ಕರ್ನಾಟಕದಲ್ಲಿದೆ ಜಗತ್ತಿನ ಏಕೈಕ ಅಂಬೆಗಾಲು ಕೃಷ್ಣನ ದೇಗುಲ; ಹೊರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದ ಈ ದೇವಾಲಯದಲ್ಲಿದೆ ಹಲವು ವಿಶೇಷ
Sep 06, 2023 08:54 AM IST
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ಅಂಬೆಗಾಲು ಕೃಷ್ಣನ ದೇವಾಲಯ
- ಕರ್ನಾಟಕದಲ್ಲಿ ಹಲವು ಪ್ರಸಿದ್ಧ ಕೃಷ್ಣನ ದೇವಾಲಯಗಳಿವೆ. ಅವುಗಳಲ್ಲಿ ವಿಶೇಷವಾದದ್ದು ರಾಮನಗರದ ದೊಡ್ಡಮಳೂರಿನ ಅಂಬೆಗಾಲು ಕೃಷ್ಣ ದೇವಾಲಯ. ಇದು ಜಗತ್ತಿನ ಏಕೈಕ ಅಂಬೆಗಾಲು ಕೃಷ್ಣ ದೇಗುಲವೂ ಹೌದು. ಆಡಿಸಿದಳೆಶೋಧೆ ಜಗಧೋದ್ಧಾರನ ಕೀರ್ತನೆ ರಚಿಸಿದ ಈ ಜಾಗದಲ್ಲಿದೆ ಹಲವು ವಿಶೇಷ. ಈ ದೇವಾಲಯದ ಕುರಿತು ಎಚ್.ಮಾರುತಿ ಅವರ ಲೇಖನ ಇಲ್ಲಿದೆ.
ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಜಗತ್ತಿನೆಲ್ಲೆಡೆ ಕೃಷ್ಣನ ಭಕ್ತರು ಭಕ್ತಿ, ಭಾವದಿಂದ ನಂದಗೋಪಾಲನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಉಡುಪಿ ಸೇರಿದಂತೆ ಹಲವು ಪ್ರಸಿದ್ಧ ಕೃಷ್ಣ ದೇವಸ್ಥಾನಗಳಿವೆ. ಅವುಗಳಲ್ಲಿ ದೊಡ್ಡಮಳೂರಿನ ಅಂಬೆಗಾಲು ಕೃಷ್ಣನ ದೇವಾಲಯವೂ ಒಂದು.
ತಾಜಾ ಫೋಟೊಗಳು
ಕರ್ನಾಟಕದಲ್ಲಿ ಹಲವು ಕಡೆ ಕೃಷ್ಣ ದೇವಾಲಯಗಳಿವೆ. ಕೃಷ್ಣನ ದೇವಾಲಯದಲ್ಲಿ ಶ್ರೀ ಕೃಷ್ಣ ನೆಲೆಯಾಗಿರುತ್ತಾನೆ. ಕೆಲವೊಂದು ಕಡೆ ರಾಧಾಕೃಷ್ಣರು ಜೊತೆಯಾಗಿ ಪ್ರತಿಷ್ಠಾಪನೆಗೊಂಡಿರುತ್ತಾರೆ. ಆದರೆ ಇಲ್ಲೊಂದು ವಿಶೇಷವಾದ ದೇವಾಲಯವಿದೆ. ಇದು ಅಂಬೆಗಾಲು ಕೃಷ್ಣನ ದೇವಾಲಯ. ಈ ದೇವಾಲಯವಿರುವುದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ. ತೆವಳುವ ಭಂಗಿಯಲ್ಲಿ ಕೃಷ್ಣನು ಬೆಣ್ಣೆಯ ಮುದ್ದೆಯನ್ನು ಹಿಡಿದು ಅಂಬೆಗಾಲಿಡುತ್ತಿರುವುದೇ ಇಲ್ಲಿನ ವಿಶೇಷ. ಈ ದೇವಾಲಯಕ್ಕೆ ಅಪ್ರಮೇಯ ದೇವಾಲಯ ಮತ್ತು ನವನೀತ ಕೃಷ್ಣ ದೇವಾಲಯ ಎಂದೂ ಹೆಸರಿದೆ.
ಚೋಳರ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದು, ಹಿಂದೆ ಈ ಪ್ರದೇಶವನ್ನು ರಾಜೇಂದ್ರಸಿಂಹ ನಗರ ಎಂದು ಕರೆಯಲಾಗುತ್ತಿತ್ತು. ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರು ದೇವಸ್ಥಾನದ ಪ್ರಾಂಗಣವನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಸ್ಥಳೀಯ ಇತಿಹಾಸ ಹೇಳುತ್ತದೆ.
ಈ ದೇವಸ್ಥಾನದ ವಿಗ್ರಹವನ್ನು ವ್ಯಾಸರಾಜರು ಪ್ರತಿಷ್ಠಾಪಿಸಿದರು ಎಂದು ಇತಿಹಾಸ ಹೇಳುತ್ತದೆ. ಸುಮಾರು 1000 ವರ್ಷಗಳಷ್ಟು ಪುರಾತನವಾದ ಈ ಕೃಷ್ಣನ ಮೂರ್ತಿಯನ್ನು ನೋಡಿಯೇ ಪುರಂದರ ದಾಸರು ಆಡಿಸಿದಳೆಶೋಧೆ ಜಗಧೋದ್ಧಾರನ ಎಂಬ ಕೀರ್ತಿನೆಯನ್ನು ರಚಿಸಿದರು ಎಂಬ ನಂಬಿಕೆ ಇದೆ. ಶ್ರೀಕೃಷ್ಣನ ಬಾಲ ಲೀಲೆಯನ್ನು ಬಿಂಬಿಸುವ ಜಗತ್ತಿನ ಏಕೈಕ ಶ್ರೀಕೃಷ್ಣನ ದೇವಾಲಯ ಮತ್ತು ಅಪ್ರಮೇಯ ಎಂಬ ಹೆಸರಿನಿಂದ ಕರೆಯಲ್ಪಡುವ ಏಕೈಕ ಕೃಷ್ಣನ ದೇವಾಲಯವೂ ಇದೊಂದೆ ಆಗಿದೆ. ಶ್ರೀರಾಮಚಂದ್ರ ಇಲ್ಲಿ ಯಜ್ಞ ಯಾಗಾದಿಗಳನ್ನು ಮಾಡಿದ್ದಾನೆ ಎಂಬ ಪ್ರತೀತಿ ಇದೆ. ಆದ್ದರಿಂದ ಈ ದೇವಾಲಯವನ್ನು ದಕ್ಷಿಣ ಅಯೋಧ್ಯೆ ಎಂದೂ ಕರೆಯಲಾಗುತ್ತದೆ. ಈ ಊರಿನಲ್ಲಿ ನಾಲ್ಕೂ ವೇದಗಳನ್ನು ಬಲ್ಲ ಪಂಡಿತರು ಇದ್ದರು ಎಂಬ ಕಾರಣಕ್ಕೆ ಚತುರ್ವೇದ ಮಂಗಳಪುರ ಎಂದೂ ಕರೆಯುತ್ತಾರೆ.
ಅಂಬೆಗಾಲು ಕೃಷ್ಣನ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ಮಧ್ಯಭಾಗದಲ್ಲಿ ಶ್ರೀಕೃಷ್ಣನ ಗರ್ಭಗುಡಿ ಇದೆ. ಸುತ್ತಲೂ ನವನೀತ ಕೃಷ್ಣ, ಹನುಮಂತ, ಗಣೇಶ ರಾಮಾನುಜ ಲಕ್ಷ್ಮೀಮಯ ವಿಗ್ರಹಗಳು ಸೆಳೆಯುತ್ತವೆ. ದ್ರಾವಿಡ ಶೈಲಿಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಕಪಿಲ ಮತ್ತು ಕಣ್ವ ಮಹರ್ಷಿಗಳು ಈಗಲೂ ಈ ಅಂಬೆಗಾಲು ಕೃಷ್ಣನನ್ನು ಪೂಜಿಸುತ್ತಾರೆ ಎಂಬ ನಂಬಿಕೆಯಿದೆ.
ದೇಗುಲ ದರ್ಶನ: ಸಂತಾನ ಭಾಗ್ಯವಿಲ್ಲವೇ,ಬಾಲಗ್ರಹ ಜನ್ಮ ಕುಂಡಲಿ ದೋಷವೇ, ಅಪ್ರಮೇಯ ಸ್ವಾಮಿ ದೇವಸ್ಥಾನದ ಅಂಬೆಗಾಲು ಕೃಷ್ಣನ ದರ್ಶನದಿಂದ ಪರಿಹಾರ
ಇಲ್ಲಿನ ವಿಶೇಷತೆ ಏನು?
ಈ ಅಂಬೆಗಾಲು ಕೃಷ್ಣನ ವಿಶೇಷ ಏನಿರಬಹುದು ಎಂದು ನೀವು ಯೋಚಿಸಬಹುದು, ಖಂಡಿತವಾಗಿಯೂ ಇಲ್ಲಿ ವಿಶೇಷವಿದೆ. ವಿವಾಹವಾಗಿ ಮಕ್ಕಳಾಗದ ದಂಪತಿಗಳು ಇಲ್ಲಿ ಪೂಜೆ ನೆರವೇರಿಸಿ ತೊಟ್ಟಿಲು ಕಟ್ಟುವ ಹರಕೆಯನ್ನು ಹೊತ್ತುಕೊಂಡರೆ ಸಂತಾನ ಭಾಗ್ಯವನ್ನು ಕೃಷ್ಣ ಕರುಣಿಸುತ್ತಾನೆ ಎಂಬ ಪ್ರತೀತಿ ಇದೆ. ಇಲ್ಲಿ ಹರಕೆ ಹೊತ್ತುಕೊಂಡ ನಂತರ ಸಂತಾನ ಭಾಗ್ಯವನ್ನು ಪಡದುಕೊಂಡ ದಂಪತಿಗಳು ತೊಟ್ಟಿಲು ಕಟ್ಟಲು ಇಲ್ಲಿಗೆ ಬರುತ್ತಿರುತ್ತಾರೆ. ತೊಟ್ಟಿಲು ಕಟ್ಟುವ ದೃಶ್ಯ ಎಲ್ಲಿ ಸಾಮಾನ್ಯ ಎನ್ನಬಹುದು.
2019ರ ಮೈಸೂರು ದಸರಾ ಮೆರವಣಿಗೆಯಲ್ಲಿ ರಾಮನಗರ ಜಿಲ್ಲೆಯಿಂದ ಚನ್ನಪಟ್ಟಣದ ಅಂಬೆಗಾಲು ಕೃಷ್ಣನ ಸ್ತಬ್ಧಚಿತ್ರವನ್ನು ನಿರ್ಮಿಸಲಾಗಿತ್ತು. ಅಂದಿನ ದಸರಾದಲ್ಲಿ ಈ ಚಿತ್ರಕ್ಕೆ ತುಂಬಾ ಮೆಚ್ಚುಗೆ ವ್ಯಕ್ತವಾಗಿತ್ತು.
ಮರಳಿನ ಮೇಲೆ ನಿಂತ ಮನೆಗಳು
ದೊಡ್ಡಮಳೂರು ಸುಮಾರು 1500 ವರ್ಷಗಳಷ್ಟು ಹಳೆಯ ಗ್ರಾಮ. ಈ ದೇವಸ್ಥಾನ ಮತ್ತು ಇಲ್ಲಿನ ಬಹುತೇಕ ಹಳೆಯ ಮನೆಗಳು ಮರಳಿನ ಮೇಲೆ ನಿಂತಿವೆ ಎನ್ನುವುದು ಮತ್ತೊಂದು ಕುತೂಹಲಕಾರಿ ಅಂಶ. ಯಾವ ಮನೆಗೂ ಅಡಿಪಾಯ ಇಲ್ಲ.
ಇಲ್ಲಿಗೆ ತಲುಪುವುದು ತುಂಬಾ ಸುಲಭ. ಬಸ್ ಮತ್ತು ರೈಲಿನಲ್ಲಿ ಚನ್ನಪಟ್ಟಣ ತಲುಪಬಹುದು. ಅಲ್ಲಿಂದ ಕೇವಲ 4 ಕಿ.ಮೀ ದೂರದಲ್ಲಿದೆ ದೊಡ್ಡಮಳೂರು. ಆಟೊ ಮತ್ತು ಬಸ್ ಸೌಲಭ್ಯ ಲಭ್ಯ. ಇಲ್ಲಿ ಕೃಷ್ಣನ ದರ್ಶನ ಮಾಡಿಕೊಂಡು ಚನ್ನಪಟ್ಟಣದಲ್ಲಿ ಬೊಂಬೆಗಳನ್ನು ಖರೀದಿಸಿ ಸುಂದರ ನೆನಪುಗಳೊಂದಿಗೆ ನಿಮ್ಮ ಊರನ್ನು ತಲುಪಬಹುದು.