ಕನ್ನಡ ಸುದ್ದಿ  /  ಕ್ರೀಡೆ  /  Uttara Kannada News: ರಾಜ್ಯಕ್ಕೆ ಕೀರ್ತಿ ತಂದ ಉತ್ತರ ಕನ್ನಡದ ನಯನಾ ಕೊಕರೆ; ಏಷ್ಯನ್ ಜ್ಯೂನಿಯರ್ ಅಥ್ಲೆಟಿಕ್ಸ್​​ನಲ್ಲಿ ಪದಕ

Uttara Kannada News: ರಾಜ್ಯಕ್ಕೆ ಕೀರ್ತಿ ತಂದ ಉತ್ತರ ಕನ್ನಡದ ನಯನಾ ಕೊಕರೆ; ಏಷ್ಯನ್ ಜ್ಯೂನಿಯರ್ ಅಥ್ಲೆಟಿಕ್ಸ್​​ನಲ್ಲಿ ಪದಕ

Nayana Kokare from Mundgod: ಮುಂಡಗೋಡಿನ ನಯನಾ ಕೊಕರೆ, ನ್ಯಾಷನಲ್ ಅಥ್ಲೆಟಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ, ಏಷ್ಯನ್ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್​​ಶಿಪ್​​ಗೆ ಆಯ್ಕೆಗೊಂಡಿದ್ದರು. ಇದೀಗ ರಿಲೇಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಉತ್ತರ ಕನ್ನಡ ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯದ ಕೀರ್ತಿಯನ್ನು ಬೆಳಗಿಸಿದ್ದಾರೆ.

ನಯನಾ ಕೊಕರೆ
ನಯನಾ ಕೊಕರೆ

ಕಾರವಾರ (ಉತ್ತರ ಕನ್ನಡ): ಸಾಧಿಸುವ ಛಲವಿದ್ದರೆ, ಅಂತಾರಾಷ್ಟ್ರೀಯ ಮಟ್ಟಕ್ಕೇ ತಲುಪಬಹುದು ಎಂಬುದಕ್ಕೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಷ್ಟೇನೂ ಪಟ್ಟಣದ ದೌಲತ್ತಿಗೆ ತೆರೆದುಕೊಳ್ಳದೇ ಇರುವ ಮುಂಡಗೋಡ ಎಂಬ ಪ್ರದೇಶದಿಂದ ಬಂದ ದನಗರ ಗೌಳಿ ಜನಾಂಗದ ನಯನಾ ಕೊಕರೆ (Nayana Kokare) ಸಾಕ್ಷಿ.

ನಾವು ಎಲ್ಲಿಂದ ಬಂದಿದ್ದೇವೆ ಎಂಬುದು ಮುಖ್ಯವಲ್ಲ, ಏನು ಸಾಧಿಸುತ್ತಿದ್ದೇವೆ ಎಂಬುದೇ ಇಂಪಾರ್ಟೆಂಟ್ ಎಂಬುದನ್ನು ನಿರೂಪಿಸಿರುವ ನಯನಾ, ನ್ಯಾಷನಲ್ ಅಥ್ಲೆಟಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ, ಏಷ್ಯನ್ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್​​ಶಿಪ್​​ಗೆ (Asian U20 Athletics Championship) ಆಯ್ಕೆಗೊಂಡಿದ್ದರು. ಇದೀಗ 4x100 ರಿಲೇಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಉತ್ತರ ಕನ್ನಡ ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯದ ಕೀರ್ತಿಯನ್ನು ಬೆಳಗಿಸಿದ್ದಾರೆ.

ಹಾಗೆ ನೋಡಿದರೆ, ಮುಂಡಗೋಡ ತಾಲೂಕು ಕೇಂದ್ರವಷ್ಟೇ. ಕೆಲವು ಆಧುನೀಕರಣಗೊಂಡ ತಾಲೂಕು ಕೇಂದ್ರಗಳಂತೆ ಬೆಳೆದಿಲ್ಲ. ಇನ್ನು ಇಲ್ಲಿಗೆ ಸಂಬಂಧಿಸಿದ ಹಳ್ಳಿ ಪ್ರದೇಶಗಳು ಇಂದಿಗೂ ನಗರೀಕರಣದಿಂದ ಹಿಂದುಳಿದಿವೆ. ಇಂಥ ತಾಲೂಕಿನ ಚಳಗೇರಿ ಗ್ರಾಮದ ನಯನಾ ಕೊಕರೆ ಎಂಬ ಯುವತಿ, ತಮಿಳುನಾಡಿನಲ್ಲಿ ನಡೆದ 20 ವರ್ಷದೊಳಗಿನ ನ್ಯಾಷನಲ್ ಅಥ್ಲೆಟಿಕ್ಸ್ ನಲ್ಲಿ 200 ಮೀಟರ್ ಓಟದಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.

ಟ್ರೆಂಡಿಂಗ್​ ಸುದ್ದಿ

ಬಾಲ್ಯದಲ್ಲೇ ಪ್ರತಿಭಾವಂತೆ:

ಬಾಲ್ಯದಲ್ಲೇ ನಯನಾ ಪ್ರತಿಭಾವಂತೆ. ಏಳನೇ ತರಗತಿಯಲ್ಲಿದ್ದಾಗ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ 100 ಮೀಟರ್, 200 ಮೀಟರ್ ಮತ್ತು 400 ಮೀಟರ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆಯುತ್ತಿದ್ದ ನಯನಾ, 10ನೇ ತರಗತಿಯಲ್ಲಿ ಓದುತ್ತಿರುವಾಗ, ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದರು. ಈ ಸಂದರ್ಭ 4ನೇ ಸ್ಥಾನ ಪಡೆದಿದ್ದರು. ಕಾಡಿನಲ್ಲಿ ವಾಸಿಸುವ ದನಗರ ಗೌಳಿ ಜನಾಂಗದ ಗಂಗಾರಾಮ ಕೊಕರೆ ಮತ್ತು ಗಂಗೂಬಾಯಿ ಅವರ ಪುತ್ರಿಯಾದ ನಯನಾ ಸ್ವಂತ ಊರು ಚಳಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಬಳಿಕ ಕಾತೂರಿನ ಹೈಸ್ಕೂಲಿನಲ್ಲಿ 8ನೇ ತರಗತಿ ಮತ್ತು 9ನೇ ತರಗತಿ ಕಲಿತಳು. ನಂತರ 10ನೇ ತರಗತಿಯನ್ನು ಲೊಯೊಲಾ ಪ್ರೌಢಶಾಲೆಯಲ್ಲಿ ಮಾಡಿದ್ದಳು. ಬಾಲ್ಯದಿಂದಲೂ ಅಥ್ಲೆಟಿಕ್ಸ್ ನಲ್ಲಿ ಆಸಕ್ತಿ ಹೊಂದಿದ್ದ ನಯನಾ ಪ್ರತಿಭೆಗೆ ಆಕೆಯ ಮನೆಯರು ಸಹಕಾರ ನೀಡಿದ್ದರು. ಇದು ಸಾಧನೆಗೆ ಸಹಕಾರಿಯಾಗಿತ್ತು.

ಬ್ರಿಜ್ಸ್ ಆಫ್ ಸ್ಫೋರ್ಟ್ಸ್ ನೆರವು:

ಬ್ರಿಜ್ಸ್ ಆಫ್ ಸ್ಫೋರ್ಟ್ಸ್ ಎಂಬ ಎನ್.ಜಿ.ಒ. ನಯನಾಗೆ ನೆರವು ನೀಡುತ್ತಿದೆ. ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಳಾದ ನಯನಾ ಹಿಂದೆ 2022ರ ನವೆಂಬರ್ 15ರಲ್ಲಿ ಅಸ್ಸಾಂನಲ್ಲಿ ನಡೆದ 37ನೇ ನ್ಯಾಷನಲ್ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 49.23 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ದ್ವಿತೀಯ ಮತ್ತು 400 x 100 ಮೀಟರ್ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಳು.

2022ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದ ನ್ಯಾಷನಲ್ ಅಥ್ಲೆಟಿಕ್ಸ್ ನಲ್ಲಿ ಕರ್ನಾಟಕ ಪ್ರತಿನಿಧಿಸಿ 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಳು. 2022ರ ಅಕ್ಟೋಬರ್ 12ರಂದು ದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ 3ನೇ ನ್ಯಾಷನಲ್ ಓಪನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ, 400 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು, ರಾಜ್ಯ, ಜಿಲ್ಲೆ ಮತ್ತು ತಾಲೂಕಿಗೆ ಹೆಮ್ಮೆ ಎನಿಸಿದ್ದಳು.

ನಯನಾ ಕೊಕರೆ ವೇಗದ ಓಟಗಾರ್ತಿಯಾಗಿ ರೂಪುಗೊಂಡಿದ್ದು, ಒಲಂಪಿಕ್ಸ್ ನಂಥ ಮಹೋನ್ನತ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುವ ಆಸಕ್ತಿ ಹೊಂದಿದ್ದಾರೆ. ತನ್ನ 16ನೇ ವರ್ಷಕ್ಕೇ ಬ್ರಿಡ್ಜ್ಸ್ ಆಫ್ ಸ್ಪೋರ್ಟ್ಸ್ ನೆರವು ನೀಡಲಾರಂಭಿದ್ದು ಆಕೆಗೆ ಲಾಭವಾಗಿದೆ. ಹಿರಿಯ ಸಹೋದರ ಆಕೆಗೆ ಬೆನ್ನೆಲುಬಾಗಿ ನಿಂತಿದ್ದು ವರದಾನವೂ ಆಯಿತು. ನಯನಾಗೆ ತಂದೆ, ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ. ತನ್ನಂತೆ ಅಥ್ಲೆಟಿಕ್ಸ್ ಎಂದರೇನು, ಇದಕ್ಕೆ ಹೇಗೆ ತಯಾರಾಗಬೇಕು ಎಂಬ ಪೂರಕ ಶಿಕ್ಷಣವೂ ಎಲ್ಲರಿಗೂ ದೊರಕಬೇಕು ಎಂಬ ಬಯಕೆ ನಯನಾಗಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.