New Zealand vs Sri Lanka: ಕಿವೀಸ್ ವಿರುದ್ಧದ ಮೊದಲ ಟಿ20 ರೋಚಕ ಅಂತ್ಯ; ಸೂಪರ್ ಓವರ್‌ ಗೆದ್ದ ಶ್ರೀಲಂಕಾ
ಕನ್ನಡ ಸುದ್ದಿ  /  ಕ್ರೀಡೆ  /  New Zealand Vs Sri Lanka: ಕಿವೀಸ್ ವಿರುದ್ಧದ ಮೊದಲ ಟಿ20 ರೋಚಕ ಅಂತ್ಯ; ಸೂಪರ್ ಓವರ್‌ ಗೆದ್ದ ಶ್ರೀಲಂಕಾ

New Zealand vs Sri Lanka: ಕಿವೀಸ್ ವಿರುದ್ಧದ ಮೊದಲ ಟಿ20 ರೋಚಕ ಅಂತ್ಯ; ಸೂಪರ್ ಓವರ್‌ ಗೆದ್ದ ಶ್ರೀಲಂಕಾ

ಚೇಸಿಂಗ್‌ ವೇಳೆ ನ್ಯೂಜಿಲೆಂಡ್‌ನ ಇಶ್ ಸೋಧಿ 20ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ, ಸೋಲುವ ಅಂಚಿನಲ್ಲಿದ್ದ ಪಂದ್ಯವನ್ನು ಟೈ ಬ್ರೇಕರ್‌ಗೆ ಒಳಗಾಗುವಂತೆ ಮಾಡಿದರು. ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಮತ್ತೆ ಅಬ್ಬರಿಸಲು ಕಿವೀಸ್‌ ವಿಫಲವಾಯ್ತು.

ಸೂಪರ್‌ ಓವರ್‌ನಲ್ಲಿ ಲಂಕಾಗೆ ಗೆಲುವು
ಸೂಪರ್‌ ಓವರ್‌ನಲ್ಲಿ ಲಂಕಾಗೆ ಗೆಲುವು (ICC)

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್‌ ಹಾಗೂ ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಆಗಿದ್ದ ಪ್ರವಾಸಿ ಶ್ರೀಲಂಕಾ, ಟಿ20 ಸರಣಿಯ ಮೂಲಕ ರೋಚಕವಾಗಿ ಪುನರಾಗಮನ ಮಾಡಿದೆ. ಇಂದು ನಡೆದ ಮೊದಲ ಟಿ20 ಪಂದ್ಯವನ್ನು ಸೂಪರ್‌ ಓವರ್ ಮೂಲಕ ರೋಚಕವಾಗಿ ಗೆದ್ದಿದೆ.

ಚೇಸಿಂಗ್‌ ವೇಳೆ ನ್ಯೂಜಿಲೆಂಡ್‌ನ ಇಶ್ ಸೋಧಿ 20ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ, ಸೋಲುವ ಅಂಚಿನಲ್ಲಿದ್ದ ಪಂದ್ಯವನ್ನು ಟೈ ಬ್ರೇಕರ್‌ಗೆ ಒಳಗಾಗುವಂತೆ ಮಾಡಿದರು. ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಮತ್ತೆ ಅಬ್ಬರಿಸಲು ಕಿವೀಸ್‌ ವಿಫಲವಾಯ್ತು. ಹೀಗಾಗಿ ಶ್ರೀಲಂಕಾ ತಂಡವು ಸುಲಭ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಲಂಕಾ, 5 ವಿಕೆಟ್‌ ಕಳೆದುಕೊಂಡು 196 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಕಿವೀಸ್‌, ಕೊನೆಯ ಓವರ್‌ನಲ್ಲಿ ಗೆಲುವಿಗೆ 13 ರನ್ ಗುರಿ ಪಡೆಯಿತು. ಅಂತಿಮ ಎಸೆತದಲ್ಲಿ ಗೆಲ್ಲಲು 7 ರನ್‌ಗಳ ಅಗತ್ಯವಿತ್ತು. ಆದರೆ ಟೈ ಮಾಡಲು 6 ರನ್ ಮಾತ್ರ ಸಾಕಿತ್ತು. ಶ್ರೀಲಂಕಾ ನಾಯಕ ದಸುನ್ ಶನಕಾ ಕೈಯಲ್ಲಿ ಚೆಂಡಿತ್ತು. ತಂಡವನ್ನು ಗೆಲ್ಲಿಸುವ ಜವಾಬ್ದಾರಿ ಕೂಡಾ ನಾಯಕನ ಮೇಲಿತ್ತು. ಆದರೆ, ಎಲ್ಲಾ ಬ್ಯಾಟರ್‌ಗಳ ವಿಕೆಟ್‌ ಕಳೆದುಕೊಂಡಿದ್ದ ಕಿವೀಸ್‌ ಗೆಲುವಿನ ಆಸೆ ಕಳೆದುಕೊಂಡಿತ್ತು. ಆದರೆ ಸೋಧಿ ತವರಿನ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಮಿಡ್‌ ವಿಕೆಟ್‌ನ ಮೇಲೆ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದ ಅವರು, ತಂಡದ ಮೊತ್ತವನ್ನು ಸಮಬಲಗೊಳಿಸುವಲ್ಲಿ ನರವಾದರು. ಅಲ್ಲದೆ ಪಂದ್ಯವನ್ನು ಸೂಪರ್ ಓವರ್‌ಗೆ ಕೊಂಡೊಯ್ದರು.

ಸೂಪರ್‌ ಓವರ್‌ ಹೇಗಿತ್ತು?

ಸೂಪರ್‌ ಓವರ್‌ನಲ್ಲಿ ಮೊದಲು ಕಿವೀಸ್‌ ಬ್ಯಾಟ್‌ ಬೀಸಿತು. ಮಿಚೆಲ್ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಎರಡನೆಯ ಎಸೆತ ವೈಡ್ ಆದರೆ, ಮೂರನೇ ಎಸೆತಕ್ಕೆ ನೀಶಮ್ ಔಟಾದರು. ಚಾಪ್‌ಮನ್ ಡಬಲ್ ಮತ್ತು ಒಂದು ಬೌಂಡರಿ ಬಾರಿಸಿ ಕೊನೆಯ ಎಸೆತದಲ್ಲಿ ಬೌಲ್ಡ್ ಆದರು. ನ್ಯೂಜಿಲೆಂಡ್ ಕೇವಲ 8 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿತು. ಇದು ಲಂಕಾಗೆ ಸುಲಭ ತುತ್ತಾಯಿತು.

ಕುಸಾಲ್ ಮೆಂಡಿಸ್ ಮತ್ತು ಚರಿತ್ ಅಸಲಂಕಾ ಶ್ರೀಲಂಕಾವನ್ನು ಗೆಲ್ಲಿಸಿದರು. ಮುಖ್ಯ ಇನ್ನಿಂಗ್ಸ್‌ನಲ್ಲಿ ಅಸಲಂಕಾ ಅವರು 41 ಎಸೆತಗಳಲ್ಲಿ ಆರು ಸಿಕ್ಸರ್‌ ಸಹಿತ 67 ರನ್ ಸಿಡಿಸಿದ್ದರು. ಹೀಗಾಗಿ ಸೂಪರ್ ಓವರ್‌ಗೆ ಅವರೇ ಅರ್ಹ ಆಟಗಾರನಾಗಿದ್ದರು.

ಮೊದಲ ಎಸೆತದಲ್ಲಿ ಮೆಂಡಿಸ್ ಸಿಂಗಲ್ ಪಡೆದರು. ನಂತರ ಅಸಲಂಕಾ ಅವರು ಎರಡನೇ ಎಸೆತವನ್ನು ಸಿಕ್ಸರ್‌ಗಟ್ಟಿದರು. ಮೂರನೆ ಎಸೆತಕ್ಕೆ ಬೌಂಡರಿ ಸಿಡಿಸಿ ಬೇಗನೆ ಆಟ ಮುಗಿಸಿದರು. ಶ್ರೀಲಂಕಾ ವಿಕೆಟ್‌ ಕಳೆದುಕೊಳ್ಳದೆ 11 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಲಂಕಾ 1-0ಯಿಂದ ಮುನ್ನಡೆ ಸಾಧಿಸಿದೆ.

ನ್ಯೂಜಿಲ್ಯಾಂಡ್‌ ತಂಡ:

ಚಾಡ್ ಬೋವ್ಸ್, ಟಿಮ್ ಸೀಫರ್ಟ್, ಟಾಮ್ ಲ್ಯಾಥಮ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ರಚಿನ್ ರವೀಂದ್ರ, ಆಡಮ್ ಮಿಲ್ನೆ, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬೆನ್ ಲಿಸ್ಟರ್

ಶ್ರೀಲಂಕಾ ತಂಡ:

ಕುಸಲ್ ಮೆಂಡಿಸ್, ಕುಸಲ್ ಪೆರೆರಾ, ಧನಂಜಯ ಡಿ ಸಿಲ್ವಾ, ಪಾತುಮ್ ನಿಸ್ಸಂಕ, ಚರಿತ್ ಅಸಲಂಕಾ, ವನಿಂದು ಹಸರಂಗ, ದಸುನ್ ಶನಕ (ನಾಯಕ), ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಪ್ರಮೋದ್ ಮಧುಶನ್

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.