ಹಾಕಿಯಲ್ಲಿ ಗೆಲುವು; ಬಾಕ್ಸಿಂಗ್‌, ಶೂಟಿಂಗ್‌, ಬ್ಯಾಡ್ಮಿಂಟನ್‌ನಲ್ಲಿ ನಿರಾಶೆ; ಪ್ಯಾರಿಸ್‌ ಒಲಿಂಪಿಕ್ಸ್‌ ಆಗಸ್ಟ್‌ 4ರ ಫಲಿತಾಂಶಗಳು
ಕನ್ನಡ ಸುದ್ದಿ  /  ಕ್ರೀಡೆ  /  ಹಾಕಿಯಲ್ಲಿ ಗೆಲುವು; ಬಾಕ್ಸಿಂಗ್‌, ಶೂಟಿಂಗ್‌, ಬ್ಯಾಡ್ಮಿಂಟನ್‌ನಲ್ಲಿ ನಿರಾಶೆ; ಪ್ಯಾರಿಸ್‌ ಒಲಿಂಪಿಕ್ಸ್‌ ಆಗಸ್ಟ್‌ 4ರ ಫಲಿತಾಂಶಗಳು

ಹಾಕಿಯಲ್ಲಿ ಗೆಲುವು; ಬಾಕ್ಸಿಂಗ್‌, ಶೂಟಿಂಗ್‌, ಬ್ಯಾಡ್ಮಿಂಟನ್‌ನಲ್ಲಿ ನಿರಾಶೆ; ಪ್ಯಾರಿಸ್‌ ಒಲಿಂಪಿಕ್ಸ್‌ ಆಗಸ್ಟ್‌ 4ರ ಫಲಿತಾಂಶಗಳು

ಪುರುಷರ ಹಾಕಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡವು ಗ್ರೇಟ್ ಬ್ರಿಟನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಿಂದ ಗೆದ್ದಿತು. ಪಂದ್ಯ ಸಮಬಲಗೊಂಡ ಕಾರಣದಿಂದ ಶೂಟ್‌ಟ್‌ ಮೂಲಕ ವಿಜೇತರನ್ನು ನಿರ್ಧರಿಸಲಾಯ್ತು. ಭಾರತ ತಂಡವು ಸೆಮಿಫೈನಲ್‌ನಲ್ಲಿ ಜರ್ಮನಿ ಅಥವಾ ಅರ್ಜೆಂಟೀನಾವನ್ನು ಎದುರಿಸಲಿದೆ.

ಬಾಕ್ಸಿಂಗ್‌, ಶೂಟಿಂಗ್‌, ಬ್ಯಾಡ್ಮಿಂಟನ್‌ನಲ್ಲಿ ನಿರಾಶೆ; ಪ್ಯಾರಿಸ್‌ ಒಲಿಂಪಿಕ್ಸ್‌ ಆಗಸ್ಟ್‌ 4ರ ಫಲಿತಾಂಶಗಳು
ಬಾಕ್ಸಿಂಗ್‌, ಶೂಟಿಂಗ್‌, ಬ್ಯಾಡ್ಮಿಂಟನ್‌ನಲ್ಲಿ ನಿರಾಶೆ; ಪ್ಯಾರಿಸ್‌ ಒಲಿಂಪಿಕ್ಸ್‌ ಆಗಸ್ಟ್‌ 4ರ ಫಲಿತಾಂಶಗಳು (PTI)

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಗಸ್ಟ್‌ 4ರ ಭಾನುವಾರ ಭಾರತದ ಪಾಲಿಗೆ ಮಿಶ್ರ ಫಲಿತಾಂಶ ಸಿಕ್ಕಿದೆ. ಪುರುಷರ ಹಾಕಿ ತಂಡವು ಗ್ರೇಟ್‌ ಬ್ರಿಟನ್‌ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ ಪ್ರವೇಶಿಸಿದೆ. ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಲಕ್ಷ್ಯ ಸೇನ್ ಅವರು ಹಾಲಿ ಚಾಂಪಿಯನ್ ವಿಕ್ಟರ್ ಅಕ್ಸೆಲ್‌ಸೆನ್ ವಿರುದ್ಧ ನೇರ ಸೆಟ್‌ಗಳಲ್ಲಿ ಸೋತಿದ್ದಾರೆ. ಇದರೊಂದಿಗೆ ಮುಂದೆ ಕಂಚಿನ ಪದಕ ಪಂದ್ಯದಲ್ಲಿ ಆಡಲಿದ್ದಾರೆ. ಬಾಕ್ಸರ್ ಲವ್ಲಿನಾ ಬರ್ಗೊಹೈನ್ ಅವರು ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್‌ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಲಿ ಕಿಯಾನ್ ಅವರ ವಿರುದ್ಧ ಸೋಲೊಪ್ಪಿಕೊಂಡರು. ಇದರೊಂದಿಗೆ ಪ್ಯಾರಿಸ್‌ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯವಾಯ್ತು.

ಪ್ಯಾರಿಸ್‌ನಲ್ಲಿ ಭಾರತಕ್ಕೆ ಭಾನುವಾರ ದಿನ ಭಾರಿ ಖುಷಿ ಕೊಟ್ಟಿದ್ದು ಹಾಕಿ ತಂಡದ ರೋಚಕ ವಿಜಯ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತವು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಿಂದ ಗ್ರೇಟ್ ಬ್ರಿಟನ್ ಅನ್ನು ಸೋಲಿಸಿತು. ಪಂದ್ಯವು ನಿಗದಿತ ಸಮಯದಲ್ಲಿ 1-1 ಅಂತರದಿಂದ ಸಮಬಲಗೊಂಡ ಕಾರಣದಿಂದ ಶೂಟ್‌ಟ್‌ ಮೂಲಕ ವಿಜೇತರನ್ನು ನಿರ್ಧರಿಸಲಾಯ್ತು. ಭಾರತ ತಂಡವು ಸೆಮಿಕದನದಲ್ಲಿ ಜರ್ಮನಿ ಅಥವಾ ಅರ್ಜೆಂಟೀನಾವನ್ನು ಎದುರಿಸಲಿದೆ.

ಶೂಟಿಂಗ್‌ನಲ್ಲಿ ನಿರಾಶೆ

ಪುರುಷರ 25 ಮೀಟರ್ ರ್ಯಾಪಿಡ್ ಪಿಸ್ತೂಲ್ ಅರ್ಹತಾ ಹಂತ 1ರಲ್ಲಿ ವಿಜಯವೀರ್ ಸಿಂಗ್ ಐದನೇ ಸ್ಥಾನ ಪಡೆದರು. ಅನೀಶ್ ಏಳನೇ ಸ್ಥಾನ ಪಡೆದರು. ಹಂತ 2ರಲ್ಲಿ ವಿಜಯವೀರ್ ಮತ್ತು ಅನೀಶ್ ಕಳಪೆ ಪ್ರದರ್ಶನ ನೀಡಿದರು. ಇವರಿಬ್ಬರೂ ಕ್ರಮವಾಗಿ 290 ಮತ್ತು 289 ಅಂಕಗಳೊಂದಿಗೆ 9 ಮತ್ತು 13 ನೇ ಸ್ಥಾನವನ್ನು ಗಳಿಸಿದರು. ಆ ಮೂಲಕ 25 ಮೀಟರ್ ರಾಪಿಡ್ ಫೈರ್ ಪಿಸ್ತೂಲ್ ಪುರುಷರ ಫೈನಲ್‌ಗೆ ಅರ್ಹತೆ ಕಳೆದುಕೊಂಡರು.

ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಸುತ್ತು 1ರಲ್ಲಿ ಪಾರುಲ್ ಚೌಧರಿ ಎಂಟನೇ ಸ್ಥಾನ ಗಳಿಸಿ ಹೊರಬಿದ್ದರು. ಮಹಿಳೆಯರ ಸ್ಕೀಟ್ ಅರ್ಹತಾ ಸುತ್ತಿನಲ್ಲಿ ಭಾರತದ ಮಹೇಶ್ವರಿ ಚೌಹಾಣ್ 14ನೇ ಸ್ಥಾನ ಪಡೆದರೆ, ರೈಜಾ ಧಿಲ್ಲೋನ್ 23ನೇ ಸ್ಥಾನ ಪಡೆದಿದ್ದರು. ಇದರೊಂದಿಗೆ ಇವರಿಬ್ಬರೂ ಫೈನಲ್‌ನಿಂದ ಹೊರಬಿದ್ದರು.

'ಲಕ್ಷ್ಯ ಸೇನ್‌ ಮುಂದಿನ ಒಲಿಂಪಿಕ್‌ ಚಾಂಪಿಯನ್‌'

ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸೆಮಿಫೈನಲ್‌ನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಭಾರತದ ಲಕ್ಷ್ಯ ಸೇನ್‌ ಸೋಲು ಕಂಡರು. ಡೆನ್ಮಾರ್ಕ್‌ನ ಷಟ್ಲರ್ 22-20 21-14 ಅಂತರದಿಂದ ಗೆದ್ದು ಬೀಗಿದರು. ಪಂದ್ಯದ ಬಳಿಕ ಮಾತನಾಡಿದ ಚಾಂಪಿಯನ್‌ ಆಟಗಾರ, ಭಾರತದ ಲಕ್ಷ್ಯ ಅವರನ್ನು ಹಾಡಿ ಹೊಗಳಿದರು. 2028ರ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಲಕ್ಷ್ಯ ಸೇನ್‌ ಚಿನ್ನದ ಪದಕ ಗೆಲ್ಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

“ಲಕ್ಷ್ಯ ಒಬ್ಬ ಅದ್ಭುತ ಆಟಗಾರ. ಅವರು ಈ ಒಲಿಂಪಿಕ್ಸ್‌ನಲ್ಲಿ ತುಂಬಾ ಪ್ರಬಲ ಪ್ರತಿಸ್ಪರ್ಧಿ ಎಂಬುದನ್ನು ತೋರಿಸಿದ್ದಾರೆ. ಇನ್ನು ನಾಲ್ಕು ವರ್ಷಗಳಲ್ಲಿ ಅವರು ಚಿನ್ನ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರು ಅದ್ಭುತ ಪ್ರತಿಭೆ ಮತ್ತು ಶ್ರೇಷ್ಠ ವ್ಯಕ್ತಿ. ಅವರಿಗೆ ನಾನು ಶುಭ ಹಾರೈಸುತ್ತೇನೆ,” ಎಂದು ಹೇಳಿದ್ದಾರೆ. ಡೆನ್ಮಾರ್ಕ್‌ ಆಟಗಾರನ ಕ್ರೀಡಾಸ್ಫೂರ್ತಿ ಎಲ್ಲರಿಗೂ ಇಷ್ಟವಾಗಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.