PKL: ಮಣಿಂದರ್, ರಾಹುಲ್‌, ಪವನ್‌;‌ ಪ್ರೊ ಕಬಡ್ಡಿ ಲೀಗ್‌ನ ಸಾರ್ವಕಾಲಿಕ ಯಶಸ್ವಿ ರೈಡರ್‌ಗಳಿವರು
ಕನ್ನಡ ಸುದ್ದಿ  /  ಕ್ರೀಡೆ  /  Pkl: ಮಣಿಂದರ್, ರಾಹುಲ್‌, ಪವನ್‌;‌ ಪ್ರೊ ಕಬಡ್ಡಿ ಲೀಗ್‌ನ ಸಾರ್ವಕಾಲಿಕ ಯಶಸ್ವಿ ರೈಡರ್‌ಗಳಿವರು

PKL: ಮಣಿಂದರ್, ರಾಹುಲ್‌, ಪವನ್‌;‌ ಪ್ರೊ ಕಬಡ್ಡಿ ಲೀಗ್‌ನ ಸಾರ್ವಕಾಲಿಕ ಯಶಸ್ವಿ ರೈಡರ್‌ಗಳಿವರು

Pro Kabaddi Season 10: ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ಈವರೆಗೆ ಬಲಿಷ್ಠ ರೈಡರ್‌ಗಳು ಕಾಣಿಸಿಕೊಂಡಿದ್ದಾರೆ. ಪಿಕೆಎಲ್‌ ಇತಿಹಾಸದ ಅತ್ಯಂತ ಬಲಿಷ್ಠ ರೈಡರ್‌ಗಳ ಪಟ್ಟಿ ಇಲ್ಲಿದೆ.

ಪ್ರೊ ಕಬಡ್ಡಿ ಲೀಗ್‌ನ ಸಾರ್ವಕಾಲಿಕ ಯಶಸ್ವಿ ರೈಡರ್ಸ್
ಪ್ರೊ ಕಬಡ್ಡಿ ಲೀಗ್‌ನ ಸಾರ್ವಕಾಲಿಕ ಯಶಸ್ವಿ ರೈಡರ್ಸ್

ಪ್ರೊ ಕಬಡ್ಡಿ ಸೀಸನ್ 10ಕ್ಕೆ (Pro Kabaddi Season 10) ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಕೂಡಾ ಯಶಸ್ವಿಯಾಗಿ ನಡೆದಿದೆ. ಈವರೆಗೆ ಪ್ರೊ ಕಬಡ್ಡಿ ಲೀಗ್‌ನ ಒಂಬತ್ತು ಆವೃತ್ತಿಗಳು ಯಶಸ್ವಿಯಾಗಿ ಮುಗಿದಿವೆ. ರೈಡರ್ಸ್ ಪ್ರಾಬಲ್ಯ ಸಾಧಿಸುವ ಕಬಡ್ಡಿಯಲ್ಲಿ ತಮ್ಮ ದಾಳಿಯಿಂದ ಅಂಕಗಳನ್ನು ಗಳಿಸುತ್ತಾರೆ. ಈವರೆಗೆ ನಡೆದ ಎಲ್ಲಾ ಒಂಬತ್ತು ಸೀಸನ್‌ಗಳಲ್ಲಿ ಬಲಿಷ್ಠ ರೈಡರ್‌ಗಳು ಹೊರಹೊಮ್ಮಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲೀ ಇವರಲ್ಲಿ ಬಹುತೇಕರು ಆಡಲಿದ್ದಾರೆ. ಪಿಕೆಎಲ್‌ ಇತಿಹಾಸದ ಅತ್ಯಂತ ಬಲಿಷ್ಠ ರೈಡರ್‌ಗಳ ಪಟ್ಟಿ ಇಲ್ಲಿದೆ.

ಪರ್ದೀಪ್ ನರ್ವಾಲ್ (Pardeep Narwal): 1577 ಅಂಕ

ಪಟ್ನಾ ಪೈರೇಟ್ಸ್ ತಂಡದ ಮಾಜಿ ಸೂಪರ್‌ಸ್ಟಾರ್ ಪರ್ದೀಪ್ ನರ್ವಾಲ್, ಪ್ರೊ ಕಬಡ್ಡಿ ಇತಿಹಾಸದಲ್ಲಿ ಬರೋಬ್ಬರಿ 1577 ಅಂಕಗಳನ್ನು ಕಲೆ ಹಾಕಿದ್ದಾರೆ. ಇದು ಅತಿ ಹೆಚ್ಚು ಅಂಕಗಳು. ಕೆಲವೊಂದು ಪಂದ್ಯಾವಳಿಯಲ್ಲಿ 150 ಕ್ಕಿಂತ ಹೆಚ್ಚು ಅಂಕಗಳು ಅವರ ಖಾತೆ ಸೇರಿವೆ. ಇದಲ್ಲದೆ ತಮ್ಮ ಹೆಸರಿಗೆ 79 ಬಾರಿ ಸೂಪರ್ 10ಗಳನ್ನು ಹೊಂದಿದ್ದಾರೆ. ಇದು ಕೂಡಾ ಪಿಕೆಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು. 2023ರ ಋತುವಿನಲ್ಲಿ ಅವರು ಯುಪಿ ಯೋಧಾಸ್‌ ಪರ ಆಡಲಿದ್ದಾರೆ.

ಮಣಿಂದರ್ ಸಿಂಗ್ (Maninder Singh): 1244 ಅಂಕ

ಬೆಂಗಾಲ್ ವಾರಿಯರ್ಸ್ ತಂಡದ ಬಲಿಷ್ಠ ರೈಡರ್‌ ಮಣಿಂದರ್ ಸಿಂಗ್, ಗೂಳಿಯಂತೆ ಮುನ್ನುಗ್ಗುವ ರೈಡರ್. ಅನುಭವಿ‌ ದಾಂಡಿಗ ತಮ್ಮ ವೃತ್ತಿಜೀವನದಲ್ಲಿ ಒಟ್ಟಾರೆ 1244 ಅಂಕಗಳನ್ನು ರೈಡಿಂಗ್‌ನಿಂದ ಕಲೆ ಹಾಕಿದ್ದಾರೆ. ಇದು ಕೇವಲ 122 ಪಂದ್ಯಗಳಲ್ಲಿ ಎಂಬುದು ವಿಶೇಷ.

ರಾಹುಲ್ ಚೌಧರಿ (Rahul Chaudhari): 1100 ಅಂಕ

ಪ್ರೊ ಕಬಡ್ಡಿಯ ಆರಂಭದ ಕೆಲವು ವರ್ಷಗಳಲ್ಲಿ ರಾಹುಲ್ ಚೌಧರಿ ಅತ್ಯಂತ ಪ್ರಬಲ ರೈಡರ್ ಆಗಿ ಹೊರಹೊಮ್ಮಿದ್ದರು.‌ ಆದರೆ ಕಳೆದೆರಡು ವರ್ಷಗಳಲ್ಲಿ ಅವರು ಅಷ್ಟೊಂದು ಪರಿಣಾಮ ಬೀರಲಿಲ್ಲ. ಇದೇ ಕಾರಣಕ್ಕೆ 2023ರ ಪಿಕೆಎಲ್‌ ಹರಾಜಿನಲ್ಲಿ ಅವರನ್ನು ಯಾವುದೇ ತಂಡವು ಖರೀದಿ ಮಾಡಿಲ್ಲ. ಆದರೆ, ಈವರೆಗೆ ಅವರು 150 ಪಂದ್ಯಗಳಲ್ಲಿ 1100 ಅಂಕಗಳೊಂದಿಗೆ ಲೀಗ್‌ನ ಅತ್ಯಂತ ಯಶಸ್ವಿ ರೈಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಈ ಬಾರಿ ರಾಹುಲ್‌ ಆಟವನ್ನು ಅಭಿಮಾನಿಗಳೂ ಮಿಸ್‌ ಮಾಡಿಕೊಳ್ಳಲಿದ್ದಾರೆ.

ಪವನ್ ಸೆಹ್ರಾವತ್ (Pawan Sehrawat) :1037 ಅಂಕ

ಬೆಂಗಳೂರು ಬುಲ್ಸ್‌ ತಂಡದಲ್ಲಿ ಹೆಸರು ಮಾಡಿದ್ದ ಪವನ್‌ ಸೆಹ್ರಾವತ್, ಕಳೆದ ವರ್ಷ ಗಾಯದ ಕಾರಣದಿಂದಾಗಿ ಕಳೆದ ಋತುವಿನಲ್ಲಿ ಚೆನ್ನೈ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆಯಲಿಲ್ಲ. ಸದ್ಯ ಏಷ್ಯನ್ ಗೇಮ್ಸ್‌ನಲ್ಲಿ ಪುನರಾಗಮನ ಮಾಡಿರುವ ಪವನ್ ಸೆಹ್ರಾವತ್, ಭಾರತ ತಂಡವನ್ನು ಚಿನ್ನದ ಪದಕದತ್ತ ಮುನ್ನಡೆಸಿದ್ದರು. 2023ರ ಪಿಕೆಎಲ್‌ ಹರಾಜಿನಲ್ಲಿ ಬರೋಬ್ಬರಿ 2.65 ಕೋಟಿ ರೂಪಾಯಿ ಮೊತ್ತಕ್ಕೆ ಹರಾಜಾದ ಪವನ್‌, ಲೀಗ್‌ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

2014ರಲ್ಲಿ ಪ್ರಾರಂಭವಾದ ಪ್ರೊ ಕಬಡ್ಡಿ ಲೀಗ್, ಭಾರಿ ಪ್ರಮಾಣದಲ್ಲಿ ಅಭಿಮಾನಿಗಳನ್ನು ಆಕರ್ಷಿಸಿದೆ. ಇದೀಗ ಈ ಟೂರ್ನಿ 10ನೇ ಆವೃತ್ತಿಯು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಒಂದು ಟ್ರೋಫಿಗಾಗಿ 12 ತಂಡಗಳು ಸೆಣಸಾಟ ನಡೆಸಲಿವೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.