ಪಂದ್ಯದ ವೇಳೆ ಬೆಂಗಳೂರು ಫುಟ್ಬಾಲ್ ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿ ಕುಸಿತ; 6 ಮಂದಿಗೆ ಗಾಯ, ವಿಡಿಯೋ
Bengaluru football stadium: ಜುಲೈ 21ರಂದು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯೊಂದು ಕುಸಿದಿದ್ದು, 6 ಮಂದಿ ಪ್ರೇಕ್ಷಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು: ಇಲ್ಲಿನ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಮುಖ್ಯ ಸ್ಟ್ಯಾಂಡ್ನ ಒಂದು ಭಾಗ ಕುಸಿದ ಕಾರಣ 6 ಪ್ರೇಕ್ಷಕರು ಗಾಯಗೊಂಡಿದ್ದಾರೆ. ಜುಲೈ 21 ರಂದು ನಡೆದ ಮುಖ್ಯಮಂತ್ರಿಗಳ ಕಪ್ ಫುಟ್ಬಾಲ್ ಕಪ್ ವೇಳೆ ಈ ಅಪಘಾತ ಸಂಭವಿಸಿದೆ. ಪ್ರೇಕ್ಷಕರ ಗ್ಯಾಲರಿ ಕುಸಿತದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಶಾಂತಿನಗರ ಕ್ಷೇತ್ರ ಮತ್ತು ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ತಂಡಗಳು ಮುಖಾಮುಖಿಯಾಗಿದ್ದ ಈ ಪಂದ್ಯದಲ್ಲಿ ಘಟನೆ ನಡೆದಿದೆ. ಮೈದಾನದ ಡಗೌಟ್ಗಳ ಮೇಲಿನ ಸ್ಟ್ಯಾಂಡ್ನ ಒಂದು ಭಾಗ ಅನಿರೀಕ್ಷಿತವಾಗಿ ಕುಸಿಯಿತು. ಪಶ್ಚಿಮ ಭಾಗದ ಸ್ಟ್ಯಾಂಡ್ ಇದ್ದಕ್ಕಿದ್ದಂತೆ ಕುಸಿದಿದ್ದು ಗ್ಯಾಲರಿ ಮೇಲಿದ್ದ ಪ್ರೇಕ್ಷಕರು ಗಾಯಗೊಂಡಿದ್ದಾರೆ.
ಯಾರಿಗೂ ಏನಾಗಿಲ್ಲ ಎಂದ ರಾಜ್ಯ ಫುಟ್ಬಾಲ್ ಒಕ್ಕೂಟ
ಮೈದಾನದಲ್ಲಿ ಸಾವಿರಕ್ಕೂ ಅಧಿಕ ಫುಟ್ಬಾಲ್ ಪ್ರೇಮಿಗಳು ಹಾಜರಿ ಹಾಕಿದ್ದರು. ಆದರೆ ಕುಸಿದ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಗದಿಗಿಂತ ಹೆಚ್ಚು ಮಂದಿ ಕಿಕ್ಕಿರಿದು ತುಂಬಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಹೇಳಿದೆ. ಆದರೆ ಯಾರಿಗೂ ದೊಡ್ಡ ಗಾಯಗಳಾಗಿಲ್ಲ ಎಂದು ತಿಳಿಸಿದೆ ಎಂದು ವರದಿಯಾಗಿದೆ.
ಆದರೆ, ಫುಟ್ಬಾಲ್ ನ್ಯೂಸ್ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದೆ. ನಮಗೆ ಬಂದ ಮಾಹಿತಿ ಪ್ರಕಾರ ಕೆಲವರಿಗೆ ಗಂಭೀರ ಗಾಯಗಳಾಗಿದೆ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಬೇಸರ ವ್ಯಕ್ತಪಡಿಸಿದೆ.
ನನ್ನ ಮಕ್ಕಳು ಬಿಎಫ್ಎಸ್ನಲ್ಲಿ ಪ್ರತಿದಿನ ತರಬೇತಿ ಪಡೆಯುತ್ತಾರೆ. ಮುಂಬರುವ ಉದಯೋನ್ಮುಖ ಫುಟ್ಬಾಲ್ ಆಟಗಾರರಿಗೆ ನೆಲೆಯಾಗಿರುವ ಬಿಎಫ್ಎಸ್ ಕ್ರೀಡಾಂಗಣದಲ್ಲಿ ಇಂತಹ ಘಟನೆ ಸಂಭವಿಸಿದೆೆ ಎಂದು ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಾಸಕ ಎನ್ ಹ್ಯಾರಿಸ್ ಅವರಿಗೆ ಆಟಗಾರರೊಬ್ಬರ ಪೋಷಕರು ಪೋಸ್ಟ್ ಮಾಡಿ ಟ್ಯಾಗ್ ಮಾಡಿದ್ದಾರೆ.
ಇದು ತುಂಬಾ ಭಯಾನಕವಾಗಿತ್ತು. ಯಾವುದೇ ಅಭಿಮಾನಿಗಳು ಯಾವುದೇ ಪಂದ್ಯಕ್ಕೆ ಹೋದರೂ ಅವರು ಈ ರೀತಿಯಾಗಿ ಮರಳಬಾರದು. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹಾಗೆಯೇ ಅಭಿಮಾನಿಗಳ ಸುರಕ್ಷತೆಯನ್ನು ನೋಡಿಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಎಲ್ಲಾ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು, ಸ್ಟೇಡಿಯಂ ಮ್ಯಾನೇಜ್ಮೆಂಟ್ಗೆ ಸೂಚಿಸಿದ್ದಾರೆ.