ಲಕ್ಷದಿಂದ ಕೋಟಿಗೆ ಏರಿಕೆಯಾದ ಮನು ಭಾಕರ್‌ ಬ್ರಾಂಡ್‌ ಮೌಲ್ಯ; ಒಲಿಂಪಿಕ್ಸ್ ಪದಕ ಬೆನ್ನಲ್ಲೇ 40ಕ್ಕೂ ಹೆಚ್ಚು ಬ್ರಾಂಡ್‌ಗಳ ಸಂಪರ್ಕ
ಕನ್ನಡ ಸುದ್ದಿ  /  ಕ್ರೀಡೆ  /  ಲಕ್ಷದಿಂದ ಕೋಟಿಗೆ ಏರಿಕೆಯಾದ ಮನು ಭಾಕರ್‌ ಬ್ರಾಂಡ್‌ ಮೌಲ್ಯ; ಒಲಿಂಪಿಕ್ಸ್ ಪದಕ ಬೆನ್ನಲ್ಲೇ 40ಕ್ಕೂ ಹೆಚ್ಚು ಬ್ರಾಂಡ್‌ಗಳ ಸಂಪರ್ಕ

ಲಕ್ಷದಿಂದ ಕೋಟಿಗೆ ಏರಿಕೆಯಾದ ಮನು ಭಾಕರ್‌ ಬ್ರಾಂಡ್‌ ಮೌಲ್ಯ; ಒಲಿಂಪಿಕ್ಸ್ ಪದಕ ಬೆನ್ನಲ್ಲೇ 40ಕ್ಕೂ ಹೆಚ್ಚು ಬ್ರಾಂಡ್‌ಗಳ ಸಂಪರ್ಕ

ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡೆರಡು ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ ಅವರನ್ನು 40ಕ್ಕೂ ಹೆಚ್ಚು ಬ್ರಾಂಡ್‌ಗಳು ಸಂಪರ್ಕಿಸಿವೆ. ಈಗಾಗಲೇ ಮನು ಅವರ ಬ್ರಾಂಡ್‌ ಮೌಲ್ಯ ಕೂಡಾ ಆರರಿಂದ ಏಳು ಪಟ್ಟು ಹೆಚ್ಚಾಗಿದೆ.

ಒಲಿಂಪಿಕ್ಸ್ ಪದಕ ಬೆನ್ನಲ್ಲೇ ಲಕ್ಷದಿಂದ ಕೋಟಿಗೆ ಏರಿಕೆಯಾದ ಮನು ಭಾಕರ್‌ ಬ್ರಾಂಡ್‌ ಮೌಲ್ಯ
ಒಲಿಂಪಿಕ್ಸ್ ಪದಕ ಬೆನ್ನಲ್ಲೇ ಲಕ್ಷದಿಂದ ಕೋಟಿಗೆ ಏರಿಕೆಯಾದ ಮನು ಭಾಕರ್‌ ಬ್ರಾಂಡ್‌ ಮೌಲ್ಯ (ANI)

ಕಳೆದ ಬಾರಿ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ, ರಾತ್ರಿ ಬೆಳಗಾಗುವುದರೊಳಗೆ ದೇಶದೆಲ್ಲೆಡೆ ಖ್ಯಾತಿ ಪಡೆದರು. ಅದರ ಬೆನ್ನಲ್ಲೇ ವಿವಿಧ ಬ್ರಾಂಡ್‌ಗಳು ನೀರಜ್‌ ಬೆನ್ನ ಹಿಂದೆ ಬಿದ್ದವು. ಇದೀಗ ಚಿನ್ನದ ಹುಡುಗ ದೇಶದೆಲ್ಲೆಡೆ ಪರಿಚಿತರಾಗಿದ್ದು, ತಮ್ಮ ಬ್ರಾಂಡ್‌ ವ್ಯಾಲ್ಯೂ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಮನು ಭಾಕರ್‌ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಈಗಾಗಲೇ ಎರಡು ಪದಕಗಳನ್ನು ಗೆದ್ದಿರುವ ಕಂಚಿನ ಹುಡುಗಿ, ಭಾರತದಾದ್ಯಂತ ಈಗಾಗಲೇ ಮನೆ ಮಾತಾಗಿದ್ದಾರೆ. ಮನು ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ. ಅದರ ಬೆನ್ನಲ್ಲೇ ಹಲವಾರು ಬ್ರಾಂಡ್‌ಗಳು, ತಮ್ಮ ಬ್ರಾಂಡ್‌ ಅಂಬಾಸಿಡರ್‌ ಆಗಿಸಲು ಮನು ಭಾಕರ್‌ ಅವರನ್ನು ಸಂಪರ್ಕಿಸಿವೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆಗೆ ಶುಭಾರಂಭ ಕೊಟ್ಟವರು ಮನು. 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ‌ ವಿಭಾಗದಲ್ಲಿ ಮೊದಲ ಕಂಚು ಗೆದ್ದ ಅವರು, ಅದರ ಬೆನ್ನಲ್ಲೇ 20 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕೂಡಾ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಮನು ಅವರ ಅವಳಿ ಪದಕ ಸಾಧನೆಯ ಬೆನ್ನಲ್ಲೇ 40ಕ್ಕೂ ಅಧಿಕ ಬ್ರ್ಯಾಂಡ್‌ಗಳು ಜಾಹೀರಾತು ಅನುಮೋದನೆಗಾಗಿ ಮನು ಅವರನ್ನು ಸಂಪರ್ಕಿಸಿವೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ಸದ್ಯ ಮನು ಭಾಕರ್‌ ಇನ್ನೂ ಒಲಿಂಪಿಕ್ಸ್‌ನತ್ತ ಗಮನ ಹರಿಸಿದ್ದಾರೆ. ಆಗಸ್ಟ್‌ 2ರ ಶುಕ್ರವಾರವಾದ ಇಂದು ಕೂಡಾ ಮನು ಶೂಟಿಂಗ್ ಟೀಮ್‌ ಈವೆಂಟ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಅವರ ಏಜೆನ್ಸಿ ಈಗಾಗಲೇ ಕೋಟ್ಯಾಂತರ ಮೌಲ್ಯದ ಒಂದೆರಡು ಒಪ್ಪಂದಗಳಿಗೆ ಸಮ್ಮತಿ ಸೂಚಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋಟಿಗೆ ಏರಿಕೆಯಾದ ಮನು ಬ್ರಾಂಡ್‌ ಮೌಲ್ಯ

ಒಲಿಂಪಿಕ್ಸ್‌ ಪದಕ ಗೆಲ್ಲುವುದಕ್ಕೂ ಮುನ್ನ ಮನು ಅವರು, ಪ್ರತಿ ಎಂಡೋರ್ಸ್‌ಮೆಂಟ್‌ಗೆ 20ರಿಂದ 25 ಲಕ್ಷ ರೂಪಾಯಿ ಶುಲ್ಕ ವಿಧಿಸುತ್ತಿದ್ದರು. ಆದರೆ ಒಲಿಂಪಿಕ್ಸ್‌ ಪದಕ ಗೆದ್ದ ಬಳಿಕ ಅವರ ವೈಯಕ್ತಿಕ ಬ್ರಾಂಡ್‌ ಮೌಲ್ಯ ಭಾರಿ ಏರಿಕೆಯಾಗಿದೆ. ಹೀಗಾಗಿ ಈಗ ಅವರ ಶುಲ್ಕಗಳು 6ರಿಂದ 7 ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಪರಿಣಾಮವಾಗಿ 1.5 ಕೋಟಿ ರೂಪಾಯಿ ಮೌಲ್ಯದ ಜಾಹೀರಾತು ಒಪ್ಪಂದಕ್ಕೆ ಮನು ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

“ಕಳೆದ 2-3 ದಿನಗಳಲ್ಲಿ ನಾವು ಈಗಾಗಲೇ ಸುಮಾರು 40ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದೇವೆ. ನಾವು ಇದೀಗ ದೀರ್ಘಾವಧಿಯ ಅಸೋಸಿಯೇಷನ್ ​ಒಪ್ಪಂದಗಳತ್ತ ನೋಡುತ್ತಿದ್ದೇವೆ. ಹೀಗಾಗಿ ಒಂದೆರಡು ಅನುಮೋದನೆಗಳನ್ನು ಒಪ್ಪಿಕೊಂಡಿದ್ದೇವೆ” ಎಂದು ಮನು ಭಾಕರ್‌ ಅವರನ್ನು ನಿರ್ವಹಿಸುವ ಕಂಪನಿಯಾದ IOS ಸ್ಪೋರ್ಟ್ಸ್ & ಎಂಟರ್‌ಟೈನ್‌ಮೆಂಟ್ CEO ಮತ್ತು MD ನೀರವ್ ತೋಮರ್ ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ.

ದೀರ್ಘಾವಧಿ ಒಪ್ಪಂದಕ್ಕೆ ಒಲವು

“ಮನು ಅವರ ಬ್ರಾಂಡ್ ಮೌಲ್ಯವು ಸಹಜವಾಗಿ ಐದರಿಂದ ಆರು ಪಟ್ಟು ಏರಿಕೆಯಾಗಿದೆ. ಆರಂಭದಲ್ಲಿ ಆ ಮೌಲ್ಯವು 20ರಿಂದ 25 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿತ್ತು. ಈಗ ಅದು ಒಂದು ಒಪ್ಪಂದಕ್ಕೆ ಸುಮಾರು 1.5 ಕೋಟಿ ರೂಪಾಯಿಗಳವರೆಗೆ ಹೋಗಿದೆ. 1 ತಿಂಗಳಿಂದ ಹಿಡಿದು 3 ತಿಂಗಳುಗಳ ಕಡಿಮೆ ಅವಧಿಯ ಬಹಳಷ್ಟು ಡಿಜಿಟಲ್ ಎಂಗೇಜ್‌ಮೆಂಟ್ ಒಪ್ಪಂದಗಳ ಆಫರ್‌ ಕೂಡಾ ಇವೆ. ಆದರೆ ನಾವು ದೀರ್ಘಾವಧಿಯ ವ್ಯವಹಾರಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.