PKL 10: ಜೈಪುರ ಬಳಿಕ ಪಾಟ್ನಾ ವಿರುದ್ಧದ ಪಂದ್ಯವೂ ಟೈನಲ್ಲಿ ಅಂತ್ಯ; ಬೆಂಗಳೂರು ಬುಲ್ಸ್ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ
ಕನ್ನಡ ಸುದ್ದಿ  /  ಕ್ರೀಡೆ  /  Pkl 10: ಜೈಪುರ ಬಳಿಕ ಪಾಟ್ನಾ ವಿರುದ್ಧದ ಪಂದ್ಯವೂ ಟೈನಲ್ಲಿ ಅಂತ್ಯ; ಬೆಂಗಳೂರು ಬುಲ್ಸ್ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ

PKL 10: ಜೈಪುರ ಬಳಿಕ ಪಾಟ್ನಾ ವಿರುದ್ಧದ ಪಂದ್ಯವೂ ಟೈನಲ್ಲಿ ಅಂತ್ಯ; ಬೆಂಗಳೂರು ಬುಲ್ಸ್ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ

Pro Kabaddi League: ಬೆಂಗಳೂರು ಬುಲ್ಸ್‌ ತಂಡದ ಪ್ಲೇ ಆಫ್‌ ಹಾದಿ ಸಂಕಷ್ಟದಲ್ಲಿದೆ. ಸತತ ಎರಡು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿರುವುದು ತಂಡದ ನಷ್ಟವಾಗಿದೆ. ತಂಡವು ಮುಂದೆ ಐದು ಪಂದ್ಯಗಳಲ್ಲಿ ಮಾತ್ರ ಆಡಲಿದ್ದು, ಈ ಎಲ್ಲಾ ಪಂದ್ಯಗಳಲ್ಲಿ ಗೆದ್ದರೂ ತಂಡ ಪ್ಲೇ ಆಫ್‌ ಪ್ರವೇಶಿಸುವುದು ಕಷ್ಟ.

ಬೆಂಗಳೂರು ಬುಲ್ಸ್ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ
ಬೆಂಗಳೂರು ಬುಲ್ಸ್ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ

ಪ್ರೊ ಕಬಡ್ಡಿಯಲ್ಲಿ (Pro Kabaddi League) ಬೆಂಗಳೂರು ಬುಲ್ಸ್‌ (Bengaluru Bulls) ತಂಡ ಸತತ ಎರಡನೇ ಪಂದ್ಯದಲ್ಲಿ ಡ್ರಾಗೆ ತೃಪ್ತಿ ಪಟ್ಟಿದೆ. ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಟೈ ಮಾಡಿಕೊಂಡಿದ್ದ ಗೂಳಿಗಳು, ಜನವರಿ 31ರ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್‌ ವಿರುದ್ಧ ಸಮಬಲ ಸಾಧಿಸಿದೆ.

ಪಾಟ್ನಾ ಪರ ಅಬ್ಬರದ ರೈಡಿಂಗ್‌ ಪ್ರದರ್ಶನ ನೀಡಿದ ಸಂದೀಪ್‌ ಕುಮಾರ್‌ ಭರ್ಜರಿ 14 ಅಂಕ ಕಲೆ ಹಾಕಿದರು. ಆ ಮೂಲಕ ಪಂದ್ಯದಲ್ಲಿ ಸೂಪರ್‌ 10 ಸಾಧನೆ ಮಾಡಿದ ಏಕೈಕ ರೈಡರ್‌ ಆದರು. ಬುಲ್ಸ್‌ ಪರ ಸುಶಿಲ್‌ ಮತ್ತು ಅಕ್ಷಿತ್‌ ಧುಲ್‌ ಹೆಚ್ಚು ಅಂಕ ಕಲೆ ಹಾಕಿದರು. ಪರಿಣಾಮ ಪಾಟ್ನಾ ವಿರುದ್ಧದ ಪಂದ್ಯವು 29-29 ಅಂಕಗಳಿಂದ ಸಮಬಲಗೊಂಡಿತು. ಜೈಪುರ ವಿರುದ್ಧದ ಕೊನೆಯ ಪಂದ್ಯದಲ್ಲಿ 28-28 ಅಂಕಗಳಿಂದ ಟೈಗೆ ಬುಲ್ಸ್‌ ತೃಪ್ತಿಪಟ್ಟಿತ್ತು. ಹೀಗಾಗಿ ಗೂಳಿಗಳ ಸತತ ಎರಡು ಪಂದ್ಯವು ಟೈನಲ್ಲಿ ಅಂತ್ಯಗೊಂಡಿದೆ.

ಸಮಬಲದ ಹೋರಾಟ

ಪಂದ್ಯದ ಮೊದಲ ಸುತ್ತಿನಿಂದಲೇ ಉಭಯ ತಂಡಗಳಿಂದ ಸಮಬಲದ ಹೋರಾಟ ನಡೆಯಿತು. ಈ ನಡುವೆ ಪಾಟ್ನಾವನ್ನು ಆಲೌಟ್‌ ಮಾಡುವಲ್ಲಿ ಬುಲ್ಸ್‌ ಯಶಸ್ವಿಯಾಯ್ತು. ತಂಡದ ಸಾಂಘಿಕ ಹೋರಾಟ ಮುನ್ನಡೆಗೆ ನೆರವಾಯ್ತು. ಅತ್ತ ಪಾಟ್ನಾ ಪರ ಸಂದೀಪ್‌, ಅಂಕಿತ್‌ ಹಾಗೂ ಮಂಜೀತ್‌ ಹೊರತುಪಡಿಸಿದರೆ ಬೇರೆ ಆಟಗಾರರ ಕೊಡುಗೆ ತಂಡಕ್ಕೆ ನಗಣ್ಯವಾಯ್ತು.

ಇದನ್ನೂ ಓದಿ | ಅವರು ನನ್ನ ಬಟ್ಟೆ, ಕೂದಲನ್ನು ನೋಡುತ್ತಿದ್ದರು; ಲಿಂಗ ಭೇದ ಕುರಿತು ಚೆಸ್ ಆಟಗಾರ್ತಿ ದಿವ್ಯಾ ದೇಶ್‌ಮುಖ್ ಆರೋಪ

ಈ ಸೋಲಿನಿಂದ ತಂಡದ ಪ್ಲೇ ಆಫ್‌ ಹಾದಿ ಸಂಕಷ್ಟದಲ್ಲಿದೆ. ಸತತ ಎರಡು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿರುವುದು ತಂಡದ ಅಂಕದಲ್ಲಿನ ವ್ಯತ್ಯಾಸಕ್ಕೆ ದಾರಿಮಾಡಿಕೊಟ್ಟಿದೆ. ತಂಡವು ಮುಂದೆ ಐದು ಪಂದ್ಯಗಳಲ್ಲಿ ಮಾತ್ರ ಆಡಲಿದ್ದು, ಈ ಎಲ್ಲಾ ಪಂದ್ಯಗಳಲ್ಲಿ ಗೆದ್ದರೂ ತಂಡದ ಪ್ಲೇ ಆಫ್‌ ಹಾದಿ ದುರ್ಗಮವಾಗಿದೆ.

ಬೆಂಗಳೂರು ಬುಲ್ಸ್​ ಮುಂದಿನ ಪಂದ್ಯಗಳು

ಫೆಬ್ರವರಿ 04, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್​ vs ಯು ಮುಂಬಾ

ಫೆಬ್ರವರಿ 07, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್​ vs ಪುಣೇರಿ ಪಲ್ಟನ್

ಫೆಬ್ರವರಿ 11, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್​ vs ಗುಜರಾತ್ ಜೈಂಟ್ಸ್

ಫೆಬ್ರವರಿ 18, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್​ vs ದಬಾಂಗ್ ಡೆಲ್ಲಿ

ಫೆಬ್ರವರಿ 21, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್​ vs ಹರಿಯಾಣ ಸ್ಟೀಲರ್ಸ್

ಇದನ್ನೂ ಓದಿ | ತೆಲುಗು ಟೈಟಾನ್ಸ್ ಮಣಿಸಿ ಅಂಕಪಟ್ಟಿಯಲ್ಲಿ ಟಾಪರ್ ಆದ ಪುಣೇರಿ ಪಲ್ಟನ್; ಪವನ್‌ ಪಡೆಗೆ ಮತ್ತೊಂದು ಹೀನಾಯ ಸೋಲು

ಅತ್ತ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್ ಸೋಲಿನ ಸರಪಳಿ ಮುಂದುವರೆದಿದೆ. ಮತ್ತೊಂದೆಡೆ ಪುಣೇರಿ ಪಲ್ಟನ್ ಗೆಲುವಿನ ಹಳಿಗೆ ಮರಳಿದ್ದು, ಪವನ್‌ ಸೆಹ್ರಾವತ್‌ ಬಳಗವನ್ನು 60-29 ಅಂಕಗಳ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ. 11 ರೈಡ್ ಪಾಯಿಂಟ್‌ ಗಳಿಸಿದ ಆಕಾಶ್ ಶಿಂಧೆ, ಪಂದ್ಯದ ಟಾಪ್‌ ಸ್ಕೋರರ್‌ ಆಗಿ ಹೊರಹೊಮ್ಮಿದರು. ಮೊಹಮ್ಮದ್ರೇಜಾ ಶಾಡ್ಲೋಯಿ‌ 7 ಅಂಕ ಕಲೆ ಹಾಕಿದರೆ, ಅಭಿನೇಶ್ ನಟರಾಜನ್ 5 ಟ್ಯಾಕಲ್ ಪಾಯಿಂಟ್‌ ತಮ್ಮದಾಗಿಸಿಕೊಂಡರು. ಆ ಮೂಲಕ ಪಲ್ಟನ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.