ಹರಾಜಿನಲ್ಲೂ ಫಿಕ್ಸಿಂಗ್, ಅಂಪೈರ್ಸ್ ನೇಮಕದಲ್ಲೂ ಫಿಕ್ಸಿಂಗ್; ಸಿಎಸ್​​ಕೆ ಮಾಲೀಕ ಎನ್ ಶ್ರೀನಿವಾಸ್ ವಿರುದ್ಧ ಲಲಿತ್ ಮೋದಿ ಗಂಭೀರ ಆರೋಪ
ಕನ್ನಡ ಸುದ್ದಿ  /  ಕ್ರಿಕೆಟ್  /  ಹರಾಜಿನಲ್ಲೂ ಫಿಕ್ಸಿಂಗ್, ಅಂಪೈರ್ಸ್ ನೇಮಕದಲ್ಲೂ ಫಿಕ್ಸಿಂಗ್; ಸಿಎಸ್​​ಕೆ ಮಾಲೀಕ ಎನ್ ಶ್ರೀನಿವಾಸ್ ವಿರುದ್ಧ ಲಲಿತ್ ಮೋದಿ ಗಂಭೀರ ಆರೋಪ

ಹರಾಜಿನಲ್ಲೂ ಫಿಕ್ಸಿಂಗ್, ಅಂಪೈರ್ಸ್ ನೇಮಕದಲ್ಲೂ ಫಿಕ್ಸಿಂಗ್; ಸಿಎಸ್​​ಕೆ ಮಾಲೀಕ ಎನ್ ಶ್ರೀನಿವಾಸ್ ವಿರುದ್ಧ ಲಲಿತ್ ಮೋದಿ ಗಂಭೀರ ಆರೋಪ

Lalit Modi: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು, ಅಂದು ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಮತ್ತು ಸಿಎಸ್​ಕೆ ಮಾಲೀಕ ಎನ್ ಶ್ರೀನಿವಾಸನ್ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹರಾಜಿನಲ್ಲಿ, ಅಂಪೈರ್ಸ್ ಫಿಕ್ಸಿಂಗ್ ಮಾಡಿತ್ತಿದ್ರು ಸಿಎಸ್​ಕೆ ಮಾಲೀಕ; ಎನ್ ಶ್ರೀನಿವಾಸ್ ವಿರುದ್ಧ ಲಲಿತ್ ಮೋದಿ ಗಂಭೀರ ಆರೋಪ
ಹರಾಜಿನಲ್ಲಿ, ಅಂಪೈರ್ಸ್ ಫಿಕ್ಸಿಂಗ್ ಮಾಡಿತ್ತಿದ್ರು ಸಿಎಸ್​ಕೆ ಮಾಲೀಕ; ಎನ್ ಶ್ರೀನಿವಾಸ್ ವಿರುದ್ಧ ಲಲಿತ್ ಮೋದಿ ಗಂಭೀರ ಆರೋಪ

ದೇಶ ಬಿಟ್ಟು ಹೋಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾಜಿ ಮುಖ್ಯಸ್ಥ ಲಲಿತ್ ಮೋದಿ (Lalit Modi) ಅವರು ಐಸಿಸಿ ಮಾಜಿ ಅಧ್ಯಕ್ಷ ಮತ್ತು ಸಿಎಸ್‌ಕೆ ಮಾಲೀಕ ಎನ್ ಶ್ರೀನಿವಾಸನ್ (N Srinivasan) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶ್ರೀನಿವಾಸನ್ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪಂದ್ಯಗಳಿದ್ದ ಅವಧಿಯಲ್ಲಿ ತನಗೆ ಅನುಕೂಲ ಆಗುವ ರೀತಿಯಲ್ಲಿ ಅಂಪೈರ್‌ಗಳನ್ನು ಫಿಕ್ಸ್ ಮಾಡುತ್ತಿದ್ದರು. ತಮಗೆ ಬೇಕಾದವರನ್ನೇ ನೇಮಿಸಿಕೊಳ್ಳುತ್ತಿದ್ದರು. ತಮ್ಮ ತಂಡಕ್ಕಾಗಿ ಹರಾಜು ಪ್ರಕ್ರಿಯೆಯಲ್ಲೂ ಫಿಕ್ಸಿಂಗ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ರಾಜ್ ಶರ್ಮಾ ಅವರ 'ಫಿಗರಿಂಗ್ ಔಟ್' ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿದ ಲಲಿತ್ ಮೋದಿ ಅವರು, ಅಂದು ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಶ್ರೀನಿವಾಸನ್ ಅವರು ತಮ್ಮ ಏಳಿಗೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಐಪಿಎಲ್ ಪ್ರತಿಷ್ಠೆ ಮಣ್ಣುಪಾಲಾದರೂ ಪರವಾಗಿರಲಿಲ್ಲ. ಅವರಿಗೆ ಸಿಎಸ್​ಕೆ ಯಶಸ್ಸೇ ಮುಖ್ಯವಾಗಿತ್ತು. ಇದಕ್ಕಾಗಿ ಸಿಎಸ್​ಕೆ ಪಂದ್ಯಗಳಿದ್ದಾಗ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು. ಹರಾಜಿನಲ್ಲೂ ಫಿಕ್ಸಿಂಗ್ ಮಾಡುತ್ತಿದ್ದರು. ಚೆನ್ನೈ ಮೂಲದ ಅಂಪೈರ್​ಗಳನ್ನೇ ನೇಮಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಅವರಿಗೆ (ಎನ್ ಶ್ರೀನಿವಾಸನ್) ಐಪಿಎಲ್ ಅಂದರೆ ಇಷ್ಟವಾಗುತ್ತಿರಲಿಲ್ಲ. ವಿಶ್ವದ ಶ್ರೀಮಂತ ಲೀಗ್​ ಯಶಸ್ವಿಯಾಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಆದರೆ, ಮುಂದುವರೆದಂತೆ ಯಶಸ್ಸು ಸಿಕ್ಕಿತು. ಬಳಿಕ ಲಾಭ ಮಾಡಲು ಪ್ರಾರಂಭಿಸಿದರು. ಬಿಸಿಸಿಐ ಸದಸ್ಯ ಮತ್ತು ಕಾರ್ಯದರ್ಶಿಯಾಗಿದ್ದ ಅವರು, ನನ್ನ ದೊಡ್ಡ ಎದುರಾಳಿಯಾಗಿದ್ದರು. ಫಿಕ್ಸಿಂಗ್ ಸೇರಿ ಅನೇಕ ಅಕ್ರಮಗಳನ್ನು ಎಸಗಿದ್ದಾರೆ. ಅಂಪೈರ್​ ನೇಮಕಕ್ಕೆ ಸಂಬಂಧಿಸಿದ ಮರ್ಮ ನನ್ನ ಅರಿವಿಗೆ ಬಂದಿರಲಿಲ್ಲ. ಬಳಿಕ ಎಲ್ಲವೂ ಗೊತ್ತಾಯಿತು. ಅದನ್ನು ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ ಎಂದು ಅವರ ಅಕ್ರಮಗಳ ವಿರುದ್ಧ ನಾನು ಧ್ವನಿ ಎತ್ತಿದ್ದೆ. ಹೀಗಾಗಿ ನನ್ನ ವಿರೋಧಿಯಾಗಿದ್ದರು ಎಂದಿದ್ದಾರೆ.

'ಫ್ಲಿಂಟಾಫ್‌ಗೆ ಬಿಡ್ ಮಾಡಬೇಡಿ ಎಂದು ಫ್ರಾಂಚೈಸಿಗಳಿಗೆ ಹೇಳುತ್ತಿದ್ರು!

ಶ್ರೀನಿವಾಸನ್ ಅವರು 2009ರ ಆವೃತ್ತಿಯಲ್ಲಿ ಇಂಗ್ಲೆಂಡ್ ಆಲ್​ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ಖರೀದಿಸಲು ಐಪಿಎಲ್ ಹರಾಜನ್ನು ಫಿಕ್ಸಿಂಗ್ ಮಾಡಿದ್ದಾರೆ ಎಂದು ಮೋದಿ ಮತ್ತೊಂದು ಆರೋಪ ಮಾಡಿದ್ದಾರೆ. ಆತನ ಖರೀದಿಗೆ, ಈ ಆಟಗಾರನಿಗೆ ಬಿಡ್ ಮಾಡದಂತೆ ಇತರ ಫ್ರಾಂಚೈಸಿಗಳಿಗೆ ಸಂದೇಶ ಕಳುಹಿಸುತ್ತಿದ್ದರು. ಈ ಬಗ್ಗೆ ಕೇಳಿದಾಗ ಅದನ್ನು ಒಪ್ಪಿಕೊಂಡಿದ್ದರು. ನನಗೆ ಫ್ಲಿಂಟಾಫ್ ಬೇಕಿತ್ತು ಎಂದು ಹೇಳಿದ್ದರು. ಅವರು ಪ್ರತಿಯೊಂದು ವಿಚಾರದಲ್ಲೂ ಅಡ್ಡಿಯಾಗುತ್ತಿದ್ದರು. ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದ್ದರು ಎಂದಿದ್ದಾರೆ.

2013ರ ಐಪಿಎಲ್ ಫಿಕ್ಸಿಂಗ್ ಹಗರಣ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2013ರಲ್ಲಿ ಪ್ರಮುಖ ಸ್ಪಾಟ್ ಫಿಕ್ಸಿಂಗ್ ಹಗರಣ ಕೇಳಿ ಬಂದಿತ್ತು. ಅಂದು ಫ್ರಾಂಚೈಸಿಯ ಉನ್ನತ ಅಧಿಕಾರಿ ಮತ್ತು ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ವಂಚನೆ, ನಕಲಿ ಮತ್ತು ವಂಚನೆ ಆರೋಪದಡಿ ಬಂಧಿಸಲಾಗಿತ್ತು. ಗುರುನಾಥ್ ಬುಕ್ಕಿಗಳ ಸಂಪರ್ಕವನ್ನು ಹೊಂದಿದ್ದ ವೀರೇಂದ್ರ "ವಿಂದೂ" ದಾರಾ ಸಿಂಗ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು. ಆತ ಐಪಿಎಲ್ ಪಂದ್ಯಗಳ ಅವಧಿಯಲ್ಲಿ ಆಗಾಗ್ಗೆ ಸ್ಟೇಡಿಯಂ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಿಎಸ್​ಕೆ ಮತ್ತು ರಾಜಸ್ಥಾನ್ ರಾಯಲ್ಸ್ 2016 ಮತ್ತು 2017ರಲ್ಲಿ ಬ್ಯಾನ್ ಆಗಿತ್ತು.

Whats_app_banner