ವಿಶ್ವನಾಥನ್ ಆನಂದ್ ಬಳಿಕ ವಿಶೇಷ ಸಾಧನೆ ಮಾಡಿದ 2ನೇ ಭಾರತೀಯ ಈತ; ಯಾರು ಈ ಅರ್ಜುನ್ ಎರಿಗೈಸಿ?
ಯುರೋಪಿಯನ್ ಚೆಸ್ ಕ್ಲಬ್ ಕಪ್ 2024ರಲ್ಲಿ ಆಡುತ್ತಿರುವ 21 ವರ್ಷ ವಯಸ್ಸಿನ ಅರ್ಜುನ್ ಎರಿಗೈಸಿ, ವಿಶೇಷ ಸಾಧನೆ ಮಾಡಿದ್ದಾರೆ. ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ನಂತರ ಈ ವಿಶೇಷ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಎರಿಗೈಸಿ (Arjun Erigaisi) ಇತಿಹಾಸ ಸೃಷ್ಟಿಸಿದ್ದಾರೆ. ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ನಂತರ ವಿಶೇಷ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಯುರೋಪಿಯನ್ ಚೆಸ್ ಕ್ಲಬ್ ಕಪ್ 2024ರಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಜಾಗತಿಕ ಚೆಸ್ ಇತಿಹಾಸದಲ್ಲಿ ಬೃಹತ್ ಸಾಧನೆ ಮಾಡಿದ ವಿಶ್ವದ ಕೇವಲ 16ನೇ ಆಟಗಾರ ಎನಿಸಿಕೊಂಡಿದ್ದಾರೆ.
ಭಾರತೀಯ ಚೆಸ್‌ನಲ್ಲಿ ಇತ್ತೀಚೆಗೆ ಮೇಲಿಂದ ಮೇಲೆ ಹೊಸ ಸಾಧಕರು ಹೊರಹೊಮ್ಮುತ್ತಿದ್ದಾರೆ. ಯುವ ಆಟಗಾರರು ಜಾಗತಿಕ ಗಮನ ಸೆಳೆಯುತ್ತಿದ್ದಾರೆ. ಅಕ್ಟೋಬರ್ 24ರ ಗುರುವಾರ ಅರ್ಜುನ್ ಎರಿಗೈಸಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಅರ್ಜುನ್ ಎರಿಗೈಸಿ 2800 ಎಲೋ ಪಾಯಿಂಟ್‌ಗಳ ಗಡಿ ತಲುಪಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು.
ಯುರೋಪಿಯನ್ ಚೆಸ್ ಕ್ಲಬ್ ಕಪ್ 2024ರಲ್ಲಿ ಆಡುತ್ತಿರುವ 21 ವರ್ಷ ವಯಸ್ಸಿನ ಯುವ ಆಟಗಾರ, ಅಮೋಘ ಸಾಧನೆ ಮಾಡಿದ್ದಾರೆ. ಆಲ್ಕಲಾಯ್ಡ್ ತಂಡದ ಪರ ಆಡುತ್ತಿರುವ ಭಾರತೀಯ ಗ್ರ್ಯಾಂಡ್‌ಮಾಸ್ಟರ್, ಐದನೇ ಸುತ್ತಿನಲ್ಲಿ ರಷ್ಯಾದ ಡಿಮಿಟ್ರಿ ಆಂಡ್ರೇಕಿನ್ ಅವರನ್ನು ಸೋಲಿಸಿದರು. ಆ ಮೂಲಕ ಲೈವ್ ರೇಟಿಂಗ್ ಪಟ್ಟಿಯಲ್ಲಿ ಅವರು ವಿಶ್ವದಲ್ಲೇ ಮೂರನೇ ಸ್ಥಾನಕ್ಕೇರಿದರು.
ಈ ಸಾಧನೆ ಮಾಡಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಈ ಹಿಂದೆ ವಿಶ್ವನಾಥನ್ ಆನಂದ್ ಪಾತ್ರರಾಗಿದ್ದರು. ಇದೀಗ ಈ ಪಟ್ಟಿಗೆ ಎರಿಗೈಸಿ ಎರಡನೆಯವರಾಗಿ ಎಂಟ್ರಿ ಕೊಟ್ಟಿದ್ದಾರೆ. ಭಾರತದ ಚೆಸ್ ದಿಗ್ಗಜನನ್ನು ಎರಿಗೈಸಿ ಸೇರಿಕೊಂಡಿದ್ದಾರೆ. ಒಟ್ಟಾರೆಯಾಗಿ ಜಗತ್ತಿನಾದ್ಯಂತ 2800 ಎಲೋ ಪಾಯಿಂಟ್‌ಗಳನ್ನು ತಲುಪಿದ ವಿಶ್ವದ 16ನೇ ಆಟಗಾರ ಎರಿಗೈಸಿ.
ಅರ್ಜುನ್ ಏರಿಗೈಸಿ ಯಾರು?
ಕೇವಲ 14 ವರ್ಷ ಮತ್ತು 11 ತಿಂಗಳ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಗೆದ್ದ ಭಾರತದ ಕಿರಿಯ ಗ್ರ್ಯಾಂಡ್ ಮಾಸ್ಟರ್‌ಗಳಲ್ಲಿ ಅರ್ಜುನ್ ಎರಿಗೈಸಿ ಕೂಡಾ ಒಬ್ಬರು. ಅರ್ಜುನ್ ಭಾರತದ 54ನೇ ಗ್ರ್ಯಾಂಡ್ ಮಾಸ್ಟರ್. ಅಲ್ಲದೆ ಈ ಸಾಧನೆಯನ್ನು ಮಾಡಿದ ವಿಶ್ವದ 32ನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ನಡೆದ 2024ರ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಐತಿಹಾಸಿಕ ವಿಜಯದಲ್ಲಿ ಎರಿಗೈಸಿ ನಿರ್ಣಾಯಕ ಪಾತ್ರ ವಹಿಸಿದರು. ಅವರು 2022ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ.
ಎಲೋ ರೇಟಿಂಗ್ ಸಿಸ್ಟಮ್
ಎಲೋ ರೇಟಿಂಗ್ ವ್ಯವಸ್ಥೆಯು ಚೆಸ್ ಆಟಗಾರರ ಸಾಪೇಕ್ಷ ಕೌಶಲ್ಯ ಮಟ್ಟವನ್ನು ಲೆಕ್ಕಾಚಾರ ಮಾಡುವ ಒಂದು ವಿಧಾನವಾಗಿದೆ. ಇದನ್ನು ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ಲೆಕ್ಕಹಾಕುತ್ತದೆ.