Christmas 2024: ಕ್ರೈಸ್ತ ಬಾಂಧವರ ಪ್ರಮುಖ ಹಬ್ಬ ಕ್ರಿಸ್‌ಮಸ್ ಇತಿಹಾಸ ತಿಳಿಯಿರಿ, ಯೇಸುಕ್ರಿಸ್ತನ ತಂದೆ ತಾಯಿ ಹೆಸರೇನು?
Dec 15, 2024 11:43 AM IST
ಕ್ರಿಸ್‌ಮಸ್ 2024
Christmas 2024: ಕ್ರಿಸ್‌ಮಸ್ ಆಚರಣೆಗೆ ಸಕಲ ತಯಾರಿ ನಡೆಯುತ್ತಿದೆ. ಸುಮಾರು 2 ಸಾವಿರ ವರ್ಷಗಳ ಹಿಂದೆ ಡಿಸೆಂಬರ್ 24 ಮಧ್ಯರಾತ್ರಿ 12ರ ನಂತರ ಮೇರಿ ಹಾಗೂ ಜೋಸೆಫ್ ದಂಪತಿಗೆ ಯೇಸುಕ್ರಿಸ್ತ ಜನಿಸುತ್ತಾರೆ. ಅಂದಿನಿಂದ ಪ್ರತಿ ವರ್ಷ ಡಿಸೆಂಬರ್ 25ರಂದು ಕ್ರಿಸ್‌ಮಸ್ ಆಚರಿಸುತ್ತಾ ಬರಲಾಗಿದೆ.
Christmas 2024: ಪ್ರತಿ ವರ್ಷ ಡಿಸೆಂಬರ್ ಬಂತೆಂದರೆ ಕ್ರೈಸ್ತ ಸಮುದಾಯದರು ಕ್ರಿಸ್‌ಮಸ್ ಆಚರಣೆಗೆ ಸಜ್ಜಾಗುತ್ತಾರೆ. ಕ್ರೈಸ್ತ ಬಾಂಧವರಿಗೆ ಈ ಹಬ್ಬ ಬಹಳ ಮಹತ್ವದ್ದು. ವಿಶ್ವಾದ್ಯಂತ ಬಹುತೇಕ ದೇಶಗಳಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತದೆ. ಈಗಾಗಲೇ ಕ್ರಿಸ್‌ಮಸ್ ಸಂಭ್ರಮ ಆರಂಭವಾಗಿದೆ. ತಿಂಗಳ ಮುಂಚೆಯೇ ಜನರು ಶಾಪಿಂಗ್‌ನಲ್ಲಿ ತೊಡಗಿದ್ದಾರೆ. ಕ್ರಿಸ್‌ಮಸ್ ಆಚರಣೆ ಯಾವಾಗ, ಈ ಹಬ್ಬದ ಮಹತ್ವವೇನು? ಇಲ್ಲಿದೆ ಮಾಹಿತಿ.
ತಾಜಾ ಫೋಟೊಗಳು
ಮೇರಿ ಕನಸಿನಲ್ಲಿ ಗೇಬ್ರಿಯಲ್ ದೇವದೂತ ಹೇಳಿದ್ದೇನು?
ಸುಮಾರು 2 ಸಾವಿರ ವರ್ಷಗಳ ಹಿಂದೆ ರೋಮನ್ ಸಾಮ್ರಾಜ್ಯವನ್ನು ಆಳುತ್ತಿದ್ದ ಅಗಸ್ಟಸ್ ಸೀಸರ್ ತನ್ನ ಸಾಮ್ರಾಜ್ಯದ ಜನಸಂಖ್ಯೆಯನ್ನು ಎಣಿಸುತ್ತಾನೆ. ಅಂಕಿ ಅಂಶಗಳನ್ನು ಸುಲಭವಾಗಿ ಸಂಗ್ರಹಿಸಲು ಡಿಸೆಂಬರ್ 25 ರೊಳಗೆ ಎಲ್ಲಾ ಜನರು ತಮ್ಮ ಸ್ಥಳೀಯ ಗ್ರಾಮಗಳನ್ನು ತಲುಪಲು ಆದೇಶಿಸುತ್ತಾನೆ. ಅದೇ ಸಮಯದಲ್ಲಿ ಜೋಸೆಫ್‌ಗೆ ರೋಮನ್ ಸಾಮ್ರಾಜ್ಯದ ನಜರೆತ್ ನಗರದಲ್ಲಿ ಮೇರಿಯೊಂದಿಗೆ ಮದುವೆ ನಿಶ್ಚಯ ಆಗುತ್ತದೆ. ಒಂದು ದಿನ ಗೇಬ್ರಿಯಲ್ ಎಂಬ ದೇವದೂತನು ಮೇರಿಗೆ ಕನಸಿನಲ್ಲಿ ಕಾಣಿಸಿಕೊಂಡು 'ಮೇರಿ, ನೀನು ದೇವರಿಂದ ಆಶೀರ್ವದಿಸಲ್ಪಟ್ಟಿರುವೆ. ಕನ್ಯೆಯಾಗಿ ಗರ್ಭ ಧರಿಸಿ ಗಂಡು ಮಗುವಿಗೆ ಜನ್ಮ ನೀಡುವೆ. ಆ ಮಗು ಯೇಸು ಎಂದು ಹೆಸರಾಗುತ್ತಾನೆ. ಯೇಸು ಎಂದರೆ ರಕ್ಷಕ ಎಂದರ್ಥ ಎಂದು ಹೇಳುತ್ತಾನೆ.
ದೇವದೂತ ಗೇಬ್ರಿಯಲ್ ಹೇಳಿದಂತೆ ಮೇರಿ ಗರ್ಭ ಧರಿಸುತ್ತಾಳೆ. ಮದುವಗೆ ಮುನ್ನವೇ ಮೇರಿ ಗರ್ಭ ಧರಿಸಿದ್ದನ್ನು ತಿಳಿದ ಜೋಸೆಫ್ ಅವಳನ್ನು ಮದುವೆಯಾಗದಿರಲು ನಿರಾಕರಿಸುತ್ತಾನೆ. ಆದರೆ ಅದೇ ರಾತ್ರಿ ದೇವದೂತನು ಜೋಸೆಫ್ ಕನಸಿನಲ್ಲಿ ಕಾಣಿಸಿಕೊಂಡು 'ಮೇರಿಯನ್ನು ಬಿಡಬೇಡ. ದೇವರ ಆಶೀರ್ವಾದದಿಂದ ಅವಳು ಗರ್ಭಿಣಿಯಾಗಿದ್ದಾಳೆ. ಅದು ದೇವರ ಮಗು. ಆತನನ್ನು ನಂಬುವ ಎಲ್ಲಾ ಜನರನ್ನು ಪಾಪಗಳಿಂದ ರಕ್ಷಿಸುತ್ತಾನೆ' ಎಂದು ಹೇಳುತ್ತಾನೆ. ಜೋಸೆಫ್ ದೇವದೂತನ ಆಜ್ಞೆಯನ್ನು ಪಾಲಿಸಿ ಮೇರಿಯನ್ನು ಮದುವೆ ಆಗುತ್ತಾನೆ. ಅಗಸ್ಟಸ್ ಸೀಸರ್ ಆಜ್ಞೆಯಂತೆ ಜೋಸೆಫ್ , ಮೇರಿಯೊಂದಿಗೆ ಬೆತ್ಲಹೆಮ್‌ಗೆ ತೆರಳುತ್ತಾನೆ. ಅಲ್ಲಿಗೆ ತಲುಪಿದಾಗ ಅವರಿಗೆ ವಸತಿ ಸಿಗುವುದಿಲ್ಲ. ಕೊನೆಗೆ ಹೋಟೆಲ್ ಮಾಲೀಕ ಕರುಣೆಯಿಂದ ತನ್ನ ಗೋಶಾಲೆಯಲ್ಲಿ ದಂಪತಿಗೆ ಆಶ್ರಯ ನೀಡುತ್ತಾನೆ. ಮೇರಿ ಅದೇ ಗೋಶಾಲೆಯಲ್ಲಿ ಅಲ್ಲಿ ಯೇಸುವಿಗೆ ಜನ್ಮ ನೀಡುತ್ತಾಳೆ.
ಯೇಸುಕ್ರಿಸ್ತನ ಜನ್ಮದಿನದಂದು ಕ್ರಿಸ್‌ಮಸ್ ಆಚರಣೆ
ಆ ರಾತ್ರಿ ಗ್ರಾಮದ ಪಕ್ಕದ ಹೊಲಗಳಲ್ಲಿ ಕೆಲವರು ಕುರಿಗಳ ಹಿಂಡುಗಳನ್ನು ಕಾಯುತ್ತಿದ್ದರು. ಆ ಸಮಯದಲ್ಲಿ ಒಬ್ಬ ದೇವದೂತನು ಅವರ ಮುಂದೆ ಆಕಾಶದಿಂದ ಇಳಿಯುತ್ತಾನೆ. ಸುತ್ತಲೂ ಬೆಳಕು ಹರಡಿದ್ದರಿಂದ ಕುರಿ ಕಾಯುವವರು ಭಯಪಡುತ್ತಾರೆ. 'ಹೆದರಬೇಡಿ, ನಾನು ಇಲ್ಲಿಗೆ ಬಂದಿರುವುದು ನಿಮಗೆ ಒಳ್ಳೆಯ ಸುದ್ದಿಯನ್ನು ಹೇಳಲು. ಇಂದು ಬೆತ್ಲೆಹೆಮ್‌ನ ಮ್ಯಾಂಗರ್‌ನಲ್ಲಿ, ಜಗದ ರಕ್ಷಕನು ಜನಿಸಿದ್ದಾನೆ, ಅವನು ನಿಮ್ಮೆಲ್ಲರ ಪ್ರಭುವಾಗಿದ್ದಾನೆ ಎಂದು ಹೇಳಿ ಅದೃಶ್ಯನಾಗುತ್ತಾನೆ. ಕುರಿ ಕಾಯುವವರು ದೇವದೂತ ಹೇಳಿದ ಗೋಶಾಲೆಗೆ ಹೋಗುತ್ತಾರೆ. ಅಲ್ಲಿ ಅವರು ಮೇರಿ ಮತ್ತು ಜೋಸೆಫ್ ಮಗುವಿನೊಂದಿಗೆ ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೋಡುತ್ತಾರೆ. ಡಿಸೆಂಬರ್ 24 ಮಧ್ಯರಾತ್ರಿ 12 ಗಂಟೆ ನಂತರ ಯೇಸು ಜನಿಸುತ್ತಾನೆ. ಅಂದಿನಿಂದ ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್‌ಮಸ್ ಆಚರಿಸಲಾಗುತ್ತದೆ.
ಕ್ರಿಸ್‌ಮಸ್ ಆಚರಣೆ ಹೇಗೆ?
ಕ್ರಿಸ್‌ಮಸ್ ಹಬ್ಬವನ್ನು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಆ ದಿನ ಕ್ರೈಸ್ತ ಬಾಂಧವರು ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾರೆ. ಕ್ರಿಸ್‌ಮಸ್ ಮರವನ್ನು ಇಟ್ಟು ಪ್ರಾರ್ಥಿಸುತ್ತಾರೆ. ಎಲ್ಲಾ ಕ್ರೈಸ್ತ ಬಾಂಧವರ ಮನೆ ಮುಂದೆ ಗುಂಪಾಗಿ ತೆರಳಿ ಯೇಸುವಿನ ಮಹಿಮೆಯನ್ನು ಹಾಡಿನ ರೂಪದಲ್ಲಿ ಹಾಡುತ್ತಾರೆ. ಕ್ರಿಸ್‌ಮಸ್ ದಿನ, ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ವಿಧ ವಿಧವಾದ ತಿಂಡಿಗಳನ್ನು ತಯಾರಿಸಿ, ಮಾಂಸಾಹಾರ ತಯಾರಿಸಿ ಆತ್ಮೀಯರಿಗೆ ಊಟಕ್ಕೆ ಆಹ್ವಾನಿಸುತ್ತಾರೆ.
ಕ್ರಿಸ್‌ಮಸ್ ಹಿಂದಿನ ರಾತ್ರಿ, ಸಾಂತಾಕ್ಲಾಸ್ ತಾತ ಹಿಮಸಾರಂಗ ಎಳೆಯುವ ಬಂಡಿಯಲ್ಲಿ ಆಕಾಶದಿಂದ ಇಳಿದು ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಾರೆ ಎಂದು ನಂಬಲಾಗಿದೆ. ಅದಕ್ಕಾಗಿ ಮಕ್ಕಳು ಮನೆ ಹೊರಗೆ ತಮ್ಮ ಸ್ಟಾಕಿಂಗ್ಸ್ ಇಡುತ್ತಾರೆ. ಹೀಗೆ ಇಟ್ಟರೆ ಸಾಂತಾಕ್ಲಾಸ್ ಅದರೊಳಗೆ ಉಡುಗೊರೆಗಳನ್ನು ಹಾಕುತ್ತಾರೆ ಎಂದು ನಂಬಲಾಗಿದೆ.