ಉದಯೋನ್ಮುಖ ತಂಡಗಳ ಏಷ್ಯಾಕಪ್; ಇಂದು ಭಾರತ vs ಅಫ್ಘಾನಿಸ್ತಾನ ಎ ತಂಡಗಳ ಸೆಮಿಫೈನಲ್ ಪಂದ್ಯ, ಫೈನಲ್ ಟಿಕೆಟ್ ಯಾರಿಗೆ?
ತಿಲಕ್ ವರ್ಮಾ ನೇತೃತ್ವದ ಭಾರತ ಎ ತಂಡವು ಪುರುಷರ ಉದಯೋನ್ಮುಖ ತಂಡಗಳಟಿ20 ಏಷ್ಯಾಕಪ್ ಟೂರ್ನಿಯಲ್ಲಿ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಇಂದು ಅಫ್ಘಾನಿಸ್ತಾನ ಎ ವಿರುದ್ಧ ಸೆಮಿಕದನದಲ್ಲಿ ಆಡುತ್ತಿದೆ.
ಪುರುಷರ ಉದಯೋನ್ಮುಖ ತಂಡಗಳ ಏಷ್ಯಾಕಪ್ (Mens T20 Emerging Teams Asia Cup 2024) ಪಂದ್ಯಾವಳಿಯಲ್ಲಿ ಭಾರತ ಯುವ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಇಂದು (ಅಕ್ಟೋಬರ್ 25) ನಡೆಯುತ್ತಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ಮತ್ತು ಅಫ್ಘಾನಿಸ್ತಾನ ಎ (India A vs Afghanistan A) ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡವು ಫೈನಲ್ ಪ್ರವೇಶಿಸುತ್ತದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಎ ತಂಡಗಳು ಸೆಣಸಲಿವೆ. ಅಕ್ಟೋಬರ್ 27ರ ಭಾನುವಾರ ಫೈನಲ್ ಪಂದ್ಯ ನಡೆಯುತ್ತಿದ್ದು, ಕಪ್ ಗೆಲ್ಲಲು ನಾಲ್ಕು ತಂಡಗಳು ಪ್ರಬಲ ಪೈಪೋಟಿಗೆ ಇಳಿಯಲಿವೆ.
ತಿಲಕ್ ವರ್ಮಾ ನೇತೃತ್ವದ ಭಾರತ A ತಂಡ ಟೂರ್ನಿಯಲ್ಲಿ ಏಕೈಕ ಅಜೇಯ ತಂಡವಾಗಿ ಮುನ್ನಡೆಯುತ್ತಿದೆ. ಗುಂಪು ಹಂತದಲ್ಲಿ ಇದುವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಗೆದ್ದು ಸೆಮೀಸ್ ಪ್ರವೇಶ ಪಡೆದಿದೆ. ಪಾಕಿಸ್ತಾನ, ಯುಎಎಇ ಹಾಗೂ ಕೊನೆಯ ಪಂದ್ಯದಲ್ಲಿ ಒಮಾನ್ ತಂಡವನ್ನು ಮಣಿಸಿದೆ. ಅತ್ತ ದರ್ವಿಶ್ ರಸೂಲಿ ನೇತೃತ್ವದ ಅಫ್ಘಾನಿಸ್ತಾನ ತಂಡವು ಗುಂಪು ಹಂತದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು, ಒಂದರಲ್ಲಿ ಸೋತಿದೆ.
ಅತ್ತ ಬಿ ಗುಂಪಿನಿಂದ ಶ್ರೀಲಂಕಾ ತಂಡವು ಅಗ್ರಸ್ಥಾನಿಯಾಗಿ ಸೆಮೀಸ್ ಪ್ರವೇಶಿಸಿದೆ. ಅದಕ್ಕೆ ಎ ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿರುವ ಪಾಕಿಸ್ತಾನವು ಸೆಮೀಸ್ ಎದುರಾಳಿಯಾಗಿದೆ.
ಲೈವ್ ಸ್ಟ್ರೀಮಿಂಗ್ ವಿವರ
ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಉದಯೋನ್ಮುಖ ತಂಡಗಳ ಏಷ್ಯಾಕಪ್ ಸೆಮಿಫೈನಲ್ ಪಂದ್ಯವು ಒಮಾನ್‌ನ ಮಸ್ಕತ್‌ನಲ್ಲಿರುವ ಅಲ್ ಅಮರತ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:00 ಗಂಟೆಗೆ ಪಂದ್ಯ ಆರಂಭವಾಗಲಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಭಾರತದಲ್ಲಿ ಈ ಪಂದ್ಯವು ಲೈವ್ ಸ್ಟ್ರೀಮ್ ಆಗಲಿದೆ. ಆದರೆ, ಪಂದ್ಯ ವೀಕ್ಷಿಸಲು ಸಬ್‌ಸ್ಕ್ರೈಬ್ ಆಗಬೇಕಾಗುತ್ತದೆ. ಉಚಿತವಾಗಿ ನೋಡಲು ಆಗುವುದಿಲ್ಲ.
ಭಾರತ ಎ ತಂಡ
ಅನುಜ್ ರಾವತ್(ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ನಾಯಕ), ಆಯುಷ್ ಬದೋನಿ, ನೆಹಾಲ್ ವಧೇರಾ, ರಮಣದೀಪ್ ಸಿಂಗ್, ನಿಶಾಂತ್ ಸಿಂಧು, ರಾಹುಲ್ ಚಹಾರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ರಾಸಿಖ್ ದಾರ್ ಸಲಾಂ, ಆಕಿಬ್ ಖಾನ್, ವೈಭವ್ ಅರೋರಾ, ಅನ್ಶುಲ್ ಕಾಂಬೋಜ್ , ಹೃತಿಕ್ ಶೋಕೀನ್, ಪ್ರಭಾಸಿಮ್ರಾನ್ ಸಿಂಗ್.
ಅಫ್ಘಾನಿಸ್ತಾನ ಎ ತಂಡ
ಸೇದಿಕುಲ್ಲಾ ಅಟಲ್, ವಫಿವುಲ್ಲಾ ತಾರಾಖಿಲ್, ನುಮಾನ್ ಶಾ (ವಿಕೆಟ್ ಕೀಪರ್), ದರ್ವಿಶ್ ರಸೂಲಿ (ನಾಯಕ), ಶಾಹಿದುಲ್ಲಾ ಕಮಾಲ್, ಕರೀಂ ಜನತ್, ಶರಫುದ್ದೀನ್ ಅಶ್ರಫ್, ನಂಗೆಯಾಲಿಯಾ ಖರೋಟೆ, ಅಬ್ದುಲ್ ರಹಮಾನ್, ಖೈಸ್ ಅಹ್ಮದ್, ಫರಿದೂನ್ ದಾವೂದ್ಝೈ, ಅಲ್ಲಾಹ್ ಅಕ್ಬಾರಿಫ್, ಜುಬೈದ್ ಅಕ್ಬಾರಿಫ್ ಸಮಿ, ಮೊಹಮ್ಮದ್ ಇಶಾಕ್.