ಕನ್ಯಾ ರಾಶಿ ದೀಪಾವಳಿ ಭವಿಷ್ಯ: ಉದ್ಯೋಗದಲ್ಲಿ ದೊಡ್ಡ ಸಾಧನೆ ಮಾಡುತ್ತೀರಿ, ಸ್ವಂತ ಕೆಲಸದಲ್ಲಿ ಬೇರೆಯವರ ಸಹಭಾಗಿತ್ವವನ್ನು ಬಯಸುವುದಿಲ್ಲ
Oct 19, 2024 07:20 AM IST
ಕನ್ಯಾ ರಾಶಿಯವರ ದೀಪಾವಳಿ ವರ್ಷದ ಭವಿಷ್ಯ ತಿಳಿಯಿರಿ
- Deepavali Virgo Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ಕನ್ಯಾ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್.ಸತೀಶ್)
Deepavali Virgo Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ಕನ್ಯಾ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.
ತಾಜಾ ಫೋಟೊಗಳು
ಕನ್ಯಾ ರಾಶಿಯವರ ದೀಪಾವಳಿ ವರ್ಷದ ಭವಿಷ್ಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡುವಿರಿ. ಸ್ಥಿರವಾದ ಮನಸ್ಸಿನಿಂದ ಮುಂದುವರೆದರೆ ಯಾವುದೇ ಕೆಲಸವನ್ನು ಮಾಡಬಲ್ಲಿರಿ. ನಿಮ್ಮ ಮನಸ್ಸು ಒಳ್ಳೆಯದಾದರೂ ದುಡುಕಿ ಆಡುವ ಮಾತುಗಳಿಂದ ಬೇರೆಯವರ ವಿರೋಧಕ್ಕೆ ಗುರಿಯಾಗುವಿರಿ. ಕುಟುಂಬದ ಹಿರಿಯರ ಕಾರಣ ಮಾನಸಿಕ ಒತ್ತಡವಿರುತ್ತದೆ. ಒಳ್ಳೆಯ ಕೆಲಸಗಳನ್ನು ಸಹ ತಪ್ಪು ಭಾವನೆಯಿಂದ ಟೀಕಿಸುವಿರಿ. ಸ್ನೇಹಿತರಿಗಿಂತಲೂ ವಿರೋಧಿಗಳೇ ಹೆಚ್ಚಾಗಿರುತ್ತಾರೆ. ಅವಶ್ಯಕತೆಗೆ ತಕ್ಕಷ್ಟು ಹಣವನ್ನು ಸಂಪಾದಿಸಬಲ್ಲಿರಿ. ನಿಮ್ಮಲ್ಲಿರುವ ಉತ್ತಮ ಊಹಾಶಕ್ತಿಯಿಂದ ಎದುರಾಗುವ ತೊಂದರೆಯಿಂದ ಪಾರಾಗುವಿರಿ. ಆಕಸ್ಮಿಕವಾಗಿ ಬೇರೆಯವರ ಅವಕಾಶಗಳು ನಿಮ್ಮದಾಗುತ್ತವೆ. ಮನದಲ್ಲಿಆತಂಕವಿಲ್ಲದೆ ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಿರಿ.
ಅವಿರತ ದುಡಿಮೆಯ ಫಲವಾಗಿ ವಿಶ್ರಾಂತಿ ಇರುವುದಿಲ್ಲ. ನಿಮ್ಮ ಮನಸ್ಸಿಗೆ ಒಪ್ಪದ ವಿಚಾರಗಳನ್ನು ವಿರೋಧಿಸುತ್ತೀರಿ. ಕಾನೂನು ಪ್ರಕ್ರಿಯೆಯಲ್ಲಿ ಯಶಸ್ಸನ್ನು ಗಳಿಸುವಿರಿ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಎಷ್ಟೇ ಪ್ರಯತ್ನ ಪಟ್ಟರು ಹಣವನ್ನು ಉಳಿಸಲು ಸಾಧ್ಯವಾಗದು. ಹಣಕಾಸಿನ ಹೂಡಿಕೆಯಿಂದ ಲಾಭ ಪಡೆಯುವಿರಿ. ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಂಡವರ ಜೊತೆಯಲ್ಲಿ ಪ್ರೀತಿಯಿಂದ ನಡೆದುಕೊಳ್ಳುವಿರಿ. ನಂಬಿಕೆಯನ್ನು ಕಳೆದುಕೊಳ್ಳುವಂತಹ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಮೂಗು ಅಥವಾ ಗಂಟಲಿನ ತೊಂದರೆ ಎದುರಾಗುತ್ತದೆ. ನಿಮ್ಮ ಸ್ವಂತ ಕೆಲಸ ಕಾರ್ಯಗಳಲ್ಲಿ ಬೇರೆಯವರ ಸಹಭಾಗಿತ್ವವನ್ನು ಬಯಸುವುದಿಲ್ಲ. ಕಷ್ಟವೆನಿಸಿದರು ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ.
ಸ್ತ್ರೀಯರ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ, ಎಚ್ಚರಿಕೆ ವಹಿಸಿ
ಕುಟುಂಬದ ಸ್ತ್ರೀಯರಿಂದ ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ಕೈಗೂಡುತ್ತವೆ. ದಾಂಪತ್ಯದ ಕಲಹಗಳು ಕೊನೆಗೊಳ್ಳುತ್ತವೆ. ಸಂತಸದಿಂದ ಸಮಯ ಕಳೆಯಲು ಕುಟುಂಬದ ಸದಸ್ಯರ ಜೊತೆ ಪ್ರವಾಸಕ್ಕೆ ತೆರಳುವಿರಿ. ಬೇರೆಯವರ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವಿರಿ. ಅವಿವಾಹಿತರಿಗೆ ಸಂಬಂಧದಲ್ಲಿ ಅಥವಾ ಪರಿಚಯವಿರುವವರ ಜೊತೆಯಲ್ಲಿ ವಿವಾಹವು ನಿಶ್ಚಯವಾಗುತ್ತದೆ. ಸ್ತ್ರೀಯರ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಮಧುಮೇಹದಂತಹ ತೊಂದರೆ ಇರುವವರು ಉತ್ತಮ ಚಿಕಿತ್ಸೆಯನ್ನು ಪಡೆಯಬೇಕು. ಆರೋಗ್ಯದ ಬಗ್ಗೆ ಕಡೆಗಣನೆ ಒಳ್ಳೆಯದಲ್ಲ. ಸಮಾಜದಲ್ಲಿ ಗೌರವಯುತ ಸ್ಥಾನಮಾನವನ್ನು ಗಳಿಸುವಿರಿ. ಆತ್ಮೀಯರ ಕಷ್ಟಕ್ಕೆ ಸ್ಪಂದಿಸುವ ಗುಣವಿರುತ್ತದೆ.
ನೆರೆಹೊರೆಯವರೊಂದಿಗೆ ಅನಾವಶ್ಯಕ ವಾದ ವಿವಾದವಿರುತ್ತದೆ. ಗೃಹಿಣಿಯರು ಪತಿಯ ಮನಸ್ಸನ್ನು ಅರಿತು ನಡೆದುಕೊಳ್ಳುತ್ತಾರೆ. ಹಣಕಾಸಿನ ವಿಚಾರದಲ್ಲಿ ಎಲ್ಲರನ್ನೂ ಸಂಶಯ ಸ್ವಭಾವದಿಂದ ನೋಡುವಿರಿ. ನೊಂದಮನಸ್ಸಿನ ವಿರೋಧಿಗಳೊಂದಿಗೆ ಸ್ನೇಹ ಬೆಳೆಸುವಿರಿ. ದಾಂಪತ್ಯದಲ್ಲಿ ಯಾವುದೇ ತೊಂದರೆ ಉಂಟಾದಂತೆ ನೋಡಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸ ಮತ್ತು ಇನ್ನಿತರ ಜವಾಬ್ದಾರಿಯು ಗೃಹಿಣಿಯರ ಪಾಲಾಗುತ್ತದೆ. ಮಕ್ಕಳ ಬಗ್ಗೆ ಅನಾವಶ್ಯಕವಾಗಿ ಚಿಂತೆಗೆ ಒಳಗಾಗುವಿರಿ. ಬೇರೆಯವರ ಜಗಳ ಕದನಗಳನ್ನು ಸಂಧಾನದ ಮೂಲಕ ಕೊನೆಗೊಳಿಸುವಿರಿ. ಕ್ಷಮೆ ಮತ್ತು ಪ್ರೀತಿ ವಿಶ್ವಾಸವೇ ಶತ್ರುತ್ವಕ್ಕೆ ಪರಿಹಾರ ಎಂದು ನಂಬಿರುತ್ತೀರಿ.
ಆದಾಯವಿಲ್ಲದ ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ
ಸಮಾನ ಮನೋಭಾವನೆ ಇರುವವರ ಜೊತೆಯಲ್ಲಿ ಸ್ನೇಹ ಬೆಳೆಸುವಿರಿ. ಈ ವಿಚಾರದಲ್ಲಿ ಅತಿಯಾದ ಆಸೆ ಇರುವುದಿಲ್ಲ. ಸಂತಾನ ಯೋಗವಿದೆ. ಬೇರೆಯವರ ಬುದ್ಧಿವಾದವನ್ನು ಕೇಳುವುದಿಲ್ಲ. ಸ್ವಾರ್ಥದ ಗುಣ ಇಲ್ಲದೆ ಹೋದರು ಪ್ರಥಮ ಆದ್ಯತೆ ಸ್ವಂತ ಕೆಲಸಗಳಿಗೆ ನೀಡುವಿರಿ. ಗೃಹಿಣಿಯರು ಬೇರೆಯವರ ಮಾತನ್ನು ಕೇಳದ ಕಾರಣ ಕುಟುಂಬದಲ್ಲಿ ಉದ್ವಿಗ್ನತೆ ಉಂಟಾಗುತ್ತದೆ. ದೇವತಾ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಆಡುವ ಮಾತನ್ನು ಉಳಿಸಿಕೊಳ್ಳುವ ಕಾರಣ ಜನರ ಮೆಚ್ಚುಗೆಯನ್ನು ಗಳಿಸುವಿರಿ. ಕೆಲವರಿಗೆ ಮರು ಮದುವೆ ಆಗುವ ಯೋಗವಿದೆ. ಆದಾಯವಿಲ್ಲದ ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ. ತಾಯಿಯ ಜೊತೆಯಲ್ಲಿ ವಿಶೇಷ ಪ್ರೀತಿ ವಿಶ್ವಾಸವಿರುತ್ತದೆ.
ಬೇಜವಾಬ್ದಾರಿಯಿಂದ ಶುಭ ಕೆಲಸ ಕಾರ್ಯಗಳಲ್ಲಿಯೂ ನಿಧಾನವಾಗಿ ಯಶಸ್ಸನ್ನು ಕಾಣುವಿರಿ. ನಿಮಗೆ ಗಣಿತ ಅಥವಾ ವಾಣಿಜ್ಯ ಶಾಸ್ತ್ರದಲ್ಲಿ ವಿಶೇಷ ಅಭಿರುಚಿ ಮತ್ತು ಜ್ಞಾನವಿರುತ್ತದೆ. ಬೇರೆಯವರು ಸೋಲುವ ವಿಚಾರದಲ್ಲಿ ನೀವು ಸುಲಭದ ಜಯವನ್ನು ಗಳಿಸುವಿರಿ. ಲಾಭವಾಗಿ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ವ್ಯಾಪಾರದಲ್ಲಿ ನಿರತರಾಗುವಿರಿ. ಹೊಸ ವಾಹನವನ್ನು ಖರೀದಿಸುವ ಸೂಚನೆಗಳಿವೆ. ಬೇರೆಯವರಿಗೆ ಸಂಬಂಧಿಸಿದ ಕಾನೂನಿನ ವಿಚಾರಗಳಲ್ಲಿ ಮಧ್ಯಸ್ಥಿಕೆ ವಹಿಸದೆ ಇರುವುದು ಒಳ್ಳೆಯದು.
ದೀಪಾವಳಿ 2024: ನಿಮಗೆ ತಿಳಿದರಬೇಕಾದ ವಿವರಗಳಿವು
ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20 ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮೇಷ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.
ಕನ್ಯಾ ರಾಶಿಯವರ ಗುಣಲಕ್ಷಣಗಳು
ಕನ್ಯಾ ರಾಶಿಯಲ್ಲಿ ಜನಿಸಿರುವ ಮಹಿಳೆಯರು ನೋಡಲು ಶಾಂತರಾಗಿ ಕಂಡರೂ ಸಾಮಾನ್ಯವಾಗಿ ಅವರಿಗೆ ಕೋಪ ಹೆಚ್ಚು. ಎಲ್ಲರೊಂದಿಗೆ ಸ್ನೇಹ, ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ನಾಚಿಕೆ ಸಂಕೋಚದ ಸ್ವಭಾವ ಇರುವ ಕಾರಣ ಮನದ ಭಾವನೆಯನ್ನು ಯಾರಿಗೂ ತಿಳಿಸುವುದಿಲ್ಲ. ಹಿಂದಿನ ಕಾಲದ ಶಾಸ್ತ್ರ ಸಂಪ್ರದಾಯಗಳನ್ನು ಇಷ್ಟಪಡುವರು. ವಿಶೇಷ ಬುದ್ಧಿಶಕ್ತಿ ಇರುತ್ತದೆ. ಯಾವುದೇ ವಿಚಾರವಾದರೂ ವಿಮರ್ಶೆ ಮಾಡುವ ಬುದ್ದಿವಂತಿಕೆ ಇರುತ್ತದೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬಾಳುತ್ತಾರೆ.
ಪುರುಷರಾದರೆ ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಉತ್ತಮ ಸಂಘಟನಾ ಚಾತುರ್ಯ ಇವರಿಗೆ ಇರುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಬೇರೆಯವರು ಒಪ್ಪುವ ಮತ್ತು ಮೆಚ್ಚುವ ಗುಣಗಳು ಇವರಲ್ಲಿ ಇರುತ್ತವೆ. ಅನುಕರಣಾಶೀಲರು, ನಂಬಿದವರ ಜೊತೆ ಪ್ರಾಮಾಣಿಕತೆಯಿಂದ ಜೀವನ ನಡೆಸುತ್ತಾರೆ. ವಿಶ್ರಾಂತಿ ಪಡೆಯುವ ಹವ್ಯಾಸ ಇವರಲ್ಲಿ ಇರುತ್ತದೆ. ಹಣದ ವಿಚಾರದಲ್ಲಾಗಲಿ ಅಥವಾ ಇನ್ನಾವುದೇ ವಿಚಾರದಲ್ಲಾಗಲಿ ಇವರು ಯಾರಿಗೂ ಮೋಸ ಮಾಡುವುದಿಲ್ಲ.
ಕನ್ಯಾ ರಾಶಿಯವರ ಶುಭ ದಿನಾಂಕರ, ವಾರ, ಬಣ್ಣ
ಕನ್ಯಾ ರಾಶಿಯ ಅಧಿಪತಿ: ಬುಧ, ಕನ್ಯಾ ರಾಶಿಯವರಿಗೆ ಶುಭ ದಿನಾಂಕಗಳು: 2, 3, 5, 6, 7, 14, 24, 31, 19. ಕನ್ಯಾ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಕನ್ಯಾ ರಾಶಿಯವರಿಗೆ ಶುಭ ವರ್ಣ: ಹಳದಿ, ಬಿಳಿ ಮತ್ತು ಹಸಿರು. ಕನ್ಯಾ ರಾಶಿಯವರಿಗೆ ಅಶುಭ ವರ್ಣ: ನೀಲಿ ಮತ್ತು ಕೆಂಪು. ಕನ್ಯಾ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ. ಕನ್ಯಾ ರಾಶಿಯವರಿಗೆ ಶುಭ ತಿಂಗಳು: ಜೂನ್ 15ರಿಂದ ಆಗಸ್ಟ್ 14 ಮತ್ತು ಡಿಸೆಂಬರ್ 15ರಿಂದ ಜನವರಿ 14. ಕನ್ಯಾ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ, ಝೆರ್ಕೋನ್ ಮತ್ತು ನೀಲಮಣಿ. ಕನ್ಯಾ ರಾಶಿಯವರಿಗೆ ಶುಭ ರಾಶಿ: ಮಕರ, ವೃಷಭ ಮತ್ತು ಮಿಥುನ. ಕನ್ಯಾ ರಾಶಿಯವರಿಗೆ ಅಶುಭ ರಾಶಿ: ವೃಶ್ಚಿಕ, ಮೇಷ ಮತ್ತು ಸಿಂಹ.
ಕನ್ಯಾ ರಾಶಿಯವರಿಗೆ ಪರಿಹಾರಗಳು
1)ವಿಷ್ಣು ಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಅಥವ ಕೇಳುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆತ್ಮವಿಶ್ವಾಸ ಹೆಚ್ಚುವುದರೊಂದಿಗೆ ಮಾನಸಿಕ ಒತ್ತಡವೂ ಕಡಿಮೆ ಆಗುತ್ತದೆ.
2)ಈ ದಾನಗಳಿಂದ ಶುಭ ಫಲ: ಬಿಳಿ ಬಟ್ಟೆ ಮತ್ತು ಗೋಧಿಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3)ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ಲಕ್ಷ್ಮೀದೇವಿಯ ದೇವಸ್ಥಾನಕ್ಕೆ ಅಕ್ಕಿ, ಬೆಲ್ಲ ಮತ್ತು ತೊಗರಿ ಬೇಳೆ ನೀಡುವುದರಿಂದ ಎಲ್ಲ ವಿಧದಲ್ಲಿಯೂ ಪ್ರಗತಿ ದೊರೆಯುತ್ತದೆ. ಶ್ರೀ ದುರ್ಗಾಮಾತೆಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ:ಹಸಿರು, ನೀಲಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರಹ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)