US Open 2023: ಯುಎಸ್ ಓಪನ್ ಫೈನಲ್ ಪ್ರವೇಶಿಸಿದ ಜೋಕೋವಿಕ್-ಮೆಡ್ವೆಡೆವ್, ಸೋತು ಹೊರಬಿದ್ದ ಅಲ್ಕರಾಜ್-ಶೆಲ್ಟನ್
US Open 2023, Daniil Medvedev vs Novak Djokovic: ಸೆಪ್ಟೆಂಬರ್ 11ರಂದು ನಡೆಯುವ ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ ನೋವಾಕ್ ಜೋಕೋವಿಕ್ ಮತ್ತು ಡೇನಿಯಲ್ ಮೆಡ್ವೆಡೆವ್ ಮುಖಾಮುಖಿಯಾಗಲಿದ್ದಾರೆ.
ಯುಎಸ್ ಓಪನ್ 2023 ಟೂರ್ನಿಯು (US Open 2023) ಅಂತಿಮ ಹಂತದ ಘಟ್ಟಕ್ಕೆ ತಲುಪಿದೆ. ತಡರಾತ್ರಿ ನಡೆದ ಸೆಮಿಫೈನಲ್ಸ್ ಹೋರಾಟದಲ್ಲಿ ಗೆದ್ದ ಘಟಾನುಘಟಿ ಆಟಗಾರರು ಫೈನಲ್ ಪ್ರವೇಶಿಸಿದ್ದಾರೆ. ಜುಲೈನಲ್ಲಿ ವಿಂಬಲ್ಡನ್ ಗೆದ್ದ, ಹಾಲಿ ಯುಎಸ್ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ (Carlos Alcaraz) ಸೆಮೀಸ್ನಲ್ಲಿ ಮುಗ್ಗರಿಸಿ ಹೊರ ಬಿದ್ದರೆ, ಸರ್ಬಿಯಾದ ದಿಗ್ಗಜ ನೋವಾಕ್ ಜೋಕೋವಿಕ್ (Novak Djokovic) ಮತ್ತೊಂದು ಫೈನಲ್ಗೇರಿದ್ದು ದಾಖಲೆಯ 24ನೇ ಗ್ರ್ಯಾಂಡ್ ಸ್ಲಾಮ್ ಮೇಲೆ ಕಣ್ಣಿಟ್ಟಿದ್ದಾರೆ.
ಅಲ್ಕರಾಜ್ಗೆ ಸೋಲು, 2021ರ ನಂತರ ಮೆಡ್ವೆಡೆವ್ ಫೈನಲ್ಗೆ
ಮತ್ತೊಂದು ಟ್ರೋಫಿಯ ಕನಸಿನಲ್ಲಿದ್ದ ಕಾರ್ಲೋಸ್ ಅಲ್ಕರಾಜ್ಗೆ ರಷ್ಯಾದ ಡೇನಿಯಲ್ ಮೆಡ್ವೆಡೆವ್ (Daniil Medvedev) ಸೋಲಿನ ಶಾಕ್ ನೀಡಿದ್ದಾರೆ. ಮೊದಲ ಸೆಮಿಫೈನಲ್ನಲ್ಲಿ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಅಲ್ಕರಾಜ್ರನ್ನು 7-6(3), 6-1, 3-6, 6-3 ಅಂತರದಲ್ಲಿ ಸೋಲಿಸಿದ ಮೆಡ್ವೆಡೆವ್, 2019, 2021ರ ನಂತರ ಫೈನಲ್ಗೇರಿದ್ದಾರೆ. ವಿಶೇಷ ಅಂದರೆ ಮತ್ತೆ ಫೈನಲ್ನಲ್ಲಿ ಜೋಕೋವಿಕ್ರನ್ನು ಎದುರಿಸಲಿದ್ದಾರೆ.
24ನೇ ಗ್ರ್ಯಾಂಡ್ ಸ್ಲ್ಯಾಮ್ ಮೇಲೆ ಜೋಕೋವಿಕ್ ಕಣ್ಣು
ನೋವಾಕ್ ಜೋಕೋವಿಕ್ ಇದೀಗ ದಾಖಲೆಯ ಗ್ರ್ಯಾಂಡ್ ಸ್ಲ್ಯಾಮ್ ಮೇಲೆ ಕಣ್ಣಿಟ್ಟಿದ್ದಾರೆ. ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಜೋಕೋವಿಕ್, ಅಮೆರಿಕದ ಬೆನ್ ಶೆಲ್ಟನ್ರನ್ನು (Ben Shelton) ಸೋಲಿಸಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿದ್ದಾರೆ. 6-3, 6-2, 7-6 (7-4) ಅಂತರದಲ್ಲಿ ಜಯಿಸಿದ ನೋವಾಕ್, ಇದೀಗ ದಾಖಲೆಯ 24ನೇ ಪ್ರಶಸ್ತಿ ಗೆಲ್ಲುವತ್ತ ಚಿತ್ತಹರಿಸಿದ್ದಾರೆ. ಫೈನಲ್ನಲ್ಲಿ ಮೆಡ್ವೆಡೆವ್ರನ್ನು ಎದುರಿಸಲಿದ್ದಾರೆ. ಅಲ್ಲದೆ, 4ನೇ ಯುಎಸ್ ಓಪನ್ ಪ್ರಶಸ್ತಿ ಜಯಿಸಲು ಸಜ್ಜಾಗಿದ್ದಾರೆ.
ಮತ್ತೆ ಮೆಡ್ವೆಡೆವ್-ಜೋಕೋವಿಕ್ ಸೆಣಸಾಟ
2021ರ ಯುಎಸ್ ಓಪನ್ ಫೈನಲ್ನಲ್ಲಿ ಮುಖಾಮುಖಿಯಾಗಿದ್ದ ಜೋಡಿಯೇ ಈ ಬಾರಿಯ ಟೂರ್ನಿಯ ಫೈನಲ್ನಲ್ಲೂ ಸೆಣಸಾಟ ನಡೆಸುತ್ತಿರುವುದು ವಿಶೇಷ. ನೋವಾಕ್-ಮೆಡ್ವೆಡೆವ್ (Daniil Medvedev vs Novak Djokovic) ಅವರು ಈ ಬಾರಿ ಫೈನಲ್ನಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. 2021ರ ಫೈನಲ್ನಲ್ಲಿ ಮೆಡ್ವೆಡೆವ್, ಜೋಕೋವಿಕ್ ಅವರನ್ನು ಸೋಲಿಸಿದ್ದರು. ಇದೀಗ ಸೇಡು ತೀರಿಸಿಕೊಳ್ಳಲು ಜೋಕೋವಿಕ್ ಸಿದ್ಧರಾಗಿದ್ದಾರೆ. ಅಲ್ಲದೆ, 24ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇಬ್ಬರಿಬ್ಬರ ನಡುವಿನ ಸೆಣಸಾಟ ಸೆಪ್ಟೆಂಬರ್ 11ರಂದು ನಡೆಯಲಿದೆ. ಈ ಜೋಡಿ 14 ಬಾರಿ ಮುಖಾಮುಖಿಯಾಗಿದ್ದು, ಜೋಕೋವಿಕ್ 9 ಸಲ, ಮೆಡ್ವೆಡೆವ್ 5 ಬಾರಿ ಜಯಿಸಿದ್ದಾರೆ.
ಹಾಲಿ ಚಾಂಪಿಯನ್ಗೆ ಶಾಕ್
2022ರ ಯುಎಸ್ ಓಪನ್ ಫೈನಲ್ನಲ್ಲಿ ಅಲ್ಕರಾಜ್ ಚಾಂಪಿಯನ್ ಆಗಿದ್ದರು. ಅಂದು ಕ್ಯಾಸ್ಪರ್ ರುಡ್ ಎದುರು ಫೈನಲ್ನಲ್ಲಿ ರೋಚಕ ಗೆಲುವು ಸಾಧಿಸಿದ್ದರು. ಚೊಚ್ಚಲ ಯುಎಸ್ ಓಪನ್ ಟೂರ್ನಿಗೆ ಮುತ್ತಿಕ್ಕಿದ್ದರು. 4-6, 6-2, 6-7, 3-6 ಸೆಟ್ಗಳಿಂದ ಫೈನಲ್ನಲ್ಲಿ ಅಲ್ಕರಾಜ್ ಜಯಿಸಿದ್ದರು. ಆದರೆ ಈ ಬಾರಿ ತಮ್ಮ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು.
ಸಬಲೆಂಕಾ ಫೈನಲ್ಗೆ
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ಗೆ ಬೆಲಾರಸ್ನ ಅರೀನಾ ಸಬಲೆಂಕಾ ಮತ್ತು ಅಮೆರಿಕದ ಕೊಕೊ ಗೌಫ್ (Aryna Sabalenka vs Co Co gauff) ಫೈನಲ್ ಪ್ರವೇಶಿಸಿದ್ದಾರೆ. ಅಮೆರಿಕದ ಮ್ಯಾಡಿಸನ್ ಕೀಸ್ ಅವರನ್ನು ಸೆಮಿಫೈನಲ್ನಲ್ಲಿ ಸಬಲೆಂಕಾ ಸೋಲಿಸಿದರು. ಮತ್ತೊಂದು ಸೆಮೀಸ್ನಲ್ಲಿ ಕರೋಲಿನಾ ಮುಚೋವಾರನ್ನು ಗೌಫ್ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.