Deepavali 2024: ಮಾರ್ಗಪಾಲಿ ಬಂಧನ ಎಂದರೇನು; ಕಾರ್ತಿಕ ಮಾಸ ಪಾಡ್ಯಮಿಯ ಬಲಿ ಪೂಜೆ ವಿಧಿ ವಿಧಾನ ಹೀಗಿದೆ
Oct 29, 2024 02:02 PM IST
Deepavali 2024: ಬಲಿಪಾಡ್ಯಮಿ ಪೂಜಾ ವಿಧಿ ವಿಧಾನ
Deepavali 2024: ದೀಪಾವಳಿ ಹತ್ತಿರ ಬಂತು. ಹಬ್ಬ ಆಚರಿಸಲು ಈಗಾಗಲೇ ಎಲ್ಲಾ ತಯಾರಿ ನಡೆದಿದೆ. ಕೆಲವೆಡೆ 3, ಇನ್ನೂ ಕೆಲವೆಡೆ 5 ದಿನಗಳ ಕಾಲ ಹಬ್ಬ ಆಚರಿಸಲಾಗುತ್ತದೆ. ಕಾರ್ತಿಕ ಮಾಸ ಪಾಡ್ಯಮಿಯ ಬಲಿ ಪೂಜೆ ವಿಧಿ ವಿಧಾನ, ಮಾರ್ಗಪಾಲಿ ಬಂಧನ ಕುರಿತ ವಿಧಿ ವಿಧಾನ ಇಲ್ಲಿದೆ. (ಎಚ್. ಸತೀಶ್, ಜ್ಯೋತಿಷಿ)
Deepavali 2024: ಕಾರ್ತಿಕ ಮಾಸದ ಪಾಡ್ಯಮಿಯಂದು ಬಲಿ ಪೂಜೆ, ಗೋವರ್ಧನ ಪೂಜೆ, ಮಾರ್ಗಪಾಲಿ ಬಂಧನ ಮತ್ತು ವಷ್ಟಿಕಾಕರ್ಷಣಗಳನ್ನು ಆಚರಿಸಲಾಗುತ್ತದೆ. ಈ ದಿನ ಹರಳೆಣ್ಣೆ ಇರುವ ಪಾತ್ರೆಯನ್ನು ದೇವರ ಮುಂದೆ ಇಟ್ಟು ಅದನ್ನು ಪೂಜಿಸಬೇಕು. ಆನಂತರ ಅಭ್ಯಂಗ ಸ್ನಾನ ಮಾಡಬೇಕು. ಸಾಮಾನ್ಯವಾಗಿ ಪಾಡ್ಯವನ್ನು ರಿಕ್ತ ತಿಥಿ ಎಂದು ಕರೆಯುತ್ತೇವೆ. ಅಂದರೆ ಆ ತಿಥಿಯ ದಿನ ಯಾವುದೇ ಶುಭ ಕೆಲಸವನ್ನು ಮಾಡಬಾರದು. ಕಾರ್ತಿಕ ಮಾಸದ ಪಾಡ್ಯಮಿಯ ದಿನ ಹೊಸ ಬಟ್ಟೆಗಳನ್ನು ಧರಿಸಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಪಾಡ್ಯದ ಪೂಜೆಯನ್ನು ಬಿಡಬಾರದು.
ತಾಜಾ ಫೋಟೊಗಳು
5 ರೀತಿಯ ಹಿಟ್ಟಿನಿಂದ ಬಲಿಚಕ್ರವರ್ತಿ ಪ್ರತಿಮೆ ಮಾಡಿ ಪೂಜಿಸುವ ಜನರು
ಕೆಲವೆಡೆ ಬಲಿಚಕ್ರವರ್ತಿಯ ಪ್ರತಿಮೆಯನ್ನು ಮಾಡಿ ಪೂಜಿಸುತ್ತಾರೆ. 5 ರೀತಿಯ ಹಿಟ್ಟಿನಿಂದ ಎರಡು ಕೈಗಳುಳ್ಳ ರಾಜನ ಆಕೃತಿಯನ್ನು ಮಾಡುತ್ತಾರೆ. ಇನ್ನೂ ಕೆಲವೆಡೆ ಬಿಳಿ ಅಕ್ಕಿಕಾಳಿನಿಂದ ರಾಜನ ಆಕೃತಿಯನ್ನು ರಚಿಸುತ್ತಾರೆ. ಬಲಿ ಚಕ್ರವರ್ತಿಯ ಸಲುವಾಗಿ ಮಾಡುವ ಯಾವುದೇ ದಾನ ಧರ್ಮಗಳಿಂದ ವಿಷ್ಣುವಿಗೆ ಪ್ರಿಯವಾಗಿ ವಿಶೇಷವಾದ ಫಲಗಳು ದೊರೆಯುತ್ತವೆ. ಶಾಸ್ತ್ರ ಪುರಾಣಗಳ ಪ್ರಕಾರ ಈ ದಿನ ಸಂತೋಷ ಸೌಹಾರ್ದತೆಯಿಂದ ಎಲ್ಲರೊಡನೆ ಬೆರೆತರೆ ಅವರ ಜೀವನದಲ್ಲಿ ಇಡೀ ವರ್ಷ ಸಂತೋಷವೇ ತುಂಬಿರುತ್ತದೆ. ಒಂದು ವೇಳೆ ಜಗಳ ಕದನ ಮತ್ತು ದುಗುಡವಿದ್ದರೆ ಇಡೀ ವರ್ಷ ಅವರ ಜೀವನವು ಬೇಸರದಿಂದಲೇ ಕೂಡಿರುತ್ತದೆ. ಈ ಕಾರಣದಿಂದ ರಾಜಮಹಾರಾಜರ ಕಾಲದಲ್ಲಿ ಮುಂಜಾನೆಯೇ ಸ್ನಾನ ಪೂಜೆಯಾದ ನಂತರ ಕೆಲವು ಪಂದ್ಯಗಳನ್ನು ಆಡುತ್ತಿದ್ದರು. ಈ ದಿನದಂದು ಜಯ ಗಳಿಸಿದಲ್ಲಿ ವರ್ಷವಿಡೀ ಯಶಸ್ಸು ಮತ್ತು ಜಯ ದೊರೆಯುವುದೆಂಬ ನಂಬಿಕೆ ಇತ್ತು.
ಆ ವಿಶೇಷ ದಿನ ಮನೆಗೆ ದಂಪತಿಗಳನ್ನು ಆಹ್ವಾನಿಸಿ ಹಬ್ಬದ ಅಡುಗೆ ಅಂದರೆ ಮೃಷ್ಟಾನ್ನ ಭೋಜನವನ್ನು ಬಡಿಸಬೇಕು. ಆನಂತರ ದಂಪತಿಗಳ ಆಶೀರ್ವಾದ ಪಡೆದಲ್ಲಿ ಮನದಾಸೆಗಳು ಪೂರ್ಣಗೊಳ್ಳುತ್ತವೆ. ಜೀವನದ ಕಷ್ಟಗಳು ದೂರವಾಗುತ್ತವೆ. ಆ ದಿನ ಸಂಜೆ ವೇಳೆಯಲ್ಲಿ ಮನೆಯ ಹೊಸಿಲ ಮೇಲೆ ದೀಪವನ್ನು ಹಚ್ಚಿಡಬೇಕು. ಹೀಗೆ ಮಾಡಿದರೆ ಮನೆಯ ಸಂಪತ್ತು ಇದರಿಂದ ಸ್ಥಿರವಾಗಿ ಉಳಿಯುವುದು ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಲಕ್ಷ್ಮಿ ಮತ್ತು ಕುಬೇರನ ಪೂಜೆ ಮಾಡಿ ಆತ್ಮೀಯರಿಗೆ ಸಿಹಿ ನೀಡುವುದು ಬಹುಮುಖ್ಯ. ಇದೇ ದಿನ ಹಸು ಮತ್ತು ಎತ್ತುಗಳನ್ನು ಸಹ ದೇವರಂತೆ ಪೂಜಿಸುತ್ತಾರೆ. ಆ ದಿನ ಹಾಲನ್ನು ಕೂಡಾ ಕರೆಯುವುದಿಲ್ಲ.
ಗೋವರ್ಧನ ಪೂಜೆಯ ಮಹತ್ವ
ಪಾಡ್ಯದ ಮತ್ತೊಂದು ವಿಶೇಷತೆ ಎಂದರೆ ಗೋವರ್ಧನ ಪೂಜೆ. ಗೋವರ್ಧನ ಎಂಬುದು ಒಂದು ಪರ್ವತದ ಹೆಸರು. ಆ ಪರ್ವತದ ಆಸುಪಾಸಿನಲ್ಲಿ ಇರುವವರು ಗೋವರ್ಧನ ಪರ್ವತದ ಪೂಜೆಯನ್ನೇ ಮಾಡುತ್ತಾರೆ. ಇಲ್ಲದೆ ಹೋದರೆ ಗೋಮಯ ಮತ್ತು ಅನ್ನದ ಸಹಾಯದಿಂದ ಗೋವರ್ಧನ ಗಿರಿಯನ್ನು ಮಾಡುತ್ತಾರೆ. ಗೋಪಾಲನ ಪೂಜೆ ಮಾಡುತ್ತಾರೆ. ಶೋಡಶೋಪಚಾರ ಪೂಜೆಯನ್ನು ನೆರವೇರಿಸಲಾಗುತ್ತದೆ. ಅಂದರೆ ಕಲಶಪೂಜೆಯಿಂದ ಆರಂಭಿಸಿ, ಗೋಪಾಲನನ್ನು ಪ್ರತಿಷ್ಠಿಸಬೇಕು. ನೇವೇದ್ಯವಾಗಿ ಪರಮಾನ್ನ ಸಮೇತ ಹಬ್ಬದ ಅಡುಗೆಯನ್ನು ನೀಡಬೇಕು.
ಗೋಪೂಜೆ ಮಾಡುವುದರಿಂದ ಮನೆಯ ಮಕ್ಕಳಿಗೆ ಉತ್ತಮ ಆರೋಗ್ಯ ಲಭಿಸುತ್ತದೆ. ಕುಟುಂಬದಲ್ಲಿ ಹಣಕಾಸಿನ ಕೊರತೆ ಕಾಣುವುದಿಲ್ಲ. ಹಸು ಇಲ್ಲದೆ ಹೋದಲ್ಲಿ ಮಣ್ಣಿನಲ್ಲಿ ಕಾಮಧೇನುವನ್ನು ತಯಾರಿಸಬೇಕು. ಇಲ್ಲವೆ ಕಾಮಧೇನುವಿನ ಭಾವಚಿತ್ರವನ್ನು ಸಹ ಪೂಜಿಸಬಹುದಾಗಿದೆ. ಅವಶ್ಯವಿದ್ದವರಿಗೆ ಅನ್ನದಾನ ಮಾಡಬೇಕು. ಈ ದಿನ ಗೋದಾನ ಮಾಡುವುದ ಹೆಚ್ಚಿನ ಶುಭಫಲಗಳನ್ನು ಪಡೆಯಬಹುದು.
ಗೋವಿಗೆ ಮೇವು ಅರ್ಪಿಸಿದರೆ ಒಳ್ಳೆ ಫಲ ದೊರೆಯುವುದು
ಗೋವಿಗೆ ಹಸಿ ಹುಲ್ಲನ್ನು ಅರ್ಪಿಸುವುದು ಸಂಪ್ರದಾಯವಾಗಿ ಬಂದಿದೆ. ಪರ್ವತಕ್ಕೆ ಕೆಂಪು ಅನ್ನದ ಬಲಿ ನೀಡುತ್ತಾರೆ. ಅಗ್ನಿ ಇರುವ ಹೋಮದ ಕುಂಡವನ್ನು ಪ್ರದಕ್ಷಿಣೆ ಬರುವುದರಿಂದ ಉತ್ತಮ ಆರೋಗ್ಯ ಗಳಿಸಬಹುದು. ಗೋ ಪ್ರದಕ್ಷಿಣೆಯಿಂದ ಉತ್ತಮ ಸಂತಾನವಾಗುವುದೆಂಬ ಪ್ರತೀತಿ ಇದೆ. ದರ್ಭೆಯಿಂದ ಮಾಡಿದ ಹಗ್ಗದಿಂದ ಪೂರ್ವ ದಿಕ್ಕಿನಲ್ಲಿ ಇರುವ ಮರವನ್ನು ಕಂಭವನ್ನು ಕಟ್ಟುತ್ತಾರೆ. ಇದನ್ನು ಮಾರ್ಗಪಾಲಿ ಬಂಧನ ಎಂದು ಕರೆಯುತ್ತಾರೆ. ಇದರ ಕೆಳಗೆ ಮನುಷ್ಯರ ಜೊತೆಯಲ್ಲಿ ಗೋವನ್ನು ಸಹ ಕರೆದುಕೊಂಡು ಹೋಗುತ್ತಾರೆ. ಇದರಿಂದ ಕುಟುಂಬದಲ್ಲಿ ಒಮ್ಮತ ಮೂಡುತ್ತದೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).