ಯುಎಸ್‌ ವಿರುದ್ಧ ಸೋತು ಆರ್ಚರಿಯಲ್ಲಿ ಕಂಚಿನ ಪದಕ ಕಳೆದುಕೊಂಡ ಭಾರತ; ಜೂಡೊ, ರೋವಿಂಗ್‌ನಲ್ಲೂ ನಿರಾಶೆ
ಕನ್ನಡ ಸುದ್ದಿ  /  ಕ್ರೀಡೆ  /  ಯುಎಸ್‌ ವಿರುದ್ಧ ಸೋತು ಆರ್ಚರಿಯಲ್ಲಿ ಕಂಚಿನ ಪದಕ ಕಳೆದುಕೊಂಡ ಭಾರತ; ಜೂಡೊ, ರೋವಿಂಗ್‌ನಲ್ಲೂ ನಿರಾಶೆ

ಯುಎಸ್‌ ವಿರುದ್ಧ ಸೋತು ಆರ್ಚರಿಯಲ್ಲಿ ಕಂಚಿನ ಪದಕ ಕಳೆದುಕೊಂಡ ಭಾರತ; ಜೂಡೊ, ರೋವಿಂಗ್‌ನಲ್ಲೂ ನಿರಾಶೆ

Paris Olympics 2024: ಮಿಶ್ರ ತಂಡಗಳ ಆರ್ಚರಿಯಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಭಾಋತ ಕಳೆದುಕೊಂಡಿತು. ಯುಎಸ್‌ಎ ವಿರುದ್ಧ ಕಂಚಿನ ಪದಕ ಪಂದ್ಯದಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಜೋಡಿಯು ಅಮೆರಿಕದ ಕೇಸಿ ಕೌಫ್ಹೋಲ್ಡ್ ಮತ್ತು ಬ್ರಾಡಿ ಎಲಿಸನ್ ವಿರುದ್ಧ ಮುಗ್ಗರಿಸಿದರು.

ಯುಎಸ್‌ ವಿರುದ್ಧ ಸೋತು ಆರ್ಚರಿಯಲ್ಲಿ ಕಂಚಿನ ಪದಕ ಕಳೆದುಕೊಂಡ ಭಾರತ
ಯುಎಸ್‌ ವಿರುದ್ಧ ಸೋತು ಆರ್ಚರಿಯಲ್ಲಿ ಕಂಚಿನ ಪದಕ ಕಳೆದುಕೊಂಡ ಭಾರತ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಏಳನೇ ದಿನವಾದ ಇಂದು ಭಾರತ ಮಿಶ್ರ ಫಲಿತಾಂಶ ಪಡೆದಿದೆ. 25 ಮೀಟರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಮನು ಭಾಕರ್‌ ಫೈನಲ್‌ಗೆ ಪ್ರವೇಶಿಸಿದರೆ, ಹಾಕಿ ತಂಡವು ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿತು. ಜೂಡೋ ಮತ್ತು ರೋವಿಂಗ್‌ನಲ್ಲಿ ಭಾರತೀಯರು ನಿರಾಶೆ ಅನುಭವಿಸಿದರು. ಇದೇ ವೇಳೆ ಮಿಶ್ರ ತಂಡ ಆರ್ಚರಿಯಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಕಂಚಿನ ಪದಕದಿಂದ ವಂಚಿತರಾದರು. ಸೆಮಿಫೈನಲ್‌ ದಕ್ಷಿಣ ಕೊರಿಯಾ ವಿರುದ್ಧ ಸೋತ ತಂಡವು, ಯುಎಸ್‌ಎ ವಿರುದ್ಧ ಕಂಚಿನ ಪದಕ ಪಂದ್ಯವನ್ನು ಎದುರಿಸಿತು. ಪದಕ ಸುತ್ತಿನಲ್ಲಿ ಯುಎಸ್ಎ ತಂಡದ ಕೇಸಿ ಕೌಫ್ಹೋಲ್ಡ್ ಮತ್ತು ಬ್ರಾಡಿ ಎಲಿಸನ್ 6-2 ಅಂತರದಿಂದ ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಹೀಗಾಗಿ ಭಾರತಕ್ಕಿದ್ದ ಕಂಚಿನ ಪದಕದ ನಿರೀಕ್ಷೆ ಕಮರಿತು.

ಜೂಡೋ, ರೋವಿಂಗ್‌ನಲ್ಲಿ ನಿರಾಶೆ

ಮಹಿಳೆಯರ +75 ಕೆಜಿ 32ರ ಸುತ್ತಿನ ಜೂಡೋ ಪಂದ್ಯದಲ್ಲಿ ಭಾರತದ ತುಲಿಕಾ ಮಾನ್ ಸೋಲು ಕಂಡಿದ್ದಾರೆ. ಕ್ಯೂಬಾದ ಇಡಾಲಿಸ್ ಒರ್ಟಿಜ್ ವಿರುದ್ಧ ಭಾರತದ ಆಟಗಾರ್ತಿ 10-0 ಅಂತರದಿಂದ ಭಾರಿ ನಿರಾಶೆ ಅನುಭವಿಸಿದರು. ರೋವಿಂಗ್‌ನಲ್ಲಿ ಭಾರತದ ಬಲರಾಜ್ ಪನ್ವಾರ್ ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ 33 ರೋವರ್‌ಗಳ ಪೈಕಿ 23ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಹಾಕಿಯಲ್ಲಿ ಐತಿಹಾಸಿಕ ಜಯ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಭಾರತ ಪುರುಷರ ಹಾಕಿ ತಂಡವು, ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಭಾರತ ತಂಡಕ್ಕೆ ಇದು ಐತಿಹಾಸಿಕ ವಿಜಯ. 1972ರಲ್ಲಿ ನಡೆದ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತವು ಕೊನೆಯ ಬಾರಿಗೆ ಆಸೀಸ್‌ ವಿರುದ್ಧ ಗೆಲುವು ಸಾಧಿಸಿತ್ತು. ಇದೀಗ ಬರೋಬ್ಬರಿ 52 ವರ್ಷಗಳ ನಂತರ ಕಾಂಗರೂಗಳ ವಿರುದ್ಧ ಮತ್ತೆ ಗೆಲುವು ಸಾಧಿಸಿದೆ. ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಗೋಲಿನ ನೆರವಿಂದ 3-2 ಅಂತರದಿಂದ ಗೆದ್ದು ಬೀಗಿದೆ.

ಮೂರನೇ ಫೈನಲ್‌ಗೆ ಪ್ರವೇಶಿಸಿದ ಮನು ಭಾಕರ್

25 ಮೀಟರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಕಂಚಿನ ಹುಡುಗಿ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಇದರೊಂದಿಗೆ ಹ್ಯಾಟ್ರಿಕ್‌ ಪದಕಗಳ ಸಾಧನೆ ಮಾಡಲು ಒಂದು ಹೆಜ್ಜೆ ಮಾತ್ರ ಹಿಂದಿದ್ದಾರೆ. ಈಗಾಗಲೇ ಮನು ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಎರಡು ಮೆಡಲ್‌ ಗೆದ್ದು ಕೊಟ್ಟಿದ್ದಾರೆ. 22 ವರ್ಷದ ಶೂಟರ್, 'ನಿಖರ' ಸುತ್ತಿನಲ್ಲಿ ಬರೋಬ್ಬರಿ 294 ಅಂಕ, ಕ್ಷಿಪ್ರ ಸುತ್ತಿನಲ್ಲಿ 296 ಅಂಕ ಗಳಿಸುವುದರೊಂದಿಗೆ ಒಟ್ಟು 590 ಅಂಕಗಳನ್ನು ಗಳಿಸಿದರು. ಶನಿವಾರ ನಡೆಯಲಿರುವ ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್‌ನಲ್ಲಿ ಮನು ಕಣಕ್ಕಿಳಿಯಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಫೈನಲ್‌ ಪಂದ್ಯ ನಡೆಯಲಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.