ಮೇಷ ಭವಿಷ್ಯ 2025: ಉತ್ತಮ ಆದಾಯದ ಜೊತೆಗೆ ಖರ್ಚುಗಳು ಹೆಚ್ಚಾಗುತ್ತವೆ, ನಿರುದ್ಯೋಗಿಗಳಿಗೆ ಶುಭಫಲಗಳಿವೆ
Dec 02, 2024 10:34 AM IST
ಮೇಷ ರಾಶಿಯವರ 2025ರ ಭವಿಷ್ಯ
- ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ಕೆಲವರಿಗೆ ತಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. 2025 ರಲ್ಲಿ ಮೇಷ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಮೇಷ ರಾಶಿ ಭವಿಷ್ಯ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗೀದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಕೆಲವರಲ್ಲಿ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಮೇಷ ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ತಾಜಾ ಫೋಟೊಗಳು
ಮೇಷರಾಶಿಯವರ ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಉತ್ತಮ ಆದಾಯ ಇರುತ್ತದೆ. ಆದರೆ ಅಧಿಕವಾದ ಖರ್ಚು ವೆಚ್ಚಗಳು ಎದುರಾಗಲಿವೆ. ಆದರೆ ಆತ್ಮ ವಿಶ್ವಾಸವಿದ್ದರೆ ಮಾತ್ರ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ. ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಮರೆಯಬಾರದು. ಜೀವನವು ನಿಮ್ಮ ಸಾಮರ್ಥ್ಯಕ್ಕೆ ಕೈಗನ್ನಡಿ ಆಗಲಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡುತ್ತಾರೆ. ಸ್ವಂತ ಮನೆ ಅಥವಾ ಜಮೀನನ್ನು ಕೊಳ್ಳುವ ಕನಸು ಕುಟುಂಬದ ಸದಸ್ಯರ ಸಹಕಾರದಿಂದ ಸಾಕಾರಗೊಳ್ಳುತ್ತದೆ. ಕ್ರಮೇಣವಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಹಿನ್ನೆಡೆ ಕಾಣಲಿದೆ. ಸಾಕುಪ್ರಾಣಿಗಳಿಂದ ದೂರ ಉಳಿಯುವುದು ಒಳ್ಳೆಯದು.
ನಿಮ್ಮ ಶಿಕ್ಷಣವೂ ಆರೋಗ್ಯವನ್ನು ಆಲಂಬಿಸುತ್ತದೆ. ಪ್ರವಾಸೋದ್ಯಮ ವಿದ್ಯಾರ್ಥಿಗಳಿಗೆ ವಿಶೇಷವಾದಂತಹ ಅನುಕೂಲತೆ ದೊರೆಯಲಿದೆ. ಕೇವಲ ಹೆಚ್ಚಿನ ಪ್ರಯತ್ನದಿಂದ ಮಾತ್ರ ನಿರೀಕ್ಷಿತ ಮಟ್ಟವನ್ನು ತಲುಪಲು ಸಾಧ್ಯವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗದೆ ಹೋದರು ನಷ್ಟವಾಗುವುದಿಲ್ಲ. ಮಹಿಳಾ ಉದ್ಯಮಿಗಳಿಗೆ ಉತ್ತಮ ಲಾಭವಿರುತ್ತದೆ. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತವಾದ ಧನ ಲಾಭವಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸದೆ ಹೋದಲ್ಲಿ ಸಮಸ್ಯೆಗಳು ಎದುರಾಗುತ್ತವೆ.
2025ರಲ್ಲಿ ಮೇಷ ರಾಶಿಯ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಇದೆ
ನಿರುದ್ಯೋಗಿಗಳಿಗೆ ಶುಭ ಫಲಗಳು ದೊರೆಯುತ್ತವೆ. ಉದ್ಯೋಗದಲ್ಲಿ ಎದುರಾಗುವ ಬದಲಾವಣೆಗಳಿಗೆ ಬೇರೆ ದಾರಿ ಇಲ್ಲದೆ ಹೊಂದಿಕೊಳ್ಳುವಿರಿ. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಸವಾಲುಗಳು ದೊಡ್ಡದಾಗಿ ಕಾಣುವುದಿಲ್ಲ. ಆದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಮುಂದುವರೆಯುವುದು ಒಳ್ಳೆಯದು. ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳ ಮೇಲೆ ಬೇರೆಯವರ ಗಮನವಿರುತ್ತದೆ. ಉತ್ತಮ ಅವಕಾಶಗಳು ದೊರೆಯದ ಕಾರಣ ಉದ್ಯೋಗವನ್ನು ಬದಲಿಸುವಿರಿ. ಸೇವಾ ಪೂರ್ವಕ ವೃತ್ತಿಯಲ್ಲಿ ವಿಶೇಷ ಗೌರವ ಲಭಿಸುತ್ತದೆ. ಕಲಾವಿದರಿಗೆ ಉನ್ನತ ಗೌರವಕ್ಕೆ ಪಾತ್ರರಾಗುತ್ತಾರೆ.
ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಖರ್ಚು ವೆಚ್ಚವನ್ನು ರೂಪರೇಷೆಯನ್ನು ಸಿದ್ಧಪಡಿಸುವಿರಿ. ಕುಟುಂಬಕ್ಕೆ ಸಂಬಂಧಿಸಿದಂತೆ ಇರುವ ಸಂಪತ್ತು ದ್ವಿಗುಣಗೊಳ್ಳುತ್ತದೆ. ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಹಣಕಾಸಿನ ಅನುಕೂಲತೆಗಳು ದೊರೆಯಲಿವೆ. ಆಮದು ಮತ್ತು ರಫ್ತಿನ ವ್ಯವಹಾರದಲ್ಲಿ ಬೇರೆಯವರ ಸಹಾಯ ಅಥವಾ ಸಹಕಾರವನ್ನು ನಿರೀಕ್ಷಿಸುವಿರಿ. ಆದಾಯದ ವಿಚಾರದಲ್ಲಿ ಹೊಸ ರೀತಿಯ ನಿರೀಕ್ಷೆಗಳು ಇರಲಿವೆ. ಸದಸ್ಯರ ಜೊತೆಯಲ್ಲಿ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವಿರಿ. ಸಾಲದ ವ್ಯವಹಾರದಿಂದ ವೈರತ್ವ ಬೆಳೆಯುತ್ತದೆ. ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಿಂದ ಉತ್ತಮ ಆದಾಯ ಗಳಿಸುವಿರಿ.
ದಂಪತಿ ನಡುವೆ ಉತ್ತಮ ಸಾಮರಸ್ಯ ಕಂಡು ಬರಲಿದೆ. ಜೂನ್ ತಿಂಗಳ ಒಳಗೆ ವಿವಾಹ ನಿಶ್ಚಯವಾಗುವ ಸಾಧ್ಯತೆಗಳಿವೆ. ಒಳ್ಳೆಯ ಸಂತಾನ ಲಭಿಸುತ್ತದೆ. ದಂಪತಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಲೇಬೇಕಾಗುತ್ತದೆ. ಕುಟುಂಬದಲ್ಲಿ ಪ್ರತಿಯೊಬ್ಬರ ನಡುವೆ ತಪ್ಪು ತಿಳುವಳಿಕೆ ಉಂಟಾಗಲಿದೆ. ಆದರೆ ಕುಟುಂಬದ ಹಿರಿಯರು ಸರಿದಾರಿ ತೋರಲಿದ್ದಾರೆ. ದಾಂಪತ್ಯದ ವಿಚಾರದಲ್ಲಿ ಮಾನಸಿಕ ದೌರ್ಬಲ್ಯ ನಿಮ್ಮನ್ನು ಕಾಡುತ್ತದೆ. ಉದ್ಯೋಗದಲ್ಲಿ ಗಮನಹವಾದ ಸಾಧನೆಯನ್ನು ಮಾಡುವಿರಿ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲಿತಾಂಶಗಳು ದೊರೆಯುತ್ತವೆ. ಹೊಸ ವಾಹನ ಕೊಳ್ಳುವಿರಿ. ಹೆಚ್ಚಿನ ನಿರೀಕ್ಷೆಯಿಂದ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ.
ಅನಾವಶ್ಯಕ ಖರ್ಚು ವೆಚ್ಚಗಳು ಮನದ ಬೇಸರಕ್ಕೆ ಕಾರಣವಾಗುತ್ತದೆ. ಬೇರೆಯವರು ಮಾಡಿದ ತಪ್ಪಿಗೆ ನೀವು ದಂಡ ತೆರಬೇಕಾದ ಬಹುದು ಕಷ್ಟ ನಷ್ಟದಲ್ಲಿ ಇರುವವರಿಗೆ ನೀವಾಗಿಯೇ ಸಹಾಯ ಮಾಡಲು ತೀರ್ಮಾನಿಸುರಿ. ಪ್ರಯೋಜನವಿಲ್ಲದ ವಿಚಾರಗಳಿಗೆ ಹೋರಾಟವಿರುತ್ತದೆ. ದೈಹಿಕ ಚಟುವಟಿಕೆಗಳು ನಿಮ್ಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಬೇರೆಯವರಿಗೆ ನೀಡಿದ್ದ ಹಣವು ಮರಳಿ ಗಳಿಸುವುದು ಕಷ್ಟಕರವಾಗಬಹುದು. ಮಹಿಳೆಯರು ಚಿನ್ನಾಭರಣಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದಾರೆ. ಕುಟುಂಬ ನಿರ್ವಹಣೆಗೆ ಮಹಿಳೆಯರ ತ್ಯಾಗವು ದೊಡ್ಡಮಟ್ಟದಲ್ಲಿ ಇರುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).