೆಂದು ಘೋಷಿಸುತ್ತಾರೆ.